NASA SpaceX: ಸ್ಪೇಸ್ ಎಕ್ಸ್ ಪ್ರಯೋಗ ಯಶಸ್ವಿ; ಸುರಕ್ಷಿತವಾಗಿ ಭೂಮಿಗಿಳಿದ ನಾಸಾ ಗಗನಯಾತ್ರಿಗಳು

ಮೆಕ್ಸಿಕೋ ಗಲ್ಫ್ ಬಳಿ ಇಳಿದ ಗಗನಯಾತ್ರಿಕರು

ಮೆಕ್ಸಿಕೋ ಗಲ್ಫ್ ಬಳಿ ಇಳಿದ ಗಗನಯಾತ್ರಿಕರು

SpaceX ಸಂಸ್ಥೆಯೇ ತಯಾರಿಸಿದ ಫಾಲ್ಕನ್-9 ರಾಕೆಟ್ ಎರಡು ತಿಂಗಳ ಹಿಂದೆ ಡ್ರಾಗನ್ ಗಗನನೌಕೆಯನ್ನು ಭೂ ಕಕ್ಷೆಯಲ್ಲಿರುವ ಸ್ಪೇಷ್ ಸ್ಟೇಷನ್ನತ್ತ ಸಾಗಿಸಿತ್ತು. ಇದೀಗ ಅದೇ ಗಗನನೌಕೆ ಮೂಲಕ ಇಬ್ಬರು ಗಗನಯಾತ್ರಿಕರು ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ.

  • News18
  • 2-MIN READ
  • Last Updated :
  • Share this:

ವಾಷಿಂಗ್ಟನ್(ಆ. 03): ಭೂ ಕಕ್ಷೆಯಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಅಮೆರಿಕದ ಇಬ್ಬರು ಗಗನಯಾತ್ರಿಗಳು ಇಂದು ಸುರಕ್ಷಿತವಾಗಿ ಭೂಮಿಗೆ ಇಳಿದಿದ್ದಾರೆ. ಸ್ಪೇಸ್ ಎಕ್ಸ್ ಸಂಸ್ಥೆಯ ಡ್ರಾಗನ್ ಗಗನ ನೌಕೆ ಮೂಲಕ ಡೌಗ್ ಹರ್ಲೇ ಮತ್ತು ಬಾಬ್ ಬೆನ್​ಕೆನ್ ಇಂದು ಮೆಕ್ಸಿಕೋ ಕೊಲ್ಲಿ ಪ್ರದೇಶದ ನೀರಿಗೆ ಬಂದು ಇಳಿದಿದ್ದಾರೆ. ಅಲ್ಲಿಂದ ಹಡಗಿನ ಮೂಲಕ ಅವರನ್ನು ಸುರಕ್ಷಿತವಾಗಿ ದಡಕ್ಕೆ ಕರೆ ತರಲಾಗಿದೆ.


ಅಮೆರಿಕದ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಡೆದ ಮೊದಲ ಗಗನಯಾತ್ರೆ ಇದಾಗಿದೆ. ನಾಸಾ ಮತ್ತುಸ್ಪೇಸ್ ಎಕ್ಸ್ ಜಂಟಿಯಾಗಿ ನಡೆಸಿದ ಮೊದಲ ಪ್ರಯೋಗ ಇದು. ಇಲಾನ್ ಮಸ್ಕ್ ಮಾಲಕತ್ವದ ಸ್ಪೇಸ್ ಎಕ್ಸ್ ಸಂಸ್ಥೆ ಈ ಯಾತ್ರೆಯನ್ನು ಸಂಪೂರ್ಣವಾಗಿ ಆಯೋಜಿಸಿತ್ತು. ಸ್ಪೇಸ್ ಎಕ್ಸ್ ಸಂಸ್ಥೆಯೇ ತಯಾರಿಸಿದ ಫಾಲ್ಕನ್-9 ರಾಕೆಟ್ ಎರಡು ತಿಂಗಳ ಹಿಂದೆ (ಮೇ ಅಂತ್ಯ) ನಾಸಾದ ಇಬ್ಬರು ಗಗನಯಾತ್ರಿಗಳಿದ್ದ ಡ್ರಾಗನ್ ಕ್ಯಾಪ್ಸೂಲ್ (ಗಗನನೌಕೆ) ಅನ್ನು ಆಗಸಕ್ಕೆ ಹೊತ್ತೊಯ್ದಿತ್ತು. ಅಲ್ಲಿಂದ ಡ್ರಾಗನ್ ಕ್ಯಾಪ್ಸೂಲ್ ಮೂಲಕ ಇಬ್ಬರು ಗಗನಯಾತ್ರಿಗಳು ಇಂಟರ್​ನ್ಯಾಷನಲ್ ಸ್ಪೇಸ್ ಸ್ಟೇಷನ್ ತಲುಪಿದ್ದರು. ಇದೀಗ ಅವರು ಡ್ರಾಗನ್ ಕ್ಯಾಪ್ಸೂಲ್ ಮೂಲಕವೇ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ.


ಇದನ್ನೂ ಓದಿ: Life in Mars - ಟರ್ಕಿ ದೇಶದ ಈ ಸರೋವರದಲ್ಲಿದೆಯಾ ಮಂಗಳ ಗ್ರಹದ ಜೀವರಹಸ್ಯ?


ಕೆಳಗಿಳಿದ ಸಾಹಸ:


ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಟ ಡ್ರಾಗನ್ ಗಗನನೌಕೆ ಭೂಮಿಯ ಸಮೀಪಕ್ಕೆ ಬರುತ್ತಿದ್ದಂತೆಯೇ ವೇಗ ಹೆಚ್ಚಾಯಿತು. 560 ಕಿಮೀ ವೇಗದಲ್ಲಿದ್ದ ನೌಕೆಯು ತನ್ನಲ್ಲಿದ್ದ ಪ್ಯಾರಾಚೂಟ್​ಗಳ ಮೂಲಕ ವೇಗ ತಗ್ಗಿಸಿಕೊಂಡಿತು. ಮೆಕ್ಸಿಕೋ ಕೊಲ್ಲಿ ಬಳಿ ಸಾಗರಕ್ಕೆ ಧುಮುಕುವಾಗ ನೌಕೆಯ ವೇಗ ಸುಮಾರು 25 ಕಿಮೀ (ಗಂಟೆಗೆ) ಇತ್ತೆನ್ನಲಾಗಿದೆ. ನೀರಿನೊಳಗೆ ಹೋದ ನೌಕೆಯನ್ನು ಸರಪಳಿಗಳ ಮೂಲಕ ಮೇಲೆತ್ತಿ ರಕ್ಷಣಾ ಹಡಗಿನತ್ತ ಕರೆ ತರಲಾಯಿತು. ಆಗ ಗಗನಯಾತ್ರಿಗಳಿಗೆ ವೈದ್ಯಕೀಯ ಉಪಚಾರ ನೀಡಲಾಯಿತು. ಬಳಿಕ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ದಡಕ್ಕೆ ಕರೆತರಲಾಯಿತು. ಗಗನಯಾತ್ರಿಗಳಾದ ಡೌಗ್ ಹರ್ಲೆ ಮತ್ತು ಬಾಬ್ ಬೆನ್​ಕೆನ್ ಇಬ್ಬರೂ ಸುರಕ್ಷಿತವಾಗಿದ್ದಾರೆ.


ಅಮೆರಿಕದ ಬಾಹ್ಯಾಕಾಶ ಯೋಜನೆಯಲ್ಲಿ ಖಾಸಗಿ ಸಹಭಾಗಿತ್ವದ ಪರ್ವ ಇದೀಗ ಆರಂಭಗೊಂಡಿದೆ. ಸ್ಪೇಸ್ ಎಕ್ಸ್ ಸೇರಿದಂತೆ ಹಲವು ಖಾಸಗಿ ಕಂಪನಿಗಳು ಬಾಹ್ಯಾಕಾಶ ಯೋಜನೆಯಲ್ಲಿ ಭಾಗಿಯಾಗಲು ಪೈಪೋಟಿಗೆ ಇಳಿದಿವೆ. ಸ್ಪೇಸ್ ಎಕ್ಸ್ ಸಹಾಯದಲ್ಲಿ ನಡೆದ ಈ ಗಗನ ಯಾತ್ರೆಯಿಂದ ನಾಸಾಗೆ ಕೋಟ್ಯಂತರ ಹಣದ ಉಳಿತಾಯವಾಗಿದೆ. ರಾಕೆಟ್, ಗಗನನೌಕೆ ಇತ್ಯಾದಿಗಳನ್ನ ಅಭಿವೃದ್ಧಿಪಡಿಸಿ ಪಾಲನೆ ಮಾಡುವ ವಿಚಾರವನ್ನು ಬಿಟ್ಟು ಬೇರೆ ಸಂಶೋಧನಾ ಕಾರ್ಯಗಳಿಗೆ ಗಮನ ಕೊಡಲು ತನಗೆ ಸಾಧ್ಯವಾಗುತ್ತದೆ ಎಂದು ನಾಸಾ ಹೇಳಿಕೊಂಡಿದೆ. ಈಗ ನಡೆದ ಗಗನಯಾತ್ರೆಯು ಸ್ಪೇಸ್ ಎಕ್ಸ್​ನ ಡ್ರಾಗನ್ ಕ್ಯಾಪ್ಸೂಲ್ ಸೇವೆಯ ಪ್ರಯೋಗವಾಗಿದೆ. ಇದು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ನಾಸಾದ ಭವಿಷ್ಯದ ಯೋಜನೆಗಳಲ್ಲಿ ಸ್ಪೇಸ್ ಎಕ್ಸ್​ನ ವಿವಿಧ ಸೇವೆಗಳನ್ನು ಎರವಲು ಪಡೆಯಲಾಗಲಿದೆ.


ಇದನ್ನೂ ಓದಿ: ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಯಾವಾಗ ಮುಕ್ತಿ? ತಜ್ಞರಿಂದ ಕುತೂಹಲಕಾರಿ ಉತ್ತರ


ಗಗನಯಾತ್ರಿಗಳನ್ನ ಹೊತ್ತೊಯ್ದಿದ್ದ ಡ್ರಾಗನ್ ಕ್ಯಾಪ್ಸೂಲ್ ಬಗ್ಗೆ ಒಳ್ಳೆಯ ಪ್ರತಿಕ್ರಿಯೆಗಳು ಬಂದಿವೆ. ಇದನ್ನು ಬಳಸುವುದು ಬಹಳ ಸುಲಭ ಎಂದು ಗಗನಯಾತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಅಮೆರಿಕದಲ್ಲಿ ಸ್ಪೇಸ್ ಎಕ್ಸ್ ಅಷ್ಟೇ ಅಲ್ಲ ಬೋಯಿಂಗ್, ಬ್ಲೂ ಆರಿಜಿನ್, ವರ್ಜಿನ್ ಕೆಲಾಕ್ಟಿಕ್, ಸಿಯೆರಾ ನೆವಾಡ ಮೊದಲಾದ ಇತರ ಖಾಸಗಿ ಕಂಪನಿಗಳು ಕೂಡ ಗಗನನೌಕೆಗಳನ್ನ ರೂಪಿಸಿವೆ. ಇವುಗಳ ಮಧ್ಯೆ ಪೈಪೋಟಿ ಹಚ್ಚಿಸಿ ಉತ್ತಮ ದರದಲ್ಲಿ ಉತ್ತಮ ಗುಣಮಟ್ಟದ ಸೇವೆ ಪಡೆಯಲು ಸಾಧ್ಯ ಎಂಬುದು ನಾಸಾ ಚಿಂತನೆ.

top videos
    First published: