ಸೂರ್ಯನನ್ನು ಸ್ಪರ್ಶಿಸಲು ಪಯಣ ಆರಂಭಿಸಿದ ನಾಸಾ ನೌಕೆ

news18
Updated:August 13, 2018, 10:05 AM IST
ಸೂರ್ಯನನ್ನು ಸ್ಪರ್ಶಿಸಲು ಪಯಣ ಆರಂಭಿಸಿದ ನಾಸಾ ನೌಕೆ
news18
Updated: August 13, 2018, 10:05 AM IST
ನ್ಯೂಸ್ 18 ಕನ್ನಡ

 ವಾಷಿಂಗ್ಟನ್ (ಆ.13) : ಸೂರ್ಯನ ಹೊರಭಾಗ ಅಧ್ಯಯನ ಮಾಡುವ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ನಾಸಾ) ಐದು ದಶಕಗಳ ಕನಸು ಇಂದು ಈಡೇರಿದೆ.

ಫ್ಲಾರಿಡಾದ ಕೇಪ್ ಕೆನಾವೆಲ್ ವಾಯುನೆಲೆಯಿಂದ ಭಾನುವಾರ ಬೆಳಗಿನ ಜಾವ 3.31ಕ್ಕೆ (ಭಾರತೀಯ ಕಾಲಮಾನ ಮಧ್ಯಾಹ್ನ 1.01) ‘ಟಚ್ ದಿ ಸನ್’ ಗಗನನೌಕೆ ಸೂರ್ಯನತ್ತ ಸುದೀರ್ಘ ಪ್ರಯಾಣ ಆರಂಭಿಸಿತು. ಸೂರ್ಯನನ್ನು ಬಹುಹತ್ತಿರದಿಂದ ಅಧ್ಯಯನ ನಡೆಸುವ ಮನುಕುಲದ ಮೊದಲ ಪ್ರಯತ್ನ ಇದಾಗಿದೆ. ಈ ಯೋಜನೆಗೆ ಖಗೋಳ ವಿಜ್ಞಾನಿ ಯೂಜಿನ್ ಪಾರ್ಕರ್ ಅವರ ಹೆಸರನ್ನು ಇಡಲಾಗಿದೆ.


ರಾಕೆಟ್ ಉಡಾವಣೆಯಾದ ಗಂಟೆಯೊಳಗೆ ನೌಕೆಯು ನಿಗದಿತ ಕಕ್ಷೆಯನ್ನು ಸೇರಿದ್ದು, ಯಶಸ್ವಿಯಾಗಿ ಸೂರ್ಯನತ್ತ ಹೊರಟಿದೆ ಎಂದು ನಾಸಾ ತಿಳಿಸಿದೆ.ಈ ನೌಕೆಯನ್ನು ಶನಿವಾರ ಬೆಳಗ್ಗಿನ ಜಾವ ಉಡಾವಣೆ ಮಾಡಲು ಯೋಜಿಸಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಉಡಾವಣೆಯನ್ನು ಮುಂದೂಡಲಾಗಿತ್ತು.


ಗಂಟೆಗೆ 6.92 ಲಕ್ಷ ಕಿ.ಮೀ. ವೇಗದಲ್ಲಿ ಚಲಿಸುವ ಈ ನೌಕೆ 2024ಕ್ಕೆ ಸೂರ್ಯನ ಅತೀ ಸಮೀಪಕ್ಕೆ ಹೋಗಲಿದೆ. ಸೂರ್ಯನ ಮೇಲ್ಮೈಯಿಂದ 60 ಲಕ್ಷ ಕಿ.ಮೀ. ದೂರದಲ್ಲಿರುವ ಕರೋನ ವಲಯ ತಲುಪಿ, ಅಧ್ಯಯನ ಆರಂಭಿಸಲಿದೆ. ನೌಕೆಯಲ್ಲಿ ಅಳವಡಿಸಿರುವ ಬಿಳಿಬಣ್ಣದ ವಿಶೇಷ ಕ್ಯಾಮರಾ ಸೂರ್ಯನ ಮೇಲ್ಮೈ ಚಿತ್ರಗಳನ್ನು ತೆಗೆದು, ಭೂಮಿಗೆ ರವಾನಿಸಲಿದೆ.


 ಸೂರ್ಯನ ಶಾಖದಿಂದ ನೌಕೆಯನ್ನು ರಕ್ಷಿಸಲು ನಾಸಾ ವಿಶೇಷ ರಕ್ಷಣಾ ತಂತ್ರಗಳನ್ನು ಅಭಿವೃದ್ಧಿಪಡಿಸಿದೆ. ಟಿಪಿಎಸ್ ತಂತ್ರಜ್ಞಾನ ಬಳಸಿ ಸಿದ್ಧಪಡಿಸಲಾದ 4.5 ಇಂಚು ದಪ್ಪನೆಯ ಕಾರ್ಬನ್ ಸಂಯೋಜನೆಯ ರಕ್ಷಾ ಕವಚವನ್ನು ನೌಕೆಗೆ ತೊಡಿಸಲಾಗಿದೆ. ಇದು ಸೂರ್ಯನ ತಾಪವನ್ನು ಹಿರಿಕೊಂಡು, ಕೆಲಸ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ನೌಕೆಯಲ್ಲಿ ಸದಾ 29 ಡಿಗ್ರಿ ಸೆಲ್ಸಿಯಸ್ ಸಾಮಾನ್ಯ ಉಷ್ಣತೆಯನ್ನು ಕಾಪಾಡಲಿದೆ.


Loading...

ಸೂರ್ಯನ ಹೊರವಲಯಕ್ಕೆ ನೌಕೆ ತಲುಪಿದಾಗ ಅಲ್ಲಿ 1377 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಅಂದರೆ ಭೂಮಿಯ ತಾಪಮಾನಕ್ಕಿಂತ ಸುಮಾರು 500 ಪಟ್ಟು ತಾಪಮಾನ ಅಲ್ಲಿ ಇರಲಿದೆ.

First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ