‘ದಿ ಯುನೈಟರ್ ಇನ್ ಚೀಫ್ ಆಫ್ ಇಂಡಿಯಾ’; ಜಾತಿ, ಧರ್ಮ, ಪ್ರಾದೇಶಿಕತೆಗೆ ಅಂಟಿಕೊಂಡಿದ್ದ ಭಾರತ ಚುನಾವಣೆಗೆ ಮೋದಿಯಿಂದ ಹೊಸ ಭಾಷ್ಯ

ಈ ಚುನಾವಣೆಯಲ್ಲಿ ಬಿಜೆಪಿ ವಂಶಪಾರಂಪರಿಕವಾಗಿ ಆಳ್ವಿಕೆಯಲ್ಲಿರುವ ರಾಜಕೀಯ ಪಕ್ಷಗಳನ್ನು ಎದುರಿಸಿತ್ತು. ಕರ್ನಾಟಕದ ಗೌಡ ಕುಟುಂಬ, ಮಹಾರಾಷ್ಟ್ರದ ಪವಾರ್​ಗಳು, ಬಿಹಾರದ ಲಾಲೂ ಪ್ರಸಾದ್ ಯಾದವ್ ಕುಟುಂಬ ಮತ್ತು ಮುಲಾಯಂ ಸಿಂಗ್ ಕುಟುಂಬ, ಉತ್ತರಪ್ರದೇಶದ ಅಜಿತ್ ಸಿಂಗ್ ಕುಟುಂಬ, ಅಸ್ಸಾಂನ ಗೊಗೋಯ್​ಗಳು ಮತ್ತು ಹರ್ಯಾಣದ ಚೌಟಾಲಗಳನ್ನು ಎನ್ಡಿಎ ಅಭ್ಯರ್ಥಿಗಳು ಎದುರಿಸಿ ಗೆದ್ದು ಬೀಗಿದ್ದಾರೆ

Sharath Sharma Kalagaru | news18
Updated:May 23, 2019, 7:07 PM IST
‘ದಿ ಯುನೈಟರ್ ಇನ್ ಚೀಫ್ ಆಫ್ ಇಂಡಿಯಾ’; ಜಾತಿ, ಧರ್ಮ, ಪ್ರಾದೇಶಿಕತೆಗೆ ಅಂಟಿಕೊಂಡಿದ್ದ ಭಾರತ ಚುನಾವಣೆಗೆ ಮೋದಿಯಿಂದ ಹೊಸ ಭಾಷ್ಯ
ಫೈಲ್​ ಫೋಟೊ: ಪ್ರಧಾನಿ ನರೇಂದ್ರ ಮೋದಿ
  • News18
  • Last Updated: May 23, 2019, 7:07 PM IST
  • Share this:
ನವದೆಹಲಿ: ಚುನಾವಣೆಯ ವೇಳೆ ಟೈಮ್ ನಿಯತಕಾಲಿಕೆಯಿಂದ ಡಿವೈಡರ್ ಇನ್ ಚೀಫ್ ಆಫ್ ಇಂಡಿಯಾ (ಭಾರತದ ವಿಭಜನೆಯ ಮುಖ್ಯಸ್ಥ) ಎಂಬ ಪಟ್ಟ ಹೊತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಇದರ ಜತೆಗೆ ಭಾರತದ ಚುನಾವಣಾ ಸಂಸ್ಕೃತಿಯ ಇತಿಹಾಸವೂ ನುಚ್ಚು ನೂರಾಗಿದೆ. ಸ್ವಾತಂತ್ರ್ಯ ಬಂದ ನಂತರ ನಡೆದ ಭಾರತದ ಎಲ್ಲಾ ಚುನಾವಣೆಗಳೂ ಜಾತಿ, ಧರ್ಮ, ಪ್ರದೇಶಗಳನ್ನೇ ಅವಲಂಬಿಸಿತ್ತು. ಆದರೆ ಈ ಬಾರಿಯ ಚುನಾವಣೆ ಹಳೆಯ ಎಲ್ಲಾ ದಾಖಲೆಗಳನ್ನು ಮತ್ತು ಹಿಂದಿನ ಚುನಾವಣೆಗಳು ನಡೆದುಬಂದ ಹಾದಿಯನ್ನು ಅಳಿಸಿಹಾಕಿದೆ ಎಂದರೆ ಅತಿಶಯೋಕ್ತಿ ಆಗಲಾರದು.

ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಗೆಲುವು ದೇಶದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ. ಸದ್ಯದ ಟ್ರೆಂಡ್ ಪ್ರಕಾರ ಸುಮಾರು 48%ಗಿಂತ ಹೆಚ್ಚು ಮತಗಳು ಬಿಜೆಪಿಯ ಪಾಲಾಗಿವೆ. ಅಂದರೆ ದೇಶದ ಎರಡರಲ್ಲಿ ಒಬ್ಬ ಮತದಾರ ಬಿಜೆಪಿಗೆ ಮತ ಚಲಾಯಿಸಿದ್ದಾನೆ.
ಈ ಅಭೂತಪೂರ್ವ ಯಶಸ್ಸಿಗೆ ನರೇಂದ್ರ ಮೋದಿಯವರ ಪರಿಶ್ರಮ, ಶ್ರದ್ಧೆಯೇ ನೇರ ಕಾರಣ. ಇದರೊಂದಿಗೆ ಬಿಜೆಪಿ 298 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಪಡೆದರೆ, ಎನ್ಡಿಎ ಮೈತ್ರಿಕೂಟ 349 ಕ್ಷೇತ್ರಗಳಲ್ಲಿ ಗೆಲ್ಲುವುದು ನಿಶ್ಚಿತವಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ 332 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಈ ಬಾರಿ ಹಿಂದಿನ ಚುನಾವಣೆಯ ಗೆಲುವಿನ ಗಾತ್ರವನ್ನು ಎನ್ಡಿಎ ಮೀರಿದೆ.

ಇನ್ನು ಪ್ರತಿಪಕ್ಷ ಕಾಂಗ್ರೆಸ್ ಭರ್ಜರಿ ಪ್ರಚಾರವನ್ನು ಮಾಡಿದಾಗ್ಯೂ ಕೇವಲ 51 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಕಾದುಕೊಂಡಿದೆ. ಸದ್ಯದ ಟ್ರೆಂಡ್ ಮುಂದುವರೆದರೆ ಕಾಂಗ್ರೆಸ್ ಸಂಸತ್ ವಿರೋಧ ಪಕ್ಷದ ಸ್ಥಾನವನ್ನೂ ಪಡೆಯುವುದು ಕಷ್ಟ. ದೇಶದ ಅತ್ಯಂತ ಹಳೆಯ ಪಕ್ಷವಾಗಿದ್ದರೂ ಕಾಂಗ್ರೆಸ್ ಈ ಬಾರಿ ಸದ್ದು ಮಾಡುವಲ್ಲಿ ಮತ್ತೆ ವಿಫಲವಾಗಿದೆ. ಸದ್ಯ ಮುನ್ನಡೆಯಲ್ಲಿರುವ ಕ್ಷೇತ್ರಗಳೂ ಸಹ ಕೇರಳ ಮತ್ತು ಪಂಜಾಬ್ನಿಂದ ಬಂದ ಬಳುವಳಿಯಾಗಿದ್ದರೆ, ತಲೆಮಾರಿನಿಂದ ರಾಹುಲ್ ಗಾಂಧಿಗೆ ಬಂದ ಬಳುವಳಿ ಅಮೇಥಿ ಕ್ಷೇತ್ರವನ್ನು ಉಳಿಸಿಕೊಳ್ಳಲು ರಾಹುಲ್ ಹರಸಾಹಸ ಪಡುತ್ತಿದ್ದಾರೆ.

ಉತ್ತರಪ್ರದೇಶದ ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷಗಳ ಮೈತ್ರಿ ಬಿಜೆಪಿಗೆ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತದೆ ಎನ್ನಲಾಗಿತ್ತಾದರೂ, ಮ್ಯಾಜಿಕ್ ಮಾಡುವಲ್ಲಿ ಸಂಪೂರ್ಣ ವಿಫಲವಾಗಿವೆ. ಮಾಯಾವತಿ ಮತ್ತು ಅಖಿಲೇಶ್ ಜೋಡಿ ಬಿಜೆಪಿ ಕೈಯಲ್ಲಿದ್ದ ಕ್ಷೇತ್ರಗಳನ್ನು ಕಿತ್ತುಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ ಹೆಚ್ಚೆಂದರೆ ಎರಡೂ ಪಕ್ಷಗಳಿಂದ ಕೇವಲ ಹತ್ತು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು. ಕಳೆದ ಬಾರಿ ಉತ್ತರಪ್ರದೇಶದಲ್ಲಿ ಬಿಜೆಪಿ 71 ಕ್ಷೇತ್ರಗಳನ್ನು ಗೆದ್ದಿತ್ತು. ಈ ಬಾರಿ ಬೆರಳೆಣಿಕೆ ಕ್ಷೇತ್ರಗಳಲ್ಲಿ ಬಿಜೆಪಿ ಸೋತರೂ, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಯುಪಿಯಲ್ಲಿ ಸೋತ ಕ್ಷೇತ್ರಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಗಳಿಸಿಕೊಂಡಿದೆ. ಆಶ್ಚರ್ಯವೆಂಬಂತೆ ಮಮತಾ ಬ್ಯಾನರ್ಜಿ ಭದ್ರಕೋಟೆ ಪಶ್ಚಿಮ ಬಂಗಾಳದಲ್ಲೂ ಮೊದಲ ಬಾರಿಗೆ ಕಮಲ ಅರಳಿದೆ. ಸದ್ಯದ ಟ್ರೆಂಡ್ ಪ್ರಕಾರ ತೃಣಮೂಲ ಕಾಂಗ್ರೆಸ್ 22 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 19 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನೊಂದೆಡೆ ಮಹಾಮೈತ್ರಿಯಲ್ಲಿ ಪ್ರಮುಖ ಪಾತ್ರವಹಿಸಲು ಮುಂದಾಗಿದ್ದ ಚಂದ್ರಬಾಬು ನಾಯ್ಡು ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುವುದಿರಲಿ ತಮ್ಮ ರಾಜ್ಯವನ್ನೂ ವೈಎಸ್ ಜಗನ್ ಮೋಹನ್ ರೆಡ್ಡಿಯವರಿಗೆ ಬಿಟ್ಟುಕೊಟ್ಟಿದ್ದಾರೆ.

ಬಿಜೆಪಿ ಹಿಂದಿ ಭಾಷಿಕರ ರಾಜ್ಯಗಳಾದ ಉತ್ತರಪ್ರದೇಶ, ಬಿಹಾರ ಮತ್ತು ಜಾರ್ಖಂಡ್ನಲ್ಲಿ ಪ್ರಬಲ ಮೈತ್ರಿ ಪಕ್ಷಗಳ ವಿರುದ್ಧ ಸ್ಪರ್ಧಿಸಿತ್ತು. 2014ರಲ್ಲಿ ಈ ಮೂರೂ ರಾಜ್ಯಗಳ 134 ಕ್ಷೇತ್ರಗಳ ಪೈಕಿ 117 ಕ್ಷೇತ್ರಗಳನ್ನು ಬಾಚಿಕೊಳ್ಳುವ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೇರಿತ್ತು.

ಉತ್ತರ ಪ್ರದೇಶದಲ್ಲಿ ಜಾತಿ ಸಮೀಕರಣಗಳಾಚೆಗೆ ಮತ ಕ್ರೋಢೀಕರಣಕ್ಕೆ ಬಿಜೆಪಿ ಕೈಹಾಕಿತ್ತು. ಮಹಾಮೈತ್ರಿಯ ಜಾತಿ ಲೆಕ್ಕಾಚಾರದ ಪ್ರಕಾರ ಜಾತವ್, ದಲಿತ್ ಮತ್ತು ಮುಸ್ಲಿಂ ಮತಗಳಿಂದ ಸುಮಾರು 40% ಮತಗಳಿದ್ದವು. ಆದರೆ ಈ ಲೆಕ್ಕಾಚಾರವನ್ನ ಉಲ್ಟಾ ಮಾಡಿದ ಬಿಜೆಪಿ ಉಳಿದ 60% ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದಂತೆ ಕಾಣುತ್ತದೆ. ಯಾದವೇತರ ಮತ್ತು ಜಾತವರಲ್ಲದ ಜಾತಿಗಳ ಮತಗಳು ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಬಂದಿರುವುದು ಫಲಿತಾಂಶದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ದಲಿತ ಮತ್ತು ಹಿಂದುಳಿದ ವರ್ಗಗಳ ಮತಗಳೂ ಬಿಜೆಪಿ ಪಾಲಾಗಿರುವ ಸಾಧ್ಯತೆಯಿದೆ.ಬಿಹಾರದ ಲೆಕ್ಕಾಚಾರಕ್ಕೆ ಬಂದರೆ ವಿಧಾನಸಭೆ ಫಲಿತಾಂಶದಿಂದ ಬಿಜೆಪಿ ಪಾಠ ಕಲಿತಿತ್ತು. ಜತೆಗೆ ಗೆಲುವಿನ ಸಿದ್ಧಸೂತ್ರವನ್ನೂ ಬಿಜೆಪಿ ಅಳವಡಿಸಿಕೊಂಡಿತ್ತು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜತೆಗೆ ಇಂದಿಗೂ ಹಿಂದುಳಿದ ವರ್ಗಗಳ 15% ಮತಗಳು ಭದ್ರವಾಗಿವೆ. ಇದನ್ನು ಅರಿತಿದ್ದ ಬಿಜೆಪಿ ನಿತೀಶ್ರ ಜೆಡಿಯುಗೆ ಹೆಚ್ಚು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿತ್ತು. ಕಾರಣ ನಿತೀಶ್ರನ್ನು ಎನ್ಡಿಎ ಮೈತ್ರಿಕೂಟದಲ್ಲೇ ಉಳಿಸಿಕೊಳ್ಳುವುದಾಗಿತ್ತು. ಅದರಂತೆಯೇ ಬಿಜೆಪಿ ಹೂಡಿದ್ದ ತಂತ್ರ ಯಶಸ್ವಿಯಾಗಿದೆ. ಮೈತ್ರಿ ಪಕ್ಷಗಳು ತೇಜಸ್ವಿ ಯಾದವ್ ನೇತೃತ್ವದ ಆರ್ಜೆಡಿ ಪಕ್ಷವನ್ನು ಬಗ್ಗು ಬಡಿದಿದೆ.

ಫಲಿತಾಂಶದ ದಿನಾಂತ್ಯದ ಹೊತ್ತಿಗೆ ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಮೋದಿ-ಶಾ ಜೋಡಿ ಹೆಣೆದ ತಂತ್ರ ಯಶಸ್ವಿಯಾಗಿದೆ. ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ವಿಪಕ್ಷಗಳನ್ನು ಕೌಂಟರ್ ಮಾಡುವ ವಿಧಾನದವರೆಗೆ ಎಲ್ಲದರಲ್ಲಿಯೂ ಈ ಜೋಡಿ ಯಶಸ್ಸು ಸಾಧಿಸಿದೆ. ಕೆಲವೊಂದು ಸಂದರ್ಭಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳು ವಿವಾದಕ್ಕೆ ಎಡೆಮಾಡಿಕೊಟ್ಟರೂ ಅಂತಿಮವಾಗಿ ಬಿಜೆಪಿಯ ಹೊಸ ಸೂತ್ರಗಳೆಲ್ಲವೂ ಬಿಜೆಪಿಗೆ ಗುಣಾತ್ಮಕವಾಗಿದೆ. ಮಲೆಗಾಂವ್ ಸ್ಫೋಟ ಭಯೋತ್ಪಾದಕ ಕೃತ್ಯದ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್, ಹಿಂದುತ್ವವಾದಿ ತೇಜಸ್ವಿ ಸೂರ್ಯ, ಕ್ರಿಕೆಟಿಗ ಗೌತಮ್ ಗಂಭೀರ್, ಸೂಫಿ ಗಾಯಕ ಹನ್ಸ್ ರಾಜ್ ಹನ್ಸ್ ಮತ್ತು ಭೋಜ್​ಪುರಿ ನಟ ರವಿ ಕಿಶನ್​ರಿಗೆ ಟಿಕೆಟ್ ನೀಡಿದ್ದು ಆರಂಭದಲ್ಲಿ ವಿವಾದಕ್ಕೀಡಾಗಿತ್ತು. ಆದರೆ 103 ಹೊಸ ಅಭ್ಯರ್ಥಿಗಳ ಪೈಕಿ ಸುಮಾರು 80 ಅಭ್ಯರ್ಥಿಗಳ ಜಯ ನಿಶ್ಚಿತ ಎಂದೂ ಪರಿಗಣಿಸಲಾಗಿತ್ತು.

ಈ ಚುನಾವಣೆಯಲ್ಲಿ ಬಿಜೆಪಿ ವಂಶಪಾರಂಪರಿಕವಾಗಿ ಆಳ್ವಿಕೆಯಲ್ಲಿರುವ ರಾಜಕೀಯ ಪಕ್ಷಗಳನ್ನು ಎದುರಿಸಿತ್ತು. ಕರ್ನಾಟಕದ ಗೌಡ ಕುಟುಂಬ, ಮಹಾರಾಷ್ಟ್ರದ ಪವಾರ್​ಗಳು, ಬಿಹಾರದ ಲಾಲೂ ಪ್ರಸಾದ್ ಯಾದವ್ ಕುಟುಂಬ ಮತ್ತು ಮುಲಾಯಂ ಸಿಂಗ್ ಕುಟುಂಬ, ಉತ್ತರಪ್ರದೇಶದ ಅಜಿತ್ ಸಿಂಗ್ ಕುಟುಂಬ, ಅಸ್ಸಾಂನ ಗೊಗೋಯ್​ಗಳು ಮತ್ತು ಹರ್ಯಾಣದ ಚೌಟಾಲಗಳನ್ನು ಎನ್ಡಿಎ ಅಭ್ಯರ್ಥಿಗಳು ಎದುರಿಸಿ ಗೆದ್ದು ಬೀಗಿದ್ದಾರೆ.

ಅಭೂತಪೂರ್ವ ಜಯದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಇನ್ನು ಕೆಲವೇ ಕ್ಷಣಗಳಲ್ಲಿ ಮಾತನಾಡುವ ಸಾಧ್ಯತೆಯಿದೆ. ಇದರ ನಡುವೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾದ ಕ್ಸಿ ಜಿನ್ಪಿಂಗ್ ಮತ್ತು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸೇರಿಂದತೆ ಹಲವರು ಶುಭಕೋರಿದ್ದಾರೆ.
ಅದರಲ್ಲಿ ಮೊದಲಿಗರಾಗಿ ಶುಭ ಕೋರಿದ್ದು ಮೋದಿಯವರ ಆಪ್ತ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು. ವಿಶೇಷವೆಂದರೆ ಇಸ್ರೇಲ್ ಪ್ರಧಾನಿ ಹಿಂದಿ ಭಾಷೆಯಲ್ಲಿ ಮೋದಿಯವರಿಗೆ ಟ್ವಿಟ್ಟರ್​ನಲ್ಲಿ ಶುಭ ಕೋರಿದ್ದಾರೆ.

ಗೆಲುವಿನ ಸೂತ್ರದಾರ ಪ್ರಧಾನಿ ಮೋದಿ ಇದುವರೆಗೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕೆಲ ಟ್ವೀಟ್ಗಳನ್ನು ಮಾಡಿದ್ದು ಬಿಟ್ಟರೆ, ಮೋದಿ ಹೆಚ್ಚೇನೂ ಪ್ರತಿಕ್ರಿಯೆ ನೀಡಿಲ್ಲ. ಭಾರತ ಮತ್ತೆ ಗೆದ್ದಿದೆ ಎಂದು ಮೋದಿ ಟ್ವೀಟ್ ಮಾಡಿದ್ದರು. ಜತೆಗೆ ಜಗನ್ ಮೋಹನ್ ರೆಡ್ಡಿ ಮತ್ತು ನವೀನ್ ಪಟ್ನಾಯಕ್​ರಿಗೆ ವಿಧಾನಸಭೆ ಚುನಾವಣೆಯಲ್ಲಿ ವಿಜಯಿಯಾದ ಕಾರಣಕ್ಕೆ ಶುಭ ಕೋರಿದ್ದರು.
First published:May 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading