HOME » NEWS » National-international » MUKESH AMBANI SAYS JIO WILL ROLL OUT 5G IN SECOND HALF OF 2021 SNVS

Mukesh Ambani - ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಜಿಯೋದಿಂದ 5ಜಿ: ಮುಕೇಶ್ ಅಂಬಾನಿ

ಕೇಂದ್ರದ ಡಿಜಿಟಲ್ ಇಂಡಿಯಾ ಮಿಷನ್​ನಿಂದ ದೇಶದಲ್ಲಿ ಡಿಜಿಟಲ್ ಕ್ರಾಂತಿಯಾಗಿ ನಾಲ್ಕನೇ ಕೈಗಾರಿಕಾ ಕ್ರಾಂತಿಗೆ ಎಡೆ ಮಾಡಿಕೊಡುತ್ತದೆ. ಭಾರತ ಆರ್ಥಿಕವಾಗಿ ಪುನಶ್ಚೇತನಗೊಂಡು ಅಗಾಧ ಬೆಳವಣಿಗೆ ಸಾಧಿಸುವುದನ್ನು ಯಾವುದೂ ತಡೆಯಲಾರದು ಎಂದು ಮುಕೇಶ್ ಅಂಬಾನಿ ವಿಶ್ವಾಸ ವ್ಯಕ್ತಪಡಿಸಿದ್ಧಾರೆ.

news18-kannada
Updated:December 8, 2020, 12:55 PM IST
Mukesh Ambani - ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಜಿಯೋದಿಂದ 5ಜಿ: ಮುಕೇಶ್ ಅಂಬಾನಿ
ಅಂಬಾನಿ
  • Share this:
ಮುಂಬೈ(ಡಿ. 08): ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಕೇಂದ್ರದ ಡಿಜಿಟಲ್ ಇಂಡಿಯಾ ಯೋಜನೆಯನ್ನು ಶ್ಲಾಘಿಸಿದ್ದಾರೆ. ದೇಶವನ್ನು ಸಂಕಷ್ಟಕ್ಕೆ ದೂಡಿದ ಕೋವಿಡ್ ರೋಗವನ್ನು ದೂರ ಮಾಡಲು ಲಸಿಕೆಯನ್ನು ಶೀಘ್ರದಲ್ಲೇ ತರುವುದಾಗಿ ಕೇಂದ್ರ ಸರ್ಕಾರ ಮಾಡಿದ ಘೋಷಣೆಯನ್ನು ಅವರು ಇದೇ ವೇಳೆ ಸ್ವಾಗತಿಸಿದ್ದಾರೆ. 2020ರ ಇಂಡಿಯಾ ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅಂಬಾನಿ, ಕೋವಿಡ್ ಸಂಕಷ್ಟದಲ್ಲೂ ಆನ್​ಲೈನ್​ನಲ್ಲಿ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಭಾರತದ ಪ್ರಬಲ ಡಿಜಿಟಲ್ ತಂತ್ರಜ್ಞಾನ ಪ್ರಮುಖ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು. ಹಾಗೆಯೇ, ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಜಿಯೋ 5ಜಿ ನೆಟ್​ವರ್ಕ್ ಅಳವಡಿಕೆಗೆ ಸಜ್ಜಾಗಿರುವುದನ್ನೂ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಇವತ್ತು ಡಿಜಿಟಲ್ ತಂತ್ರಜ್ಞಾನದಲ್ಲಿ ಭಾರತದ ಎರಡು ಶಕ್ತಿಯನ್ನ ಈ ವಿಶ್ವ ಗುರುತಿಸಿದೆ. ಮೊದಲನೆಯದು ಭಾರತದ ಕ್ರಿಯಾಶೀಲ ಪ್ರಜಾತಾಂತ್ರಿಕತೆ, ಯುವ ಸಮುದಾಯ ಮತ್ತು ಡಿಜಿಟಲ್ ಪರಿವರ್ತನೆ. ಮತ್ತೊಂದು ಶಕ್ತಿ ಎಂದರೆ ನರೇಂದ್ರ ಮೋದಿ ಅವರ ನಾಯಕತ್ವ. ಇವರ ಡಿಜಿಟಲ್ ಇಂಡಿಯಾ ಮಿಷನ್ ನಮ್ಮ ದೇಶವನ್ನ ಸಂಕಷ್ಟ ಕಾಲದಲ್ಲೂ ಕೈಹಿಡಿದು ಕಾಪಾಡಿದೆ. 2020ರ ಇಡೀ ವರ್ಷ ಭಾರತ ಆನ್​ಲೈನ್​ನಲ್ಲೇ ಕೆಲಸ ಮಾಡಿದೆ, ವಿದ್ಯಾಭ್ಯಾಸ ಮಾಡಿದೆ, ವ್ಯಾಪಾರ ಮಾಡಿದೆ, ಆರೋಗ್ಯಸೇವೆ ಪಡೆದಿದೆ, ಕ್ರೀಡೆಯನ್ನೂ ಆಡಿದೆ. ಇದು ಭಾರತದಲ್ಲಿ ಡಿಜಿಟಲ್ ತಂತ್ರಜ್ಞಾನದ ಅಭೂತಪೂರ್ವ ಬೆಳವಣಿಗೆಗೆ ಕೈಗನ್ನಡಿಯಾಗಿದೆ ಎಂದು ಮುಕೇಶ್ ಅಂಬಾನಿ ಹೇಳಿದರು.

ಕೆಲವೇ ಕೆಲಸಗಳು ಮತ್ತು ಮನರಂಜನೆಗಳಿಗೆ ಸೀಮಿತವಾಗಿದ್ದ ಭಾರತದ ಡಿಜಿಟಲ್ ಕ್ಷೇತ್ರ ಇದೀಗ ಅಸೀಮ ಸಬಲೀಕರಣಕ್ಕೆ ವೇದಿಕೆಯಾಗಿ ಬೆಳೆದಿದೆ.  ಲಾಕ್ ಡೌನ್ ವೇಳೆಯಲ್ಲೂ ಡಿಜಿಟಲ್ ಕ್ಷೇತ್ರದ ಸಾವಿರಾರು ಎಂಜಿನಿಯರ್​ಗಳು ಮತ್ತು ನೌಕರರು ದಿನದ 24 ಗಂಟೆ ಕೆಲಸ ಮಾಡಿ ಸಮಾಜದ ಎಲ್ಲಾ ವರ್ಗಗಳಿಗೂ ನೆರವು ಒದಗಿಸಿದ್ದಾರೆ. ಕೇಂದ್ರ ಸರ್ಕಾರ ಕೂಡ ಹೆಚ್ಚಿನ ಮುತುವರ್ಜಿ ವಹಿಸಿ ಈ ಕ್ಷೇತ್ರದ ಬಲ ಹೆಚ್ಚಿಸಿದ್ದಾರೆ. ಇದು ಶ್ಲಾಘನೀಯ. ಪ್ರಧಾನಿ ಅವರ ನಾಯಕತ್ವದಲ್ಲಿ ಭಾರತ ಹೊಸ ಆತ್ಮವಿಶ್ವಾಸಲ್ಲಿ ಹೊಸ ದಶಕವನ್ನು ಎದುರುಗೊಳ್ಳಲಿದೆ. ಭಾರತದ ಆರ್ಥಿಕತೆ ಪುನಶ್ಚೇತನಗೊಳ್ಳುವುದಷ್ಟೇ ಅಲ್ಲ ಹೊಸ ವೇಗದಲ್ಲಿ ಬೆಳವಣಿಗೆ ಸಾಧಿಸುತ್ತದೆ. ಅಂದುಕೊಂಡಂತೆ 5 ಟ್ರಿಲಿಯನ್ ಡಾಲರ್​ನ ಆರ್ಥಿಕತೆ ಸಾಧ್ಯವಾಗುತ್ತದೆ ಎಂದು ಆರ್​ಐಎಲ್ ಚೇರ್​ಮನ್ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪ್ರಧಾನಿ ಮೋದಿ ಅವರ ಆತ್ಮನಿರ್ಭರದ ದೃಷ್ಟಿಕೋನವೇ ಪಿಡಿಪಿಯು ವಿಶ್ವವಿದ್ಯಾಲಯದ ಆದರ್ಶ; ಮುಖೇಶ್ ಅಂಬಾನಿ

ವಿಶ್ವದ ಅತ್ಯುತ್ಕೃಷ್ಟ ಡಿಜಿಟಲ್ ಸಮಾಜವಾಗಿ ಭಾರತ ಬೆಳವಣಿಗೆ ಸಾಧಿಸಲು ಅಂಬಾನಿ ನಾಲ್ಕು ಸಲಹೆಗಳು:

ಭಾರತದ ಡಿಜಿಟಲ್ ಕ್ಷೇತ್ರದ ಬೆಳವಣಿಗೆಯಿಂದ ಆದಾಯ ಹೆಚ್ಚಳ, ಉದ್ಯೋಗ ಹೆಚ್ಚಳ ಮತ್ತು ಆರ್ಥಿಕತೆಯ ಮಧ್ಯ ಹಾಗೂ ಕೆಳ ಸ್ತರದಲ್ಲಿರುವ 100 ಕೋಟಿ ಭಾರತೀಯರ ಜೀವನ ಮಟ್ಟ ಹೆಚ್ಚಳದ ಮೂಲಕ ಸಮಾನ ಸಮಾಜ ನಿರ್ಮಾಣವಾಗಲಿದೆ ಎಂದು ಹೇಳಿದ ಮುಕೇಶ್ ಅಂಬಾನಿ, ಭಾರತವನ್ನು ವಿಶ್ವದ ಅತ್ಯುತ್ಕೃಷ್ಟ ಡಿಜಿಟಲ್ ಸಮಾಜವಾಗಿ ಪರಿವರ್ತಿಸಲು ನಾಲ್ಕು ಪ್ರಮುಖ ಸಲಹೆಗಳನ್ನ ಕೇಂದ್ರದ ಮುಂದಿಟ್ಟಿದ್ದಾರೆ:

1) ಭಾರತದಲ್ಲಿ ಈಗಲೂ ಕೂಡ 30 ಕೋಟಿ ಮೊಬೈಲ್ ಗ್ರಾಹಕರು 2ಜಿ ನೆಟ್​ವರ್ಕ್​ನಲ್ಲೇ ಇದ್ದಾರೆ. ಇವರಿಗೆ ಅಗ್ಗದ ದರದಲ್ಲಿ ಸ್ಮಾರ್ಟ್​ಫೋನ್ ಸಿಗುವ ನಿಟ್ಟಿನಲ್ಲಿ ತ್ವರಿತ ಕ್ರಮ ತೆಗೆದುಕೊಳ್ಳುವ ಅಗತ್ಯತೆ ಇದೆ. ಇದರಿಂದ ಅವರ ಬ್ಯಾಂಕ್ ಖಾತೆಗಳಿಗೆ ನೇರ ಹಣ ವರ್ಗಾವಣೆ ಆಗಿ ಅವರೂ ಡಿಜಿಟಲ್ ಎಕನಾಮಿ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗುತ್ತದೆ.2) ಅತ್ಯುತ್ತಮ ಡಿಜಿಟಲ್ ನೆಟ್​ವರ್ಕ್ ಇರುವ ವಿಶ್ವ ರಾಷ್ಟ್ರಗಳ ಸಾಲಿನಲ್ಲಿ ಭಾರತ ಇದೆ. ಇದು ಹೀಗೇ ಮುಂದುವರಿಯಬೇಕಾದರೆ 5ಜಿ ನೆಟ್​ವರ್ಕ್ ಅನ್ನು ತ್ವರಿತವಾಗಿ ಅನುಷ್ಠಾನಗೊಳಿಸಿ ಪ್ರತಿಯೊಂದು ಕಡೆಯೂ ಲಭ್ಯವಾಗಿರುವಂತೆ ಕ್ರಮ ಕೈಗೊಳ್ಳಬೇಕು. 2021ರ ವರ್ಷದ ದ್ವಿತೀಯಾರ್ಧದಲ್ಲಿ ಭಾರತದಲ್ಲಿ 5ಜಿ ಕ್ರಾಂತಿ ಸೃಷ್ಟಿಸಲು ಜಿಯೋ ಸನ್ನದ್ಧವಾಗಿದೆ. ದೇಶೀಯವಾಗಿ ಅಭಿವೃದ್ಧಿಗೊಂಡ ನೆಟ್​ವರ್ಕ್, ಹಾರ್ಡ್​ವೇರ್ ಮತ್ತು ತಂತ್ರಜ್ಞಾನ ಪರಿಕರಗಳನ್ನೊಳಗೊಂಡ ಜಿಯೋ 5ಜಿ ಕ್ರಾಂತಿಯು ಕೇಂದ್ರ ಸರ್ಕಾರದ ಸ್ವಾವಲಂಬಿ ಭಾರತದ ಕನಸಿಗೆ ಪೂರಕವಾಗಿದೆ.

3) ನಾಲ್ಕನೇ ಕೈಗಾರಿಕೆ ಕ್ರಾಂತಿಗೆ 5ಜಿ ತಂತ್ರಜ್ಞಾನವೇ ಮುನ್ನುಡಿ ಬರೆಯುವುದು. ಇದಕ್ಕೆ ಜಿಯೋ ಅಣಿಗೊಂಡಿದೆ. ಜಿಯೋ ಪ್ಲಾಟ್​ಫಾರ್ಮ್​ಗಳ ಬಳಗದಲ್ಲಿ 20 ಸ್ಟಾರ್ಟಪ್ ಪಾರ್ಟ್ನರ್​​ಗಳಿವೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಕ್ಲೌಡ್ ಕಂಪ್ಯೂಟಿಂಗ್, ಬಿಗ್ ಡಾಟಾ, ಮೆಷಿನ್ ಲರ್ನಿಂಗ್, ಬ್ಲಾಕ್ ಚೈನ್ ಇತ್ಯಾದಿ ಕ್ಷೇತ್ರದಲ್ಲಿ ವಿಶ್ವದರ್ಜೆ ಸೌಕರ್ಯ ನಿರ್ಮಿಸಿದ್ದೇವೆ. ಶಿಕ್ಷಣ, ಆರೋಗ್ಯ, ಕೃಷಿ, ಮೂಲಸೌಕರ್ಯ, ಹಣಕಾಸು ಮತ್ತು ನವವಾಣಿಜ್ಯ ಕ್ಷೇತ್ರಗಳಲ್ಲಿ ಅತ್ಯುತ್ತಮ ದೇಶೀಯ ಪರಿಹಾರಗಳನ್ನ ಒದಗಿಸುತ್ತಿದ್ಧೇವೆ. ಇವು ಭಾರತದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡರೆ ಜಾಗತಿಕವಾಗಿ ಇವುಗಳ ಬಳಕೆ ಮಾಡುತ್ತೇವೆ.

4) ಭಾರತದ ಆರ್ಥಿಕತೆಯ ಡಿಜಿಟಲೀಕರಣ ಆಗುತ್ತಿರುವಂತೆಯೇ ಡಿಜಿಟಲ್ ಹಾರ್ಡ್​ವೇರ್​ಗೆ ಬೇಡಿಕೆ ಹೆಚ್ಚಾಗಿದೆ. ಈ ಹಾರ್ಡ್​​ವೇರ್​ಗಳನ್ನ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವುದರ ಬದಲು ಇಲ್ಲಿಯೇ ಅವುಗಳ ಉತ್ಪಾದನೆಗೆ ಉತ್ತೇಜನ ನೀಡಬೇಕು. ಚಿಪ್ ಡಿಸೈನ್​ನಲ್ಲಿ ಭಾರತ ಒಳ್ಳೆಯ ಸಾಮರ್ಥ್ಯ ಹೊಂದಿದೆ. ಭಾರತದಲ್ಲಿ ತಯಾರಿಕಾ ಘಟಕಗಳನ್ನ ಸ್ಥಾಪಿಸಲು ವಿಶ್ವದ ಪ್ರಮುಖ ಕಂಪನಿಗಳು ಭಾರತಕ್ಕೆ ಬರುತ್ತಿವೆ. ಅತ್ಯುತ್ತಮ ಗುಣಮಟ್ಟದ ಸೆಮಿಕಂಡಕ್ಟರ್ ಉದ್ಯಮ ಭಾರತದಲ್ಲಿ ನಿರ್ಮಾಣವಾಗುವ ಸಾಧ್ಯತೆ ಕಾಣುತ್ತಿದೆ. ಎಲ್ಲರೂ ಒಟ್ಟಿಗೆ ಕೈಜೋಡಿಸಿ ಕೆಲಸ ಮಾಡಿದರೆ ನಮ್ಮ ಸಾಫ್ಟ್​ವೇರ್ ಯಶಸ್ಸಿಗೆ ಹಾರ್ಡ್​ವೇರ್ ಕೂಡ ಜೋಡಿತವಾಗುತ್ತದೆ.

ಈ ದಶಕದಲ್ಲಿ ಭಾರತದ ಅಭೂತಪೂರ್ವ ಬೆಳವಣಿಗೆಯ ಹೊಸ್ತಿಲಲ್ಲಿ ನಾವಿದ್ದೇವೆ. ಈ ಬೆಳವಣಿಗೆಗೆ ಡಿಜಿಟಲ್ ಇಂಡಿಯಾ ಯೋಜನೆ ಪ್ರೇರಕ ಶಕ್ತಿಯಾಗಿರಲಿದೆ. ಭಾರತದ ಪ್ರಗತಿಯನ್ನು ಕೋವಿಡ್-19 ಕೂಡ ತಡೆಯಲಾರದು. ಹೊಸ ಇತಿಹಾಸ ಸೃಷ್ಟಿಸುವ ಅವಕಾಶ ನಮ್ಮ ಮುಂದಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ನಾಯತ್ವದಲ್ಲಿ ಎಲ್ಲರೂ ಒಟ್ಟುಗೂಡಿ ಮಾಡೋಣ ಎಂದು ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ ಮುಕೇಶ್ ಅಂಬಾನಿ ಕರೆ ನೀಡಿದರು.
Published by: Vijayasarthy SN
First published: December 8, 2020, 12:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories