ನವದೆಹಲಿ: ಪಕ್ಷದ ಸಂಸದರು (BJP MP) ತಮ್ಮ ಕ್ಷೇತ್ರಗಳಿಗೆ ಹೋಗಬೇಕು. ಸಾರ್ವಜನಿಕರ ಜತೆ ಸಂಪರ್ಕದಲ್ಲಿ ಇರಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ದಾರೆ. 2024ರ ಲೋಕಸಭಾ ಚುನಾವಣೆ ವೇಳೆ ಆಡಳಿತ ವಿರೋಧಿ ಅಲೆಯ ವಿರುದ್ಧ ಹೋರಾಡಲು ಬಿಜೆಪಿ ನಾಯಕರಿಗೆ ಚುನಾವಣಾ ಮಂತ್ರ (Election Tricks) ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಸಂಸದರು ಮತದಾರರ ಬಳಿ ತಲುಪಿದರೆ ಯಾವ ಆಡಳಿತ ವಿರೋಧಿ ಅಲೆಯೂ ಇರುವುದಿಲ್ಲ ಎಂದು ಹೇಳಿದ್ದಾರೆ.
'ಯಾರೂ ಚುನಾವಣಾ ಬಜೆಟ್ ಎಂದು ಹೇಳಿಲ್ಲ'
ಫೆ. 1ರಂದು ಬಜೆಟ್ ಮಂಡನೆಯಾದ ಬಳಿಕ ನಡೆದ ಮೊದಲ ಬಿಜೆಪಿ ಸಂಸದರ ಸಭೆಯಲ್ಲಿ ಮಂಗಳವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಸಂಸದರು ತಮ್ಮ ಕ್ಷೇತ್ರಗಳಿಗೆ ಹೋಗಬೇಕು. ಸಾರ್ವಜನಿಕರ ಜತೆ ಸಂಪರ್ಕದಲ್ಲಿ ಇರಬೇಕು. ಮುಂದಿನ ಲೋಕಸಭೆ ಚುನಾವಣೆಗೂ ಮುಂಚಿನ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಇದು ಆಗಿದ್ದರೂ, ಪ್ರತಿಪಕ್ಷಗಳು ಇದನ್ನು 'ಚುನಾವಣಾ ಬಜೆಟ್ ಎಂದು ವ್ಯಾಖ್ಯಾನ ಮಾಡಿಲ್ಲ. ಯಾಕೆಂದರೆ ನಾವು ಒಟ್ಟಾರೆ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿ, ಬಡವರನ್ನು ಬಜೆಟ್‌ನಲ್ಲಿ ಕೇಂದ್ರೀಕರಿಸಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: Narendra Modi: ಕನ್ನಡ ಭಾಷೆಯನ್ನು ಸುಲಭವಾಗಿ ಕಲಿಯುವ ವಿಧಾನ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ!
ಇನ್ನು ಎಲ್ಲ ಸಂಸದರೂ ತಮ್ಮ ಕ್ಷೇತ್ರಗಳಿಗೆ ಹೋಗಿ, ಬಜೆಟ್‌ನಲ್ಲಿ ಬಡವರು ಹಾಗೂ ದೀನರ ಮೇಲೆ ಹೇಗೆ ಗಮನ ಹರಿಸಲಾಗಿದೆ. ಅವರಿಗೆ ಏನೇನು ದೊರೆತಿದೆ ಎಂಬುದರ ಬಗ್ಗೆ ಜನರಿಗೆ ಅರಿವು ಮೂಡಿಸಿ ಜತೆ ಮಾತನಾಡಬೇಕು ಎಂದ ಪ್ರಧಾನಿ ಮೋದಿ, ಮತದಾರರನ್ನು ತಲುಪುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದ್ದಾರೆ. ಕಳೆದ ತಿಂಗಳು ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕೂಡ ಪ್ರಧಾನಿ ಮೋದಿ ಅವರು ಮತದಾರರನ್ನು ತಲುಪುವುದು ಬಹಳ ಮುಖ್ಯವಾಗಿದೆ, ಹೀಗಾಗಿ ಲೋಕಸಭೆ ಚುನಾವಣೆಗೆ ತಕ್ಷಣದಿಂದಲೇ ಸಿದ್ಧತೆ ನಡೆಸುವಂತೆ ಪಕ್ಷದ ನಾಯಕರಿಗೆ ಸೂಚನೆ ನೀಡಿದ್ದರು.
ಬಜೆಟ್ ಬಿಜೆಪಿ ಸದಸ್ಯರ ಮೆಚ್ಚುಗೆ
ಬಿಜೆಪಿ ಸಂಸದೀಯ ಸಭೆಯಲ್ಲಿ ಭಾಗಿಯಾಗಿದ್ದ ಕೇಂದ್ರ ಸರ್ಕಾರದ ಸಹೋದ್ಯೋಗಿಗಳು ಬಜೆಟ್ ಮತ್ತು ಕೇಂದ್ರ ಸರ್ಕಾರದ ಹಣಕಾಸು ನೀತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೂ ಕೂಡ ಇದೇ ವೇಳೆ ಸಂಸದರು ಪ್ರಶಂಸೆ ಮಾಡಿದರು.
ಇದನ್ನೂ ಓದಿ: Explained: PMO ಕಚೇರಿಯಲ್ಲಿ ನರೇಂದ್ರ ಮೋದಿ ಯೋಜನೆಗಳಿಗೆ ರೂವಾರಿಗಳಾಗಿರುವ ಅಧಿಕಾರಿಗಳು ಯಾರ‍್ಯಾರು? ಇಲ್ಲಿದೆ ಕಿರು ಪರಿಚಯ
ಬಿಜೆಪಿ ಸಂಸದರ ಸಭೆ ಮುಕ್ತಾಯಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನಮ್ಮ ಸರ್ಕಾರದ ಎಲ್ಲಾ 10 ಬಜೆಟ್‌ಗಳೂ ಜನಪರವಾಗಿವೆ ಹಾಗೂ ಬಡವರು ಮತ್ತು ದೀನರ ಕುರಿತು ಬಜೆಟ್‌ನಲ್ಲಿ ಗಮನ ಹರಿಸಲಾಗಿದೆ. ಸರ್ಕಾರದ ಸಾಧನೆ ಮತ್ತು ಬಜೆಟ್ ಕುರಿತು ಅಂಶಗಳನ್ನು ತಳಮಟ್ಟದ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಸೂಚನೆ ನೀಡಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.
ಇದೇ ವಿಚಾರವಾಗಿ ಮಾತನಾಡಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, 2024ರ ಲೋಕಸಭೆ ಚುನಾವಣೆಗೆ ನಮಗೆ ಇನ್ನು 400 ದಿನಗಳಿವೆ. ಜನರಿಗೆ ಸೇವೆ ಸಲ್ಲಿಸುವಂತಹ ಎಲ್ಲವನ್ನೂ ನಾವು ಮಾಡಬೇಕಿದೆ. ನಾವು ಇತಿಹಾಸ ಸೃಷ್ಟಿಸಬೇಕಿದೆ ಎಂದು ಪ್ರಧಾನಿ ಮೋದಿ ಅವರು ತಿಳಿಸಿದ್ದಾರೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ