Akhundzada- ಅಫ್ಘಾನಿಸ್ತಾನದ ಹೊಸ ತಾಲಿಬಾನ್ ಸರ್ಕಾರಕ್ಕೆ ಮುಲ್ಲಾ ಅಖುಂದ್​ಝಾದ ಮುಖ್ಯಸ್ಥ?

ಈ ವಾರದಲ್ಲಿ ಅಫ್ಘಾನಿಸ್ತಾನದಲ್ಲಿ ಹೊಸ ತಾಲಿಬಾನ್ ಸರ್ಕಾರ ರಚನೆಯಾಗಲಿದ್ದು ಪ್ರಧಾನಿ ಅಥವಾ ಅಧ್ಯಕ್ಷ ಹುದ್ದೆ ಸೃಷ್ಟಿಯಾಗಲಿದೆ. ಆದರೆ ಎಲ್ಲರಿಗಿಂತ ಸರ್ವೋಚ್ಚ ಅಧಿಕಾರ ಇರುವ ಹುದ್ದೆಯನ್ನ ಅಖುಂದ್​ಜಾದಗೆ ವಹಿಸುವ ಸಾಧ್ಯತೆ ಇದೆ.

ಮುಲ್ಲಾ ಹಿಬಾತುಲ್ಲಾ ಅಖುಂದ್​ಜಾದ

ಮುಲ್ಲಾ ಹಿಬಾತುಲ್ಲಾ ಅಖುಂದ್​ಜಾದ

 • Share this:
  ಕಾಬೂಲ್, ಸೆ. 02: ಅಫ್ಘಾನಿಸ್ತಾನದಲ್ಲಿ ರಚನೆಯಾಗಲಿರುವ ಹೊಸ ತಾಲಿಬಾನ್ ಸರ್ಕಾರಕ್ಕೆ ಮುಲ್ಲಾ ಹಿಬಾತುಲ್ಲಾ ಅಖುಂದ್​ಜಾದಾ ಅವರು ಸರ್ವೋಚ್ಚ ನಾಯಕರಾಗಲಿದ್ದಾರೆ ಎಂದು ತಾಲಿಬಾನ್ ಸಂಘಟನೆ ಘೋಷಿಸಿದೆ. ಅಖುಂದ್​ಜಾದಾ ಅವರ ಮಾರ್ಗದರ್ಶನದಲ್ಲಿ ಪ್ರಧಾನಮಂತ್ರಿ ಅಥವಾ ಅಧ್ಯಕ್ಷರು ಸರ್ಕಾರವನ್ನು ಮುನ್ನಡೆಸಲಿದ್ದಾರೆ ಎಂದು ಟೋಲೋ ನ್ಯೂಸ್ ವಾಹಿನಿ ವರದಿ ಮಾಡಿದೆ. ಈ ವಿಚಾರದಲ್ಲಿ ತಾಲಿಬಾನ್ ಸಂಘಟನೆಯ ಕೆಲ ಮುಖಂಡರು ವಿವಿಧ ಮಾಧ್ಯಮಗಳಲ್ಲಿ ಮಾಹಿತಿ ನೀಡಿರುವುದು ತಿಳಿದುಬಂದಿದೆ. ಇನ್ನೆರಡು ದಿನಗಳಲ್ಲಿ ತಾಲಿಬಾನ್​ನ ಹೊಸ ಸರ್ಕಾರ ರಚನೆಯಾಗಲಿದೆಯಂತೆ. ನ್ಯೂಸ್18 ವಾಹಿನಿ ಕೂಡ ತನ್ನ ಮೂಲಗಳನ್ನ ಮೂಲಕ ಪಡೆದ ಮಾಹಿತಿ ಪ್ರಕಾರ ಇರಾನ್ ಮಾದರಿಯಲ್ಲಿ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ಮಾಡಲು ತಾಲಿಬಾನ್ ಸಿದ್ಧತೆ ನಡೆಸಿದೆ. ಪ್ರಧಾನಿ ಅಥವಾ ಅಧ್ಯಕ್ಷರಿಗಿಂತಲೂ ಮೇಲೆ ಧಾರ್ಮಿಕ ಮುಖಂಡನನ್ನು ಕೂರಿಸಲಾಗುತ್ತದೆ. ಈ ವ್ಯಕ್ತಿಗೆ ಸರ್ವೋಚ್ಚ ಅಧಿಕಾರ ಇರಲಿದೆ. ಇರಾನ್​ನಲ್ಲೂ ಆಯತೊಲ್ಲಾ ಖೊಮೇನಿ ಅವರು ಇದೇ ರೀತಿ ಸುಪ್ರೀಂ ಲೀಡರ್ ಆಗಿದ್ದರು. ಇಪ್ಪತ್ತು ವರ್ಷಗಳ ಹಿಂದೆಯೂ ತಾಲಿಬಾನ್ ಅಧಿಕಾರದಲ್ಲಿದ್ಧಾಗ ಮುಲ್ಲಾ ಒಮರ್ ಅವರು ಸುಪ್ರೀಂ ಲೀಡರ್ ಆಗಿದ್ದರು. ಆದರೆ ಅವರೆಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಈಗ ಸರ್ವೋಚ್ಚ ನಾಯಕನನ್ನು ತಾಲಿಬಾನ್ ಸರ್ಕಾರದಲ್ಲಿ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ.

  ಕುತೂಹಲವೆಂದರೆ ತಾಲಿಬಾನ್ ಸಂಘಟನೆಯ ಮುಖ್ಯಸ್ಥ ಮುಲ್ಲಾ ಹಿಬಾತುಲ್ಲಾ ಅಖುಂದ್​ಜಾದಾ ಅವರು ಈವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ತೀರಾ ವಿರಳ. ಅವರು ಎಲ್ಲಿದ್ದಾರೆ ಎಂಬುದೇ ಇನ್ನೂ ನಿಗೂಢವಾಗಿದೆ. ಸರ್ಕಾರ ರಚನೆಯಾದರೆ ಅವರು ಸರ್ವೋಚ್ಚ ನಾಯಕರಾಗಿ ಕಾಬೂಲ್ ಬದಲು ಕಂದಹಾರ್ ನಗರದಿಂದಲೇ ಕಾರ್ಯನಿರ್ವಹಿಸುವ ಸಾದ್ಯತೆ ಇದೆ. ಆದರೆ, ಅಖುಂದ್​ಜಾದಾ ಅವರೇ ಸುಪ್ರೀಂ ಲೀಡರ್ ಆಗಲಿದ್ದಾರೆ ಎಂದು ತಾಲಿಬಾನ್​ನವರು ಬಹಿರಂಗವಾಗಿ ಎಲ್ಲಿಯೂ ಹೇಳಿಲ್ಲವಾದರೂ ಅವರು ಸರ್ಕಾರದ ಭಾಗವಾಗಿ ಇರಲಿದ್ದಾರೆ ಎಂಬುದನ್ನಂತೂ ಸ್ಪಷ್ಟಪಡಿಸಿದ್ದಾರೆ.

  “ಹೊಸ ಸರ್ಕಾರಕ್ಕೆ ನಡೆದಿರುವ ಸಮಾಲೋಚನೆಗಳು ಬಹುತೇಕ ಅಂತಿಮಗೊಂಡಿವೆ. ಸಂಪುಟ ರಚನೆ ಬಗ್ಗೆಯೂ ಅಗತ್ಯ ಚರ್ಚೆಗಳು ನಡೆದಿವೆ. ನಾವು ಘೋಷಿಸಲಿರುವ ಇಸ್ಲಾಮಿಕ್ ಸರ್ಕಾರವು ಜನರಿಗೆ ಆದರ್ಶಪ್ರಾಯವಾಗಿರಲಿದೆ. ಸರ್ಕಾರದಲ್ಲಿ ಪೂಜ್ಯ ಕಮಾಂಡರ್ (ಅಖುಂದ್​ಜಾದಾ) ಅವರ ಪಾತ್ರವೂ ಇರುವುದರಲ್ಲಿ ಸಂಶಯ ಬೇಡ. ಈ ಸರ್ಕಾರದಲ್ಲಿ ಅವರು ನಾಯಕರಾಗಲಿದ್ದಾರೆ” ಎಂದು ತಾಲಿಬಾನ್​ನ ಸಾಂಸ್ಕೃತಿ ಸಮಿತಿ ಅದಸ್ಯ ಅನಾಮುಲ್ಲಾ ಸಮಂಗನಿ ಅವರು ಹೇಳಿರುವುದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.

  ಇದನ್ನೂ ಓದಿ: Syed Geelani- ಗಿಲಾನಿ ಅಂತ್ಯಕ್ರಿಯೆ; ಕಾಶ್ಮೀರದಲ್ಲಿ ಇಂಟರ್ನೆಟ್ ಸ್ಥಗಿತ; ಜನಸಂದಣಿಯಾಗದಂತೆ ನಿರ್ಬಂಧ

  ಹೊಸ ತಾಲಿಬಾನ್ ಸರ್ಕಾರದಲ್ಲಿ ಪ್ರಧಾನಮಂತ್ರಿ ಹುದ್ದೆ ಕೂಡ ಇರಲಿದೆ ಎನ್ನಲಾಗಿದೆ. ತಾಲಿಬಾನ್ ಈಗಾಗಲೇ ವಿವಿಧ ಪ್ರಾಂತ್ಯ ಮತ್ತು ಜಿಲ್ಲೆಗಳಿಗೆ ಗವರ್ನರ್, ಪೊಲೀಸ್ ಮುಖ್ಯಸ್ಥರನ್ನ ನೇಮಕ ಮಾಡಿ ಆಡಳಿತ ಶುರುವಿಟ್ಟುಕೊಂಡಿದೆ. “ಪ್ರತಿಯೊಂದು ಪ್ರಾಂತ್ಯದಲ್ಲೂ ಇಸ್ಲಾಮಿಕ್ ಎಮಿರೇಟ್ ಸರ್ಕಾರ ಸಕ್ರಿಯವಾಗಿದೆ. ಒಂದೊಂದು ಪ್ರಾಂತ್ಯದಲ್ಲೂ ರಾಜ್ಯಪಾಲರು ಕಾರ್ಯನಿರ್ವಹಿಸಲು ಆರಂಭಿಸಿದ್ದಾರೆ. ಪ್ರತಿಯೊಂದು ಜಿಲ್ಲೆಗೂ ಪ್ರತ್ಯೇಕ ಗವರ್ನರ್ ಇರಲಿದ್ದಾರೆ. ಪ್ರತಿಯೊಂದು ಪ್ರಾಂತ್ಯಕ್ಕೂ ಪೊಲೀಸ್ ಮುಖ್ಯಸ್ಥ ಇರಲಿದ್ಧಾರೆ” ಎಂದು ತಾಲಿಬಾನ್ ಸಂಘಟನೆಯ ಮುಖಂಡ ಅಬ್ದುಲ್ ಹನನ್ ಹಕ್ಕಾನಿ ಹೇಳಿದ್ಧಾರೆ.

  ತಾಲಿಬಾನ್ ಕಳೆದ ನಾಲ್ಕು ದಿನಗಳಿಂದ ಕಂದಹಾರ್ ನಗರದಲ್ಲೇ ಕೂತು ಹೊಸ ಸರ್ಕಾರದ ರೂಪುರೇಖೆಗಳನ್ನ ರಚಿಸುತ್ತಿದ್ದಾರೆ. ಎಲ್ಲರನ್ನೂ ಒಳಗೊಂಡ ವಿಸ್ತೃತ ನೆಲೆಗಟ್ಟಿನಲ್ಲಿ ಸರ್ಕಾರ ರಚಿಸುವ ಗುರಿ ತಾಲಿಬಾನ್​ಗೆ ಇದೆ ಎನ್ನಲಾಗುತ್ತಿದೆ. ಈ  ಹಿಂದಿನ ಸರ್ಕಾರಗಳಿಗೆ ಹಾಗೂ ಅಮೆರಿಕನ್ ಸೈನಿಕರಿಗೆ ನೆರವಾದ ಸ್ಥಳೀಯ ಅಫ್ಘನ್ನರ ಮೇಲೆ ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ. ಸರ್ಕಾರಿ ಸೇವೆಯಲ್ಲಿದ್ದವರನ್ನ ಟಾರ್ಗೆಟ್ ಮಾಡುವುದಿಲ್ಲ. ಎಲ್ಲಾ ಪಂಗಡಗಳ ಮುಖಂಡರು ಸರ್ಕಾರದ ಭಾಗವಾಗಬೇಕು ಎಂಬಿತ್ಯಾದಿ ವಿಚಾರಗಳನ್ನ ತಾಲಿಬಾನ್ ಈ ಮುಂಚೆಯೇ ಪ್ರಸ್ತಾಪ ಮಾಡಿದೆ. ಮಾಜಿ ಅಫ್ಘನ್ ಅಧ್ಯಕ್ಷ ಘನಿ ಅವರೂ ತಾಲಿಬಾನ್ ಸರ್ಕಾರದ ಭಾಗವಾಗಬಹುದು ಎಂಬ ಸುದ್ದಿ ಇದೆ. ಆದರೆ, ಈ ವಾರದಲ್ಲಿ ತಾಲಿಬಾನ್ ಸರ್ಕಾರ ಅಧಿಕೃತವಾಗಿ ಘೋಷಣೆಯಾಗುವವರೆಗೂ ಸ್ಪಷ್ಟವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ.
  Published by:Vijayasarthy SN
  First published: