ನವದೆಹಲಿ: ಆಸ್ಟ್ರೇಲಿಯಾ (Australia) ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ಸಿಡ್ನಿಯಲ್ಲಿ (Sidney) ಸಮುದಾಯ ಕಾರ್ಯಕ್ರಮದಲ್ಲಿ ಭಾರತೀಯ ವಲಸೆಗಾರರನ್ನು ಉದ್ದೇಶಿಸಿ ಮಾತನಾಡಿದರು. ಪಿಎಂ ಮೋದಿಯವರ ಜೊತೆಗೆ ಆಸ್ಟ್ರೇಲಿಯಾದ ಪಿಎಂ ಆಂಥೋನಿ (Australian PM Anthony) ಅಲ್ಬನೀಸ್ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ 20,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಸಿಡ್ನಿಯ ಕ್ಯುಡೋಸ್ ಬ್ಯಾಂಕ್ ಅರೆನಾದಲ್ಲಿ ನೆರೆದಿದ್ದ ಅತಿದೊಡ್ಡ ಜನಸಂಖ್ಯೆಯಲ್ಲಿ ಒಂದಾಗಿದೆ ಎಂದು ತಿಳಿದುಬಂದಿದೆ. ಈ ಕಾರ್ಯಕ್ರಮವನ್ನು ಇಂಡಿಯನ್ ಆಸ್ಟ್ರೇಲಿಯನ್ ಡಯಾಸ್ಪೊರಾ ಫೌಂಡೇಶನ್ (IADF) ಆಯೋಜಿಸಿತ್ತು.
ಅನಿವಾಸಿ ಭಾರತೀಯರಿಂದ ಸಂಬಂಧ ಸದೃಢ
ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಸಮುದಾಯ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು, ಭಾರತ-ಆಸ್ಟ್ರೇಲಿಯಾ ನಡುವಿನ ರಾಜತಾಂತ್ರಿಕ ಸಂಬಂಧದಿಂದ ಮಾತ್ರ ಪರಸ್ಪರ ನಂಬಿಕೆ ಮತ್ತು ಪರಸ್ಪರ ಗೌರವ ಬೆಳೆದಿಲ್ಲ. ಎರಡು ದೇಶಗಳ ನಡುವಿನ ಸಂಬಂಧ ಗಟ್ಟಿಗೊಳ್ಳಲು ನಿಜವಾದ ಕಾರಣ, ನಿಜವಾದ ಶಕ್ತಿ ಆಸ್ಟ್ರೇಲಿಯಾದಲ್ಲಿ ವಾಸಿಸುವ ಭಾರತೀಯರು ಎಂದು ಮೋದಿ ಹೇಳಿದ್ದಾರೆ.
ಕ್ರಿಕೆಟ್ ದೀರ್ಘಕಾಲ ನಮ್ಮನ್ನು ಒಂದುಗೂಡಿಸಿದೆ
ಎರಡು ದೇಶಗಳ ಜೀವನಶೈಲಿ ವಿಭಿನ್ನವಾಗಿರಬಹುದು, ಆದರೆ ಈಗ ಯೋಗ ಕೂಡ ನಮ್ಮನ್ನು ಸಂಪರ್ಕಿಸುತ್ತದೆ. ಕ್ರಿಕೆಟ್‌ನಿಂದಾಗಿ ನಾವು ದೀರ್ಘಕಾಲ ಸಂಪರ್ಕ ಹೊಂದಿದ್ದೇವೆ. ಆದರೆ ಈಗ ಟೆನಿಸ್ ಮತ್ತು ಚಲನಚಿತ್ರಗಳು ನಮ್ಮನ್ನು ಒಂದುಗೂಡಿಸುತ್ತಿವೆ. ನಾವು ವಿಭಿನ್ನ ರೀತಿಯಲ್ಲಿ ಆಹಾರವನ್ನು ತಯಾರಿಸಬಹುದು ಆದರೆ ಮಾಸ್ಟರ್ಚೆಫ್ ಈಗ ನಮ್ಮನ್ನು ಸಂಪರ್ಕಿಸುತ್ತಿದೆ ಎಂದರು.
ವಾರ್ನ್ ನಿಧನರಾದಾಗ ಭಾರತೀಯರಿಂದ ಶೋಕ
ಕಳೆದ ವರ್ಷ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಶೇನ್ ವಾರ್ನರ್ ನಿಧನರಾದಾಗ ನೂರಾರು ಭಾರತೀಯರು ಕೂಡ ಶೋಕ ವ್ಯಕ್ತಪಡಿಸಿದ್ದರು. ನಮಗೆ ಶೇನ್ ವಾರ್ನ್ ಸಾವು ತುಂಬಾ ಹತ್ತಿರವಾದವರನ್ನು ಕಳೆದುಕೊಂಡಂತೆ ಭಾಸವಾಗಿತ್ತು ಎಂದು ಮೋದಿ ಹೇಳಿದರು. ನಮ್ಮ ಕ್ರಿಕೆಟ್ ಆಧಾರಿತ ಸಂಬಂಧ 75 ವರ್ಷ ಪೂರೈಸಿದೆ. ಮೈದಾನದೊಳಗಿನ ಪಂದ್ಯವು ಎಷ್ಟು ತೀವ್ರವಾಗಿರುತ್ತದೆಯೋ, ನಮ್ಮ ಸಂಬಂಧವು ಮೈದಾನದ ಹೊರಗೆ ಅಷ್ಟೇ ಆಳವಾಗಿದೆ ಎಂದರು.
ಮೊಬೈಲ್ ಉತ್ಪಾದನೆಯಲ್ಲಿ ಭಾರತಕ್ಕೆ 2ನೇ ಸ್ಥಾನ
ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವುದು ನಮ್ಮ ಕನಸು. IMF ಮತ್ತು ವಿಶ್ವ ಬ್ಯಾಂಕ್ ಭಾರತವನ್ನು ಜಾಗತಿಕ ಆರ್ಥಿಕತೆಯಲ್ಲಿ ಉಜ್ವಲ ಸ್ಥಾನವೆಂದು ಪರಿಗಣಿಸಿವೆ. ನಮ್ಮ ದೇಶ ಈಗ ವೇಗವಾಗಿ ಬೆಳೆಯುತ್ತಿರುವ ಆರ್ಥಿಕವಾಗಿದೆ. ಎರಡನೇ ಅತಿ ದೊಡ್ಡ ಮೊಬೈಲ್ ತಯಾರಕ ರಾಷ್ಟ್ರವಾಗಿದೆ. ದೇಶವು ಅತ್ಯಂತ ಬೃಹತ್ ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ಆರಂಭಿಸಿದೆ. ಭಾರತ ಅತಿದೊಡ್ಡ ಸ್ಮಾರ್ಟ್‌ಫೋನ್ ಡೇಟಾ ಗ್ರಾಹಕವಾಗಿದೆ ಎಂದು ಪ್ರಧಾನಿ ಮೋದಿ ಭಾರತೀಯರನ್ನು ಕುರಿತು ಹೇಳಿದರು.
" ಆಸ್ಟ್ರೇಲಿಯನ್ ಪ್ರಧಾನಿ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಲ್ಲೂ ನಮಗಾಗಿ ಸಮಯವನ್ನು ವಿನಿಯೋಗಿಸಿದ್ದಾರೆ . ಇದು ಭಾರತೀಯರ ಮೇಲಿನ ಅವರ ಪ್ರೀತಿಯನ್ನು ತೋರಿಸುತ್ತದೆ. ನನ್ನೊಂದಿಗೆ 'ಲಿಟಲ್ ಇಂಡಿಯಾ' ಅಡಿಪಾಯವನ್ನು ಹಾಕಿದ್ದಕ್ಕಾಗಿ ನಾನು ಆಸ್ಟ್ರೇಲಿಯಾದ PM ಗೆ ಧನ್ಯವಾದ ಹೇಳುತ್ತೇನೆ" ಎಂದು ಪ್ರಧಾನಿ ಮೋದಿ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ