PM Modi Birthday - ನರೇಂದ್ರ ಮೋದಿಗೆ 70 ವರ್ಷ; ಇಲ್ಲಿದೆ ಅವರು ಬೆಳೆದುಬಂದ ಹಾದಿ

ನರೇಂದ್ರ ಮೋದಿ

ನರೇಂದ್ರ ಮೋದಿ

Happy Birthday Narendra Modi – ಪ್ರಧಾನಿ ನರೇಂದ್ರ ಮೋದಿ ಅವರು ಆರೆಸ್ಸೆಸ್ ಕಾರ್ಯಕರ್ತನಾಗಿ, ಪ್ರಚಾರಕನಾಗಿ ಗುಜರಾತ್ ಸಿಎಂ ಮತ್ತು ದೇಶದ ಪ್ರಧಾನಿಯಾಗುವ ಹಂತಕ್ಕೆ ಬೆಳೆದುಬಂದ ರೋಚಕ ಹಾದಿಯ ವಿವರ ಇಲ್ಲಿದೆ.

 • News18
 • 2-MIN READ
 • Last Updated :
 • Share this:

  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಸೆಪ್ಟೆಂಬರ್ 17, 2020ಕ್ಕೆ ಸರಿಯಾಗಿ 70 ವರ್ಷ. ಇಂದು ಅವರದ್ದು 71ನೇ ಜನ್ಮದಿನ. ಎರಡನೇ ಬಾರಿ ಪ್ರಧಾನಿ ಮಂತ್ರಿ ಆಗಿರುವ ಅವರು ಆ ಮುಂಚೆ ಸತತ ನಾಲ್ಕು ಬಾರಿ ಗುಜರಾತ್ ಸಿಎಂ ಆಗಿ 2001ರಿಂದ 2014ರವರೆಗೆ ಆಡಳಿತ ಮಾಡಿದ ಅನುಭವ ಹೊಂದಿದ್ದರು. ಹಲವು ಟೀಕೆಗಳ ಮಧ್ಯೆಯೂ ಕಠಿಣ ನಿರ್ಧಾರಗಳನ್ನ ತೆಗೆದುಕೊಳ್ಳುವುದರಲ್ಲಿ ಮೀನಮೇಷ ಎಣಿಸದ ನರೇಂದ್ರ ಮೋದಿ ಈಗ ವಿಶ್ವದ ಅತ್ಯಂತ ಪ್ರಭಾವಶಾಲಿ ನಾಯಕರಲ್ಲೊಬ್ಬರಾಗಿ ಬೆಳೆದಿದ್ದಾರೆ. 1950ರಲ್ಲಿ ವಡಾನಗರ್​ನಲ್ಲಿ ಜನಿಸಿದ ಮೋದಿ ಅವರ ವೃತ್ತಿ ಜೀವನದಲ್ಲಿ ಹಲವು ಸಾಧನೆಗಳ ಮೈಲಿಗಲ್ಲುಗಳು ಸ್ಥಾಪನೆಯಾಗಿವೆ. ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದು ಪ್ರಧಾನ ಮಂತ್ರಿಯ ಮಟ್ಟಕ್ಕೆ ಬೆಳೆದಿರುವ ನರೇಂದ್ರ ಮೋದಿ ಅವರು ಬೆಳೆದು ಬಂದ ಹಾದಿಯ ಒಂದು ಸಂಕ್ಷಿಪ್ತ ರೂಪ ಇಲ್ಲಿದೆ.


  ನರೇಂದ್ರ ಮೋದಿ ಅವರ ಜೀವನದ ಟೈಮ್​ಲೈನ್:


  1950, ಸೆ. 17: ಅಂದಿನ ಬಾಂಬೆ ಪ್ರೆಸಿಡೆನ್ಸಿಗೆ ಸೇರಿದ ವಡಾನಗರ್​ನಲ್ಲಿ (ಇಂದಿನ ಗುಜರಾತ್ ರಾಜ್ಯ) ನರೇಂದ್ರ ದಾಮೋದರ್ ದಾಸ್ ಮೋದಿ ಜನನ. ತಂದೆ ದಾಮೋದರ್​ದಾಸ್ ಮೋದಿ, ತಾಯಿ ಹೀರಾಬೆನ್ ಮೋದಿ. ಇವರು ಗಾಣಿಗ ಸಮುದಾಯಕ್ಕೆ ಸೇರಿದವರು.


  ಎಂಟನೇ ವಯಸ್ಸಿನಲ್ಲಿ ಆರೆಸ್ಸೆಸ್ ಸಂಪರ್ಕಕ್ಕೆ ಬಂದ ಮೋದಿ ಮುಂದೆ ಪ್ರಚಾರಕರಾಗಿ ಬೆಳೆಯುತ್ತಾರೆ.


  ಸಮುದಾಯದ ಸಂಪ್ರದಾಯದಂತೆ ಜಶೋಧಾಬೆನ್ ಜೊತೆ ಬಾಲ್ಯವಿವಾಹವಾಗುತ್ತಾರೆ. ನಂತರ ಸಾಂಸಾರಿಕ ಜೀವನದಿಂದ ಮೋದಿ ದೂರ ಉಳಿಯುತ್ತಾರೆ. ಪತಿ ಪತ್ನಿ ಬೇರೆಬೇರೆಯಾಗಿ ವಾಸಿಸುತ್ತಾರೆ.


  1970ರಲ್ಲಿ ಅಹ್ಮದಾಬಾದ್​ನ ಗುಜರಾತ್ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕ್ಯಾಂಟೀನ್​ನಲ್ಲಿ ತಮ್ಮ ಸಂಬಂಧಿಯೊಬ್ಬರ ಜೊತೆ ಕೆಲಸ ಮಾಡತ್ತಾರೆ.


  1971ರಲ್ಲಿ ಆರೆಸ್ಸೆಸ್​ನಲ್ಲಿ ಪೂರ್ಣಪ್ರಮಾಣದ ಪ್ರಚಾರಕರಾಗಿ ಧುಮುಕುತ್ತಾರೆ.


  1978ರಲ್ಲಿ ದೆಹಲಿ ವಿಶ್ವವಿದ್ಯಾಲಯದ ದೂರಶಿಕ್ಷಣ ಯೋಜನೆಯಡಿ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆಯುತ್ತಾರೆ.


  1983ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ ದೂರಶಿಕ್ಷಣ ವಿದ್ಯಾರ್ಥಿಯಾಗಿ ರಾಜ್ಯಶಾಸ್ತ್ರದಲ್ಲೇ ಸ್ನಾತಕೋತ್ತರ ಪದವಿ ಪೂರೈಸುತ್ತಾರೆ.


  1975-77ರಲ್ಲಿ ತುರ್ತುಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಳ್ಳುತ್ತಾರೆ.


  1985ರಲ್ಲಿ ಆರೆಸ್ಸೆಸ್​ನಿಂದ ಮೋದಿ ಅವರನ್ನು ಬಿಜೆಪಿಗೆ ನಿಯೋಜಿಸಲಾಗುತ್ತದೆ.


  ಇದನ್ನೂ ಓದಿ: Narendra Modi Birthday: ಪ್ರಧಾನಿ ನರೇಂದ್ರ ಮೋದಿಗೆ 70ನೇ ಹುಟ್ಟುಹಬ್ಬ; ಶುಭಾಶಯ ಕೋರಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್


  1987ರಲ್ಲಿ ಅಹ್ಮದಾಬಾದ್ ನಗರಸಭೆ ಚುನಾವಣೆಯಲ್ಲಿ ಮೋದಿ ಅವರ ಸಂಘಟನಾ ಚಾತುರ್ಯದಿಂದ ಬಿಜೆಪಿಯ ಅಭೂತಪೂರ್ವ ಗೆಲುವು ಸಿಗುತ್ತದೆ. ಇವರ ಕೆಲಸ ಗುರುತಿಸಿ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಎಲ್.ಕೆ. ಆಡ್ವಾಣಿ ಅವರು ಮೋದಿ ಅವರನ್ನು ಗುಜರಾತ್ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಿಸುತ್ತಾರೆ.


  1990ರಲ್ಲಿ ಮೋದಿ ಅವರು ಬಿಜೆಪಿಯ ರಾಷ್ಟ್ರೀಯ ಚುನಾವಣಾ ಸಮಿತಿಯ ಸದಸ್ಯರಾಗುತ್ತಾರೆ. ಆ ವರ್ಷದ ಎಲ್.ಕೆ. ಆಡ್ವಾಣಿ ಅವರ ರಥಯಾತ್ರೆ ಹಾಗೂ 1992ರಲ್ಲಿ ಮುರಳಿ ಮನೋಹರ್ ಜೋಷಿ ಅವರ ಏಕತಾ ಯಾತ್ರೆಯ ಆಯೋಜನೆಯಲ್ಲಿ ಮೋದಿ ಅವರ ಪಾತ್ರ ಗಮನಾರ್ಹವಾಗಿತ್ತು.


  1992-94ರವರೆಗೆ ವಿವಿಧ ಕಾರಣಗಳಿಂದ ರಾಜಕಾರಣದಿಂದ ದೂರ.


  1994ರಲ್ಲಿ ಎಲ್.ಕೆ. ಆಡ್ವಾಣಿ ಅವರೇ ಮೋದಿಯನ್ನು ಮತ್ತೆ ರಾಜಕಾರಣಕ್ಕೆ ಕರೆತಂದು ಪಕ್ಷದ ಕಾರ್ಯದರ್ಶಿಯಾಗಿ ಮಾಡುತ್ತಾರೆ. 1995ರ ಗುಜರಾತ್ ವಿಧಾನಸಭಾ ಬಿಜೆಪಿ ಗೆಲುವಿನಲ್ಲಿ ಮೋದಿ ಅವರ ಚುನಾವಣಾ ಕಾರ್ಯತಂತ್ರ ಪ್ರಮುಖ ಪಾತ್ರ ವಹಿಸುತ್ತದೆ.


  1995ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಆಗುತ್ತಾರೆ. ಹರಿಯಾಣ ಮತ್ತು ಹಿಮಾಚಲಪ್ರದೇಶದಲ್ಲಿ ಪಕ್ಷದ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗುತ್ತದೆ.


  1998ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಮೋದಿ ಕಾರ್ಯತಂತ್ರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಶಂಕರ್ ಸಿಂಗ್ ವಘೇಲಾ ಮತ್ತು ಕೇಶುಭಾಯ್ ಪಟೇಲ್ ಮಧ್ಯೆ ಒಡಕಿದ್ದ ಸಂದರ್ಭದಲ್ಲಿ ಕೇಶುಭಾಯ್ ಪರ ಮೋದಿ ನಿಲ್ಲುತ್ತಾರೆ. ಬಿಜೆಪಿ ಆ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತದೆ.


  1998ರಲ್ಲೇ ಮೋದಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆಯಾಗುತ್ತಾರೆ.


  2001ರಲ್ಲಿ ಗುಜರಾಥ್ ಸಿಎಂ ಕೇಶುಭಾಯ್ ಪಟೇಲ್ ಆರೋಗ್ಯ ಕೆಡುತ್ತದೆ. ಉಪಚುನಾವಣೆಯಲ್ಲೂ ಬಿಜೆಪಿ ಸೋಲುತ್ತದೆ. ಆ ವರ್ಷದ ಭುಜ್ ಭೂಕಂಪದ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ವಿಫಲವಾಗುತ್ತದೆ. ಸರ್ಕಾರದ ವೈಫಲ್ಯಗಳನ್ನ ಎತ್ತಿತೋರಿಸಿ ಮೋದಿ ಅವರು ರಾಷ್ಟ್ರೀಯ ನಾಯಕರ ಗಮನ ಸೆಳೆಯುತ್ತಾರೆ. ಆಗ ಪಟೇಲ್ ಬದಲು ಮೋದಿ ಅವರನ್ನೇ ಸಿಎಂ ಮಾಡುವ ಪ್ರಸ್ತಾಪ ಬರುತ್ತದೆ. ಮೋದಿಗೆ ಆಡಳಿತದ ಅನುಭವ ಇಲ್ಲವಾದ್ದರಿಂದ ಆಡ್ವಾಣಿ ಅವರು ಉಪಮುಖ್ಯಮಂತ್ರಿಯಾಗುವಂತೆ ಮೋದಿಗೆ ತಿಳಿಸುತ್ತಾರೆ. ಆದರೆ, ತನಗೆ ಪೂರ್ಣ ಜವಾಬ್ದಾರಿ ಕೊಟ್ಟರೆ ಮಾತ್ರ ಸರ್ಕಾರದಲ್ಲಿರುತ್ತೇನೆ. ಇಲ್ಲವಾದರೆ ಇಲ್ಲ ಎಂದು ಮೋದಿ ಹೇಳುತ್ತಾರೆ. ಕೊನೆಗೆ ಅಕ್ಟೋಬರ್ 3ರಂದು ಮೋದಿ ಗುಜರಾತ್ ಸಿಎಂ ಆಗಿ ಆಯ್ಕೆಯಾಗುತ್ತಾರೆ.


  2002ರಲ್ಲಿ ಗೋಧ್ರಾ ಹತ್ಯಾಕಾಂಡವಾದ ಬೆನ್ನಲ್ಲೇ ಗುಜರಾತ್ ರಾಜ್ಯಾದ್ಯಂತ ಗಲಭೆಗಳಾಗುತ್ತವೆ. ಈ ಕೋಮುಗಲಭೆಯಲ್ಲಿ 790 ಮುಸ್ಲಿಮರು, 254 ಹಿಂದೂಗಳು ಬಲಿಯಾಗುತ್ತಾರೆ. ಗಲಭೆ ನಿಯಂತ್ರಿಸಲು ಸರ್ಕಾರ ಹೆಚ್ಚು ಮುತುವರ್ಜಿ ತೋರಲಿಲ್ಲ ಎಂಬ ಆರೋಪಗಳು ಕೇಳಿಬರುತ್ತವೆ. ಮೋದಿ ವಿರುದ್ಧ ವಿವಿಧ ಪಕ್ಷಗಳು ಗಂಭೀರ ಆರೋಪ ಮಾಡಿ ರಾಜೀನಾಮೆಗೆ ಆಗ್ರಹಿಸುತ್ತವೆ. ಬಿಜೆಪಿಯೊಳಗೂ ಮೋದಿ ಅವರನ್ನ ಕೆಳಗಿಳಿಸುವ ಪ್ರಯತ್ನಗಳು ನಡೆಯುತ್ತವೆ. ಮೋದಿ ಅವರು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ರಾಜೀನಾಮೆ ಸಲ್ಲಿಸಿದರೂ ಅದು ಸ್ವೀಕಾರ ಆಗುವುದಿಲ್ಲ. ಮೋದಿ ಅವರು ವಿಧಾನಸಭೆಯನ್ನು ಅವಧಿಗೆ ಮುಂಚೆಯೇ ವಿಸರ್ಜಿಸುತ್ತಾರೆ. ನಂತರದ ಚುನಾವಣೆಯಲ್ಲಿ ಬಿಜೆಪಿ 182 ಸ್ಥಾನಗಳ ಪೈಕಿ 127 ಸ್ಥಾನಗಳನ್ನ ಗೆಲ್ಲುತ್ತದೆ. ಮೋದಿ ಎರಡನೇ ಬಾರಿ ಸಿಎಂ ಆಗುತ್ತಾರೆ.


  2002ರಲ್ಲಿ ಎರಡನೇ ಬಾರಿ ಸಿಎಂ ಆದ ಬಳಿಕ ಮೋದಿ ಅವರು ಅಭಿವೃದ್ಧಿ ಅಜೆಂಡಾ ಇಟ್ಟುಕೊಂಡು ಆಡಳಿತ ನಡೆಸುತ್ತಾರೆ. ಮತ್ತೆರಡೂ ಚುನಾವಣೆಗಳಲ್ಲೂ ಅವರು ಯಶಸ್ವಿಯಾಗಿ ಬಿಜೆಪಿಯನ್ನು ಮುನ್ನಡೆಸಿ 2014ರವರೆಗೂ ಸಿಎಂ ಆಗಿ ಮುಂದುವರಿಯುತ್ತಾರೆ.


  2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲಾಗುತ್ತದೆ. ಹಿಂದುತ್ವ ಮತ್ತು ಅಭಿವೃದ್ಧಿ ಎರಡನ್ನೂ ಇಟ್ಟುಕೊಂಡು ಬಿಜೆಪಿ ಮಾಡಿದ ಪ್ರಚಾರತಂತ್ರ ಭರ್ಜರಿಯಾಗಿ ಯಶಸ್ವಿಯಾಗುತ್ತದೆ. ಬಿಜೆಪಿ ಮೊದಲ ಬಾರಿಗೆ ಸ್ವತಂತ್ರವಾಗಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತದೆ. ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗುತ್ತಾರೆ.

  Published by:Vijayasarthy SN
  First published: