ಚೀನಾ ಅಧ್ಯಕ್ಷ ಜಿನ್​ಪಿಂಗ್ ಜೊತೆ ಮತ್ತೆ ವೇದಿಕೆ ಹಂಚಿಕೊಳ್ಳಲಿರುವ ಪ್ರಧಾನಿ ಮೋದಿ

ನರೇಂದ್ರ ಮೋದಿ ಮತ್ತು ಕ್ಸಿ ಜಿನ್ ಪಿಂಗ್

ನರೇಂದ್ರ ಮೋದಿ ಮತ್ತು ಕ್ಸಿ ಜಿನ್ ಪಿಂಗ್

ನವೆಂಬರ್ 10ರಂದು ಎಸ್​ಸಿಒ ಶೃಂಗಸಭೆಯಲ್ಲಿ ವರ್ಚುವಲ್ ಆಗಿ ಮುಖಾಮುಖಿಯಾಗಿದ್ದ ನರೇಂದ್ರ ಮೋದಿ ಮತ್ತು ಕ್ಸಿ ಜಿನ್ ಪಿಂಗ್ ಇವತ್ತು ಬ್ರಿಕ್ಸ್ ಶೃಂಗ ಸಭೆಯಲ್ಲಿ ಮತ್ತೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಂಧಿಸಲಿದ್ದಾರೆ.

  • Share this:

ನವದೆಹಲಿ, ನ. 17: ಆರು ತಿಂಗಳಿನಿಂದ ಭಾರತ ಮತ್ತು ಚೀನಾ ಗಡಿಯಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಉದ್ಭವಿಸುತ್ತಿವೆ. ಎರಡೂ ದೇಶಗಳ ಸೈನಿಕರ ನಡುವೆ ಘರ್ಷಣೆ ಉಂಟಾಗಿ ಭಾರತದ 20 ಹಾಗೂ ಚೀನಾದ 40ಕ್ಕೂ ಯೋಧರು ಹುತಾತ್ಮರಾಗಿದ್ದಾರೆ. ಭಾರತದ ಭೂಭಾಗವನ್ನು ಚೀನಾ ಆಕ್ರಮಿಸಿಕೊಂಡಿದೆ ಎಂಬ ಗುರುತರ ಆರೋಪಗಳು ಕೇಳಿಬರುತ್ತಿವೆ. ಈ ಎಲ್ಲದರ ನಡುವೆ ಪ್ರಧಾನಿ ನರೇಂದ್ರ ಮೋದಿ ಇಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜೊತೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಮೋದಿ ಮತ್ತು ಕ್ಸಿ ಜಿನ್ ಪಿಂಗ್ ನವೆಂಬರ್ 10ರಂದು ಶಾಂಗೈ ಕೋಅಪರೇಷನ್ ಆರ್ಗನೈಸೇಷನ್‌ ಆಯೋಜಿಸಿದ್ದ ವರ್ಚ್ಯಯಲ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಈಗ 12ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಎರಡು ದೇಶಗಳ ನಡುವೆ ಗಡಿ ಉದ್ವಿಗ್ನತೆ ಇರುವ ಹಿನ್ನೆಲೆಯಲ್ಲಿ ಉಭಯ ನಾಯಕರು ಮತ್ತೆ ಮತ್ತೆ ವೇದಿಕೆ ಹಂಚಿಕೊಳ್ಳುತ್ತಿರುವುದು ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.


ರಷ್ಯಾ ದೇಶ 12ನೇ ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸುತ್ತಿದೆ. ರಷ್ಯಾ ಅಧ್ಯಕ್ಷ ವಾದಿಮಿರ್ ಪುಟಿನ್ ಶೃಂಗಸಭೆಯಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ್ದಾರೆ. ಪುಟಿನ್ ಆಹ್ವಾನ ನೀಡಿದ ಕಾರಣಕ್ಕೆ ಮೋದಿ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಭಾರತದ ವಿದೇಶಾಂಗ ಇಲಾಖೆ ತಿಳಿಸಿದೆ.


ಇದನ್ನೂ ಓದಿ: ನಿತೀಶ್ ಕುಮಾರ್ ಯಾವ್ಯಾವಾಗ, ಹೇಗೇಗೆ ಮುಖ್ಯಮಂತ್ರಿ ಆದರು? ಇಲ್ಲಿದೆ ಮಾಹಿತಿ


ಶಾಂಘೈ ಕೋಅಪರೇಷನ್ ಆರ್ಗನೈಸೇಷನ್‌ ಆಯೋಜಿಸಿದ್ದ ವರ್ಚ್ಯಯಲ್ ಸಮಾವೇಶದ ಭಾಷಣ ಮಾಡಿದ್ದ ಮೋದಿ, ಎಲ್ಲಾ ಸದಸ್ಯ ರಾಷ್ಟ್ರಗಳು ಪರಸ್ಪರ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಬಗ್ಗೆ ಗೌರವ ಹೊಂದಿರಬೇಕು' ಎಂದು ಹೇಳಿದ್ದರು. ಮೋದಿ ಅವರ ಹೇಳಿಕೆ ಭಾರತ-ಚೀನಾ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಚರ್ಚೆಯನ್ನು ಹುಟ್ಟುಹಾಕಿತ್ತು. ಈಗ ಬ್ರಿಕ್ಸ್ ಶೃಂಗಸಭೆಯಲ್ಲಿ ಏನು ಹೇಳುವರು ಎಂಬ ಕುತೂಹಲ ಸೃಷ್ಟಿಸಿದೆ. ಜೊತೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಏನು ಹೇಳುತ್ತಾರೆ ಎಂಬ ಕುತೂಹಲವೂ ಹುಟ್ಟಿಕೊಂಡಿದೆ.


ಸೋಮವಾರ ಭಾರತದ ವಿದೇಶಾಂಗ ಇಲಾಖೆ ನೀಡಿರುವ ಮಾಹಿತಿ ಪ್ರಕಾರ 12ನೇ ಬ್ರಿಕ್ಸ್ ಶೃಂಗಸಭೆಯಲ್ಲಿ  'ಜಾಗತಿಕ ಸ್ಥಿರತೆ, ಭದ್ರತೆ ಮತ್ತು ಹೊಸ ಆವಿಷ್ಕಾರ' ಎಂಬ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ. ಯುನೈಟೆಡ್ ನೇಷನ್ಸ್​ನ (ವಿಶ್ವಸಂಸ್ಥೆ) 75ನೇ ವಾರ್ಷಿಕೋತ್ಸವ ಹಾಗೂ ಕೊರೋನಾ ಸಂಕಷ್ಟದ ನಡುವೆಯೂ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಾಯಕರು ಬಹುಪಕ್ಷೀಯ ವ್ಯವಸ್ಥೆಯ ಸುಧಾರಣೆ ಬಗ್ಗೆ ಚರ್ಚೆ ಮಾಡಲಿದ್ದಾರೆ. ಅಂತರ್-ಬ್ರಿಕ್ಸ್ ಸಹಕಾರದ ಬಗ್ಗೆ ಸಮಾಲೋಚನೆ ನಡೆಸುತ್ತಾರೆ.  ಜೊತೆಗೆ ಜಾಗತಿಕವಾಗಿ ನಡೆಯುತ್ತಿರುವ ಪ್ರಮುಖ ಬೆಳವಣಿಗೆಗಳ ಬಗ್ಗೆಯೂ ಮಾತನಾಡುತ್ತಾರೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ಹಂಪಿಯಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತಿ ಎತ್ತರದ ಹನುಮಂತನ ಪ್ರತಿಮೆ; ಇದರ ಎತ್ತರ ಮತ್ತು ವೆಚ್ಚ ಎಷ್ಟು ಗೊತ್ತಾ?


ಭಯೋತ್ಪಾದನೆ ಎಲ್ಲಾ ದೇಶಗಳನ್ನೂ ಒಂದಿಲ್ಲೊಂದು ರೀತಿಯಲ್ಲಿ ಕಾಡುತ್ತಿರುವುದರಿಂದ ಈ ಬಗ್ಗೆ ಪರಸ್ಪರ ಸಹಕಾರ ನೀಡುವ ಬಗ್ಗೆಯೂ ಚರ್ಚಿಸಲಾಗುತ್ತದೆ‌. ಸದಸ್ಯ ರಾಷ್ಟ್ರಗಳ ನಡುವಿನ ವ್ಯಾಪಾರ, ಆರೋಗ್ಯ, ಇಂಧನ ಮತ್ತು ಮಾನವ ಸಂಪನ್ಮೂಲ ವಿನಿಮಯದ ಬಗ್ಗೆ ಕೂಡ ಶೃಂಗಸಭೆಯಲ್ಲಿ ಸಮಾಲೋಚನೆ ನಡೆಸಲಾಗುತ್ತದೆ.


ತಮ್ಮ ದೇಶ ಸಂಕಷ್ಟದ ವರ್ಷವಾಗಿರುವ 2020ರಲ್ಲಿ ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸುತ್ತಿರುವ ಉದ್ದೇಶ, ಬ್ರಿಕ್ಸ್ ದೇಶಗಳ ನಡುವಿನ ಬಹುಮುಖಿ ಸಹಕಾರಕ್ಕಾಗಿ ಹಾಗೂ ಜನರ ಜೀವನ ಮಟ್ಟವನ್ನು ಹೆಚ್ಚಿಸಲು ಕೊಡುಗೆ ನೀಡುವ ಸಲುವಾಗಿ ಎಂದು ಆತಿಥೇಯ ರಷ್ಯಾ ಹೇಳಿಕೆಯೊಂದರಲ್ಲಿ ತಿಳಿಸಿದೆ.


ಇದನ್ನೂ ಓದಿ: ವಾಸನ್ ಐ ಕೇರ್ ಸ್ಥಾಪಕ ಎಎಂ ಅರುಣ್ ಅನುಮಾನಾಸ್ಪದ ಸಾವು; ಹೃದಯಾಘಾತವೋ, ಆತ್ಮಹತ್ಯೆಯೋ?


ಜಾಗತಿಕವಾಗಿ ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿರುವುದರ ನಡುವೆಯೂ ರಷ್ಯಾ 2020ರಲ್ಲಿ ಯಶಸ್ವಿಯಾಗಿ ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸುತ್ತಿದೆ. ಶೃಂಗಸಭೆ ಹಿನ್ನೆಲೆಯಲ್ಲಿ ಈ ವರ್ಷದ ಜನವರಿಯಿಂದಲೂ ವಿಡಿಯೋ ಕಾನ್ಫೆರೆನ್ಸಿಂಗ್ ಸೇರಿದಂತೆ 60ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ರಷ್ಯಾದ ಒಕ್ಕೂಟದ ಅಧ್ಯಕ್ಷರ ಸಲಹೆಗಾರ ಆಂಟನ್ ಕೋಬ್ಯಕೋವ್ ಹೇಳಿದ್ದಾರೆ.


BRICS ಎಂಬುದು ಇಲ್ಲಿ ವಿಶ್ವದ ಪ್ರಮುಖ ಅಭಿವೃದ್ಧಿಶೀಲ ದೇಶಗಳ ಗುಂಪಾಗಾಗಿದೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಬ್ರಿಕ್ಸ್ ಗುಂಪಿನಲ್ಲಿವೆ. ಜುಲೈನಲ್ಲೇ ಇದರ ಶೃಂಗಸಭೆ ನಡೆಯಬೇಕಿತ್ತಾದರೂ ಕೋವಿಡ್ ಕಾರಣದಿಂದ ಮುಂದೂಡಿ ಇದೀಗ ವಿಡಿಯೋ ಕಾನ್ಫೆರೆನ್ಸಿಂಗ್ ಮೂಲಕ ವರ್ಚುವಲ್ ಆಗಿ ನಡೆಯುತ್ತಿದೆ.


ವರದಿ: ಧರಣೀಶ್ ಬೂಕನಕೆರೆ

First published: