news18-kannada Updated:July 30, 2020, 5:26 PM IST
ಸಹಸ್ರಲಿಂಗ
ನದಿಯ ಒಳಗಿನ ಕಲ್ಲುಗಳಲ್ಲಿ ಹಲವು ಶಿವಲಿಂಗಗಳನ್ನು ಕೆತ್ತಲಾಗಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಮಾಣದಲ್ಲಿ ಶೇರ್ ಆಗಿ, ವೈರಲ್ ಆಗಿದೆ. ಕರ್ನಾಟಕದ ಶಿವಕಾಶಿ ನದಿಯ ನೀರಿನ ಮಟ್ಟ ಕಡಿಮೆಯಾದಾಗ ಲಕ್ಷ ಶಿವಲಿಂಗಗಳು ಪತ್ತೆಯಾಗಿದ್ದು, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಶಿವಲಿಂಗಗಳು ಪತ್ತೆಯಾಗಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು ಎಂದು ಫೋಟೋದ ಜೊತೆಗೆ ಹೇಳಲಾಗಿದೆ.
ಹಿಂದಿಯಲ್ಲಿ ಫೋಟೋದೊಂದಿಗೆ ಹೀಗೆ ಶೀರ್ಷಿಕೆ ನೀಡಲಾಗಿದೆ. ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದ ಶಿವಕಾಶಿ ನದಿಯಲ್ಲಿ ಲಕ್ಷ ಶಿವಲಿಂಗಗಳು ಪತ್ತೆಯಾಗಿವೆ. ಹರ ಹರ ಮಹಾದೇವ! ಸನಾತನ ಸಂಸ್ಕೃತಿ ಬಹುದೊಡ್ಡ ಇತಿಹಾಸ ಹೊಂದಿದೆ ಎಂಬುದಕ್ಕೆ ಪುರಾವೆಗಳು ಸಿಗುತ್ತಲೇ ಇವೆ. ಎದ್ದೇಳಿ ಹಿಂದೂಗಳೇ, ಸನಾತನ ಸಂಸ್ಕೃತಿ ಗುರುತಿಸಿ. ನಾವು ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆಪಡಬೇಕು ಎಂದು ಬರೆಯಲಾಗಿದೆ. 
ವೈರಲ್ ಆಗಿದ್ದ ಚಿತ್ರ.
ಆದರೆ, ಇದು ತಪ್ಪು ಮಾಹಿತಿ. ಚಿತ್ರದಲ್ಲಿ ಸುಳ್ಳು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವ ಸುದ್ದಿ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ವೈರಲ್ ಆಗಿರುವ ಚಿತ್ರ ಶಿವಕಾಶಿ ನದಿಯಲ್ಲಿ ಪತ್ತೆಯಾದ ಶಿವಲಿಂಗಗಳಲ್ಲ, ಬದಲಿಗೆ ಸಹಸ್ರ ಲಿಂಗ ಎಂದು ಪ್ರಸಿದ್ಧಿ ಪಡೆದಿರುವ ಕರ್ನಾಟಕದ ಶಾಲ್ಮಲ ನದಿಯಲ್ಲಿ ಕಂಡುಬಂದ ಶಿವಲಿಂಗಗಳು. ಇಲ್ಲಿ 1000 ಶಿವಲಿಂಗಗಳು ಇದ್ದು, ಇದನ್ನು ಸಹಸ್ರಲಿಂಗ ಎಂದೇ ಕರೆಯಲಾಗುತ್ತದೆ.
ಉತ್ತರ ಕನ್ನಡದ ಜಿಲ್ಲೆಯ ಅಧಿಕೃತ ಜಾಲತಾಣದಲ್ಲಿ ಇದೇ ರೀತಿಯ ಚಿತ್ರಗಳನ್ನು ಹಾಕಲಾಗಿದೆ. ವೆಬ್ಸೈಟ್ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುವ ಶಾಲ್ಮಲ ನದಿಯಲ್ಲಿ ಈ ಸಹಸ್ರಲಿಂಗಗಳು ಇವೆ. ಸಂಸ್ಕೃತ ಪದವಾದ ಸಹಸ್ರಲಿಂಗದ ಅರ್ಥ ಸಾವಿರ ವಿಗ್ರಹಗಳು. ಅದೇ ರೀತಿ ಇಲ್ಲಿ ಸಾವಿರ ಶಿವಲಿಂಗಗಳು ಇರುವುದರಿಂದ ಇದಕ್ಕೆ ಸಹಸ್ರಲಿಂಗ ಎಂದು ಕರೆಯಲಾಗುತ್ತದೆ.

ಗೂಗಲ್ ಮ್ಯಾಪ್ನಲ್ಲಿ ಇರುವ ಸಹಸ್ರಲಿಂಗದ ಮಾಹಿತಿ.
ಇದನ್ನು ಓದಿ: ಅಯೋಧ್ಯೆ ರಾಮಮಂದಿರ ಭೂಮಿ ಪೂಜೆಗೂ ಕೊರೋನಾ ಕರಿನೆರಳು; ಅರ್ಚಕ ಹಾಗೂ 16 ಭದ್ರತಾ ಸಿಬ್ಬಂದಿಗೆ ಸೋಂಕು ದೃಢ
ಸಹಸ್ರಲಿಂಗ ಪರಿಸರಸ್ನೇಹಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿದೆ. ಶಿವರಾತ್ರಿಯಲ್ಲಿ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ಈ ಶಿವಲಿಂಗಗಳ ದರ್ಶನ ಪಡೆಯುತ್ತಾರೆ ಎಂದು ವೆಬ್ಸೈಟ್ನಲ್ಲಿ ಮಾಹಿತಿ ನೀಡಲಾಗಿದೆ. ಅಲ್ಲದೇ ಜಿಲ್ಲಾಡಳಿತದ ಪ್ರಕಾರ, ಈ ಲಿಂಗಗಳನ್ನು 1678 ಮತ್ತು 1718ರಲ್ಲಿ ಕೆತ್ತಲಾಗಿದೆ. ಸಿರಸಿ ರಾಜ ಅರಸಪ್ಪ ನಾಯಕ್ ಆಳ್ವಿಕೆ ಸಮಯದಲ್ಲಿ ಈ ಲಿಂಗಗಳ ಸ್ಥಾಪನೆಯಾಗಿದೆ.
Published by:
HR Ramesh
First published:
July 30, 2020, 5:12 PM IST