HOME » NEWS » National-international » NAGPUR COVID HOSPITAL FIRE ACCIDENT MANY CASUALTIES REPORTED SNVS

Fire Accident - ಮಹಾರಾಷ್ಟ್ರದ ಆಸ್ಪತ್ರೆಯಲ್ಲಿ ಬೆಂಕಿ ಅವಘಡ; ನಾಲ್ಕಕ್ಕೂ ಹೆಚ್ಚು ಮಂದಿ ಸಾವು

ನಾಗಪುರದ ವೆಲ್ ಟ್ರೀಟ್ ಎಂಬ ಖಾಸಗಿ ಆಸ್ಪತ್ರೆಯ ಕೋವಿಡ್ ಘಟಕದಲ್ಲಿ ಶುಕ್ರವಾರ ರಾತ್ರಿ ಬೆಂಕಿ ದುರಂತ ಸಂಭವಿಸಿದ್ದು, ಕನಿಷ್ಠ ನಾಲ್ವರು ಸಾವನ್ನಪ್ಪಿರುವುದು ತಿಳಿದುಬಂದಿದೆ. 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆನ್ನಲಾಗಿದೆ.

news18
Updated:April 10, 2021, 7:19 AM IST
Fire Accident - ಮಹಾರಾಷ್ಟ್ರದ ಆಸ್ಪತ್ರೆಯಲ್ಲಿ ಬೆಂಕಿ ಅವಘಡ; ನಾಲ್ಕಕ್ಕೂ ಹೆಚ್ಚು ಮಂದಿ ಸಾವು
ನಾಗಪುರದ ವೆಲ್ ಟ್ರೀಟ್ ಆಸ್ಪತ್ರೆ
  • News18
  • Last Updated: April 10, 2021, 7:19 AM IST
  • Share this:
ನಾಗಪುರ್: ಮಹಾರಾಷ್ಟ್ರ ರಾಜ್ಯದ ನಾಗಪುರ್ ಪಟ್ಟಣದಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿನ್ನೆ ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು ನಾಲ್ಕಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಗಾಯಗೊಂಡಿರುವುದು ತಿಳಿದುಬಂದಿದೆ. ನಾಗಪುರದ ವಾಡಿ ಪ್ರದೇಶದ ಅಮರಾವತಿ ರಸ್ತೆಯಲ್ಲಿರುವ ವೆಲ್ ಟ್ರೀಟ್ ಎಂಬ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ರಾತ್ರಿ 8:10ಕ್ಕೆ ಬೆಂಕಿ ಹೊತ್ತಿಕೊಂಡಿತ್ತು ಎಂದು ವರದಿಗಳು ಹೇಳುತ್ತಿವೆ.  ಆಸ್ಪತ್ರೆಯ ತೀವ್ರ ನಿಗಾ ಘಟಕದ (ಐಸಿಯು) ಏರ್ ಕಂಡೀಷನರ್ (ಏಸಿ) ಬೆಂಕಿ ಹೊತ್ತಲು ಕಾರಣವೆಂದು ನಂಬಲಾಗಿದೆ. ಎಲೆಕ್ಟ್ರಿಕ್ ಶಾರ್ಟ್ ಸರ್ಕ್ಯೂಟ್ ಆಗಿ ಈ ದುರಂತವಾಗಿರಬಹುದು ಎಂದು ಶಂಕಿಸಲಾಗಿದೆ. ಅದೃಷ್ಟಕ್ಕೆ ಎರಡನೇ ಮಹಡಿಯಿಂದ ಈ ಬೆಂಕಿ ಬೇರೆಡೆಗೆ ವ್ಯಾಪಿಸಲಿಲ್ಲ. ಇಲ್ಲದಿದ್ದರೆ ಇನ್ನೂ ಹೆಚ್ಚು ಅನಾಹುತವಾಗುತ್ತಿತ್ತು.

ಘಟನೆ ನಡೆದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಯ ಬಗ್ಗೆ ಸಂತಾಪ ಸೂಚಿಸಿದ್ದಾರೆ.



ನಾಗಪುರದ ಕೋವಿಡ್ ಆಸ್ಪತ್ರೆಗಳಲ್ಲೊಂದಾದ ಇಲ್ಲಿ 30 ಬೆಡ್​ಗಳ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಾ ಬೆಡ್​ಗಳು ರೋಗಿಗಳಿಂದ ತುಂಬಿತ್ತು. ಬೆಂಕಿ ಕಾಣಿಸಿಕೊಂಡ ಕೂಡಲೇ ರೋಗಿಗಳನ್ನ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಯಿತು. ಈ ಘಟನೆಯಲ್ಲಿ 4ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದು ತಿಳಿದುಬಂದಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಆಸ್ಪತ್ರೆಯ 18 ಮಂದಿ ಸಿಬ್ಬಂದಿ ಸೇರಿ 40ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಅವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.ಇದನ್ನೂ ಓದಿ: 18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿ ಯಾವುದೇ ಧರ್ಮವನ್ನು ಆಯ್ಕೆ ಮಾಡಲು ಮುಕ್ತನಾಗಿರುತ್ತಾನೆ: ಸುಪ್ರೀಂ ಕೋರ್ಟ್

ವೆಲ್ ಟ್ರೀಟ್ ಆಸ್ಪತ್ರೆ ಇರುವ ಕಟ್ಟಡ ನಾಲ್ಕು ಮಹಡಿಗಳದ್ದಾಗಿದೆ. ನೆಲಮಹಡಿಯಲ್ಲಿ ಐಸಿಐಸಿಐ ಬ್ಯಾಂಕ್ ಕಚೇರಿ ಇದೆ. ಮೊದಲ ಮಹಡಿಯಲ್ಲಿ ಮೆಥಡೆಕ್ಸ್ ಸಿಸ್ಟಂ ಎಂಬ ಖಾಸಗಿ ಕಂಪನಿಯ ಕಚೇರಿ ಇದೆ. ಉಳಿದ ಮಹಡಿಗಳಲ್ಲಿ ವೆಲ್ ಟ್ರೀಟ್ ಆಸ್ಪತ್ರೆ ಇದೆ.

ಮಹಾರಾಷ್ಟ್ರದ ಆಸ್ಪತ್ರೆಗಳಲ್ಲಿ ಈ ಹಿಂದೆಯೂ ಅಗ್ನಿ ದುರಂತ ಘಟನೆಗಳು ಸಂಭವಿಸಿರುವುದು ವರದಿಯಾಗಿದ್ದವು. ಕಳೆದ ತಿಂಗಳಷ್ಟೇ ಮುಂಬೈನ ಭಾಂಡಪ್​ನ ಸನ್ ರೈಸ್ ಆಸ್ಪತ್ರೆಯ ಕೋವಿಡ್ ಘಟಕದಲ್ಲಿ ಅಗ್ನಿ ಅವಘಡವಾಗಿ ಒಂಬತ್ತು ಮಂದಿ ಕೊರೋನಾ ಸೋಂಕಿತರು ಸಾವಿಗೀಡಾಗಿದ್ದರು. ಆ ಘಟನೆಯಲ್ಲಿ ಸಮೀಪದ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ನಾಲ್ಕನೇ ಮಹಡಿಯಲ್ಲಿದ್ದ ಕೋವಿಡ್ ಘಟಕಕ್ಕೆ ವ್ಯಾಪಿಸಿತ್ತು. ಆದರೆ, ಬೆಂಕಿಯಿಂದ ಹೊಮ್ಮಿದ ಹೊಗೆಗೆ ಉಸಿರುಗಟ್ಟಿ ಒಂಬತ್ತು ಮಂದಿಯ ಪ್ರಾಣಪಕ್ಷಿ ಹಾರಿತ್ತು ಎಂದು ಹೇಳಲಾಗಿತ್ತು.
Published by: Vijayasarthy SN
First published: April 10, 2021, 7:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories