NASA: ಸೂಪರ್​ನೋವಾ ಬ್ಲಾಸ್ಟ್​​ನ ಅದ್ಭುತ ದೃಶ್ಯ ಸೆರೆ, ಹೇಗಿದೆ ಗೊತ್ತಾ ನಕ್ಷತ್ರದ ಅಂತ್ಯ ?

Supernova NASA

Supernova NASA

ನಕ್ಷತ್ರವು ಪರಮಾಣು ಇಂಧನದಿಂದ ಹೊರಹೋಗುತ್ತಿದ್ದಂತೆ, ಅದರ ಕೆಲವು ದ್ರವ್ಯರಾಶಿಯು ಅದರ ಅಂತರಂಗಕ್ಕೆ ಹರಿಯುತ್ತದೆ. ಅಂತಿಮವಾಗಿ, ಕೋರ್ ತನ್ನದೇ ಆದ ಗುರುತ್ವಾಕರ್ಷಣ ಶಕ್ತಿಯನ್ನು ತಡೆದುಕೊಳ್ಳುವಷ್ಟು ಭಾರವಾಗಿರುತ್ತದೆ. ಯಾವಾಗ ಕೋರ್ ಕುಸಿಯುತ್ತದೋ ಆಗ ಸೂಪರ್‌ನೋವಾದ ದೈತ್ಯ ಸ್ಫೋಟಕ್ಕೆ ಕಾರಣವಾಗುತ್ತದೆ.

ಮುಂದೆ ಓದಿ ...
  • Share this:

Trending: ಸೂಪರ್‌ನೋವಾಗಳು ಹೆಚ್ಚಾಗಿ ಇತರ ಗ್ಯಾಲಕ್ಸಿಗಳಲ್ಲಿ ಕಂಡು ಬರುತ್ತವೆ. ನಮ್ಮ ಮಿಲ್ಕಿವೇ ಗ್ಯಾಲಕ್ಸಿಯಲ್ಲಿ ಕಾಣುವುದು ತೀರಾ ಅಪರೂಪ. ಇದಕ್ಕೆ ಕಾರಣ ಧೂಳು. ಇನ್ನು ನಕ್ಷತ್ರಗಳ ಜೀವಿತಾವಧಿಯಲ್ಲಿ ಅವುಗಳ ಸ್ವರೂಪ ಮತ್ತು ಬದಲಾವಣೆಗಳು ಇಂದಿಗೂ ವಿಜ್ಞಾನಿಗಳಿಗೆ ಕೌತುಕವೇ! ಸೂಪರ್‌ನೋವಾಗಳು ಒಂದೇ ನಕ್ಷತ್ರದ ಜೀವಿತಾವಧಿಯ ಕೊನೆಯಲ್ಲಿ ಸಂಭವಿಸುತ್ತದೆ. ನಕ್ಷತ್ರವು ಪರಮಾಣು ಇಂಧನದಿಂದ ಹೊರಹೋಗುತ್ತಿದ್ದಂತೆ, ಅದರ ಕೆಲವು ದ್ರವ್ಯರಾಶಿಯು ಅದರ ಅಂತರಂಗಕ್ಕೆ ಹರಿಯುತ್ತದೆ. ಅಂತಿಮವಾಗಿ, ಕೋರ್ ತನ್ನದೇ ಆದ ಗುರುತ್ವಾಕರ್ಷಣ ಶಕ್ತಿಯನ್ನು ತಡೆದುಕೊಳ್ಳುವಷ್ಟು ಭಾರವಾಗಿರುತ್ತದೆ. ಯಾವಾಗ ಕೋರ್ ಕುಸಿಯುತ್ತದೋ ಆಗ ಸೂಪರ್‌ನೋವಾದ ದೈತ್ಯ ಸ್ಫೋಟಕ್ಕೆ ಕಾರಣವಾಗುತ್ತದೆ.


ಈ ವಿಶ್ವದ ವಿಸ್ತಾರದ ದ್ಯೋತಕ ಸೂಪರ್‌ನೋವಾಗಳು ವಿಜ್ಞಾನಿಗಳ ಅಧ್ಯಯನದಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಏಕೆಂದರೆ ಸೂಪರ್‌ನೋವಾಗಳು ನಮ್ಮ ವಿಶ್ವ ವಿಸ್ತಾರವಾಗುತ್ತಿದೆ, ಬೆಳೆಯುತ್ತಿದೆ ಎನ್ನುವುದನ್ನು ತೋರಿಸುತ್ತವೆ. ಈಗ ಸೂಪರ್‌ನೋವಾ ಬಗ್ಗೆ ಮತ್ತೊಮ್ಮೆ ಚರ್ಚೆ ಎದ್ದಿದೆ. ಅದಕ್ಕೆ ಕಾರಣ ಖಗೋಳದಲ್ಲಿ ನಡೆದ ಈ ದೈತ್ಯ ಸ್ಫೋಟ!


ಸೂಪರ್‌ನೋವಾ ಸ್ಪೋಟಗೊಳ್ಳುವ ಮುನ್ನ ನಕ್ಷತ್ರಗಳ ಅಂತ್ಯದ ಸಮಯವನ್ನು ಸೂಚಿಸುತ್ತವೆ. ಅಲ್ಲದೇ ನಕ್ಷತ್ರದ ಜೀವಿತಾವಧಿಯೂ ಸಾಕಷ್ಟು ಏರಿಳಿತಗಳಿಂದ ಕೂಡಿರುತ್ತದೆ. ಆ ನಂತರದ ಸ್ಫೋಟ ಬೆರಗು ಹುಟ್ಟಿಸುತ್ತದೆ. ಈ ಸ್ಫೋಟಕ್ಕೂ ಮೊದಲು ಬೃಹತ್ ನಕ್ಷತ್ರಗಳಿಗೆ ಏನಾಗುತ್ತದೆ ಎಂಬುದನ್ನು ನಿರ್ಧರಿಸಲು ವಿಜ್ಞಾನಿಗಳು ವರ್ಷಗಳಿಂದ ಪ್ರಯತ್ನಿಸಿದ್ದಾರೆ.


ಈ ಹಿನ್ನೆಲೆಯಲ್ಲಿ ನಕ್ಷತ್ರಗಳು ಸ್ಫೋಟಗೊಳ್ಳುವ ಮುನ್ನ ಏನಾಗುತ್ತದೆ..? ಸೂಪರ್‌ನೋವಾ ಆಗುವುದಕ್ಕೂ ಮುನ್ನದ ಬದಲಾವಣೆಯ ಚಿತ್ರಗಳನ್ನು ವಿಜ್ಞಾನಿಗಳು ಸೆರೆಹಿಡಿದಿದ್ದಾರೆ. ಈ ಚಿತ್ರಗಳು ಹಲವಾರು ರಹಸ್ಯಗಳನ್ನು ವಿವರವಾಗಿ ಪರಿಶೀಲಿಸಲು ನೆರವಾಗುತ್ತಿವೆ.


ಸಿಎನ್ಎನ್ ವರ್ಲ್ಡ್‌ ವರದಿಯ ಪ್ರಕಾರ, ವಿಜ್ಞಾನಿಗಳ ತಂಡವು ನಾಸಾ ಹಬಲ್ ಬಾಹ್ಯಾಕಾಶ ದೂರದರ್ಶಕವನ್ನು 2019 ರಿಂದ ಬೃಹತ್ ನಕ್ಷತ್ರದ ಮೇಲೆ ಕಣ್ಣಿಡಲು ಬಳಸುತ್ತಿದೆ. ಕನ್ಯಾರಾಶಿ ಗ್ಯಾಲಕ್ಸಿ ಕ್ಲಸ್ಟರ್‌ನಲ್ಲಿ ಈ ನಕ್ಷತ್ರವು ಭೂಮಿಯಿಂದ 35 ದಶಲಕ್ಷ ಬೆಳಕಿನ ವರ್ಷಗಳ ದೂರದಲ್ಲಿದೆ.


ಕಾಣೆಯಾದ ಹೈಡ್ರೋಜನ್ ಪದರ, ವಿಜ್ಞಾನಿಗಳಲ್ಲಿ ಅಚ್ಚರಿ!


ಇಲಿನಾಯ್ಸ್‌ನ ಇಂಟರ್ ಡಿಸಿಪ್ಲಿನರಿ ಎಕ್ಸ್‌ಪ್ಲೋರೇಶನ್ ಅಂಡ್ ರಿಸರ್ಚ್ ಇನ್ ಆಸ್ಟ್ರೋಫಿಸಿಕ್ಸ್‌ನ ಪ್ರಮುಖ ಅಧ್ಯಯನ ಲೇಖಕ ಚಾರ್ಲ್ಸ್ ಕಿಲ್ಪಾಟ್ರಿಕ್ ಅವರ ಪ್ರಕಾರ ಈ ನಕ್ಷತ್ರವು ತಂಪಾದ ಹಳದಿ ನಕ್ಷತ್ರವಾಗಿದೆ. ಈ ತಂಪಾದ ಹಳದಿ ನಕ್ಷತ್ರಗಳು ತಮ್ಮ ಕೊನೆ ಘಟ್ಟದಲ್ಲಿ ಹೈಡ್ರೋಜನ್‌ನಿಂದ ಆವೃತ್ತವಾಗಿರುತ್ತವೆ. ಆ ಮೂಲಕ ನಕ್ಷತ್ರದಲ್ಲಿನ ಬಿಸಿಯಾಗಿರುವ ನೀಲಿ ಭಾಗವನ್ನು ಆವರಿಸುತ್ತದೆ. ಆದರೆ ಈ ನಕ್ಷತ್ರ ಸ್ಫೋಟಗೊಂಡಾಗ ಇದಕ್ಕೆ ತದ್ವಿರುದ್ಧದ ವಿದ್ಯಮಾನ ಉಂಟಾಗಿದೆ.


ಅಂದರೆ ಈ ನಿರ್ದಿಷ್ಟ ನಕ್ಷತ್ರ ಸ್ಫೋಟಗೊಂಡಾಗ, ಆ ಹೈಡ್ರೋಜನ್ ಪದರವು ಕಾಣೆಯಾಗಿದೆ. ನಕ್ಷತ್ರ ನೀಲಿ ಬಣ್ಣದಿಂದ ಇರಬೇಕಿತ್ತು. ಅದು ಬಿಸಿಯ ತೀವ್ರತೆ ಸೂಚಿಸಬೇಕಿತ್ತು. ಆದರೆ ಸ್ಫೋಟದ ಮೊದಲು ನಕ್ಷತ್ರವು ಅಸಾಧಾರಣವಾಗಿ ತಂಪಾಗಿತ್ತು. ಹೈಡ್ರೋಜನ್ ಇಲ್ಲದೆ ನಕ್ಷತ್ರ ತಂಪಾಗಿರಲು ಅಸಾಧ್ಯ. ಇದುವೇ ಈಗ ಕುತೂಹಲಕ್ಕೆ ಕಾರಣವಾಗಿದ್ದು ವಿಜ್ಞಾನಿಗಳನ್ನು ಅಚ್ಚರಿಗೆ ದೂಡಿದೆ.


ಇದು ಅಪರೂಪದ ನಕ್ಷತ್ರ


ಈ ಸ್ಫೋಟದಲ್ಲಿ ಪ್ರಮುಖವಾಗಿ ನೀಲಿ ಬೆಳಕನ್ನು ಹೊರಸೂಸುವ ಕಾರಣದಿಂದಾಗಿ ಅದು ಹೈಡ್ರೋಜನ್ ಕಳೆದುಕೊಂಡಿರಬಹುದು. ಹೈಡ್ರೋಜನ್‌ನ ಈ ಬದಲಾವಣೆ ವಿಜ್ಞಾನಿಗಳಲ್ಲಿ ಕುತೂಹಲ ಮೂಡಿಸಿದೆ. ಸ್ಫೋಟದಲ್ಲಿ ಹೈಡ್ರೋಜನ್ ಕಾಣೆಯಾಗಿದ್ದರಿಂದ, ನಕ್ಷತ್ರವು ಸಮಯ ಸರಿದಂತೆ ಅದರ ಅಂತ್ಯದವರೆಗಿನ ವರ್ಷಗಳಲ್ಲಿ ಅದರ ಅನಿಲ ಪದರವನ್ನು ಕಳೆದುಕೊಂಡಿರಬೇಕು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. "ಸೂಪರ್‌ನೋವಾ ಆಗಿ ಸ್ಫೋಟಗೊಳ್ಳುವ ಮೊದಲು ಈ ರೀತಿಯ ನಕ್ಷತ್ರವನ್ನು ನೋಡುವುದು ಅಪರೂಪ" ಎಂದು ಚಾರ್ಲ್ಸ್ ಹೇಳಿದರು.


ಸ್ಫೋಟದ ಸುತ್ತ ಮುತ್ತ ಹೈಡ್ರೋಜನ್ ಪತ್ತೆ


ಅಲ್ಲದೇ ನಕ್ಷತ್ರ ಸ್ಫೋಟಗೊಂಡಾಗ, ಇದು ಬಹಳ ಸಾಮಾನ್ಯವಾದ ಹೈಡ್ರೋಜನ್ ಮುಕ್ತ ಸೂಪರ್‌ನೋವಾದಂತೆ ಕಂಡು ಬರುತ್ತದೆ. ಆದರೆ ಇದು ಈ ಹಿಂದಿನ ಲೆಕ್ಕಚಾರಗಳಿಗೆ ಹೊಂದಿಕೆಯಾಗಲಿಲ್ಲ ಎನ್ನುವ ಅಂಶವನ್ನು ಚಾರ್ಲ್ಸ್ ಬಹಿರಂಗಪಡಿಸಿದರು. ಇನ್ನೂ ಇದರ ಸುತ್ತ ಮುತ್ತ ಸಂಗ್ರಹವಾಗಿರುವ ಬೃಹತ್ ಹೈಡ್ರೋಜನ್ ದ್ರವ್ಯರಾಶಿಯನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಬಹುಶಃ ಇದುವೇ ಆ ನಕ್ಷತ್ರದಲ್ಲಿ ಇರಬೇಕಿದ್ದ, ಸದ್ಯ ಕಾಣೆಯಾಗಿರುವ ಹೈಡ್ರೋಜನ್ ಆಗಿರಬಹುದು, ನಕ್ಷತ್ರ ಸ್ಫೋಟಗೊಳ್ಳುವ ಮುನ್ನ ಅದನ್ನು ಹೊರಹಾಕಿರಬಹುದು ಎಂದು ನಂಬಿದ್ದಾರೆ.


ವಿಜ್ಞಾನಿಗಳಿಗೆ ಖಗೋಳದ ಹೊಸ ಸಾಧ್ಯತೆ ಗೋಚರ


ಈ ನಕ್ಷತ್ರದ ಆವಿಷ್ಕಾರವು ಖಗೋಳಶಾಸ್ತ್ರಜ್ಞರು ವಿವಿಧ ಸಿದ್ಧಾಂತಗಳನ್ನು ಸಾಬೀತುಪಡಿಸಲು ಸಹಾಯ ಮಾಡಿದೆ. ನಕ್ಷತ್ರಗಳು ಸಾಕಷ್ಟು ಏರಿಳಿತವನ್ನು ಕಂಡು, ಸೂಪರ್‌ನೋವಾ ಹಂತಕ್ಕೆ ತಲುಪುತ್ತದೆ. ಅಲ್ಲದೇ ದ್ರವ್ಯರಾಶಿಯನ್ನು ಕಳೆದುಕೊಂಡು ಸ್ಫೋಟಕ್ಕೂ ಮುನ್ನ ಹೈಡ್ರೋಜನ್ ಹೊರಹಾಕುವ ಸಾಧ್ಯತೆ ಇದೆ ಎಂದು ಕಂಡುಕೊಂಡಿದ್ದಾರೆ. ಅಲ್ಲದೇ ಈ ಹೊಸ ಶೋಧನೆಯು ಖಗೋಳಶಾಸ್ತ್ರಜ್ಞರಿಗೆ ವಿಶ್ವದ ಇತರ ನಕ್ಷತ್ರಗಳು ಮತ್ತು ಸೂಪರ್‌ನೋವಾಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.

Published by:Soumya KN
First published: