Mulayam Singh Yadav Profile: ಸಿಎಂ ಆದ ಕುಸ್ತಿಪಟು! ಮುಲಾಯಂ ಸಿಂಗ್ ಯಾದವ್ ರಾಜಕೀಯ ಜೀವನ ಹೀಗಿತ್ತು

ಮುಲಾಯಂ ಸಿಂಗ್ ಯಾದವ್

ಮುಲಾಯಂ ಸಿಂಗ್ ಯಾದವ್

ಅಯೋಧ್ಯೆಯ ಭೂ ವಿವಾದದ ದೇಶ ಕಂಡ ಅತ್ಯಂತ ದೊಡ್ಡ ವಿವಾದ. ಬಹಳ ಸುದೀರ್ಘವಾದ ಈ ಕಾನೂನು ಹೋರಾಟ ಮುಲಾಯಂ ಅವರ ರಾಜಕೀಯ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿತು. 1992 ರಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಲಾಯಿತು.

  • Share this:

ಸಮಾಜವಾದಿ ಪಕ್ಷದ ಸಂಸ್ಥಾಪಕ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ (Mulayam Singh Yadav Passed Away) ವಿಧಿವಶರಾಗಿದ್ದಾರೆ. ಹಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮುಲಾಯಂ ಸಿಂಗ್ ಯಾದವ್ (82) ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಗುರುಗ್ರಾಮದಲ್ಲಿರುವ ಮೇದಾಂತ ಆಸ್ಪತ್ರೆಯಲ್ಲಿ ಮುಲಾಯಂ ಸಿಂಗ್ ಯಾದವ್ ಚಿಕಿತ್ಸೆ (Mulayam Singh Yadav Death) ಪಡೆಯುತ್ತಿದ್ದರು. ಮುಲಾಯಂ ಅವರು ಆಗಸ್ಟ್‌ನಿಂದ ಮೂತ್ರಪಿಂಡದ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ಅಕ್ಟೋಬರ್ 2 ರಂದು ಐಸಿಯುಗೆ ಶಿಫ್ಟ್‌ ಮಾಡಲಾಗಿತ್ತು.  ಹಲವು ವಿವಾದ, ಮೈಲಿಗಲ್ಲು, ಅಯೋಧ್ಯೆ ಪ್ರಕರಣ, ಪಕ್ಷ ಸ್ಥಾಪನೆ ಹೀಗೆ ಹಲವು ಘಟ್ಟಗಳಿಗೆ ಸಾಕ್ಷಿಯಾದ ಪ್ರದೇಶದ ಮಾಜಿ ಮುಖ್ಯಮಂತ್ರಿ ಬಗ್ಗೆ ಕೆಲ ವಿಚಾರಗಳನ್ನು (Mulayam Singh Yadav Profile) ನಾವಿಲ್ಲಿ ತಿಳಿಯೋಣ.


ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ 82 ವರ್ಷದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.


ಮುಲಾಯಂ ಸಿಂಗ್ ಯಾದವ್ ಆರಂಭದ ದಿನಗಳು
ಮುಲಾಯಂ ಸಿಂಗ್ ಯಾದವ್ ಅವರು ನವೆಂಬರ್ 22, 1939 ರಂದು ಉತ್ತರ ಪ್ರದೇಶದ ಸೈಫಾಯಿ ಗ್ರಾಮದಲ್ಲಿ ಮೂರ್ತಿ ದೇವಿ ಮತ್ತು ಸುಗರ್ ಸಿಂಗ್ ಯಾದವ್ ದಂಪತಿಗೆ ಜನಿಸಿದರು.


ಮುಲಾಯಂ ಸಿಂಗ್ ಯಾದವ್ ಅವರು ಪೊಲಿಟಿಕಲ್‌ ಸೈನ್ಸ್ ಅಧ್ಯಯನ ಮಾಡಿದರು ಮತ್ತು ಇಟಾವಾದಲ್ಲಿನ ಕರ್ಮ್ ಕ್ಷೇತ್ರ ಸ್ನಾತಕೋತ್ತರ ಕಾಲೇಜಿನಲ್ಲಿ ತಮ್ಮ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಪಡೆದರು. ಅವರು ಶಿಕೋಹಾಬಾದ್‌ನ ಎಕೆ ಕಾಲೇಜಿನಲ್ಲಿ ಬಿಟಿ ಪದವಿ ಮತ್ತು ಆಗ್ರಾ ವಿಶ್ವವಿದ್ಯಾಲಯದ ಬಿಆರ್ ಕಾಲೇಜಿನಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಪದವಿಯನ್ನೂ ಪಡೆದಿದ್ದಾರೆ.


‌ಕುಸ್ತಿ ಪಟು ಮುಲಾಯಂ ಸಿಂಗ್ ಯಾದವ್
ರಾಜಕೀಯಕ್ಕೆ ಸೇರುವ ಮೊದಲು ಮುಲಾಯಂ ಸಿಂಗ್ ಯಾದವ್ ಒಬ್ಬ ‌ಕುಸ್ತಿ ಪಟುವಾಗಿದ್ದರು. ಮೈನ್‌ಪುರಿಯಲ್ಲಿ ನಡೆದ ಕುಸ್ತಿ ಪಂದ್ಯದ ವೇಳೆ ಜಸ್ವಂತ್‌ನಗರದ ಅಂದಿನ ಶಾಸಕ ನಾಥು ಸಿಂಗ್ ಅವರು ಮುಲಾಯಂ ಅವರನ್ನು ಮೊದಲು ಗಮನಿಸಿದರು.


ಮುಲಾಯಂ ಅವರ ಕೌಶಲ್ಯದಿಂದ ಪ್ರಭಾವಿತರಾದ ಸಿಂಗ್ ಅವರು ಮುಲಾಯಂ ಅವರಿಗೆ ಆಶ್ರಯ ನೀಡಿ ಬೆಳೆಸಿದರು. ನಂತರ ಸಿಂಗ್ ಅವರು ಮುಲಾಯಂ ಅವರಿಗೆ ಜಸ್ವಂತ್‌ನಗರ ವಿಧಾನಸಭಾ ಕ್ಷೇತ್ರದಲ್ಲಿ ಸಂಯುಕ್ತ ಸಮಾಜವಾದಿ ಪಕ್ಷದ ಟಿಕೆಟ್ ನೀಡಿದರು. ಇಲ್ಲಿಂದ ಯಾದವ್ ರಾಜಕೀಯದ ಹಾದಿ ಶುರುವಾಯಿತು.


ಯಾದವ್ ಮೇಲೆ ರಾಮ್ ಮನೋಹರ್ ಲೋಹಿಯಾ ಪ್ರಭಾವ
15ನೇ ವಯಸ್ಸಿನಲ್ಲಿಯೇ ರಾಜಕೀಯದ ಸಂಪರ್ಕ ಪಡೆದ ಅವರು, ಖ್ಯಾತ ಸಮಾಜವಾದಿ ರಾಮ್ ಮನೋಹರ್ ಲೋಹಿಯಾ ಅವರ ಬರವಣಿಗೆಯಿಂದ ಪ್ರಭಾವಿತರಾಗಿದ್ದರು. ವಿವಿಧ ಸಮಾಜವಾದಿ ಚಳುವಳಿಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು.


ತಮ್ಮ ವೃತ್ತಿಜೀವನದ ಆರಂಭದಲ್ಲಿ ಕೆಳಜಾತಿಗಳು ಮತ್ತು ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ವಹಿಸಿದ್ದ ಮುಲಾಯಂ ಸಿಂಗ್‌ ಅವರಿಗೆ ಅದೇ ರಾಜಕೀಯದಲ್ಲಿ ಗಟ್ಟಿಯಾಗಿ ನಿಲ್ಲಲು ಕಾರಣವಾಯಿತು.


ರಾಜಕೀಯದ ಹಾದಿ
1967ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಮುಲಾಯಂ ಸಿಂಗ್ ಯಾದವ್ ಅತ್ಯಂತ ಕಿರಿಯ ಸದಸ್ಯ ಎಂಬ ಹೆಗ್ಗಳಿಕೆಗೂ ಪಾತ್ರರಾದರು. 1974 ಮತ್ತು 1977ರಲ್ಲಿ ಮುಲಾಯಂ ವಿಧಾನಸಭೆಗೆ ಮರು ಆಯ್ಕೆಯಾದರು.


ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಅವರನ್ನು ಬಂಧಿಸಿ ತಿಂಗಳುಗಟ್ಟಲೆ ಕಸ್ಟಡಿಯಲ್ಲಿ ಇರಿಸಲಾಗಿತ್ತು. 1977ರಲ್ಲಿ ಬಿಡುಗಡೆಗೊಂಡ ಬಳಿಕ ಮತ್ತೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಕಂಡರು. ಮತ್ತೆ 1980ರ ಚುನಾವಣೆಯಲ್ಲಿ ಮುಲಾಯಂ ಮುಗ್ಗರಿಸಿದರು, ಇವರ ಈ ಸೋಲು ಕಾಂಗ್ರೆಸ್‌ಗೆ ಬೆಂಬಲವನ್ನು ಹೆಚ್ಚಿಸಿತು.


ಈ ಸಾಧನೆ ಮಾಡಿದ  ಏಕೈಕ ನಾಯಕ
ಆದರೂ ಅವರು ರಾಜ್ಯ ಶಾಸಕಾಂಗದ ಮೇಲ್ಮನೆಗೆ ಸೇರ್ಪಡೆಗೊಳ್ಳುವಲ್ಲಿ ಯಶಸ್ವಿಯಾದರು. ಅಲ್ಲಿ ಅವರು ವಿರೋಧ ಪಕ್ಷದ ನಾಯಕರಾದರು. ನಂತರ, ಮುಲಾಯಂ ಅವರು ಕೆಳಮನೆಗೆ ಆಯ್ಕೆಯಾದ.  ಎರಡೂ ಸದನಗಳಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಹೊಂದಿರುವ ಏಕೈಕ ನಾಯಕರಾದರು.


ಮುಖ್ಯಮಂತ್ರಿ ಪಟ್ಟ
ಯಾದವ್ ಅವರು 1989ರಲ್ಲಿ ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಮುಲಾಯಂ ಅವರ ಮೊದಲ ಅವಧಿಯು ಅಲ್ಪಕಾಲಿಕವಾಗಿತ್ತು ಮತ್ತು 1989 ರಿಂದ 1991 ರವರೆಗೆ ಆಳ್ವಿಕೆ ನಡೆಸಿದರು.


ಎಲ್ಲಾ ವಿದ್ಯಾಮಾನಗಳ ನಂತರ ಯಾದವ್ ಅಂತಿಮವಾಗಿ ಕಾಂಗ್ರೆಸ್‌ ಪಕ್ಷ ತೊರೆದು 1992 ರಲ್ಲಿ ಸಮಾಜವಾದಿ ಪಕ್ಷವನ್ನು ಹುಟ್ಟುಹಾಕಿದರು. 1967ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆದ್ದ ಮುಲಾಯಂ, ನಂತರ 8 ಬಾರಿ ಶಾಸಕರಾಗಿ ಆಯ್ಕೆಯಾದರು. 1989 - 1991, 1993-95, ಮತ್ತು 2003-2007ರಲ್ಲಿ ಸಿಎಂ ಸ್ಥಾನ ಅಲಂಕರಿಸುವ ಮೂಲಕ ಸತತ ಮೂರು ಬಾರಿ ಸಿಎಂ ಆಗಿದ್ದರು


ಯಾದವ್ ರಾಜಕೀಯ ಜೀವನದಲ್ಲಿ ʼಅಯೋಧ್ಯೆʼ ಪಾತ್ರ!
ಅಯೋಧ್ಯೆಯ ಭೂ ವಿವಾದದ ದೇಶ ಕಂಡ ಅತ್ಯಂತ ದೊಡ್ಡ ವಿವಾದ. ಬಹಳ ಸುದೀರ್ಘವಾದ ಈ ಕಾನೂನು ಹೋರಾಟ ಮುಲಾಯಂ ಅವರ ರಾಜಕೀಯ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿತು. 1992 ರಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಲಾಯಿತು.


ನಂತರ 1993ರಲ್ಲಿ ಇವರು ರಾಜ್ಯದ ಮುಖ್ಯಮಂತ್ರಿಯಾಗಿ ಚುಕ್ಕಾಣಿ ಹಿಡಿದರು. ಡಿಸೆಂಬರ್ 1992 ರಲ್ಲಿ ಮಸೀದಿಯನ್ನು ಕೆಡವಿದ ನಂತರ, ಮುಲಾಯಂ ಮುಸ್ಲಿಂ ಸಮುದಾಯದ ಹೀರೋ ಆಗಿ ಹೊರಹೊಮ್ಮಿದರು.


ಕರ ಸೇವಕರ ಮೇಲೆ ಗುಂಡಿಕ್ಕಲು ಆದೇಶ
ಮುಲಾಯಂ 1990 ರಲ್ಲಿ ಅಯೋಧ್ಯೆಯಲ್ಲಿ ಕರ ಸೇವಕರು ಅಥವಾ ಹಿಂದೂ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುವಂತೆ ಪೊಲೀಸರಿಗೆ ಆದೇಶ ನೀಡಿದ್ದರು. ಅವರ ಕ್ರಮಗಳನ್ನು ಹಿಂದೂಗಳು ಮತ್ತು ಮುಸ್ಲಿಮರು ಖಂಡಿಸಿದರು.


ಉತ್ತರ ಪ್ರದೇಶದಲ್ಲಿ ಸುದೀರ್ಘ ಅವಧಿಯ ರಾಷ್ಟ್ರಪತಿ ಆಳ್ವಿಕೆಯ ನಂತರ, 1994 ರ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಬೆಂಬಲದೊಂದಿಗೆ ಮುಲಾಯಂ ಮತ್ತೆ ಅಧಿಕಾರಕ್ಕೆ ಬಂದರು. ಆದಾಗ್ಯೂ, ಜೂನ್ 1995 ರಲ್ಲಿ ಬಿಎಸ್ಪಿ ನಾಯಕಿ ಮಾಯಾವತಿ ಮೈತ್ರಿಯಿಂದ ಹೊರಬಂದರು ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಯೊಂದಿಗೆ ಕೈಜೋಡಿಸಿದರು.


ಕೇಂದ್ರ ರಾಜಕೀಯ ಜೀವನ
1996 ರಲ್ಲಿ, ಎಚ್‌ಡಿ ದೇವೇಗೌಡ ನೇತೃತ್ವದ ಯುನೈಟೆಡ್ ಫ್ರಂಟ್ ಸರ್ಕಾರದಲ್ಲಿ ಮುಲಾಯಂ ಅವರನ್ನು ಭಾರತದ ರಕ್ಷಣಾ ಸಚಿವರಾಗಿ ನೇಮಿಸಲಾಯಿತು. ಒಕ್ಕೂಟವನ್ನು ಮುನ್ನಡೆಸಲು ಮುಲಾಯಂ ಸಿಂಗ್ ಅವರ ಹೆಸರನ್ನು ಹಿರಿಯ ಮುಖಂಡರೊಬ್ಬರು ತೇಲಿಬಿಟ್ಟಿದ್ದರು. ಇದಕ್ಕೆ ಲಾಲು ಪ್ರಸಾದ್ ಯಾದವ್ ಸೇರಿದಂತೆ ಹಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದರು.


2012 ರಲ್ಲಿ, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು ಪ್ರಾರಂಭವಾದ ನಂತರ ಮೊದಲ ಬಾರಿಗೆ ಪೂರ್ಣ ಬಹುಮತವನ್ನು ಗಳಿಸಿದಾಗ, ಮುಲಾಯಂ ತಮ್ಮ ಮಗ ಅಖಿಲೇಶ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದರು.


ಇದನ್ನೂ ಓದಿ: Babiya Crocodile: ಕಾಸರಗೋಡಿನ ದೇವರ ಮೊಸಳೆ ಬಬಿಯಾ ವಿಧಿವಶ; ಭಕ್ತರಲ್ಲಿ ಮಡುಗಟ್ಟಿದ ದುಃಖ


ಪಕ್ಷದ ಮೇಲಿನ ಹಿಡಿತಕ್ಕಾಗಿ ಅಖಿಲೇಶ್ ಮತ್ತು ಮುಲಾಯಂ ಸಹೋದರ ಶಿವಪಾಲ್ ಯಾದವ್ ನಡುವಿನ ಕೌಟುಂಬಿಕ ಕಲಹ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆಯಾಯಿತು. ನಂತರ ಕೌಟುಂಬಿಕ ಕಲಹಕ್ಕೆ ಜನವರಿ 1, 2017 ರಂದು ವಿರಾಮ ಹಾಕಲಾಯಿತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಖಿಲೇಶ್ ಅವರಿಗೆ ಅಧಿಕಾರವನ್ನು ಸಂಪೂರ್ಣವಾಗಿ ವರ್ಗಾಯಿಸಲಾಯಿತು.

Published by:ಗುರುಗಣೇಶ ಡಬ್ಗುಳಿ
First published: