• Home
  • »
  • News
  • »
  • national-international
  • »
  • Narada case: ನಾರದ ಲಂಚ ಪ್ರಕರಣ; ಸಿಎಂ ಮಮತಾ ಬ್ಯಾನರ್ಜಿ ಹೆಸರು ಉಲ್ಲೇಖಿಸಿ ಪ್ರಕರಣದ ವರ್ಗಾವಣೆಗೆ ಸಿಬಿಐ ಅರ್ಜಿ

Narada case: ನಾರದ ಲಂಚ ಪ್ರಕರಣ; ಸಿಎಂ ಮಮತಾ ಬ್ಯಾನರ್ಜಿ ಹೆಸರು ಉಲ್ಲೇಖಿಸಿ ಪ್ರಕರಣದ ವರ್ಗಾವಣೆಗೆ ಸಿಬಿಐ ಅರ್ಜಿ

ಮಮತಾ ಬ್ಯಾನರ್ಜಿ.

ಮಮತಾ ಬ್ಯಾನರ್ಜಿ.

2016 ರ ನಾರದ ಲಂಚ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅವರ ಕಾನೂನು ಸಚಿವ ಮೊಲೊಯ್ ಘಟಕ್ ಮತ್ತು ಪಕ್ಷದ ಮುಖಂಡ ಕಲ್ಯಾಣ್ ಬ್ಯಾನರ್ಜಿ ಅವರ ಹೆಸರನ್ನು ಕೇಂದ್ರ ತನಿಖಾ ದಳ (ಸಿಬಿಐ) ತನ್ನ ಅರ್ಜಿಯಲ್ಲಿ ಸೇರಿಸಿದೆ.

  • Share this:

    ಕೋಲ್ಕತ್ತಾ (ಮೇ 19); ಪಶ್ಚಿಮಬಂಗಾಳದ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡ ಬಳಿಕ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವೆ ಘರ್ಷಣೆ ತೀವ್ರಗೊಂಡಿದೆ. ನಾರದ ಭ್ರಷ್ಟಾಚಾರ ಪ್ರಕರಣ (Narada Sting Case) ಸಂಬಂಧ ಕೇಂದ್ರ ತನಿಖಾ ಸಂಸ್ಥೆ (CBI) ಪಶ್ಚಿಮಬಂಗಾಳದ ಆಡಳಿತಾರೂಢ ಪಕ್ಷ ತೃಣಮೂಲ ಕಾಂಗ್ರೆಸ್​ (ಟಿಎಂಸಿ)ನ ಹಾಲಿ ಇಬ್ಬರು ಸಚಿವರು ಹಾಗೂ ಓರ್ವ ಶಾಸಕರನ್ನು ಸೋಮವಾರ ಬಂಧಿಸಿತ್ತು. ಸಚಿವರಾದ ಫಿರ್ಹಾದ್ ಹಕೀಂ ಮತ್ತು ಸುಬ್ರಾತ್ ಮುಖರ್ಜಿ ಹಾಗೂ ಓರ್ವ ಶಾಸಕ ಮದನ್ ಮಿತ್ರ, ಕೋಲ್ಕತ್ತಾ ಮಾಜಿ ಮೇಯರ್ ಸೋವನ್ ಚಟರ್ಜಿ ಅವರನ್ನು ಬಂಧಿಸಿತ್ತು. ನಾಲ್ಕು ವರ್ಷದ ಹಳೆಯ ಭ್ರಷ್ಟಾಚಾರ ಪ್ರಕರಣವನ್ನು ಕೇಂದ್ರ ಸರ್ಕಾರ ರಾಜಕೀಯ ಷಡ್ಯಂತ್ರವಾಗಿ ಬಳಸುತ್ತಿದೆ ಎಂದು ಟಿಎಂಸಿ ಆರೋಪಿಸಿದ ಬೆನ್ನಿಗೆ ಇಂದು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿರುವ ಸಿಬಿಐ, ಸಿಎಂ ಮಮತಾ ಬ್ಯಾನರ್ಜಿ ಹೆಸರನ್ನು ಉಲ್ಲೇಖಿಸಿ ಈ ಪ್ರಕರಣವನ್ನು ರಾಜ್ಯದಿಂದ ಕೇಂದ್ರಕ್ಕೆ ವರ್ಗಾಯಿಸುವಂತೆ ಮನವಿ ಮಾಡಿದೆ.


    2016 ರ ನಾರದ ಲಂಚ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅವರ ಕಾನೂನು ಸಚಿವ ಮೊಲೊಯ್ ಘಟಕ್ ಮತ್ತು ಪಕ್ಷದ ಮುಖಂಡ ಕಲ್ಯಾಣ್ ಬ್ಯಾನರ್ಜಿ ಅವರ ಹೆಸರನ್ನು ಕೇಂದ್ರ ತನಿಖಾ ದಳ (ಸಿಬಿಐ) ತನ್ನ ಅರ್ಜಿಯಲ್ಲಿ ಸೇರಿಸಿದೆ.


    ಕಲ್ಕತ್ತಾ ಹೈಕೋರ್ಟ್‌ನಲ್ಲಿ ಬುಧವಾರ ನಡೆದ ವಿಚಾರಣೆಯ ವೇಳೆ, ಈ ಪ್ರಕರಣವನ್ನು ರಾಜ್ಯದಿಂದ ವರ್ಗಾವಣೆ ಮಾಡಲು ಕೋರಿರುವ ಸಂಸ್ಥೆ, ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮತ್ತು ಈಗ ಜೈಲಿನಲ್ಲಿರುವ ನಾಲ್ವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ಮನವಿ ಮಾಡಿದೆ.


    ‘ನಾರದಾ’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್‌ ಶಾಸಕರಾದ ಸುಬ್ರತಾ ಮುಖರ್ಜಿ, ಫಿರ್ಹಾದ್ ಹಕೀಮ್ ಮತ್ತು ಮದನ್ ಮಿತ್ರಾ ಮತ್ತು ಮಾಜಿ ಟಿಎಂಸಿ, ಬಿಜೆಪಿ ನಾಯಕ ಸೋವನ್ ಚಟರ್ಜಿ ಅವರನ್ನು ಸೋಮವಾರ ಸಿಬಿಐ ಬಂಧಿಸಿದೆ.


    ಇವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಿಬಿಐ ಕೋರಿಕೆಯನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಅನುಮೋದಿಸಿದ ಕೆಲವೇ ದಿನಗಳಲ್ಲಿ ಈ ಬಂಧನ ನಡೆದಿದೆ.


    ಸಚಿವರ ಬಂಧನದ ನಂತರ, ತೃಣಮೂಲ ಕಾರ್ಯಕರ್ತರ ಒಂದು ದೊಡ್ಡ ಗುಂಪು ಸಿಬಿಐನ ಕೋಲ್ಕತಾ ಕಚೇರಿಯ ಹೊರಗೆ ಜಮಾಯಿಸಿತ್ತು. ಅಲ್ಲಿಗೆ ತೆರಳಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಥಳದಲ್ಲಿಯೇ ಧರಣಿ ನಡೆಸಿದ್ದರು. ಮಂತ್ರಿಗಳನ್ನು ಸರಿಯಾದ ಕಾರ್ಯವಿಧಾನವಿಲ್ಲದೆ ಬಂಧಿಸಲಾಗಿದೆ. ಸಿಬಿಐ ನನ್ನನ್ನು ಸಹ ಬಂಧಿಸಬೇಕಾಗುತ್ತದೆ ಎಂದು ವಾದಿಸಿದ್ದರು.


    ಸಿಬಿಐ ತನ್ನ ಅರ್ಜಿಯಲ್ಲಿ, “ತನಿಖಾ ಏಜೆನ್ಸಿಯನ್ನು ಭಯಭೀತಗೊಳಿಸುವ ಮತ್ತು ಅದರ ಶಾಸನಬದ್ಧ ಕಾರ್ಯಗಳನ್ನು ಮುಕ್ತವಾಗಿ ಮತ್ತು ನಿರ್ಭಯವಾಗಿ ನಿರ್ವಹಿಸುವುದನ್ನು ತಡೆಯುವ ವಿಚಿತ್ರ ಸನ್ನಿವೇಶ ಇಲ್ಲಿ ಎದುರಾಗಿದೆ” ಎಂದು ತಿಳಿಸಿದೆ.


    ಬಂಧಿತ ನಾಲ್ವರು ನಾಯಕರು ಸೋಮವಾರ ಏಳು ಗಂಟೆಗಳ ನಂತರ ಜಾಮೀನು ಪಡೆದಿದ್ದರು ಆದರೆ ಏಜೆನ್ಸಿಯ ಮೇಲ್ಮನವಿಯ ನಂತರ ಅದೇ ದಿನ ಸಂಜೆ ಅದನ್ನು ಕೊಲ್ಕತ್ತಾ ಹೈಕೋರ್ಟ್ ತಡೆಹಿಡಿಯಿತು.


    ಇದನ್ನೂ ಓದಿ : Narada Sting Case; ನಾರದ ಪ್ರಕರಣ ಸಂಬಂಧ ಬಂಗಾಳದ 2 ಸಚಿವರು, ಶಾಸಕರ ಬಂಧನ, ಸಿಬಿಐ ಕಚೇರಿಗೆ ಬಂದ ಸಿಎಂ ಮಮತಾ ಬ್ಯಾನರ್ಜಿ


    ತೃಣಮೂಲ ಕಾಂಗ್ರೆಸ್ ಈ ಸಮಯದಲ್ಲಿ ಸಿಬಿಐ ಸಚಿವರ ಬಂಧನ ಮಾಡಿರುವುದನ್ನು ಪ್ರಶ್ನಿಸಿದೆ. ದೀದಿ ವರ್ಸಸ್ ಮೋದಿ ಎಂಬಂತಿದ್ದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಪಕ್ಷ ಜಯಗಳಿಸಿದ ಕೆಲವೇ ದಿನಗಳ ನಂತರ ಸಿಬಿಐ ಈ ಕ್ರಮ ಕೈಗೊಂಡಿದೆ.


    ಮಾಜಿ ತೃಣಮೂಲ ಕಾಂಗ್ರೆಸ್ ಸಚಿವರಾದ ಸುವೇಂದು ಅಧಿಕಾರಿ ಈಗ ನಂದಿಗ್ರಾಮದ ಬಿಜೆಪಿ ಶಾಸಕರಾಗಿದ್ದಾರೆ. ಆದರೆ, ಅವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ದೂರುದಾರರು ಪ್ರಶ್ನಿಸಿದ್ದಾರೆ. ಜೊತೆಗೆ ಬಿಜೆಪಿಗೆ ಸೇರ್ಪಡೆಯಾದ ಮುಕುಲ್ ರಾಯ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಯಾಕೆ ಅನುಮತಿ ನೀಡಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಪಕ್ಷ ಪ್ರಶ್ನಿಸಿದೆ.

    Published by:MAshok Kumar
    First published: