ಹಿಂದೂ ಹೆಸರೇಳಿಕೊಂಡು ಬಳೆ ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ: ಸಂಚಲನ ಸೃಷ್ಟಿಸಿದ ವಿಡಿಯೋ

Muslim Bangle Seller Beaten Up: ಹಲ್ಲೆಗೊಳಗಾದ ವ್ಯಕ್ತಿ ವ್ಯಾಪಾರವನ್ನು ನಡೆಸಲು ಹಿಂದೂಗಳ ನಕಲಿ ಹೆಸರನ್ನು ಬಳಸಿದ್ದಾನೆ. ಈ ಬಗ್ಗೆ ಗೊತ್ತಾದ ನಂತರ ಆತನ ಮೇಲೆ ದಾಳಿ ನಡೆಸಲಾಗಿದೆ. ಆತನ ಬಳಿ ಬೇರೆ ಬೇರೆ ಹೆಸರಿನ 2 ಆಧಾರ್ ಕಾರ್ಡ್‌ಗಳಿರುವುದು ಪತ್ತೆಯಾಗಿದೆ.

ಬಳೆ ವ್ಯಾಪಾರಿ ಮೇಲೆ ಹಲ್ಲೆ

ಬಳೆ ವ್ಯಾಪಾರಿ ಮೇಲೆ ಹಲ್ಲೆ

  • Share this:
ಇಂದೋರ್​​: ಬಳೆ ವ್ಯಾಪಾರಿಯನ್ನು ಅಪರಿಚಿತ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿ ಅವಾಚ್ಯವಾಗಿ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಂದೋರ್​​​​​​​​​​​​​​​​​​​​​​​​​​​​​ನ ಬಂಗಂಗಾ ಪ್ರದೇಶದಲ್ಲಿ ನಡೆದ ಘಟನೆ ಇದಾಗಿದೆ. 25 ವರ್ಷ ಬಳೆ ವ್ಯಾಪಾರಿ ಮುಸ್ಲಿಂ ಆಗಿದ್ದು, ಹಿಂದೂ ಹೆಸರು ಹೇಳಿಕೊಂಡು ಬಳೆ ವ್ಯಾಪಾರ ಮಾಡುತ್ತಿದ್ದ ಎಂದು ಆರೋಪಿಸಿ ಹಿಂದೂ ಯುವಕರ ಗುಂಪು ಈತನ ಮೇಲೆ ಅಟ್ಯಾಕ್​​ ಮಾಡಿದೆ. ಇನ್ನು ಬಳೆಗಾರನ ಬಳಿಯಿಂದ 10 ಸಾವಿರ ರೂಪಾಯಿಯನ್ನು ಹಲ್ಲೆ ನಡೆಸಿದ ಗುಂಪು ಕಸಿದುಕೊಂಡಿದೆ. ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜನ ಠಾಣೆಯ ಎದುರು ಜಮಾಯಿಸಿದ ನಂತರ ತಡರಾತ್ರಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ಆಧಾರ್​ ಕಾರ್ಡ್​​ಗಳಿದ್ದವು

ಹಲ್ಲೆ ವಿಡಿಯೋ ಮಧ್ಯಪ್ರದೇಶದಲ್ಲಿ ಸಂಚಲನ ಮೂಡಿಸಿದೆ. ಈ ಬಗ್ಗೆ ರಾಜ್ಯ ಗೃಹಸಚಿವ ನರೋತ್ತಮ್ ಮಿಶ್ರಾ ಪ್ರತಿಕ್ರಿಯಿಸಿದ್ದು, ಹಲ್ಲೆಗೊಳಗಾದ ವ್ಯಕ್ತಿ ವ್ಯಾಪಾರವನ್ನು ನಡೆಸಲು ಹಿಂದೂಗಳ ನಕಲಿ ಹೆಸರನ್ನು ಬಳಸಿದ್ದಾನೆ. ಈ ಬಗ್ಗೆ ಗೊತ್ತಾದ ನಂತರ ಆತನ ಮೇಲೆ ದಾಳಿ ನಡೆಸಲಾಗಿದೆ. ವ್ಯಕ್ತಿ ಹಿಂದೂ ಹೆಸರಿನಲ್ಲಿ ಬಳೆಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಆತನ ಬಳಿ ಬೇರೆ ಬೇರೆ ಹೆಸರಿನ 2 ಆಧಾರ್ ಕಾರ್ಡ್‌ಗಳಿರುವುದು ಪತ್ತೆಯಾಗಿದೆ, ಅದನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದಿದ್ದಾರೆ.

ವಿಡಿಯೋದಲ್ಲಿ ಹಲ್ಲೆಕೋರರ ಅಟ್ಟಹಾಸ

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ಬ್ಯಾಗಿನಿಂದ ಬಳೆಗಳನ್ನು ತೆಗೆಯುತ್ತಿರುವುದು ಕಂಡು ಬಂದಿದೆ. ನಿಮಗೆ ಬೇಕಾದುದನ್ನು ತೆಗೆದುಕೊಳ್ಳಿ ಎಂದು ಅಂಗಾಲಾಚಿಕೊಂಡಿದ್ದಾನೆ. ಆದರೆ ಹಲ್ಲೆಕೋರರು, ಅವನು ಇನ್ಮುಂದೆ ಈ ಏರಿಯಾದಲ್ಲಿ ಕಾಣಬಾರದು ಎಂದು ಹೇಳುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ. ಸಾರ್ವಜನಿಕರು ಮುಂದೆ ಬಂದು ಬಳೆ ಮಾರಾಟಗಾರನನ್ನು ಥಳಿಸುವಂತೆ ಹಲ್ಲೆಕೋರ ಜನರನ್ನು ಪ್ರಚೋದಿಸುತ್ತಿರುವುದನ್ನು ಕಾಣಬಹುದು. ನಂತರ, ಮೂರರಿಂದ ನಾಲ್ಕು ಜನರು ಮುಂದೆ ಬಂದು ಬಳೆಗಾರರನನ್ನು ಥಳಿಸಿದ್ದಾರೆ.

ಬಳೆ ವ್ಯಾಪಾರಿಯ ನೋವು..

ಹಲ್ಲೆಕೋರರು ಮೊದಲು ನನ್ನ ಹೆಸರನ್ನು ಕೇಳಿದರು, ಹೆಸರು ಹೇಳುತ್ತಿದ್ದಂತೆ ನನ್ನನ್ನು ಹೊಡೆಯಲು ಪ್ರಾರಂಭಿಸಿದರು. ನನ್ನ ಬಳಿಯಿದ್ದ 10,000 ರೂ.ಗಳನ್ನು ತೆಗೆದುಕೊಂಡರು. ಬಳೆಗಳು ಮತ್ತು ಇತರ ವಸ್ತುಗಳನ್ನು ಹಾನಿಗೊಳಿಸಿದರು ಎಂದು ಬಳೆ ಮಾರಾಟಗಾರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.

ಪೊಲೀಸರ ಖಡಕ್​ ಎಚ್ಚರಿಕೆ

ಅಪರಿಚಿತ ಹಲ್ಲೆಕೋರರ ವಿರುದ್ಧ ಗಲಭೆ, ಹಲ್ಲೆ, ದರೋಡೆ, ಬೆದರಿಕೆ ಮತ್ತು ಕೋಮು ಸೌಹಾರ್ದತೆಯನ್ನು ಕದಡಲು ಪ್ರಯತ್ನಿಸಿದ ಪ್ರಕರಣವನ್ನು ದಾಖಲಿಸಲಾಗಿದೆ.  ಏತನ್ಮಧ್ಯೆ, ಪೊಲೀಸರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸದಂತೆ ಜನರಿಗೆ ಮನವಿ ಮಾಡಿದ್ದಾರೆ. ಯಾರಾದರೂ ಕೋಮು ಸಾಮರಸ್ಯವನ್ನು ಹರಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.  ಇಂದೋರ್ ಪೂರ್ವ ಪೊಲೀಸ್ ಅಧೀಕ್ಷಕ ಅಶುತೋಷ್ ಬಾಗ್ರಿ ಮಾತನಾಡಿ, ಅವರು ನಗರದಲ್ಲಿ ಸೆಕ್ಷನ್ 144 ಜಾರಿಯಲ್ಲಿದೆ. ಯಾರಾದರೂ ವದಂತಿಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಕೋಮು ಸಾಮರಸ್ಯವನ್ನು ಹರಡಿದರೆ, ಅದು ಶಿಕ್ಷಾರ್ಹ ಅಪರಾಧವಾಗಿದೆ ಮತ್ತು ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: Disrespect to National Flag| ಕಲ್ಯಾಣ್ ಸಿಂಗ್ ಪ್ರಾರ್ಥಸಭೆಯಲ್ಲಿ ಪ್ರಧಾನಿ ಮೋದಿ ಎದುರೇ ಭಾರತ ಧ್ವಜವನ್ನು ಅವಮಾನಿಸಿತೇ ಬಿಜೆಪಿ?

ಕಾನೂನಾತ್ಮಕವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ವಿಡಿಯೋ ಪೊಲೀಸರ ಬಳಿ ಇದ್ದು, ಹಲ್ಲೆ ಮಾಡಿದವರನ್ನು ವಿಡಿಯೋದಲ್ಲಿ ಕಾಣಬಹುದು. ನಾವು FIR ನಲ್ಲಿ ಆ ಜನರನ್ನು ಗುರುತಿಸಿ ಹೆಸರಿಸುತ್ತೇವೆ. ಆದಾಗ್ಯೂ, ಒಂದು ಘಟನೆಯನ್ನು ಒಂದು ಘಟನೆಯಾಗಿ ನೋಡಬೇಕು, ದೊಡ್ಡ ಕಾನೂನು ಮತ್ತು ಸುವ್ಯವಸ್ಥೆಯ ಪ್ರತಿಬಿಂಬವಾಗಿ ನೋಡಬಾರದು. ಈಗ ಪೊಲೀಸರು ಕ್ರಮ ಕೈಗೊಂಡಿದ್ದಾರೆ, ಕೆಲವರು ಒಟ್ಟುಗೂಡಿ ಗದ್ದಲ ಸೃಷ್ಟಿಸುತ್ತಿರುವುದು ತಪ್ಪು ಎಂದು ಬಗ್ರಿ ಮನವಿ ಮಾಡಿಕೊಂಡಿದ್ದಾರೆ.
Published by:Kavya V
First published: