ಹೆಂಡತಿ ಒಡವೆ ಮಾರಿ ಕೋವಿಡ್ ರೋಗಿಗಳಿಗೆ ಉಚಿತವಾಗಿ ಆಕ್ಸಿಜನ್ ಸಿಲಿಂಡರ್​ ನೀಡಿದ ಮುಂಬೈನ ವ್ಯಕ್ತಿ

ಪತ್ನಿಯೇ ಒತ್ತಾಯ ಮಾಡಿ ತನ್ನ ಆಭರಣವನ್ನು ಮಾರುವಂತೆ ಪತಿಗೆ ಕೇಳಿಕೊಂಡರು. ಇದರಂತೆ ಪತಿ ತನ್ನ ಪತ್ನಿಯ ಒಡವೆಗಳನ್ನು ಮಾರಿ 80,000 ರೂ. ಗಳನ್ನು ಸಂಗ್ರಹಿಸಿ ಉಚಿತ ಸಿಲಿಂಡರ್ ನೀಡುವ ಮಹತ್ಕಾರ್ಯವನ್ನು ಪ್ರಾರಂಭಿಸಿದ್ದಾರೆ.

ಪ್ಯಾಸ್ಕಲ್ ಸಲ್ಧಾನಾ

ಪ್ಯಾಸ್ಕಲ್ ಸಲ್ಧಾನಾ

 • Share this:
  ಮುಂಬೈ(ಮೇ 01): ದೇಶದಲ್ಲಿ ಕೊರೊನಾ ವೈರಸ್‌ ಎರಡನೇ ಅಲೆಯ ಅಬ್ಬರ ಹೆಚ್ಚಾಗುತ್ತಲೇ ಇದ್ದು, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಕುಟುಂಬಗಳು ಎದುರಿಸಲಾಗದ ದುಃಖವು ಹೃದಯ ಕಲಕುವಂತಿದೆ. ದಿನೇ ದಿನೇ ಸಾವಿರಾರು ಜನರು ಮಹಾಮಾರಿಗೆ ಬಲಿಯಾಗುತ್ತಲೇ ಇದ್ದು, ಭಾರತದಲ್ಲೇ ಎರಡು ಲಕ್ಷಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ ಎಂದು ಕೇಂದ್ರ ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. ಆದರೂ, ಈ ಯಾತನಾಮಯ ಸಮಯದ ನಡುವೆ ಮಾನವೀಯತೆಯು ಚೇತರಿಸಿಕೊಳ್ಳುತ್ತದೆ ಎಂಬ ಭರವಸೆ ಹೆಚ್ಚಿಸುವ ಹಲವು ಉದಾಹರಣೆಗಳು ನಮ್ಮ ನಡುವೆ ಕಂಡುಬರುತ್ತಿವೆ. ಇದೇ ರೀತಿ ದುರಂತದ ಸಂದರ್ಭದಲ್ಲಿ ಮಾನವೀಯತೆ ಮೆರೆಯುತ್ತಿದ್ದಾರೆ ಮಹಾರಾಷ್ಟ್ರ ರಾಜಧಾನಿ ಮುಂಬೈನ ಪ್ಯಾಸ್ಕಲ್ ಸಲ್ಧಾನಾ.

  ವೃತ್ತಿಯಲ್ಲಿ ಮಂಟಪ ಅಲಂಕಾರಿಯಾಗಿದ್ದಾರೆ ಪ್ಯಾಸ್ಕಲ್. ಇನ್ನು, ಅವರ ಪತ್ನಿಯ ಎರಡೂ ಮೂತ್ರಪಿಂಡಗಳು ವಿಫಲವಾದ ಕಾರಣ ಕಡ್ಡಾಯ ಡಯಾಲಿಸಿಸ್ ಪ್ರಕ್ರಿಯೆಗೆ ಒಳಗಾಗುತ್ತಾರೆ. ಮಹಾ ನಗರದಲ್ಲಿ ಜನರನ್ನು ಕೊಲ್ಲುತ್ತಿರುವ ಸಾಂಕ್ರಾಮಿಕ ರೋಗವನ್ನು ನೋಡಿದ ಪ್ಯಾಸ್ಕಲ್ ಅವರ ಪತ್ನಿ ರೂಪಾಂತರಿತ ಕೊರೊನಾ ವೈರಸ್‌ನ ತೀವ್ರ ಲಕ್ಷಣಗಳನ್ನು ಅನುಭವಿಸುತ್ತಿರುವ ಜನರಿಗೆ ಉಚಿತವಾಗಿ ಆಮ್ಲಜನಕವನ್ನು ಪೂರೈಸುವಂತೆ ಪತಿಗೆ ವಿನಂತಿಸಿಕೊಂಡಿದ್ದರು.

  ಈ ಸಂಬಂಧ ಸುದ್ದಿ ಸಂಸ್ಥೆ ಎಎನ್‌ಐಯೊಂದಿಗೆ ಮಾತನಾಡಿದ ಪ್ಯಾಸ್ಕಲ್, ಏಪ್ರಿಲ್ 18 ರಿಂದ ಉಚಿತ ಆಕ್ಸಿಜನ್ ಸಿಲಿಂಡರ್‌ಗಳನ್ನು ವಿತರಿಸುತ್ತಿದ್ದೇನೆ ಎಂದು ಹೇಳಿದರು. ಭೀಕರ ಪರಿಸ್ಥಿತಿಯನ್ನು ಪರಿಗಣಿಸಿ ಅವರ ಸೇವೆಗಳು ಉಚಿತವಾಗಿದ್ದರೂ, ಇತರರಿಗೆ ಸಹಾಯ ಮಾಡಲು ಹಣವನ್ನು ನೀಡುವ ಕೆಲವು ಜನರಿದ್ದಾರೆ ಎಂದೂ ತಿಳಿಸಿದರು. ಪ್ಯಾಸ್ಕಲ್ ಅವರ ಪತ್ನಿ ಈಗ ಐದು ವರ್ಷಗಳಿಂದ ಡಯಾಲಿಸಿಸ್ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಮತ್ತು ಆಗಾಗ್ಗೆ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಾರೆ ಎಂದು ಎಎನ್‌ಐ ವರದಿ ಮಾಡಿದೆ.

  R Madhavan: ಪತ್ನಿಯ ಮುಂದೆ ನನ್ನ ಜೀವನ ಅಪೂರ್ಣ ಎನಿಸುತ್ತಿದೆ: ನಟ ಮಾಧವನ್

  ಪ್ರಸ್ತುತ ಪ್ಯಾಸ್ಕಲ್ ಅವರ ಪತ್ನಿಗೆ ಡಯಾಲಿಸಿಸ್‌ ಜತೆಗೆ ಆಕ್ಸಿಜನ್‌ ಸಪೋರ್ಟ್ ಸಹ ಅಗತ್ಯವಿರುವುದರಿಂದ ದಂಪತಿಯ ಬಳಿ ಯಾವಾಗಲೂ ಸ್ಪೇರ್‌ ಸಿಲಿಂಡರ್‌ ಇಟ್ಟುಕೊಂಡಿರುತ್ತಾರೆ. ಮುಂಬೈನಲ್ಲಿ ಕೊರೊನಾ ವೈರಸ್‌ ಹಾವಳಿ ಹೆಚ್ಚಾಗಿರುವುದರಿಂದ ಆಮ್ಲಜನಕ ಸಿಲಿಂಡರ್‌ಗಳ ಅಗತ್ಯದ ಕುರಿತು ಎಸ್‌ಒಎಸ್ ಸಂದೇಶಗಳು ಹೆಚ್ಚಾಗುತ್ತಿದ್ದಂತೆ, ಪ್ಯಾಸ್ಕಲ್‌ಗೆ ಒಂದು ದಿನ ಶಾಲೆಯ ಪ್ರಾಂಶುಪಾಲರಿಂದ ಕರೆ ಬಂತು. ಆಕೆ ತನ್ನ ಪತಿಗೆ ಆಮ್ಲಜನಕವನ್ನು ಕೋರಿದರು.

  ಈ ವೇಳೆ ತನ್ನ ಹೆಂಡತಿಯ ಕೋರಿಕೆಯ ಮೇರೆಗೆ, ಪ್ಯಾಸ್ಕಲ್ ಅವರ ಬಳಿಯಿದ್ದ ಆ ಸ್ಪೇರ್‌ ಸಿಲಿಂಡರ್‌ ಅನ್ನೇ ತುರ್ತಾಗಿ ಅಗತ್ಯವಿರುವ ಮಹಿಳೆಗೆ ನೀಡಿದರು. ನಂತರ ಆಮ್ಲಜನಕ ಸಿಲಿಂಡರ್‌ಗಳು ಮತ್ತು ಕ್ಯಾನ್‌ಗಳ ಹೆಚ್ಚಿನ ಬೇಡಿಕೆಯನ್ನು ಪರಿಗಣಿಸಿ, ಪ್ಯಾಸ್ಕಲ್ ಅವರ ಪತ್ನಿ ಹೆಚ್ಚಿನ ಜನರಿಗೆ ಈ ಸೇವೆ ನೀಡುವಂತೆ ಒತ್ತಾಯಿಸಿದರು. ಆದರೆ, ಉಚಿತ ಆಮ್ಲಜನಕ ಸಿಲಿಂಡರ್‌ಗಳನ್ನು ವಿತರಿಸುವ ವ್ಯವಹಾರವನ್ನು ಪ್ರಾರಂಭಿಸಲು ಸಾಕಷ್ಟು ಬಂಡವಾಳದ ಅಗತ್ಯವಿತ್ತು. ಅದಕ್ಕೆ ಪತ್ನಿಯೇ ಒತ್ತಾಯ ಮಾಡಿ ತನ್ನ ಆಭರಣವನ್ನು ಮಾರುವಂತೆ ಪತಿಗೆ ಕೇಳಿಕೊಂಡರು. ಇದರಂತೆ ಪತಿ ತನ್ನ ಪತ್ನಿಯ ಒಡವೆಗಳನ್ನು ಮಾರಿ 80,000 ರೂ. ಗಳನ್ನು ಸಂಗ್ರಹಿಸಿ ಉಚಿತ ಸಿಲಿಂಡರ್ ನೀಡುವ ಮಹತ್ಕಾರ್ಯವನ್ನು ಪ್ರಾರಂಭಿಸಿದ್ದಾರೆ.

  ಎನ್‌ಜಿಒಗಳು, ಉದ್ಯಮಿಗಳು ಮತ್ತು ಸೋನು ಸೂದ್‌ರಂತಹ ನಟರು ಔಷಧಗಳು, ಆಕ್ಸಿಜನ್ ಸಿಲಿಂಡರ್‌ಗಳಂತಹ ಅಗತ್ಯ ಉಪಕರಣಗಳನ್ನು ಪಡೆಯಲು ಸಾಕಷ್ಟು ಸಂಪನ್ಮೂಲಗಳಿಲ್ಲದ ಕೊರೊನಾವೈರಸ್‌ನ ರೋಗಿಗಳಿಗೆ ಸಹಾಯ ಮಾಡಲು ಹೆಜ್ಜೆ ಇಟ್ಟಿದ್ದಾರೆ. ಆದರೂ, ಪ್ಯಾಸ್ಕಲ್‌ ಅವರಂತಹ ಜನರ ಕಥೆಗಳು ನಿಜವಾಗಿಯೂ ಜನರಿಗೆ ಸಹಾಯ ಮಾಡಲು ಪ್ರಭಾವಶಾಲಿ ಅಥವಾ ಶ್ರೀಮಂತರಾಗಿರಬೇಕಾಗಿಲ್ಲ ಎಂದು ತೋರಿಸುತ್ತದೆ.
  Published by:Latha CG
  First published: