Statue Of Equality: ಹೈದ್ರಾಬಾದ್‌ನಲ್ಲಿಂದು ಶ್ರೀರಾಮಾನುಜರ ಪ್ರತಿಮೆ ಲೋಕಾರ್ಪಣೆ, ಏನಿದರ ವಿಶೇಷತೆ?

ಹೈದ್ರಾಬಾದ್‌ನಲ್ಲಿ ಇಂದು ಶ್ರೀರಾಮಾನುಜಾಚಾರ್ಯರ ಬೃಹತ್ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ. ಹಾಗಿದ್ದರೆ ಶ್ರೀ ರಾಮಾನುಜರ ಹಿನ್ನೆಲೆ ಏನು? ಬೃಹತ್ ಪ್ರತಿಮೆಯ ವಿಶೇಷತೆಗಳೇನು? ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ...

ಉದ್ಘಾಟನೆಗೆ ಸಿದ್ಧಗೊಂಡಿರುವ ಪ್ರತಿಮೆ

ಉದ್ಘಾಟನೆಗೆ ಸಿದ್ಧಗೊಂಡಿರುವ ಪ್ರತಿಮೆ

  • Share this:
ಇಂದು ಶ್ರೀ ರಾಮಾನುಜಾಚಾರ್ಯರ ಸ್ಮರಣೆ ನಡೆಯುತ್ತಿದೆ.  ಅವರು ಅವತಾರವೆತ್ತಿ ಬರೋಬ್ಬರಿ 1000 ವರ್ಷಗಳೇ (1000 Years) ಆಗಿವೆ.  ಭಾರತ ಕಂಡ ಸಂತ (Saint) ಶ್ರೇಷ್ಠರಲ್ಲಿ ಶ್ರೀ ರಾಮಾನುಜಾಚಾರ್ಯರೂ (Sri Ramanujacharya) ಒಬ್ಬರು. ವೈಷ್ಣವ ಸಂತ ಎಂದೇ ಕರೆಯಲ್ಪಡುವ ರಾಮಾನುಜಾಚಾರ್ಯರು, ವಿಶಿಷ್ಟಾದ್ವೈತ (Visistadvaita) ಪಂತದ ಮೂಲಕ ಸನಾತನ ಸಂಸ್ಕೃತಿಗೆ ತಮ್ಮದೇ ಆದ ಅಪಾರ ಕೊಡುಗೆ ಕೊಟ್ಟವರು. ಇಂದು ಭಾರತದೆಲ್ಲೆಡೆ ಅವರ ಸ್ಮರಣೆ ನಡೆಯುತ್ತಿದೆ. ಅದಕ್ಕೆಲ್ಲ ಕಳಶವಿಟ್ಟಂತೆ ಇಂದು ಸಂಜೆ 5 ಗಂಟೆಗೆ ಹೈದ್ರಾಬಾದ್ (Hyderabad)‌ ಬಳಿಯಲ್ಲಿ ನಿರ್ಮಾಣಗೊಂಡಿರುವ 216 ಅಡಿ ಎತ್ತರದ ಬೃಹತ್ ಪ್ರತಿಮೆ (Statue) ಲೋಕಾರ್ಪಣೆಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ರಾಷ್ಟ್ರಪತಿ ರಮಾನಾಥ್ ಕೋವಿಂದ್ ಸೇರಿದಂತೆ ಗಣ್ಯಾತಿಗಣ್ಯರು ಇಂದಿನ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

 ಸಂಜೆ 5 ಗಂಟೆಗೆ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ

ಹೈದ್ರಾಬಾದ್‌ನ ಹೊರವಲಯದಲ್ಲಿ ಇರುವ ಶಮ್ಸಾಬಾದ್​ನ ಮುಚಿಂತಾಲ್ ಎಂಬಲ್ಲಿ ಶ್ರೀ ರಾಮಾನುಜಾಚಾರ್ಯರ 216 ಅಡಿ ಎತ್ತರದ ಬೃಹತ್ ಪ್ರತಿಮೆ ನಿರ್ಮಾಣಗೊಂಡಿದೆ. ಇಂದು ಸಂಜೆ 5 ಗಂಟೆಯ ಶುಭ ಮುಹೂರ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆ ಲೋಕಾರ್ಪಣೆ ಮಾಡಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಮೋದಿ, ಶ್ರೀ ರಾಮಾನುಜಾಚಾರ್ಯರನ್ನು ಸ್ಮರಿಸಿಕೊಂಡಿದ್ದಾರೆ.

ಶ್ರೀ ರಾಮಾನುಜಾಚಾರ್ಯರ ಹಿನ್ನೆಲೆ

ರಾಮಾನುಜಾಚಾರ್ಯರು ತಮಿಳುನಾಡಿನ ಪೆರಂಬುದೂರು ಎಂಬಲ್ಲಿ ಸುಮಾರು 1017ರಲ್ಲಿ ಜನಿಸಿದರು. ರಾಮಾನುಜ ಅವರ ಗುರುಗಳು ಯಾದವ ಪ್ರಕಾಶ. ಇವರು ಬಹು ದೊಡ್ಡ ವಿದ್ವಾಂಸರು. ಇವರು ಪ್ರಾಚೀನ ಅದ್ವೈತ ವೇದಾಂತ ಸನ್ಯಾಸ ಸಂಪ್ರದಾಯದ ಭಾಗವಾಗಿದ್ದರು. ಅವರು ವೇದಗಳ ಸಾರವನ್ನು 9 ಗ್ರಂಥಗಳ ರೂಪದಲ್ಲಿ ಪ್ರಸ್ತುತಪಡಿಸಿದರು. ಜೀವನದುದ್ದಕ್ಕೂ ಶ್ರೀ ರಾಮಾನುಜಾಚಾರ್ಯರು ಸಮಾಜದಲ್ಲಿನ ಎಲ್ಲಾ ರೀತಿಯ ಅಸಮಾನತೆಯ ವಿರುದ್ಧ ಹೋರಾಡಿದರು. ಅವರನ್ನು ಭಾರತೀಯ ಶ್ರೇಷ್ಠ ಸಂತರುಗಳಲ್ಲಿ ಒಬ್ಬರು ಎಂದು ಗುರುತಿಸಿ, ಗೌರವಿಸಲಾಗಿದೆ.

ಇದನ್ನೂ ಓದಿ: Ibrahim Sutar: ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ನಿಧನ

216 ಅಡಿ ಎತ್ತರದ ಬೃಹತ್ ಪ್ರತಿಮೆ

ವಿಶಿಷ್ಟಾದ್ವೈತ ಸಿದ್ಧಾಂತದ ಪ್ರಚಾರಕ ಶ್ರೀ ರಾಮನುಜಾಚಾರ್ಯರ ಜನ್ಮ ಸಹಸ್ರಾಬ್ದಿಯ ನೆನಪಿಗಾಗಿ ಬೃಹತ್ ಪ್ರತಿಮೆಯನ್ನ ಅನಾವರಣಗೊಳ್ಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಶ್ವದ ಎರಡನೇ ಅತೀ ಎತ್ತರದ ಪ್ರತಿಮೆ‌ ಎಂಬ ಹೆಗ್ಗಳಿಕೆ ಹೊಂದಿರೋ ಪ್ರತಿಮೆ ಇಂದು ಲೋಕಾರ್ಪಣೆಗೊಳ್ಳಲಿದೆ.

ಪದ್ಮಾಸನ ಹಾಕಿ ಕುಳಿತ ಭಂಗಿಯಲ್ಲಿರುವ 216 ಅಡಿ ಎತ್ತರದ ರಾಮಾನುಜಾಚಾರ್ಯರ ಪ್ರತಿಮೆ ಹೈದರಾಬಾದ್‌ನ ಶಂಶಾಬಾದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಮುಂಚಿಂತಾಲ್‌ ಗ್ರಾಮದ ಬಳಿ ಇಂದು ಅನಾವರಣಗೊಳ್ಳಲಿದೆ.‌

ರಾಮಾನುಜಾಚಾರ್ಯರ ಪ್ರತಿಮೆಯ ವಿಶೇಷತೆ

ಶ್ರೀ ರಾಮಾನುಜಾಚಾರ್ಯರ ಪ್ರತಿಮೆಯನ್ನು ಪಂಚಲೋಹ ಬಳಸಿ ನಿರ್ಮಾಣ ಮಾಡಲಾಗಿದೆ. ಚಿನ್ನ, ಬೆಳ್ಳಿ, ಕಂಚು, ತಾಮ್ರ ಹಾಗೂ ಜಿಂಕ್ ಸೇರಿ ಐದು ಲೋಹಗಳಿಂದ ಈ ಪ್ರತಿಮೆ ತಯಾರಾಗಿದೆ. ಇಲ್ಲಿರುವ ಗರ್ಭಗುಡಿಯನ್ನು 120 ಕಿಲೋ ಗ್ರಾಂ ಬಂಗಾರದಿಂದ ನಿರ್ಮಿಸಲಾಗಿದೆ.

ಒಂದು ಸಾವಿರ ಕೋಟಿ ಮೊತ್ತದ ಈ ಯೋಜನೆಯನ್ನು ಜಾಗತಿಕವಾಗಿ ಇರುವ ಭಕ್ತಜನರ, ದಾನಿಗಳ ನಿಧಿ ಸಂಗ್ರಹಣೆಯ ಮೊತ್ತದಿಂದ ನಿರ್ಮಿಸಲಾಗಿದೆ. ಇಲ್ಲಿ 108 ದಿವ್ಯ ದೇಶ, 108 ಸುಂದರ ವಿಷ್ಣು ದೇಗುಲಗಳು ಇವೆ. ತಮಿಳು ಸಂತರಾದ ಆಳ್ವಾರರು ಉಲ್ಲೇಖಿಸಿರುವ ರೀತಿಯಲ್ಲೇ  ರಾಮಾನುಜರ ಪ್ರತಿಮೆ ನಿರ್ಮಾಣಗೊಂಡಿದೆ.

ಇದನ್ನೂ ಓದಿ: Puneeth Rajkumar: ಮಿಸ್​ ಇಲ್ದೇ ಪ್ರತಿದಿನ ಈ ಶಾಲೆಯಲ್ಲಿ ಅಪ್ಪುಗೆ ಪೂಜೆ.. ದೇವರ ರೂಪ ನೀವೇ `ರಾಜರತ್ನ’!

200 ಎಕರೆ ಪ್ರದೇಶದಲ್ಲಿ ಸಮಾನತೆಯ ಪ್ರತಿಮೆ

ಶ್ರೀ ರಾಮಾನುಜಾಚಾರ್ಯರು ಸನಾತನ ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸಿದವರು. ಜೊತೆಗೆ ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಲು ಹೋರಾಡಿದವರು. ಹೀಗಾಗಿ ಅವರ ಪ್ರತಿಮೆಗೆ ಸಮಾನತೆಯ ಪ್ರತಿಮೆ ಎಂದು ಹೆಸರಿಡಲಾಗಿದೆ.

ಸಮಾನತೆಯ ಪ್ರತಿಮೆಯನ್ನು 200 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದೆ. ಹೈದರಾಬಾದ್​ನ ಹೊರವಲಯದಲ್ಲಿ ಇರುವ ಶಮ್ಸಾಬಾದ್​ನ ಮುಚಿಂತಾಲ್ ಎಂಬಲ್ಲಿ ನಿರ್ಮಾಣಗೊಂಡಿದೆ.

ಲೋಕ ಕಲ್ಯಾಣಕ್ಕಾಗಿ ಹಲವು ಯಾಗ

ಕಾರ್ಯಕ್ರಮದ ವಿಶೇಷವಾಗಿ ಸಮಾಜದ ಒಳಿತಿಗಾಗಿ ಸಹಸ್ರಹುಂಡಾತ್ಮಕ ಲಕ್ಷ್ಮೀ ಯಾಗ ನಡೆಯಲಿದೆ. ಅದಕ್ಕಾಗಿ 1,035 ಹೋಮ ಕುಂಡಗಳನ್ನು ನಿರ್ಮಿಸಲಾಗುವುದು. ಎರಡು ಲಕ್ಷ ಹಸುವಿನ ಕೆಜಿ ತುಪ್ಪದಿಂದ ಹೋಮ ನೆರವೇರಲಿದೆ ಎಂದು ತಿಳಿಸಲಾಗಿದೆ.

ಅಂದಹಾಗೆ ರಾಮಾನುಜ ಸಂಸ್ಥಾನದ ತ್ರಿದಂಡಿ ಚಿನ್ನ ಜೀಯರ್ ಶ್ರೀಗಳು, ಮೈ ಹೋಮ್ ಗ್ರೂಪ್ ಚೇರ್ಮನ್ ರಾಮೇಶ್ವರ್ ರಾವ್  ಇವರೆಲ್ಲರ ಸಹಯೋಗದಲ್ಲಿ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದೆ.

ಫೆಬ್ರವರಿ 14ರವರೆಗೂ ಕಾರ್ಯಕ್ರಮ

ಈಗಾಗಲೇ ಕೆಲ ದಿನಗಳಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಫೆಬ್ರವರಿ 14ರವರೆಗೆ, ಐದು ಸಾವಿರಕ್ಕೂ ಅಧಿಕ ಋತ್ವಿಕರ ಸಮ್ಮುಖದಲ್ಲಿ ನಡೆಯಲಿದೆ. ಮುಂದೆ ಇದು ದೇಶದ ಪ್ರಮುಖ ಪ್ರವಾಸಿ ತಾಣ ಹಾಗೂ ಧಾರ್ಮಿಕ ತಾಣಗಳ ಪಟ್ಟಿಯಲ್ಲಿ ಸೇರಲಿದೆ.
Published by:Annappa Achari
First published: