• Home
  • »
  • News
  • »
  • national-international
  • »
  • US Elections: ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ ಇತಿಹಾಸ ಬರೆದ ಭಾರತ ಮೂಲದ ಮಹಿಳೆ!

US Elections: ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ ಇತಿಹಾಸ ಬರೆದ ಭಾರತ ಮೂಲದ ಮಹಿಳೆ!

ನಬೀಲಾ ಸೈಯದ್

ನಬೀಲಾ ಸೈಯದ್

ಇಲ್ಲಿನೊಯಿಸ್ ರಾಜ್ಯ ಜನಪ್ರತಿನಿಧಿ ಸಭೆಯ 51ನೇ ಜಿಲ್ಲೆಗೆ ನಡೆದ ಚುನಾವಣೆಯಲ್ಲಿ ನಬೀಲಾ ಸಯ್ಯದ್ ಅವರು ಶೇ 52.3ರಷ್ಟು ಮತಗಳನ್ನು ಪಡೆದು ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದರು.

  • News18 Kannada
  • Last Updated :
  • New Delhi, India
  • Share this:

ವಾಷಿಂಗ್ಟನ್ ಡಿಸಿ: ಭಾರತ ಮೂಲದ ನಬೀಲಾ ಸಯ್ಯದ್ ಎಂಬ ಯುವತಿ (Nabeela Syed) ಅಮೆರಿಕದ ಇಲ್ಲಿನೊಯಿಸ್ ಜನರಲ್ ಅಸೆಂಬ್ಲಿಗೆ (Illinois General Assembly) ಚುನಾಯಿತರಾಗುವ ಮೂಲಕ ಅತ್ಯಂತ ಕಿರಿಯ ಸದಸ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ನಡೆದ ಯುಎಸ್ ಮಧ್ಯಂತರ ಚುನಾವಣೆಯಲ್ಲಿ, 23 ವರ್ಷದ ಭಾರತೀಯ-ಅಮೆರಿಕನ್ ಯುವತಿ (Indian Origin Woman) ನಬೀಲಾ ಸಯ್ಯದ್ ‌ರಿಪಬ್ಲಿಕನ್ ಪಕ್ಷದ ಕ್ರಿಸ್ ಬಾಸ್ ಅವರನ್ನು ಸೋಲಿಸಿದರು. ಇಲ್ಲಿನೊಯಿಸ್ ರಾಜ್ಯ ಜನಪ್ರತಿನಿಧಿ ಸಭೆಯ 51ನೇ ಜಿಲ್ಲೆಗೆ ನಡೆದ ಚುನಾವಣೆಯಲ್ಲಿ ನಬೀಲಾ ಸಯ್ಯದ್ ಅವರು ಶೇ 52.3ರಷ್ಟು ಮತಗಳನ್ನು ಪಡೆದು ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದರು.


ಟ್ವಿಟರ್‌ನಲ್ಲಿ ಸಂಭ್ರಮದ ಪೋಸ್ಟ್
ಚುನಾವಣೆಯಲ್ಲಿ ಗೆದ್ದ ಸಂಭ್ರಮವನ್ನು ನಬೀಲಾ ಸಯ್ಯದ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. "ನನ್ನ ಹೆಸರು ನಬೀಲಾ ಸಯ್ಯದ್. ನಾನು 23 ವರ್ಷದ ಮುಸ್ಲಿಂ, ಭಾರತೀಯ- ಅಮೆರಿಕನ್ ಮಹಿಳೆ. ರಿಪಬ್ಲಿಕನ್ ಹಿಡಿತದಲ್ಲಿದ್ದ ಉಪನಗರ ಜಿಲ್ಲೆಯನ್ನು ನಾವು ಉಲ್ಟಾ ಮಾಡಿದ್ದೇವೆ" ಎಂದು ಹೇಳಿದ್ದಾರೆ. "ಮತ್ತು ಜನವರಿಯಲ್ಲಿ ನಾನು ಇಲ್ಲಿನೊಯಿಸ್ ಅಸೆಂಬ್ಲಿಯ ಅತ್ಯಂತ ಕಿರಿಯ ಸದಸ್ಯೆಯಾಗಲಿದ್ದೇನೆ" ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಸರಣಿ ಟ್ವೀಟ್‌ನಲ್ಲಿ ಮತ್ತಷ್ಟು ವಿಷಯ ಹಂಚಿಕೊಂಡ ಸಯ್ಯದ್‌ "ನಮ್ಮ ಬಳಿ ಇದ್ದ ಅದ್ಭುತ ತಂಡವು ಇದನ್ನು ಸಾಧ್ಯವಾಗಿಸಿದೆ" ಎಂದು ನಬೀಲಾ ತಿಳಿಸಿದ್ದಾರೆ.‌


ಗೆಲುವಿನ ಕಾರಣ ಬಿಚ್ಚಿಟ್ಟ ನಬೀಲಾ
ನಬೀಲಾ ಸೈಯದ್ ಅವರು ತಮ್ಮ ಪ್ರಯಾಣದ ಬಗ್ಗೆ ಇನ್ಸ್ಟಾಗ್ರಾಮ್​ನಲ್ಲಿ ಸುದೀರ್ಘ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಯೋಜನೆ ಬಗ್ಗೆ ಮಾತನಾಡಿರುವ ನಬೀಲಾ, "ನಾನು ರಾಜ್ಯ ಪ್ರತಿನಿಧಿಯ ಉಮೇದುವಾರಿಕೆ ಪ್ರಕಟಿಸಿದಾಗ, ಜನರ ಜತೆ ಪ್ರಾಮಾಣಿಕವಾಗಿ ಸಂಭಾಷಿಸುವ ಯೋಜನೆಯನ್ನು ಆರಂಭಿಸಿದ್ದೆ. ನಮ್ಮ ಪ್ರಜಾಪ್ರಭುತ್ವದಲ್ಲಿ ಭಾಗಿಯಾಗಲು ಅವರಿಗೆ ಕಾರಣ ನೀಡುವುದು ಮತ್ತು ಅವರ ಮೌಲ್ಯಗಳನ್ನು ಪ್ರತಿನಿಧಿಸಲು ಉತ್ತಮ ನಾಯಕತ್ವದ ಆಶಯ ಹೊಂದುವುದು ಇದರ ಉದ್ದೇಶವಾಗಿತ್ತು. ಅಂತಹ ಸಂಭಾಷಣೆಗಳಲ್ಲಿ ನಾವು ತೊಡಗಿಸಿಕೊಂಡ ಕಾರಣಕ್ಕಾಗಿ ಚುನಾವಣೆಯಲ್ಲಿ ಜಯಶಾಲಿ ಆಗಿದ್ದೇವೆ" ಎಂದು ಹೇಳಿದ್ದಾರೆ.


ಧನ್ಯವಾದ ಸಲ್ಲಿಸಲು ಮತದಾರರ ಮನೆಗೆ ತೆರಳುತ್ತೇನೆ
ಚುನಾವಣೆಯಲ್ಲಿ ತಮಗೆ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿರುವ ನಬೀಲಾ, "ಈ ಜಿಲ್ಲೆಯ ಪ್ರತಿ ಮನೆಯ ಬಾಗಿಲನ್ನೂ ನಾನು ತಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ನನ್ನ ಮೇಲೆ ನಂಬಿಕೆ ಇರಿಸಿದ್ದ ಕಾರಣಕ್ಕೆ ಧನ್ಯವಾದ ಸಲ್ಲಿಸಲು ಅವರ ಮನೆ ಬಾಗಿಲನ್ನು ಮತ್ತೆ ತಟ್ಟಲು ಆರಂಭಿಸುತ್ತೇನೆ. ನಾನು ಕೆಲಸಕ್ಕೆ ಹಾಜರಾಗಲು ಸಿದ್ಧಳಾಗಿದ್ದೇನೆ" ಎಂದು ತಿಳಿಸಿದ್ದಾರೆ.


ನಬೀಲಾ ಸಯ್ಯದ್‌ಗೆ ಅಭಿನಂದನೆ
ಇನ್ನೂ ನಬೀಲಾ ಸಯ್ಯದ್‌ ಟ್ವೀಟ್‌ಗೆ, ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಹಲವರು ಅಭಿನಂದನೆ ತಿಳಿಸಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ಜನರಲ್ ಅಸೆಂಬ್ಲಿಯ ಸದಸ್ಯೆಯಾಗಿ ಚುನಾಯಿತರಾಗಿರುವ ಭಾರತ ಮೂಲದ ನಬೀಲಾ ಸಯ್ಯದ್ ಅವರಿಗೆ ಅಭಿನಂದನೆಯ ಸುರಿಮಳೆ ಸುರಿದಿದೆ.


ಹರಿದುಬಂತು ಭಾರೀ ಬೆಂಬಲ
ಟ್ವಿಟರ್‌ನಲ್ಲಿ ಬಳಕೆದಾರರು ಹೀಗೆ ಬರೆದಿದ್ದಾರೆ- “ಯುವಜನರು ಹೆಜ್ಜೆ ಹಾಕುತ್ತಿರುವ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಇದು ನಿಮ್ಮ ಸಮಯ. ಮಹತ್ತರವಾದ ಕೆಲಸಗಳನ್ನು ಮಾಡು.” ಎಂದು ಒಬ್ಬ ಬಳಕೆದಾರರು ಶುಭ ಕೋರಿದ್ದಾರೆ.


ಮತ್ತೊಬ್ಬ ನೆಟ್ಟಿಗ, “ಉತ್ತಮ ಕೆಲಸ, ನಬೀಲಾ ಸಯ್ಯದ್. ನೀವು ಎಂದಿಗೂ ಒಬ್ಬಂಟಿಯಲ್ಲ ಮತ್ತು ಪ್ರತಿ ಹೆಜ್ಜೆಯಲ್ಲೂ ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ” ಎಂದು ಮಹಿಳೆಗೆ ಬೆಂಬಲ


ನಬೀಲಾ ಸೈಯದ್ ಅವರು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನ ಮತ್ತು ವ್ಯವಹಾರ ಆಡಳಿತದಲ್ಲಿ ಪದವಿ ಪಡೆದರು. ಅನೇಕ ಸಂಘಟನೆಗಳ ಜತೆ ನಬೀಲಾ ಸಹಯೋಗ ಹೊಂದಿದ್ದಾರೆ. ಇದರಲ್ಲಿ ಕಾಂಗ್ರೆಸ್‌ಗೆ ಡೆಮಾಕ್ರಟಿಕ್ ಪಕ್ಷದ ಸದಸ್ಯರನ್ನು ಆಯ್ಕೆ ಮಾಡಲು ಹಣ ಸಂಗ್ರಹಿಸುವ ಎಮಿಲೀಸ್ ಲಿಸ್ಟ್ ಕೂಡ ಸೇರಿದೆ. ಪ್ರಸ್ತುತ ಅವರು ಡಿಜಿಟಲ್ ಕಾರ್ಯತಂತ್ರದಲ್ಲಿ ಲಾಭರಹಿತ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ನಬೀಲಾ ಪ್ರೌಢಶಾಲಾ ಚರ್ಚಾ ತರಬೇತುದಾರರಾಗಿ ಯುವಕರಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: