ನವ ದೆಹಲಿ (ನವೆಂಬರ್ 03); "ಕೇಂದ್ರ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ದೆಹಲಿಯ ಹೊರ ವಲಯದಲ್ಲಿ ರೈತರು ಸಂಘಟಿಸಿರುವ ಹೋರಾಟದಿಂದಾಗಿ ಪಂಜಾಬ್ ರಾಜ್ಯದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ರಾಷ್ಟ್ರೀಯ ಭದ್ರತೆಗೂ ಈ ಹೋರಾಟ ಅಪಾಯವನ್ನುಂಟು ಮಾಡುತ್ತಿದೆ. ಇದು ರೈತರು ಮತ್ತು ಕೇಂದ್ರ ಸರ್ಕಾರದ ನಡುವಿನ ಚರ್ಚೆ, ಇದರಲ್ಲಿ ನಾನು ಪರಿಹಾರ ನೀಡುವಂತದ್ದೂ ಏನೂ ಇಲ್ಲ. ಕೃಷಿ ಕಾಯ್ದೆಯ ವಿರುದ್ಧ ನನಗೂ ಅಸಮಾಧಾನವಿದ್ದು ಅದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ಸ್ಪಷ್ಟಪಡಿಸಿದ್ದೇನೆ. ಅಲ್ಲದೆ, ನನ್ನ ರಾಜ್ಯದ ಆರ್ಥಿಕತೆ ಮತ್ತು ರಾಷ್ಟ್ರದ ಸುರಕ್ಷತೆಯ ಮೇಲೆ ಈ ಹೋರಾಟದಿಂದಾಗಿ ಯಾವುದೇ ಪರಿಣಾಮವಾಗದಂತೆ, ಶೀಘ್ರದಲ್ಲಿ ಸಮಸ್ಯೆಯನ್ನು ಬಗೆಹರಿಸಿ" ಎಂದು ಅಮಿತ್ ಶಾ ಬಳಿ ವಿನಂತಿಸಿಕೊಂಡಿದ್ದೇನೆ ಎಂದು ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾನೂನನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದ ಹಿಂದೆ ಪಂಜಾಬ್ ಸರ್ಕಾರದ ಕುಮ್ಮಕ್ಕಿದೆ. ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಈ ಹೋರಾಟಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ, ಶಕ್ತಿ ತುಂಬುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಈ ಹಿಂದೆ ಆರೋಪಿಸಿದ್ದರು. ಹೀಗಾಗಿ ಇಂದು ಕೇಂದ್ರ ಗೃಹ ಸಚಿವ ರೈತರ ಹೋರಾಟದಲ್ಲಿ ಪಂಜಾಬ್ ಸರ್ಕಾರದ ನಿಲುವಿನ ಕುರಿತು ಚರ್ಚೆ ನಡೆದಲು ಸಿಎಂ ಅಮರೀಂದರ್ ಸಿಂಗ್ ಅವರನ್ನು ಮಾತುಕತೆಗೆ ಕರೆದಿದ್ದರು.
ಅಮಿತ್ ಶಾ ಜೊತೆಗಿನ ಚರ್ಚೆಯಲ್ಲಿ ತಮ್ಮ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿರುವ ಅಮರೀಂದರ್ ಸಿಂಗ್, "ಪಂಜಾಬ್ ಸರ್ಕಾರಕ್ಕೂ ಈ ಕೃಷಿ ಕಾನೂನಿನ ವಿರುದ್ಧ ಅಸಮಾಧಾನ ಇದೆ. ಈ ಹಿಂದೆಯೂ ಅದನ್ನು ಸ್ಪಷ್ಟಪಡಿಸಿದ್ದೇವೆ. ಆದರೆ, ಇದು ರೈತ ಹೋರಾಟ. ಕೇಂದ್ರ ಸರ್ಕಾರ ಮತ್ತು ರೈತರ ನಡುವಿನ ವ್ಯಾಜ್ಯ. ಇದನ್ನು ಕೇಂದ್ರ ಸರ್ಕಾರ ಪರಿಹರಿಸಬೇಕು. ಅಲ್ಲದೆ, ಈ ಹೋರಾಟಕ್ಕೂ ತಮ್ಮ ಸರ್ಕಾರಕ್ಕೂ ಯಾವುದೇ ನಂಟು ಇಲ್ಲ" ಎಂದು ಸ್ಪಷ್ಟೀಕರಣ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಮಂಗಳವಾರ ಕೇಂದ್ರ ಸರ್ಕಾರ ಕೃಷಿ ಕಾನೂನಿನ ಕುರಿತು ರೈತರ ಜೊತೆ ಮಾತುಕತೆ ನಡೆಸಿತ್ತು. ಈ ಮಾತುಕತೆ ವೇಳೆ ಸರ್ಕಾರ ಕನಿಷ್ಟ ಬೆಂಬಲ ಬೆಲೆ ನೀತಿಯನ್ನು ಯಾವುದೇ ಕಾರಣಕ್ಕೂ ತೆಗೆಯುವುದಿಲ್ಲ ಎಂದು ಭರವಸೆ ನೀಡಿತ್ತಾದರೂ, ಈ ಭರವಸೆ ಶೀಘ್ರದಲ್ಲಿ ಕಾನೂನಾಗಿ ಅಂಗೀಕಾರವಾಗುವವರೆಗೆ ತಾವು ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ರೈತರು ತಿಳಿಸಿದ್ದರು. ಹೀಗಾಗಿ ಮೊದಲ ಹಂತದ ಮಾತುಕತೆ ಮುರಿದುಬಿದ್ದಿತ್ತು.
ಇದನ್ನೂ ಓದಿ : 8ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ; ಇಂದು ರೈತರು, ಕೇಂದ್ರ ಸರ್ಕಾರದ ನಡುವೆ ಮತ್ತೊಂದು ಸಭೆ
ಸಂಸತ್ತಿನ ತುರ್ತು ಅಧಿವೇಶನ ಕರೆದು ವಿವಾದಾತ್ಮಕ ಕಾನೂನುಗಳನ್ನು ಹಿಂಪಡೆಯಬೇಕು ಎಂದು ರೈತರು ಇದೀಗ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಸರ್ಕಾರ ಮತ್ತು ರೈತರ ನಡುವಿನ ಎರಡನೇ ಸುತ್ತಿನ ಮಾತುಕತೆಯೂ ಅನಿಷ್ಟತೆಯಿಂದ ಕೂಡಿದೆ. ಆದರೆ, ಮಾತುಕತೆ ನಡೆದರೆ ಸಾಮೂಹಿಕ ಹಿತದೃಷ್ಟಿಯಿಂದಾಗಿ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ತಾನು ಮಧ್ಯಸ್ಥಿತಿಕೆ ವಹಿಸುವುದಾಗಿ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ