ಲಕ್ನೋ (ಉತ್ತರಪ್ರದೇಶ): ಉತ್ತರಪ್ರದೇಶ ರಾಜ್ಯದಲ್ಲಿ ಹೊಸದಾಗಿ ಜಾರಿಗೆ ತರಲಾಗಿರುವ ಲವ್ ಜಿಹಾದ್ ಕಾನೂನನಡಿಯಲ್ಲಿ ಓರ್ವ ಮುಸ್ಲಿಂ ಹದಿಹರೆಯದ ಬಾಲಕನ ಮೇಲೆ ದೂರು ದಾಖಲಿಸಿ, ಜೈಲಿಗೆ ಕಳುಹಿಸಲಾಗಿದೆ. ರಾಜ್ಯದ ಬಿಜ್ನೋರ್ ಎಂಬಲ್ಲಿ ಮುಸ್ಲಿಂ ಬಾಲಕ ತನ್ನ ಮಾಜಿ ಸಹಪಾಠಿ ಹುಟ್ಟುಹಬ್ಬದ ಕೂಟ ಮುಗಿಸಿಕೊಂಡು ದಲಿತ ಬಾಲಕಿಯೊಂದಿಗೆ ಮನೆಗೆ ನಡೆದುಕೊಂಡು ಹೋಗುವಾಗ ಆತನನ್ನು ಲವ್ ಜಿಹಾದ್ ಪ್ರಕರಣದಡಿ ಬಂಧಿಸಲಾಗಿದೆ.
ಆದರೆ, 16 ವರ್ಷದ ಆ ಬಾಲಕಿ ಲವ್ ಜಿಹಾದ್ ಆರೋಪವನ್ನು ಬಲವಾಗಿ ತಳ್ಳಿ ಹಾಕಿದ್ದಾರೆ. ನಾನು ಇದನ್ನು ಮ್ಯಾಜಿಸ್ಟ್ರೇಟ್ಗೆ ತಿಳಿಸಿದ್ದೇನೆ. ಮತ್ತೊಮ್ಮೆ ಹೇಳುತ್ತಿದ್ದೇನೆ. ನನ್ನ ಸ್ನೇಹಿತನೊಂದಿಗೆ ನಡೆದುಹೋಗುವುದು ಕೆಲವರಿಗೆ ತೊಂದರೆಯಾಗಿದೆ. ಅವರು ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ ಮತ್ತು ಲವ್ ಜಿಹಾದ್ ಎಂದು ಕರೆದಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ನನ್ನ ಇಚ್ಛೆಯಂತೆ ಹೋಗುತ್ತಿದ್ದೆ ಎಂದು ಬಾಲಕಿ ಇಂಡಿಯನ್ ಎಕ್ಸ್ಪ್ರೆಸ್ಗೆ ಹೇಳಿದ್ದಾಳೆ.
ಡಿಸೆಂಬರ್ 15ರಂದು ಬಾಲಕನನ್ನು ಬಂಧಿಸಲಾಗಿದೆ. ಆತನ ಮೇಲೆ ಎಸ್ಸಿ/ಎಸ್ಟಿ ಕಾಯ್ದೆ, ಹಾಗೂ ಪೋಸ್ಕೊ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಬಾಲಕಿ ತಂದೆ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಬಾಲಕಿಯನ್ನು ಉದ್ದೇಶಪೂರ್ವಕವಾಗಿ ಮದುವೆಯಾಗಿ ಆಕೆಯನ್ನು ಧರ್ಮಾಂತರ ಮಾಡುವ ಸಂಚು ರೂಪಿಸಲಾಗಿದೆ ಎಂದು ವರದಿ ಮಾಡಲಾಗಿದೆ.
ಆದರೆ, ಬಾಲಕಿ ತಂದೆ ಕೂಡ ಈ ದೂರನ್ನು ಮತ್ತು ಪೊಲೀಸರು ನೀಡಿರುವ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ. ನಾನು ನನ್ನ ಮಗಳನ್ನು ಸಂಪೂರ್ಣವಾಗಿ ನಂಬುತ್ತೇನೆ. ಆಕೆ ಏನು ತಪ್ಪು ಮಾಡಿದ್ದಾಳೆ. ಹುಡುಗ ಮತ್ತು ಹುಡುಗಿ ಜೊತೆಯಾಗಿ ನಡೆದುಕೊಂಡು ಹೋಗುವುದೇ ಈಗ ಕಾನೂನುಬಾಹಿರವೇ? ಎಂದು ಇಂಡಿಯನ್ ಎಕ್ಸ್ಪ್ರೆಸ್ ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ