ಕೋಲ್ಕತ್ತಾ (ಜೂನ್ 11); ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲೇಬೇಕು ಎಂಬ ಉದ್ದೇಶದಿಂದಾಗಿ ಟಿಎಂಸಿ ಪಕ್ಷದ ಅನೇಕ ನಾಯಕರನ್ನು ಬಿಜೆಪಿ ತನ್ನೆಡೆ ಸೆಳೆದಿತ್ತು. ಆದರೂ, ಚುನಾವಣಾ ಫಲಿತಾಂಶ ಮಾತ್ರ ಟಿಎಂಸಿ ಪರವಾಗಿ ಬಂದದ್ದು ಕಮಲ ಪಾಳಯದಲ್ಲಿ ಓಲ ಬೇಗುದಿಗೆ ಕಾರಣವಾಗಿತ್ತು. ಅಲ್ಲದೆ, ಟಿಎಂಸಿ ತೊರೆದಿದ್ದ ಅನೇಕ ಶಾಸಕರು ಸಚಿವರಿಗೆ ಅಲ್ಲಿನ ಜನ ಸೋಲಿನ ರುಚಿ ತೋರಿಸಿದ್ದರು. ಪರಿಣಾಮ ಪಕ್ಷಾಂತರ ಮಾಡಿದ್ದ ನಾಯಕರಲ್ಲಿ ಅಸಮಾಧಾನ ಉಂಟಾಗಿದ್ದು, ಅನೇಕರು ಇದೀಗ ಮತ್ತೆ ಟಎಂಸಿ ಪಕ್ಷದ ವಾಪಾಸ್ ಮರಳುತ್ತಿದ್ದಾರೆ. ನಾಯಕರ ದೊಡ್ಡ ಹಿಂಡೇ ಈಗ ತೃಣಮೂಲ ಕಾಂಗ್ರೆಸ್ ಪಕ್ಷದ ಕದ ತಟ್ಟುತ್ತಿದೆ. ಅದರ ಮೊದಲ ಭಾಗವಾಗಿ ಪಶ್ಚಿಮ ಬಂಗಾಳ ಬಿಜೆಪಿಯ ಹಿರಿಯ ನಾಯಕ ಮುಕುಲ್ ರಾಯ್ ಇಂದು ತಮ್ಮ ಮಗ ಸುಭ್ರಾಂಶು ರಾಯ್ ಅವರೊಂದಿಗೆ ತೃಣಮೂಲ್ ಕಾಂಗ್ರೆಸ್ ನ ಕೇಂದ್ರ ಕಚೇರಿಯಲ್ಲಿ ಸಿಎಂ ಮಮತಾ ಬ್ಯಾನರ್ಜಿಯವರನ್ನು ಭೇಟಿಯಾಗಿ ಪಕ್ಷ ಸೇರುವುದಾಗಿ ಘೋಷಿಸಿದ್ದಾರೆ.
ಇಷ್ಟು ದಿನ ಮುಕುಲ್ ರಾಯ್ ಬಿಜೆಪಿ ತೊರೆಯಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಜೊತೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಮುಕುಲ್ ರಾಯ್ ಈ ಕುರಿತು ಸ್ಪಷ್ಟನೆ ನೀಡಿರಲಿಲ್ಲ. ಅದು ಪಶ್ಚಿಮ ಬಂಗಾಳ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಇಂದು ಮುಕುಲ್ ರಾಯ್ ಎಲ್ಲಾ ಕುತೂಹಲಗಳಿಗೆ ಮತ್ತು ವದಂತಿಗಳಿಗೆ ತೆರೆ ಎಳೆದಿದ್ದಾರೆ. ತೃಣಮೂಲ ಕಾಂಗ್ರೆಸ್ ಸೇರ್ಪಡೆ ಕುರಿತು ಅಧಿಕೃತವಾಗಿ ತಮ್ಮ ನಡೆಯನ್ನು ಬಹಿರಂಗಗೊಳಿಸಿದ್ದಾರೆ.
ಇನ್ನು ಮಮತಾ ಬ್ಯಾನರ್ಜಿಯವರು "ಮುಕುಲ್ ರಾಯ್ ವಾಪಸ್ ಬಂದಿದ್ದಾರೆ. ಅವರು ಎಂದಿಗೂ ಇತರರಂತೆ ದ್ರೋಹವೆಸಗಲಿಲ್ಲ” ಎಂದಿದ್ದಾರೆ. ಅಲ್ಲದೇ ಮತ್ತಷ್ಟು ಜನರು ಬಿಜೆಪಿಯಿಂದ ಬರಲಿದ್ದಾರೆ" ಎಂದು ಹೇಳಿದ್ದಾರೆ.
ಮುಕುಲ್ ರಾಯ್ ಮಾತನಾಡಿ "ಬಿಜೆಪಿಯನ್ನು ತೊರೆದ ನಂತರ ನನ್ನ ಹಳೆಯ ಸಹೋದ್ಯೋಗಿಗಳನ್ನು ನೋಡುವುದರಲ್ಲಿ ನನಗೆ ತುಂಬಾ ಖುಷಿ ಇದೆ. ನಾನು ಬಿಜೆಪಿಯಲ್ಲಿ ಇರಲು ಸಾಧ್ಯವಿಲ್ಲ. ಮಮತಾ ಬ್ಯಾನರ್ಜಿ ಬಂಗಾಳದ ಮತ್ತು ಭಾರತದ ಏಕೈಕ ನಾಯಕಿ" ಎಂದು ಬಣ್ಣಿಸಿದ್ದಾರೆ.
ಮುಕುಲ್ ರಾಯ್ ಬಿಜೆಪಿ ತೊರೆಯಲು ಕಾರಣಗಳೇನು?
ತೃಣಮೂಲ ಕಾಂಗ್ರೆಸ್ ನಿಂದ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಸೇರಿದ ನಾಯಕರೆಂದರೆ ಅದು ಮುಕುಲ್ ರಾಯ್. 2017 ರಲ್ಲಿ ಮುಕುಲ್ ರಾಯ್ TMC ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದರು. ಅದಾದನಂತರ ಮುಕುಲ್ ರಾಯ್ ಅವರನ್ನು ಬಿಜೆಪಿ ಪಶ್ಚಿಮ ಬಂಗಾಳದ ರಾಜ್ಯಾಧ್ಯಕ್ಷರನ್ನಾಗಿಯೂ ನೇಮಿಸಿತ್ತು. ಆದರೆ ದಿನ ಕಳೆದಂತೆ ಮುಕುಲ್ ರಾಯ್ ಅವರಿಗೆ ಬಿಜೆಪಿಯಲ್ಲಿ ಮೊದಲಿದ್ದ ಸ್ಥಾನಮಾನ ಮತ್ತು ಗೌರವ ಉಳಿಯಲಿಲ್ಲ.
ಬಿಜೆಪಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸೋತ ಕಾರಣಕ್ಕಾಗಿ ಮಾತ್ರ ಮುಕುಲ್ ರಾಯ್ ಬಿಜೆಪಿಯನ್ನು ತೊರೆಯುತ್ತಿಲ್ಲ. ಪಶ್ಚಿಮ ಬಂಗಾಳ ಚುನಾವಣೆಗೂ ಮುನ್ನ ತೃಣಮೂಲ ತೊರೆದು ಬಿಜೆಪಿ ಸೇರಿದ ನಾಯಕರ ದಂಡಿನ ಪ್ರಭಾವವೂ ಮುಕುಲ್ ರಾಯ್ ಅವರನ್ನು ಬಿಜೆಪಿಯಲ್ಲಿ ಮೂಲೆಗುಂಪಾಗಿಸಿದೆ.
ಮುಖ್ಯವಾಗಿ ಒಂದು ಕಾಲದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆತ್ಮೀಯರಾಗಿದ್ದ ಸುವೇಂಧು ಅಧಿಕಾರಿ ಬಿಜೆಪಿ ಸೇರಿ ರಾಜ್ಯದ ಅಗ್ರ ನಾಯಕರಾಗಿ ಬೆಳೆದಿರುವುದು ಮುಕುಲ್ ರಾಯ್ ಅವರಿಗೆ ಇರಿಸು ಮುರುಸು ಉಂಟುಮಾಡಿದೆ. ಈ ಕುರಿತು ಅವರು ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದಾರೆ. ಬಿಜೆಪಿಯಲ್ಲಿನ ಉಸಿರುಕಟ್ಟಿಸುವ ವಾತಾವರಣದಿಂದಾಗಿ ಪಕ್ಷ ತೊರೆಯುವ ನಿರ್ಧಾರ ಮಾಡಿದ್ದೇನೆ ಎಂದು ಮುಕುಲ್ ರಾಯ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: CoronaVirus| ಜೀವನ ಹೈರಾಣಾಗಿಸಿದ ಕೊರೋನಾ: ವೈದ್ಯಕೀಯ ಸಾಲದಿಂದ ದಿವಾಳಿಯಾದ ಅನೇಕ ಭಾರತೀಯರು
ಇನ್ನೊಂದು ಮುಖ್ಯ ವಿಚಾರವೆಂದರೆ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿಯ ಭರ್ಜರಿ ಗೆಲುವಿನ ನಂತರ ಬಿಜೆಪಿಯ ಇತರ ನಾಯಕರಂತೆ ಮುಕುಲ್ ರಾಯ್ ಅವರಿಗೂ ತಮ್ಮ ರಾಜಕೀಯ ಭವಿಷ್ಯದ ಕುರಿತು ಅನಿಶ್ಚಿತತೆ ಕಾಡಲು ಆರಂಭವಾಗಿದೆ. ಮಮತಾ ಬ್ಯಾನರ್ಜಿಯವರಿಗೆ ಬಂಗಾಳದ ನಾಡಿ ಮಿಡಿತ ಗೊತ್ತಿದೆ.
ಬಿಜೆಪಿ ಎಷ್ಟು ದೊಡ್ಡ ಪಕ್ಷವಾದರೂ ಬಂಗಾಳಕ್ಕೆ ಹೊರಗಿನ ಪಕ್ಷವೇ. ಬೆಂಗಾಳಿಗಳು ಬಿಜೆಪಿಯನ್ನು ಒಪ್ಪಲು ತಯಾರಿಲ್ಲ ಎಂಬ ಭಾವನೆ ಮುಕುಲ್ ರಾಯ್ ಸೇರಿ ಪಕ್ಷ ತೊರೆಯಲು ಸಿದ್ಧರಾಗಿರುವ ಬಿಜೆಪಿಯ ಹಿರಿಯ ನಾಯಕರಲ್ಲಿ ಬೆಳೆಯತೊಡಗಿದೆ. ಈ ಎಲ್ಲ ಕಾರಣಗಳಿಂದ ಮುಕುಲ್ ರೊಯ್ ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್ ಕದತಟ್ಟಲು ಕಾರಣಗಳೆಂದು ಹೇಳಲಾಗುತ್ತಿದೆ.
ಕಳೆದ ವಾರ ಮುಕುಲ್ ರಾಯ್ ಕೊಲ್ಕತ್ತಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮಮತಾ ಬ್ಯಾನರ್ಜಿ ಅವರ ಸಂಬಂಧಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ ಮುಕುಲ್ ರಾಯ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಆಗಲೇ ಮುಕುಲ್ ರಾಯ್ ಬಿಜೆಪಿ ತೊರೆಯುವ ನಿರ್ಧಾರಕ್ಕೆ ಬಂದಿದ್ದರೆಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ