ಮುಂಬೈ(ಜೂ.10): ಮುಂಬೈನ ಮಲಾಡ್ನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ ದುರಂತದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ನಿನ್ನೆ ಸುಮಾರು 9 ಮಂದಿ ಸಾವನ್ನಪ್ಪಿದ್ದರು. ಇಂದು ಸಾವಿನ ಸಂಖ್ಯೆ 11ಕ್ಕೆಏರಿದೆ. ಈ ಘಟನೆ ಮುಂಬೈನ ಪಶ್ಚಿಮ ಮಲಾಡ್ನ ಮಲ್ವಾನಿ ಪ್ರದೇಶದಲ್ಲಿ ತಡರಾತ್ರಿ ನಡೆದಿದೆ. 7 ಮಕ್ಕಳು ಸೇರಿದಂತೆ 11 ಜನ ಮೃತಪಟ್ಟಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಬುಧವಾರ ರಾತ್ರಿ ಸುಮಾರು 11.10ರಲ್ಲಿ ಈ ಘಟನೆ ನಡೆದಿದೆ. ದುರಂತದಲ್ಲಿ 11 ಮಂದಿ ಮೃತಪಟ್ಟರೆ, ಇನ್ನು 8 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬಿಡಿಬಿಎ ಮುನ್ಸಿಪಲ್ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಲ್ಲಿ ಒಟ್ಟು 17 ಮಂದಿ ಗಾಯಗೊಂಡಿದ್ದಾರೆ, ಅವರಲ್ಲಿ 8 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.ಕಟ್ಟಡ ಕುಸಿದಾಗ ಮಕ್ಕಳು ಸೇರಿದಂತೆ ಹಲವಾರು ಜನರು ಬಿಲ್ಡಿಂಗ್ನ ಒಳಗಿದ್ದರು. ದುರಂತ ಸಂಭವಿಸಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಸ್ಥಳೀಯ ಪೊಲೀಸರು ಹಾಗೂ ಜನರ ಸಹಾಯದೊಂದಿಗೆ ಅವಶೇಷಗಳಡಿ ಸಿಲುಕಿದ್ದ ಸುಮಾರು 15 ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ನವಜಾತ ಆಲ್ಪಾಕಾಗಳು ಹೇಗೆ ಕಾಣುತ್ತವೆ ಗೊತ್ತೇ? ನೆಟ್ಟಿಗರ ತಲೆ ಕೆಡಿಸುತ್ತಿದೆ ಈ ವೈರಲ್ ಫೋಟೋ..
ಈಗ ಕುಸಿದಿರುವ ಕಟ್ಟಡದ ಪಕ್ಕದಲ್ಲಿದ್ದ ಇನ್ನೂ ಮೂರು ಬಿಲ್ಡಿಂಗ್ಗಳು ಅಪಾಯದ ಸ್ಥಿತಿಯಲ್ಲಿದ್ದು, ಅಲ್ಲಿರುವ ಜನರನ್ನು ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಬಿಎಂಸಿ ಹೇಳಿದೆ.
ಅತಿಯಾದ ಮಳೆಯಿಂದಾಗಿ ಕಟ್ಟಡ ಕುಸಿದಿದೆ ಎಂದು ಮಹಾರಾಷ್ಟ್ರ ಸಚಿವ ಅಸ್ಲಾಂ ಶೇಖ್ ಹೇಳಿದ್ದಾರೆ.
ಬುಧವಾರ ಮುಂಬೈನಲ್ಲಿ ಅಧಿಕ ಮಳೆಯಾಗಿತ್ತು. ಹಲವು ಪ್ರದೇಶಗಳು ಜಲಾವೃತವಾಗಿದ್ದವು. ರಸ್ತೆಗಳು ಹಾಗೂ ರೈಲ್ವೆ ಹಳಿಗಳು ನೀರಿನಿಂದ ಆವೃತವಾಗಿದ್ದವು. ಮುಂಬೈನಲ್ಲಿ ಇನ್ನೂ 4 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ