Murder: ಕೊಲೆ ಆರೋಪಿಯನ್ನು ಪೊಲೀಸರೆದುರೇ ಹೊಡೆದು ಕೊಂದ ಗ್ರಾಮಸ್ಥರು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Murder News: ಇಂದು ಮುಂಜಾನೆ ಸುಧೀರ್ ಸಿಂಗ್ ನಿದ್ರೆ ಮಾಡುತ್ತಿದ್ದಾಗ ಮನೆಗೆ ನುಗ್ಗಿದ್ದ ಆರೋಪಿ ಅವರ ಮೇಲೆ ಮೂರು ಬಾರಿ ಗುಂಡು ಹಾರಿಸಿ, ಕೊಲೆ ಮಾಡಿದ್ದ. ಇದನ್ನು ತಿಳಿಯುತ್ತಿದ್ದಂತೆ ಊರಿನವರು ಕೋಪದಿಂದ ಪೊಲೀಸರೆದುರೇ ಆತನನ್ನು ಕೊಲೆ ಮಾಡಿದ್ದಾರೆ.

  • Share this:

ನವದೆಹಲಿ (ಸೆ. 7): ಶಿಕ್ಷಕರೊಬ್ಬರ ಮನೆಗೆ ನುಗ್ಗಿ, ಕೊಲೆ ಮಾಡಿ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಆ ಊರಿನ ಜನರೇ ದೊಣ್ಣೆಯಿಂದ ಹೊಡೆದು, ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಖುಷಿನಗರದಲ್ಲಿ ನಡೆದಿದೆ. ಇಂದು ಬೆಳಗಿನ ಜಾವ ಶಿಕ್ಷಕರ ಮನೆಗೆ ನುಗ್ಗಿದ್ದ ವ್ಯಕ್ತಿ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದ. ನಂತರ ಮನೆಯ ಮೇಲೆ ನಿಂತು ಗಾಳಿಯಲ್ಲಿ ಗುಂಡು ಹಾರಿಸಿದ್ದ. ಅಷ್ಟರಲ್ಲಿ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಬಂದಿದ್ದರು. ಆದರೆ, ಗುಂಡು ಹಾರಿಸಿ, ಪೊಲೀಸರನ್ನೇ ಹೆದರಿಸುತ್ತಿದ್ದ ಕೊಲೆ ಆರೋಪಿಯ ಮೇಲೆ ದಾಳಿ ಮಾಡಿದ ಗ್ರಾಮಸ್ಥರು ಆತನಿಗೆ ಕೋಲು, ಕಲ್ಲುಗಳಿಂದ ಹೊಡೆದು ಹಲ್ಲೆ ನಡೆಸಿದ್ದಾರೆ.


ಈ ವೇಳೆ ಪೊಲೀಸರು ಜನರು ಮತ್ತು ಕೊಲೆ ಆರೋಪಿಯ ನಡುವಿನ ಜಗಳವನ್ನು ನಿಲ್ಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಜನರ ಗುಂಪು ಹಲ್ಲೆ ಮಾಡಿದ್ದರಿಂದ ತೀವ್ರವಾಗಿ ಗಾಯಗೊಂಡ ಆರೋಪಿ ಸಾವನ್ನಪ್ಪಿದ್ದಾನೆ. ಪೊಲೀಸರ ಎದುರೇ ಜನರಿಂದ ಕೊಲ್ಲಲ್ಪಟ್ಟ ಆರೋಪಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಖುಷಿನಗರದ ರಾಂಪು ಬಾಂಗ್ರಾದಲ್ಲಿ ಈ ಘಟನೆ ನಡೆದಿದೆ.


ಇದನ್ನೂ ಓದಿ: Ragini Dwivedi: ಸ್ಯಾಂಡಲ್​ವುಡ್ ಡ್ರಗ್ಸ್​ ಮಾಫಿಯಾ; ನಟಿ ರಾಗಿಣಿ ದ್ವಿವೇದಿ ಮತ್ತೆ 5 ದಿನ ಸಿಸಿಬಿ ವಶಕ್ಕೆ


ಶಿಕ್ಷಕರನ್ನು ಶೂಟ್ ಮಾಡಿ ಕೊಂದ ಬಳಿಕ ಹೊರಗೆ ಬಂದ ಆರೋಪಿ ಪೊಲೀಸರನ್ನು ಕಂಡು ಭಯಭೀತನಾಗಿದ್ದ. ತಾನು ಸಿಕ್ಕಿಹಾಕಿಕೊಂಡೆ ಎಂಬ ಭಯದಲ್ಲಿ ಪೊಲೀಸರಿಗೆ ಶರಣಾಗಲು ಮುಂದಾಗಿದ್ದ. ಪೊಲೀಸರು ಆತನನ್ನು ವಶಕ್ಕೆ ಪಡೆಯುತ್ತಿದ್ದಂತೆ ತಮ್ಮ ಊರಿನ ಶಿಕ್ಷಕರನ್ನು ಕೊಲೆ ಮಾಡಿದ್ದಕ್ಕೆ ಕೋಪಗೊಂಡಿದ್ದ ಊರಿನ ಜನರು ಆತನನ್ನು ಎಳೆದುಕೊಂಡು ಹೋಗಿ, ಥಳಿಸಿ ಕೊಲೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.


ಕೊಲೆಯಾದ ಶಿಕ್ಷಕರನ್ನು ಸುಧೀರ್ ಸಿಂಗ್ ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ ಸುಧೀರ್ ಸಿಂಗ್ ನಿದ್ರೆ ಮಾಡುತ್ತಿದ್ದಾಗ ಮನೆಗೆ ನುಗ್ಗಿದ್ದ ಆರೋಪಿ ಅವರ ಮೇಲೆ ಮೂರು ಬಾರಿ ಗುಂಡು ಹಾರಿಸಿ, ಕೊಲೆ ಮಾಡಿದ್ದ. ಇದನ್ನು ತಿಳಿಯುತ್ತಿದ್ದಂತೆ ಊರಿನವರು ಕೋಪದಿಂದ ಸ್ಥಳಕ್ಕೆ ಆಗಮಿಸಿದ್ದರು. ಪೊಲೀಸರ ಕೈಗೆ ಆತನನ್ನು ಒಪ್ಪಿಸಿದರೆ ಜಾಮೀನಿನ ಮೇಲೆ ಹೊರಗೆ ಬರುತ್ತಾನೆ ಎಂದು ಅವರೇ ಆತನನ್ನು ಕೊಲೆ ಮಾಡಿದ್ದಾರೆ. ಕಾನೂನನ್ನು ಕೈಗೆ ತೆಗೆದುಕೊಂಡ ತಪ್ಪಿತಸ್ಥರು ಯಾರೆಂದು ಪತ್ತೆಹಚ್ಚಿ, ಅವರಿಗೆ ಶಿಕ್ಷೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Published by:Sushma Chakre
First published: