NASA - ಚಂದ್ರನ ಬಳಿ ಮಹಿಳೆ ಕಳುಹಿಸಲು ನಾಸಾ ಸಿದ್ಧ; ಇಲ್ಲಿದೆ ಮೂನ್ ಮಿಷನ್ ವಿವರ

ಅಮೆರಿಕದ ನಾಸಾ 52 ವರ್ಷಗಳ ಬಳಿಕ ಮೊದಲ ಬಾರಿಗೆ ಚಂದ್ರನ ನೆಲದ ಮೇಲೆ ಮನುಷ್ಯರನ್ನು ಇಳಿಸಲಿದೆ. ಇಬ್ಬರು ಗಗನಯಾತ್ರಿಗಳಲ್ಲಿ ಒಬ್ಬ ಮಹಿಳೆ ಇರಲಿದ್ದು ಅದು ಹೊಸ ಇತಿಹಾಸವಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
ಬೆಂಗಳೂರು: ಐದು ದಶಕಗಳ ಬಳಿಕ ಮೊದಲ ಬಾರಿಗೆ ಮಾನವ ಚಂದ್ರನ ಮೇಲೆ ಮತ್ತೊಮ್ಮೆ ಕಾಲಿಡಲಿದ್ದಾನೆ. ಇನ್ನು ಮೂರು ವರ್ಷದಲ್ಲಿ ಇಬ್ಬರು ಗಗನಯಾತ್ರಿಗಳು ಚಂದ್ರನಲ್ಲಿ ಇಳಿಯಲಿದ್ದಾರೆ. ಆ ಇಬ್ಬರಲ್ಲಿ ಒಬ್ಬರು ಮಹಿಳೆ ಇರಲಿದ್ದಾರೆ. 2024ಕ್ಕೆ ಮಾನಸಹಿತ ಗಗನನೌಕೆಯನ್ನು ಚಂದ್ರನ ಮೇಲಿಳಿಸಲು ಅಮೆರಿಕದ ನಾಸಾ ಯೋಜಿಸಿದೆ. ಅದು ಯಶಸ್ವಿಯಾದಲ್ಲಿ ಮಹಿಳೆಯೊಬ್ಬರು ಮೊತ್ತಮೊದಲ ಬಾರಿಗೆ ಚಂದ್ರನ ಮೇಲೆ ಕಾಲಿಟ್ಟ ಹೊಸ ಮೈಲಿಗಲ್ಲು ಸೃಷ್ಟಿಯಾಗಲಿದೆ. ಹಾಗೆಯೇ ಆರನೇ ಬಾರಿ ಮನುಷ್ಯ ಚಂದ್ರನ ಮೇಲೆ ಕಾಲಿಟ್ಟಂತಾಗುತ್ತದೆ. ಜೊತೆಗೆ, ಚಂದ್ರನ ದಕ್ಷಿಣ ಧ್ರುವದ ಮೇಲೆ ಮೊದಲ ಬಾರಿಗೆ ಮನುಷ್ಯ ಪಾದ ಊರಲಿದ್ದಾನೆ. ನಾಸಾ ಈಗಾಗಲೇ ಇದಕ್ಕೆ ವ್ಯವಸ್ಥಿತ ಯೋಜನೆ ರೂಪಿಸಿದೆ.

ನಾಸಾದ ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಅಮೆರಿಕದ ಖಾಸಗಿ ಸಂಸ್ಥೆಗಳು ಪೈಪೋಟಿ ನಡೆಸಿವೆ. ನಾಸಾದ ಈ ಆರ್ಟೆಮಿಸ್ (Artemis) ಸರಣಿಯ ಯೋಜನೆಗಳು ಸಿದ್ಧಗೊಳ್ಳುತ್ತಿವೆ. ಮುಂದಿನ ವರ್ಷ, ಅಂದರೆ 2021 ನವೆಂಬರ್​ನಲ್ಲಿ ಆರ್ಟೆನಿಸ್-1 ಯೋಜನೆಗೆ ಚಾಲನೆ ಸಿಗಲಿದೆ. ಎಸ್​ಎಲ್​ಎಸ್ ಎಂಬ ದೈತ್ಯ ರಾಕೆಟ್ ಸಹಾಯದಿಂದ ಹೋಗಲಿರುವ ಈ ಓರಿಯಾನ್ (Orion) ಗಗನನೌಕೆಯಲ್ಲಿ ಮನುಷ್ಯರು ಇರುವುದಿಲ್ಲ.

2023ರಲ್ಲಿ ಆರ್ಟೆಮಿಸ್-2 ಯಾನದಲ್ಲಿ ಮನುಷ್ಯರನ್ನು ಕಳುಹಿಸಲಾಗುತ್ತದಾದರೂ ಚಂದ್ರನ ನೆಲದ ಮೇಲೆ ಇಳಿಯದೆ ಚಂದ್ರ ಪರಿಧಿಯಲ್ಲಿ ಸುತ್ತಾಡಿ ಗಗನನೌಕೆ ವಾಪಸ್ ಭೂಮಿಗೆ ಬರಲಿದೆ.

ಅಂತಿಮವಾಗಿ 2024ರಲ್ಲಿ ಆರ್ಟೆಮಿಸ್-3 ಯೋಜನೆಯಂತೆ ಒಬ್ಬ ಪುರುಷ ಮತ್ತು ಒಬ್ಬ ಮಹಿಳಾ ಗಗನಯಾತ್ರಿ ಹೋಗಲಿದ್ದು ಚಂದ್ರನ ಸೌತ್ ಪೋಲ್ ಭಾಗದಲ್ಲಿ ಲ್ಯಾಂಡ್ ಆಗಲಿದ್ದಾರೆ. ವಿಶೇಷ ಎಂದರೆ ಈ ಗಗನಯಾತ್ರಿಗಳು ಕೂಡಲೆ ವಾಪಸ್ ಬರದೇ ಒಂದು ವಾರ ಕಾಲ ಚಂದ್ರನ ಮೇಲೆ ನಿಗದಿತ ಚಟುವಟಿಕೆಗಳನ್ನ ಮಾಡಿ ಆ ನಂತರ ಭೂಮಿಗೆ ಮರಳಲಿದ್ದಾರೆ.

ಇದನ್ನೂ ಓದಿ: Tata Group - ಟಾಟಾಗೆ ನಾವು ವಿದಾಯ ಹೇಳುವ ಸಮಯ ಬಂದಿದೆ: ಮಿಸ್ತ್ರಿ ಕುಟುಂಬ

ಓರಿಯಾನ್ ಎಂಬ ಗಗನನೌಕೆಯನ್ನು ಯಾನಕ್ಕೆ ಬಳಸಿಕೊಳ್ಳಲಾಗುತ್ತಿದೆ. ಚಂದ್ರನ ಪರಿಧಿಯಿಂದ ನೆಲಕ್ಕೆ ಇಳಿಯಲು ಬೇಕಾದ ಲೂನಾರ್ ಲ್ಯಾಂಡರ್ ಅಭಿವೃದ್ಧಿಪಡಿಸಲು ಅಮೆರಿಕದ ಖಾಸಗಿ ಕಂಪನಿಗಳು ಪೈಪೋಟಿ ನಡೆಸಿವೆ. ಅಮೇಜಾನ್ ಸಂಸ್ಥೆಯ ಸಂಸ್ಥಾಪಕ ಜೆಫ್ ಬೆಜೋಸ್ ಅವರ ಬ್ಲೂ ಆರಿಜಿನ್, ಲಾಕ್​ಹೀಡ್ ಮಾರ್ಟಿನ್, ನಾರ್ಥ್​ರಾಪ್ ಗ್ರುಮ್ಮನ್ ಮತ್ತು ಡ್ರೇಪರ್ ಅವರ ಸಹಯೋಗದಲ್ಲಿ ಒಂದು ಲ್ಯಾಂಡರ್ ಅಭಿವೃದ್ಧಿಯಾಗುತ್ತಿದೆ. ಮಂಗಳ ಗ್ರಹದಲ್ಲಿ ವಸಾಹತು ನಿರ್ಮಿಸಲು ಓಡಾಡುತ್ತಿರುವ ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆ ಇನ್ನೆರಡು ಲ್ಯಾಂಡರ್ ಅಭಿವೃದ್ಧಿಪಡಿಸುತ್ತಿದೆ.

2024ರಲ್ಲಿ ಎಸ್​ಎಲ್​ಎಸ್ ರಾಕೆಟ್ ಮೂಲಕ ಓರಿಯಾನ್ ಗಗನನೌಕೆಯ ಉಡಾವಣೆ ಆಗಲಿದೆ. ಮಾರ್ಗಮಧ್ಯೆ ರಾಕೆಟ್​ನಿಂದ ಬೇರ್ಪಡುವ ಗಗನನೌಕೆ 2.4 ಲಕ್ಷ ಮೈಲು (3.86 ಲಕ್ಷ ಕಿಮೀ) ದೂರ ಸಾಗಿ ಚಂದ್ರನ ಪರಿಧಿ ತಲುಪುತ್ತದೆ. ಅಲ್ಲಿಂದ ಅನುಕೂಲಕರ ಸಮಯ ನೋಡಿಕೊಂಡು ದಕ್ಷಿಣ ಧ್ರುವದ ಸ್ಥಳವೊಂದರಲ್ಲಿ ಇಬ್ಬರು ಗಗನಯಾತ್ರಿಗಳು ಇಳಿಯಲಿದ್ದಾರೆ. ಒಂದು ವಾರ ಚಂದ್ರನ ಮೇಲೆ ಸುತ್ತಾಡಿ ನಂತರ ಈ ಗಗನಯಾತ್ರಿಗಳು ಅದೇ ಲ್ಯಾಂಡರ್ ಸಹಾಯದಿಂದ ಗಗನನೌಕೆಗೆ ಸಾಗಿ ಅಲ್ಲಿಂದ ಭೂಮಿಗೆ ಹಿಂದಿರುಗಲಿದ್ದಾರೆ.

ಇದನ್ನೂ ಓದಿ: ಲಡಾಖ್​ನ ಗಡಿಭಾಗಕ್ಕೆ ಮತ್ತಷ್ಟು ಸೈನಿಕರ ನಿಯೋಜನೆ ಮಾಡದಿರಲು ಭಾರತ-ಚೀನಾ ಸೇನೆ ನಿರ್ಧಾರ

ಈ ಇಬ್ಬರು ಗಗನಯಾತ್ರಿಗಳಲ್ಲಿ ಒಬ್ಬರು ಮಹಿಳೆ ಇರಬೇಕೆಂದು ನಿರ್ಧರಿಸಲಾಗಿದೆ. ಈಗಾಗಲೇ 12 ಮಹಿಳಾ ಆಸ್ಟ್ರೋನಾಟ್​ಗಳು ಅಮೆರಿಕದಲ್ಲಿದ್ದಾರೆ. ಇವರಲ್ಲಿ ಒಬ್ಬರನ್ನು ಈ ಯೋಜನೆಗೆ ಆರಿಸುವ ಸಾಧ್ಯತೆ ಇದೆ.

ಚಂದ್ರನ ಬಳಿ ಮಾನವನನ್ನು ಮೊದಲ ಬಾರಿಗೆ ಕಳುಹಿಸಿದ್ದು ರಷ್ಯಾ ದೇಶ. ಇದು ಆಗಿದ್ದು 1959ರಲ್ಲಿ ಯೂರಿ ಗಗಾರಿನ್ ಜಗತ್ತಿನ ಮೊದಲ ಗಗನಯಾತ್ರಿ. ಆದರೆ, ಚಂದ್ರನ ನೆಲದ ಮೇಲೆ ಮೊದಲ ಬಾರಿಗೆ ಮಾನವನನ್ನು ಇಳಿಸಿದ್ದು ಅಮೆರಿಕ. 1969ರಲ್ಲಿ ನೀಲ್ ಆರ್ಮ್ಸ್​ಟ್ರಾಂಗ್ ಮತ್ತು ಎಡ್ವಿನ್ ಆಲ್ಡ್ರಿನ್ ಅವರು ಚಂದ್ರನ ಮೇಲೆ ಅಮೆರಿಕದ ಬಾವುಟ ಹಾರಿಸಿದರು. 1969ರಿಂದ 1972ರವರೆಗೆ ಅಮೆರಿಕ ಒಟ್ಟು ಐದು ಬಾರಿ ಮನುಷ್ಯರನ್ನ ಚಂದ್ರನ ಮೇಲಿಳಿಸಿದೆ. ಒಂದೊಂದು ಬಾರಿಯೂ ಇಬ್ಬರು ವ್ಯಕ್ತಿಗಳಂತೆ ಈ ಐದು ಮಿಷನ್​ಗಳಲ್ಲಿ ಒಟ್ಟು 10 ಮಂದಿ ಚಂದ್ರನ ಮೇಲೆ ಪಾದ ಊರಿದ್ದಾರೆ. ಆದರೆ, ಅವರೆಲ್ಲರೂ ಪುರುಷ ಗಗನಯಾತ್ರಿಗಳೇ. ಅದಾಗಿ 52 ವರ್ಷಗಳ ನಂತರ ಮನುಷ್ಯ ಮತ್ತೊಮ್ಮೆ ಭೂಮಿಯ ಉಪಗ್ರಹ ಮೇಲಿಳಿಯಲಿದ್ದಾರೆ. ಮೊದಲ ಬಾರಿಗೆ ಮಹಿಳೆಯೂ ಕೆಳಗಿಳಿಯಲಿದ್ದಾಳೆ.
Published by:Vijayasarthy SN
First published: