ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ನಾನು ಅಮಾಯಕ ಎಂದ ಚಿದಂಬರಂ; ಬಿಜೆಪಿಯಿಂದ ಜಾಮೀನು ಷರತ್ತು ಉಲ್ಲಂಘನೆ ಆರೋಪ

ನಿನ್ನೆ ಪಿ. ಚಿದಂಬರಮ್ ಅವರಿಗೆ ಜಾಮೀನು ನೀಡುವಾಗ, ಐಎನ್​ಎಕ್ಸ್ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡಬಾರದು ಎಂಬ ಷರತ್ತನ್ನು ಸುಪ್ರೀಂ ಕೋರ್ಟ್ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಚಿದಂಬರಮ್ ಅವರು ಆ ಪ್ರಕರಣದಲ್ಲಿ ತಮ್ಮ ವಿರುದ್ಧದ ಆರೋಪಗಳ ಬಗ್ಗೆ ನೇರವಾಗಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

Vijayasarthy SN | news18
Updated:December 5, 2019, 3:20 PM IST
ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ನಾನು ಅಮಾಯಕ ಎಂದ ಚಿದಂಬರಂ; ಬಿಜೆಪಿಯಿಂದ ಜಾಮೀನು ಷರತ್ತು ಉಲ್ಲಂಘನೆ ಆರೋಪ
ಪಿ. ಚಿದಂಬರಮ್
  • News18
  • Last Updated: December 5, 2019, 3:20 PM IST
  • Share this:
ನವದೆಹಲಿ(ಡಿ. 05): ಐಎನ್​ಎಕ್ಸ್ ಮೀಡಿಯಾ ಅವ್ಯವಹಾರ ಪ್ರಕರಣದಲ್ಲಿ ತಾನು ಅಮಾಯಕ ಎಂದು ಮಾಜಿ ಕೇಂದ್ರ ಸಚಿವ ಪಿ. ಚಿದಂಬರಮ್ ಹೇಳಿಕೊಂಡಿದ್ದಾರೆ. ಈ ಪ್ರಕರಣದಲ್ಲಿ 106 ದಿನಗಳ ಬಂಧನದ ಬಳಿಕ ಸುಪ್ರೀಂ ಕೋರ್ಟ್​ನಿಂದ ಜಾಮೀನು ಪಡೆದು ಅವರು ಇವತ್ತು ಹೊರಬಂದಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಅವರು, ನ್ಯಾಯಾಲಯದಿಂದ ಅಂತಿಮವಾಗಿ ತನಗೆ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಒಬ್ಬ ಸಚಿವನಾಗಿ ನಾನು ಮಾಡಿದ  ಕೆಲಸ ಹಾಗೂ ನನ್ನ ಆತ್ಮಸಾಕ್ಷಿ ಬಹಳ ಸ್ಪಷ್ಟವಿದೆ. ನನ್ನೊಂದಿಗೆ ಕೆಲಸ ಮಾಡಿದ ಅಧಿಕಾರಿಗಳು, ನನ್ನೊಂದಿಗೆ ಸಂವಾದ ನಡೆಸಿದ ಉದ್ಯಮ ವ್ಯಕ್ತಿಗಳು ಹಾಗೂ ನನ್ನನ್ನು ಗಮನಿಸಿರುವ ಪತ್ರಕರ್ತರಿಗೆ ಇದು ಚೆನ್ನಾಗಿ ಗೊತ್ತಿರುತ್ತದೆ” ಎಂದು ಮಾಜಿ ಹಣಕಾಸು ಸಚಿವರೂ, ಗೃಹ ಸಚಿವರೂ ಆಗಿರುವ ಪಿ. ಚಿದಂಬರಮ್ ತಿಳಿಸಿದ್ದಾರೆ.

ಇದನ್ನೂ ಓದಿ: ದೇಶದ ಆರ್ಥಿಕತೆಯನ್ನು ದುಸ್ಥಿತಿಗೆ ದೂಡಿದ್ದೊಂದೆ ಬಿಜೆಪಿ ಸಾಧನೆ; ಕೇಂದ್ರದ ವಿರುದ್ಧ ಪಿ. ಚಿದಂಬರಂ ವಾಗ್ದಾಳಿ

ಬಿಜೆಪಿಯಿಂದ ಜಾಮೀನು ಷರತ್ತು ಉಲ್ಲಂಘನೆ ಆರೋಪ

ಇದೇ ವೇಳೆ, ಸುಪ್ರೀಂ ಕೋರ್ಟ್ ಜಾಮೀನು ನೀಡುವಾಗ ವಿಧಿಸಿದ್ದ ಷರತ್ತುಗಳನ್ನು ಪಿ. ಚಿದಂಬರಮ್ ಉಲ್ಲಂಘಿಸಿದ್ದಾರೆ ಎಂದು ಭಾರತೀಯ ಜನತಾ ಪಕ್ಷ ಆರೋಪ ಮಾಡಿದೆ. ಚಿದಂಬರಮ್ ಅವರು ಹಣಕಾಸು ಸಚಿವರಾಗಿ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದ ಆರೋಪ ಇರುವ ಪ್ರಕರಣ ಇದಾಗಿದೆ. ಇಲ್ಲಿ ಚಿದಂಬರಮ್ ಅವರು ಸ್ವಯಂ ಪ್ರಮಾಣಪತ್ರ ಕೊಟ್ಟಿರುವಂತೆ ತೋರುತ್ತಿದೆ. ಈ ಪ್ರಕರಣದ ಬಗ್ಗೆ ಮಾತನಾಡಬೇಡಿ ಎಂದು ಸುಪ್ರೀಂ ಕೋರ್ಟ್ ಷರತ್ತು ವಿಧಿಸಿತ್ತು. ಚಿದಂಬರಂ ಅವರಿಂದ ಈ ಷರತ್ತು ಉಲ್ಲಂಘನೆಯಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ನಿನ್ನೆ ಪಿ. ಚಿದಂಬರಮ್ ಅವರಿಗೆ ಜಾಮೀನು ನೀಡುವಾಗ, ಐಎನ್​ಎಕ್ಸ್ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡಬಾರದು ಎಂಬ ಷರತ್ತನ್ನು ಸುಪ್ರೀಂ ಕೋರ್ಟ್ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಚಿದಂಬರಮ್ ಅವರು ಆ ಪ್ರಕರಣದಲ್ಲಿ ತಮ್ಮ ವಿರುದ್ಧದ ಆರೋಪಗಳ ಬಗ್ಗೆ ನೇರವಾಗಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಇದನ್ನೂ ಓದಿ: ನಾನು ಈರುಳ್ಳಿ ಬೆಳ್ಳುಳ್ಳಿ ತಿನ್ನದ ಕುಟುಂಬದಿಂದ ಬಂದಿದ್ದೇನೆ; ಸಚಿವೆ ನಿರ್ಮಲಾ ಸೀತಾರಾಮನ್ ಜವಾಬಿಗೆ ತಬ್ಬಿಬ್ಬಾದ ಲೋಕಸಭೆ“ನ್ಯಾಯಾಲಯದ ವಿಚಾರಣೆಯಲ್ಲಿರುವ ಪ್ರಕರಣಗಳ ಬಗ್ಗೆ ನಾನೆಂದೂ ಪ್ರತಿಕ್ರಿಯೆ ನೀಡಿಲ್ಲ. ಅದೇ ತತ್ವಕ್ಕೆ ನಾನು ಬದ್ಧನಾಗಿರುತ್ತೇನೆ. ಈ ಪ್ರಕರಣದಲ್ಲಿ ನೀವು ಕೇಳಬಹುದಾದ ಬಹಳಷ್ಟು ಪ್ರಶ್ನೆಗಳಿಗೆ ನಿನ್ನೆ ಸುಪ್ರೀಂ ಕೋರ್ಟ್ ಪ್ರಕಟಿಸಿದ ತೀರ್ಪಿನಲ್ಲಿ ಉತ್ತರಗಳನ್ನು ಪಡೆಯಬಹುದಾಗಿದೆ” ಎಂದು ಚಿದಂಬರಮ್ ಅವರು ಜಾಣತನದಿಂದ ಮಾತನಾಡಿದ್ದಾರೆ.

2007ರಲ್ಲಿ ಚಿದಂಬರಮ್ ಅವರು ಹಣಕಾಸು ಸಚಿವರಾಗಿದ್ಧಾಗ ಐಎನ್​ಎಕ್ಸ್ ಮೀಡಿಯಾ ಗ್ರೂಪ್ ಸಂಸ್ಥೆಗೆ 305 ಕೋಟಿ ರೂ ವಿದೇಶೀ ದೇಣಿಗೆ ಬರಲು ಸಾಧ್ಯವಾಗುವಂತೆ ಎಫ್​ಐಪಿಬಿಯ ಅನುಮೋದನೆ ಕೊಡಲಾಗಿತ್ತು. ಚಿದಂಬರಮ್ ಅವರು ಕಾನೂನುಬಾಹಿರವಾಗಿ ತಮ್ಮ ಪ್ರಭಾವ ಬಳಸಿ ಈ ಅನುಮೋದನೆ ಕೊಡಿಸಿದ್ದರು ಎಂಬುದು ಈಗ ಕೇಳಿಬಂದಿರುವ ಆರೋಪವಾಗಿದೆ. 2017ರಲ್ಲಿ ಸಿಬಿಐನವರು ಐಎನ್​ಎಕ್ಸ್ ಮೀಡಿಯಾ ಪ್ರಕರಣವನ್ನು ದಾಖಲಿಸಿದ್ದರು. ಹಾಗೆಯೇ, ಮುಂದಿನ ದಿನಗಳಲ್ಲಿ ಜಾರಿ ನಿರ್ದೇಶನಾಲಯ ಕೂಡ ಹಣ ಅವ್ಯವಹಾರ ಪ್ರಕರಣವನ್ನು ದಾಖಲಿಸಿತು. ಈ ವರ್ಷದ ಆಗಸ್ಟ್ 21ರಂದು ಸಿಬಿಐ ಅಧಿಕಾರಿಗಳು ದೆಹಲಿಯಲ್ಲಿ ಚಿದಂಬರಮ್ ಅವರನ್ನು ಬಂಧಿಸಿದ್ದರು. ಈಗ 106 ದಿನಗಳ ಕಾಲ ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದ ಅವರಿಗೆ ಸುಪ್ರೀಂ ಕೋರ್ಟ್ ನಿನ್ನೆ ಜಾಮೀನು ನೀಡಿತು. ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಆರ್ಥಿಕ ಕ್ರಮಗಳ ವಿರುದ್ಧ ಕಟುವಾಗಿ ಮಾತನಾಡಿದ್ಧಾರೆ. ದೇಶದಲ್ಲಿರುವ ಭಯಗ್ರಸ್ಥ ವಾತಾವರಣದ ಬಗ್ಗೆಯೂ ಅವರು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:December 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ