ಜಮ್ಮು-ಕಾಶ್ಮೀರದಲ್ಲಿ ಪಂಚಾಯಿತಿ ಚುನಾವಣೆ ಬಹಿಷ್ಕಾರಕ್ಕೆ ನ್ಯಾಷನಲ್ ಕಾನ್ಫೆರೆನ್ಸ್ ನಿರ್ಧಾರ


Updated:September 5, 2018, 5:52 PM IST
ಜಮ್ಮು-ಕಾಶ್ಮೀರದಲ್ಲಿ ಪಂಚಾಯಿತಿ ಚುನಾವಣೆ ಬಹಿಷ್ಕಾರಕ್ಕೆ ನ್ಯಾಷನಲ್ ಕಾನ್ಫೆರೆನ್ಸ್ ನಿರ್ಧಾರ
ಫಾರೂಕ್ ಅಬ್ದುಲ್ಲಾ

Updated: September 5, 2018, 5:52 PM IST
- ನ್ಯೂಸ್18 ಕನ್ನಡ

ನವದೆಹಲಿ(ಸೆ. 05): ಕಾಶ್ಮೀರ ರಾಜ್ಯಕ್ಕೆ ನೀಡಿರುವ ವಿಶೇಷ ಸೌಲಭ್ಯ ಕಲ್ಪಿಸುವ 35-ಎ ಕಲಂ ಅನ್ನು ಕೇಂದ್ರ ಸರಕಾರ ಸರಿಯಾಗಿ ರಕ್ಷಿಸುತ್ತಿಲ್ಲವೆಂದು ನ್ಯಾಷನಲ್ ಕಾನ್ಫೆರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲ ಮತ್ತೊಮ್ಮೆ ಅಪಸ್ವರ ಎತ್ತಿದ್ದಾರೆ. ಕಾಶ್ಮೀರದ ಹಿತಾಸಕ್ತಿಗೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿ, ಕಣಿವೆ ರಾಜ್ಯದಲ್ಲಿ ನಡೆಯಲಿರುವ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ನ್ಯಾಷನಲ್ ಕಾನ್ಪೆರೆನ್ಸ್ ನಿರ್ಧರಿಸಿದೆ.

“ಸ್ಥಳೀಯ ಚುನಾವಣೆ ನಡೆಸುವ ನಿರ್ಧಾರ ಆತುರದ ಕ್ರಮವಾಗಿದೆ. ಕೇಂದ್ರ ಸರಕಾರ ಮೊದಲು ಸಂವಿಧಾನದ 35ಎ ಕಲಂ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಹಾಗೂ ಆ ವಿಶೇಷ ಕಲಂನ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ಈ ಚುನಾವಣೆಗಳಲ್ಲಿ ಪಾಲ್ಗೊಳ್ಳಬಾರದೆಂದು ನ್ಯಾಷನಲ್ ಕಾನ್ಫೆರೆನ್ಸ್ ಪಕ್ಷದ ಪ್ರಮುಖರೆಲ್ಲರೂ ಒಮ್ಮತದಿಂದ ನಿರ್ಧರಿಸಿದ್ದಾರೆ” ಎಂದು ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.

ಸುಪ್ರೀಂಕೋರ್ಟ್​ನಲ್ಲಿ ರಾಜ್ಯದ ಸದ್ಯದ ಆಡಳಿತ ಹಾಗೂ ಕೇಂದ್ರ ಸರಕಾರಗಳು ಜಮ್ಮು-ಕಾಶ್ಮೀರದ ಹಿತಾಸಕ್ತಿಯನ್ನು ರಕ್ಷಿಸುವ ಕೆಲಸ ಮಾಡುತ್ತಿಲ್ಲ. 35-ಎ ಕಲಂ ಅನ್ನು ಬದಲಿಸುವ ಪ್ರಯತ್ನ ಮಾಡಿದರೆ ಅದರಿಂದ ಕಾಶ್ಮೀರಕ್ಕಷ್ಟೇ ಅಲ್ಲ ಇಡೀ ದೇಶಕ್ಕೆ ಅಪಾಯಕಾರಿಯಾದೀತು ಎಂದು ಫಾರೂಕ್ ಅಬ್ದುಲ್ಲ ಎಚ್ಚರಿಕೆ ನೀಡಿದ್ದಾರೆ.

ಏನಿದು 35-ಎ ಕಲಂ? 
ಜಮ್ಮು-ಕಾಶ್ಮೀರವು ಭಾರತದ ಜೊತೆ ವಿಲೀನವಾಗಿದ್ದರೂ ಸಂವಿಧಾನದಲ್ಲಿ ಈ ರಾಜ್ಯಕ್ಕೆ ವಿಶೇಷ ಸ್ಥಾನ ನೀಡಲಾಗಿದೆ. ಸಂವಿಧಾನದ 370 ಮತ್ತು 35-ಎ ಇವೆರಡು ಪರಿಚ್ಛೇದಗಳು ಕಾಶ್ಮೀರಕ್ಕೆ ಸ್ವಾಯತ್ತ ಸ್ಥಾನಮಾನ ಕಲ್ಪಿಸಿವೆ.
Loading...

ಜಮ್ಮು-ಕಾಶ್ಮೀರದಲ್ಲಿ ಯಾರು ಖಾಯಂ ನಿವಾಸಿ ಎಂಬುದನ್ನು ರಾಜ್ಯ ಸರಕಾರವೇ ನಿರ್ಧರಿಸುತ್ತದೆ. ಪಾಕ್ ಆಕ್ರಮಿತ ಕಾಶ್ಮೀರ ಹೊರತಾಗಿ ಬೇರಿನ್ನಾವ ಸ್ಥಳದ ವ್ಯಕ್ತಿಯು ಜಮ್ಮು-ಕಾಶ್ಮೀರದಲ್ಲಿ ಖಾಯಂ ಆಗಿ ನೆಲಸುವಂತಿಲ್ಲ. ರಾಜ್ಯದ ಸರಕಾರದ ಉದ್ಯೋಗ ಪಡೆಯುವಂತಿಲ್ಲ. ರಾಜ್ಯದಲ್ಲಿ ಯಾವ ಸ್ಥಿರಾಸ್ತಿಯನ್ನೂ ಅವರು ಖರೀದಿಸುವಂತಿಲ್ಲ ಎಂದು 35-ಎ ಕಲಂ ಹೇಳುತ್ತದೆ.

ಇನ್ನು, 370 ಕಲಂನಿಂದ ಕಾಶ್ಮೀರಕ್ಕೆ ಸ್ವಾಯತ್ತ ಸ್ಥಾನಮಾನ ಸಿಕ್ಕಿದೆ. ಮಿಲಿಟರಿ, ವಿದೇಶಾಂಗ ವ್ಯವಹಾರ ಹಾಗೂ ಸಂವಹನ ಈ ಮೂರು ಬಿಟ್ಟರೆ ಬೇರೆ ಯಾವ ವಿಚಾರದಲ್ಲೂ ಕೇಂದ್ರ ಸರಕಾರವು ಈ ರಾಜ್ಯದ ವ್ಯವಹಾರದಲ್ಲಿ ಮೂಗುತೂರಿಸುವಂತಿಲ್ಲ.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...