ನವದೆಹಲಿ, ಜೂ. 15: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (Enforcement Directorate) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಪುತ್ರ ಸಂಸದ ರಾಹುಲ್ ಗಾಂಧಿ (Rahul Gandhi) ಅವರಿಗೆ ಫೆಡರಲ್ ಏಜೆನ್ಸಿ ಮುಂದೆ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿತ್ತು. ಕೊವಿಡ್ ಪಾಸಿಟಿವ್ (Covid Positive) ಆದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರು ವಿಚಾರಣೆಯಿಂದ ವಿನಾಯಿತಿ ಪಡೆದಿದ್ದಾರೆ. ರಾಹುಲ್ ಗಾಂಧಿ ಅವರು ನಿನ್ನೆ ಮತ್ತು ಮೊನ್ನೆ (ಜೂನ್ 13 ಹಾಗೂ 14ರಂದು) ಇಡಿ ವಿಚಾರಣೆಗೆ ಹಾಜರಾಗಿದ್ದರು. ಅವರಿಗೆ ಇಂದು ಮತ್ತೆ ವಿಚಾರಣೆಗೆ ಬರುವಂತೆ ಸೂಚನೆ ನೀಡಲಾಗಿದೆ.
ನಿನ್ನೆ ಏನಾಯಿತು?
ನಿನ್ನೆ ದೆಹಲಿ, ಬೆಂಗಳೂರು ಸೇರಿದಂತೆ ದೇಶಾದ್ಯಂತ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ದೆಹಲಿಯಲ್ಲಿ ಎಐಸಿಸಿ ಕಚೇರಿಗೆ ತೆರಳುತ್ತಿದ್ದ ರಾಜ್ಯದ ಮಾಜಿ ಸಚಿವರಾದ ಎಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್, ಸಂಸದ ಡಿ.ಕೆ. ಸುರೇಶ್, ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ., ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್ ಮತ್ತಿತರರನ್ನು ಪೊಲೀಸರು ವಶಕ್ಕೆ ಪಡೆದು ತಡ ರಾತ್ರಿ ಬಿಡುಗಡೆ ಮಾಡಿದ್ದಾರೆ.
ಡಿಕೆ ಸುರೇಶ್‌ರನ್ನು ವ್ಯಾನ್ ಒಳಕ್ಕೆ ತಳ್ಳಿದ ಪೊಲೀಸರು
ಕಾಂಗ್ರೆಸ್ ಕಚೇರಿಗೆ ಹೊರಟ ಈ ನಾಯಕರನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಸಂಸದ ಡಿ.ಕೆ. ಸುರೇಶ್ ಹಾಗೂ ಪೊಲೀಸರೊಂದಿಗೆ ವಾಗ್ವಾದ, ಮಾತಿನ ಚಕಮಕಿ, ತಳ್ಳಾಟ, ನೂಕಾಟ ನಡೆದಿದೆ. ಹಿರಿಯ ಅಧಿಕಾರಿಯನ್ನು ಸ್ಥಳಕ್ಕೆ ಬರೋದಕ್ಕೆ ಹೇಳಿ ಅಂತ ಸುರೇಶ್ ಆಗ್ರಹಿಸಿದ್ದಾರೆ. ನಮ್ಮನ್ನು ಅರೆಸ್ಟ್ ಮಾಡೋದಕ್ಕೆ ಯಾರು ಹೇಳಿದ್ದಾರೆ ಅಂತ ಪ್ರಶ್ನಿಸಿದ್ದಾರೆ. ಈ ವೇಳೆ ಪೊಲೀಸರೊಬ್ಬರು ಹಿಂಬದಿಯಿಂದ ಡಿ.ಕೆ. ಸುರೇಶ್ ಮತ್ತು ದಿನೇಶ್ ಗುಂಡೂರಾವ್ ಸೇರಿದಂತೆ ಹಲವರನ್ನು ಪೊಲೀಸ್ ವ್ಯಾನಿನ ಒಳಕ್ಕೆ ತಳ್ಳಿದ್ದಾರೆ.
10ಗಂಟೆಗೂ ಹೆಚ್ಚು ರಾಹುಲ್ ಗಾಂಧಿ ವಿಚಾರಣೆ
ರಾಹುಲ್ ಗಾಂಧಿ ಅವರು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದ ಎಐಸಿಸಿಗೆ ಆಗಮಿಸಿದರು. ಅಲ್ಲಿಂದ 11ಗಂಟೆಗೆ ಇಡಿ ಕಚೇರಿಗೆ ತೆರಳಿದರು. ರಾತ್ರಿ 11.40ರವರೆಗೂ ವಿಚಾರಣೆ ಎದುರಿಸಿದರು. ಮಧ್ಯಹ್ನ 2 ಗಂಟೆ ಭೋಜನ ವಿರಾಮ ತೆಗೆದುಕೊಂಡಿದ್ದರು. ಒಟ್ಟು 10ಗಂಟೆಗೂ ಹೆಚ್ಚು ವಿಚಾರಣೆ ಎದುರಿಸಿದ್ದರು.
ಇದನ್ನೂ ಓದಿ: DK Suresh: ನವದೆಹಲಿಯಲ್ಲಿ ಜೋರಾಯ್ತು ಕೈ ಪ್ರೊಟೆಸ್ಟ್, ಸಂಸದ ಡಿಕೆ ಸುರೇಶ್‌ರನ್ನು ವ್ಯಾನ್‌ಗೆ ತಳ್ಳಿದ ಪೊಲೀಸ್!
ಮೊನ್ನೆ ಏನೇನಾಯ್ತ?
ರಾಹುಲ್ ಗಾಂಧಿ ಬೆಳಿಗ್ಗೆ 11.15ಕ್ಕೆ ಎಐಸಿಸಿ ಕಚೇರಿಯಿಂದ ಇಡಿ ಕಚೇರಿಗೆ ಆಗಮಿಸಿದರು. ಅವರ ಜೊತೆ ಇಡಿ ಅಧಿಕಾರಿಗಳು ಔಪಚಾರಿಕ ವಿಚಾರಣೆ ನಡೆಸಿದರು. ಮಧ್ಯಾಹ್ನ 2.15ಕ್ಕೆ ಭೋಜನ ವಿರಾಮ ನೀಡಲಾಯಿತು. ಭೋಜನ ವಿರಾಮದ ವೇಳೆ ರಾಹುಲ್ ಗಾಂಧಿ ಗಂಗಾರಾಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದರು. ಆ ಸಂದರ್ಭದಲ್ಲಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಕೂಡ ಇದ್ದರು. ನಂತರ 3.30ಕ್ಕೆ ಮತ್ತೆ ಇಡಿ ಕಚೇರಿಗೆ ಬಂದ ರಾಹುಲ್ ಗಾಂಧಿ ಅವರ ವಿಚಾರಣೆ ತಡರಾತ್ರಿ 11.15ರವರೆಗೂ ನಡೆಯಿತು. ನಿನ್ನೆ ಸುಮಾರು 11 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿ ಹೆಚ್ಚಿನ ವಿಚಾರಣೆಗಾಗಿ ಇಂದು ಮತ್ತೆ ಬರುವಂತೆ ಸೂಚನೆ ನೀಡಲಾಗಿದೆ.
ವಿಚಾರಣೆಗೂ ಮುನ್ನ ಪಾದಯಾತ್ರೆ
ಜಾರಿ ನಿರ್ದೇಶನಾಲಯ, ಕೇಂದ್ರ ತನಿಖಾ ಸಂಸ್ಥೆ ಮತ್ತಿತರ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ಎಐಸಿಸಿ ಕಚೇರಿಯಿಂದ ಇಡಿ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್ ಹೈಕಮಾಂಡ್ ತಮ್ಮ ಪಕ್ಷದ ಎಲ್ಲಾ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಹಿರಿಯ ನಾಯಕರಿಗೆ ಸೂಚನೆ ನೀಡಿತ್ತು. ಆದರೆ ನಾಯಕರು ಎಐಸಿಸಿ ಕಚೇರಿಗೆ ಬರುವ ಮುನ್ನವೇ ಪೊಲೀಸರು ಎಲ್ಲಾ ರಸ್ತೆಗಳನ್ನು ಬಂದ್ ಮಾಡಿದ್ದರು. ಆದರೂ ರಾಹುಲ್ ಗಾಂಧಿ ಪಾದಯಾತ್ರೆ ಮೂಲಕವೇ ಇಡಿ ಕಚೇರಿಗೆ ತೆರಳಿದರು.
ಯಾವ ಅಂಶಗಳ ಮೇಲೆ ವಿಚಾರಣೆ ನಡೆಯುತ್ತಿದೆ?
ನ್ಯಾಷನಲ್ ಹೆರಾಲ್ಡ್ ನಡೆಸುತ್ತಿದ್ದ ಅಸೋಸಿಯೇಟ್ ಜನರಲ್ (AJL) ಸಂಸ್ಥೆಯನ್ನು ಯಂಗ್ ಇಂಡಿಯಾ ಖರೀದಿ ಮಾಡಿದ್ದು ಹೇಗೆ? ಖರೀದಿ ಪ್ರಕ್ರಿಯೆ ಯಾವ ರೀತಿಯಲ್ಲಿ ಇತ್ತು ಅಸೋಸಿಯೇಟ್ ಜನರಲ್ ಸಂಸ್ಥೆಗೆ ಎಷ್ಟು ಸಾಲ ನೀಡಲಾಗಿದೆ? ಅಸೋಸಿಯೇಟ್ ಜನರಲ್ ಅನ್ನು ಮಾರಾಟ ಮಾಡಲು ಇದ್ದ ಕಾರಣವೇನು? ನ್ಯಾಷನಲ್ ಹೆರಾಲ್ಡ್ ಆಸ್ತಿ ಮೌಲ್ಯ ಎಷ್ಟು? ಅಸೋಸಿಯೇಟ್ ಜನರಲ್ ಸಂಸ್ಥೆಯನ್ನು ಯಂಗ್ ಇಂಡಿಯಾ ಸಂಸ್ಥೆ ಖರೀದಿ ಮಾಡಿದ ಹಿನ್ನೆಲೆಯಲ್ಲಿ ನಿಮ್ಮ ಮೇಲಿರುವ ಆರೋಪದ ಬಗ್ಗೆ ನಿಮ್ಮ ಸ್ಪಷ್ಟೀಕರಣ ಏನು? ಎಂಬಿತ್ಯಾದಿ ಅಂಶಗಳ ಮೇಲೆ ರಾಹುಲ್ ಗಾಂಧಿ ಅವರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಸುಬ್ರಮಣಿಯನ್ ಸ್ವಾಮಿ ದಾಖಲಿದ್ದ ಪ್ರಕರಣ
2013ರಲ್ಲಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ ಖಾಸಗಿ ಕ್ರಿಮಿನಲ್ ದೂರಿನ ಆಧಾರದ ಮೇಲೆ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ವಿರುದ್ಧದ ಆದಾಯ ತೆರಿಗೆ ಇಲಾಖೆ ತನಿಖೆಯನ್ನು ಆಧರಿಸಿ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು. ಅಸೋಸಿಯೇಟ್ ಜರ್ನಲ್ಸ್ ಲಿಮಿಟೆಡ್ ಕಾಂಗ್ರೆಸ್‌ಗೆ ನೀಡಬೇಕಿದ್ದ 90.25 ಕೋಟಿ ರೂ.ಗಳನ್ನು ವಸೂಲಿ ಮಾಡುವ ಹಕ್ಕನ್ನು ಪಡೆಯಲು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಕೇವಲ 50 ಲಕ್ಷ ರೂಪಾಯಿಗಳನ್ನು ಪಾವತಿಸಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರರು ವಂಚನೆ ಮತ್ತು ಹಣವನ್ನು ದುರುಪಯೋಗಪಡಿಸಿಕೊಳ್ಳಲು ಸಂಚು ರೂಪಿಸಿದ್ದಾರೆ ಎಂದು ಸುಬ್ರಹ್ಮಣಿಯನ್ ಸ್ವಾಮಿ ಆರೋಪಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ