ಮ್ಯೂಸಿಕ್, ಮೂವಿ ಮೀರಿಸಿ ಗೇಮಿಂಗ್ ಬೆಳೆಯಲಿದೆ: ಮೈಕ್ರೋಸಾಫ್ಟ್ ಸಿಇಒ ಜೊತೆ ಸಂವಾದದಲ್ಲಿ ಅಂಬಾನಿ ಅನಿಸಿಕೆ

ಜಿಯೋ ಆಗಮನಕ್ಕೆ ಮುನ್ನ ಭಾರತದಲ್ಲಿ 256 ಕೆಬಿಪಿಎಸ್ ವೇಗದ ಬ್ರಾಡ್​ ಬ್ಯಾಂಡ್ ಕನೆಕ್ಟಿವಿಟಿ ಇತ್ತು. ಜಿಯೋ ಪ್ರವೇಶದ ನಂತರ ಇವತ್ತು 21 ಎಂಬಿಪಿಎಸ್ ಸರಾಸರಿ ವೇಗ ಸಿಗುತ್ತಿದೆ ಎಂದು ಮುಕೇಶ್ ಅಂಬಾನಿ ಹೇಳಿದ್ಧಾರೆ.

ಮುಕೇಶ್ ಅಂಬಾನಿ

ಮುಕೇಶ್ ಅಂಬಾನಿ

  • News18
  • Last Updated :
  • Share this:
ಮುಂಬೈ(ಫೆ. 24): ಮುಂದಿನ ದಿನಗಳಲ್ಲಿ ವ್ಯವಹಾರಗಳ ಬೆಳವಣಿಗೆಗೆ ತಂತ್ರಜ್ಞಾನ ಅತೀ ಮುಖ್ಯ ಪಾತ್ರ ವಹಿಸುತ್ತದೆ. ಈಗ ಇರುವುದಕ್ಕಿಂತಲೂ ಬಹಳ ವಿಭಿನ್ನವಾದ ಸ್ಥಿತಿ ತಲುಪಲಿದ್ದೇವೆ ಎಂದು ಆರ್​ಐಎಲ್ ಚೇರ್ಮನ್ ಮುಕೇಶ್ ಅಂಬಾನಿ ಅಭಿಪ್ರಾಯಪಟ್ಟರು. ಇಲ್ಲಿ ನಡೆದ “ಫ್ಯೂಚರ್ ಡೀಕೋಡೆಡ್ ಸಿಇಒ 2020” ಶೃಂಗಸಭೆಯಲ್ಲಿ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಜೊತೆಗಿನ ಸಂವಾದದಲ್ಲಿ ಮಾತನಾಡುತ್ತಿದ್ದ ಅಂಬಾನಿ, ಸದ್ಯದ ಭವಿಷ್ಯದಲ್ಲಿ ಗೇಮಿಂಗ್ ಉತ್ತುಂಗಕ್ಕೇರುತ್ತದೆ ಎಂದು ಭವಿಷ್ಯ ನುಡಿದರು.

ಮುಂದಿನ ದಶಕವು ಗೇಮಿಂಗ್​ಗೆ ಸೇರಲಿದೆ. ಬ್ರಾಡ್ ಬ್ಯಾಂಡ್ ಕನೆಕ್ಟಿವಿಟಿ ಸಮರ್ಪಕವಾಗಿ ಹೊಂದಿರುವ ಭಾರತದಲ್ಲಿ ಗೇಮಿಂಗ್ ಇನ್ನೂ ಶೈಶಾವಸ್ತೆಯಲ್ಲಿದೆ. ನಮ್ಮಂಥವರಿಗೆ ಈ ಗೇಮಿಂಗ್ ಏನು ಎಂಬುದು ಗೊತ್ತಿಲ್ಲದೇ ಇರಬಹುದು. ಆದರೆ, ಸಂಗೀತ, ಸಿನಿಮಾ ಮತ್ತು ಟಿವಿ ಶೋಗಳೆಲ್ಲವನ್ನೂ ಮೀರಿಸಿ ಗೇಮಿಂಗ್ ಬೆಳೆಯಲಿದೆ. ಇದು ನಮ್ಮ ಊಹೆಗೂ ಮೀರಿದ್ದು ಎಂದು ಅನಿಸಿದರೂ ಅಂಥದ್ದೊಂದು ಟ್ರೆಂಡ್ ಸೃಷ್ಟಿಯಾಗುತ್ತಿರುವುದನ್ನು ಕಾಣಬಹುದಾಗಿದೆ ಎಂದು ಅಂಬಾನಿ ಹೇಳಿದರು.

ಇದನ್ನೂ ಓದಿ: ರಿಲಾಯನ್ಸ್-ಮೈಕ್ರೋಸಾಫ್ಟ್ ಒಪ್ಪಂದ ಈ ದಶಕದ ಮಹತ್ವದ ಬೆಳವಣಿಗೆ: ಮುಕೇಶ್ ಅಂಬಾನಿ

ಪ್ರತಿಯೊಬ್ಬರೂ ಬಿಲ್ ಗೇಟ್ಸ್ ಆಗಬಹುದು:

ಭಾರತದಲ್ಲಿ ಯುವ ಉದ್ಯಮಿಗಳು ಬೆಳೆಯಲು ಅನುಕೂಲವಾದ ಪರಿಸ್ಥಿತಿ ಇದೆ. ಇಲ್ಲಿಯ ಪ್ರತಿಯೊಬ್ಬ ಸಣ್ಣ ಉದ್ಯಮಿ ಮತ್ತು ಉದ್ಯಮವೂ ಧೀರೂಭಾಯ್ ಅಂಬಾನಿಯೋ ಅಥವಾ ಬಿಲ್ ಗೇಟ್ಸ್ ಅವರೋ ಆಗುವ ಅವಕಾಶ ಹೊಂದಿದ್ದಾರೆ. ವಿಶ್ವದ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ವಿಶೇಷತೆಯೇ ಇದಾಗಿದೆ. ತಳಮಟ್ಟದಲ್ಲಿ ಉದ್ಯಮಶೀಲತೆಯ ಶಕ್ತಿ ಸಾಕಷ್ಟಿದೆ. ಈ ಸಣ್ಯ ಉದ್ಯಮಗಳು ದೇಶದ ಶೇ. 70ರಷ್ಟು ಉದ್ಯೋಗ ನೀಡುತ್ತವೆ. ಭಾರತದ ರಫ್ತಿನಲ್ಲಿ ಶೇ. 40 ಪಾಲು ಈ ಉದ್ಯಮಗಳಿಗಿದೆ. ಇವರಿಗೆ ಉತ್ತಮ ತಂತ್ರಜ್ಞಾನ ಸಿಕ್ಕರೆ ಭಾರತ ಇನ್ನಷ್ಟು ವೇಗದಲ್ಲಿ ಬೆಳೆಯಬಲ್ಲುದು ಎಂದು ಮುಕೇಶ್ ಅಂಬಾನಿ ಅಂದಾಜು ಮಾಡಿದರು.

ಇನ್ನೈದು ಅಥವಾ ಹತ್ತು ವರ್ಷಗಳಲ್ಲಿ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕ ದೇಶವಾಗಲಿದೆ. ನೀವು 1992ರಲ್ಲಿ ಮೈಕ್ರೋಸಾಫ್ಟ್​ಗೆ ಕೆಲಸಕ್ಕೆ ಸೇರಿದ ಸಂದರ್ಭದಲ್ಲಿ ಭಾರತದ ಆರ್ಥಿಕತೆ 300 ಬಿಲಿಯನ್ ಡಾಲರ್ (21 ಲಕ್ಷ ಕೋಟಿ ರೂ) ಇತ್ತು. ಇವತ್ತು 3 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಬೆಳೆದುನಿಂತಿದೆ. ಇಷ್ಟು ಅಗಾಧವಾಗಿ ಭಾರತ ಬೆಳೆಯುತ್ತದೆಂದು ಯಾರೂ ಅಂದಾಜು ಮಾಡಿರಲಿಲ್ಲ ಎಂದು ಸತ್ಯ ನಾಡೆಲ್ಲಾ ಅವರಿಗೆ ಅಂಬಾನಿ ತಿಳಿಸಿದರು.

ಇದನ್ನೂ ಓದಿ: Gold Price: 43 ಸಾವಿರ ಗಡಿ ದಾಟಿದ ಚಿನ್ನದ ಬೆಲೆ; ಏಳು ವರ್ಷಗಳಲ್ಲಿಯೇ ದಾಖಲೆ ಏರಿಕೆ

ಹಿಂದಿನ ಅಮೆರಿಕನ್ ಅಧ್ಯಕ್ಷರು ಭಾರತಕ್ಕೆ ಬಂದಿದ್ದಕ್ಕಿಂತ ಈಗ ಟ್ರಂಪ್ ಬಂದಾಗಿನ ಸ್ಥಿತಿ ಬಹಳ ವಿಭಿನ್ನವಾಗಿದೆ. ಕೋಟ್ಯಂತರ ಜನರು ಮೊಬೈಲ್ ಅನುಭವಿಗಳಾಗಿದ್ದಾರೆ. ಇಲ್ಲಿನ ಮೊಬೈಲ್ ನೆಟ್ವರ್ಕ್ ವಿಶ್ವದ ಯಾವುದೇ ಭಾಗಕ್ಕಿಂತಲೂ ಕಡಿಮೆ ಇಲ್ಲ. ಟ್ರಂಪ್ ಅವರು ಹೋಗಿರುವ ಅಹ್ಮದಾಬಾದ್​ನ ಮೊಟೆರಾ ಸ್ಟೇಡಿಯಂನಲ್ಲಿ ವಿಶ್ವದ ಯಾವುದೇ ಭಾಗದಕ್ಕಿಂತಲೂ ಉತ್ತಮ ಡಿಜಿಟಲ್ ವ್ಯವಸ್ಥೆ ಹೊಂದಿದೆ. ಇದು ನಮ್ಮ ನವಭಾರತ ಎಂದು ಅಂಬಾನಿ ಅಭಿಪ್ರಾಯಪಟ್ಟರು.

ಮೊಬೈಲ್ ಸೇವೆಯಲ್ಲಿ ಜಿಯೋ ಮಾಡಿದ ಕ್ರಾಂತಿಕಾರಕ ಬದಲಾವಣೆ ಬಗ್ಗೆಯೂ ಅಂಬಾನಿ ಮಾತನಾಡಿದರು. ಜಿಯೋ ಆಗಮನಕ್ಕೆ ಮುನ್ನ ಭಾರತದಲ್ಲಿ 256 ಕೆಬಿಪಿಎಸ್ ವೇಗದ ಬ್ರಾಡ್​ ಬ್ಯಾಂಡ್ ಕನೆಕ್ಟಿವಿಟಿ ಇತ್ತು. ಜಿಯೋ ಪ್ರವೇಶದ ನಂತರ ಇವತ್ತು 21 ಎಂಬಿಪಿಎಸ್ ಸರಾಸರಿ ವೇಗ ಸಿಗುತ್ತಿದೆ. ಜಿಯೋಗಿಂತ ಮುಂಚೆ ಡೇಟಾ ದರ 30-50 ಸಾವಿರ ರೂ ಇತ್ತು. ಬಡವರು ಬಳಕೆ ಮಾಡುತ್ತಿದ್ದ 2ಜಿ ದರವೇ 10 ಸಾವಿರ ರೂ ಇತ್ತು. ಜಿಯೋ ಈಗ ಒಂದು ಜಿಬಿ ಡೇಟಾವನ್ನು 12-14 ರೂಪಾಯಿಗೆ ನೀಡುತ್ತಿದೆ. ಕಳೆದ 3 ವರ್ಷದಲ್ಲಿ ಜಿಯೋ ಸಾಕಷ್ಟು ಸಾಧನೆ ಮಾಡಿದೆ. ಜಿಯೋದಿಂದಾಗಿ 38 ಕೋಟಿ ಜನರಿಗೆ 4ಜಿ ತಂತ್ರಜ್ಞಾನ ಲಭ್ಯವಾದಂತಾಗಿದೆ ಎಂದು ಅಂಬಾನಿ ತಿಳಿಸಿದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: