ತುಕ್ಕು ಹಿಡಿದಿದೆ ಎಂಎಸ್​ಪಿ ಮಾಡೆಲ್; ಅಪ್ಪ ಹಾಕಿದ ಆಲದ ಮರವೆಂದು ಜೋತು ಬೀಳಲಾದೀತೆ?

ಎಂಎಸ್​ಪಿ ಚೌಕಟ್ಟು ಬಿಟ್ಟು ಆಲೋಚಿಸುವವರಿಗೆ ಕೇಂದ್ರದ ಕೃಷಿ ಕಾಯ್ದೆಗಳು ಸಹಾಯವಾಗುತ್ತವೆ. ಎಂಎಸ್​ಪಿ ಎಂಬ ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳುವವರು ಭವಿಷ್ಯದ ಸ್ಪರ್ಧೆಯಲ್ಲಿ ಹಿಂದುಳಿದುಬಿಡುವ ಸಾಧ್ಯತೆ ಹೆಚ್ಚು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ನವದೆಹಲಿ: ಯಾವುದೇ ಕ್ಷೇತ್ರದಲ್ಲಾದರೂ ಒಂದು ಸಮಸ್ಯೆಗೆ ಬೆಲೆ ನಿಗದಿ ವ್ಯವಸ್ಥೆ ತಾತ್ಕಾಲಿಕ ಉಪಶಮನ ಆಗಬಹುದು. ಆದರೆ, ದೀರ್ಘಕಾಲದ ದೃಷ್ಟಿಯಲ್ಲಿ ಈ ವ್ಯವಸ್ಥೆ ಸಮರ್ಪಕ ಎನಿಸುವುದಿಲ್ಲ. ಭಾರತದ ಕೃಷಿ ಕ್ಷೇತ್ರಕ್ಕೂ ಇದು ಅನ್ವಯ ಆಗುತ್ತದೆ. ಉದಾಹರಣೆಗೆ ಪೆಟ್ರೋಲಿಯಮ್ ಉತ್ಪನ್ನಗಳ ಮೇಲಿನ ಬೆಲೆ ನಿಗದಿ ಕ್ರಮದಿಂದಾಗಿ ಸರ್ಕಾರ ಆಯಿಲ್ ಬಾಂಡ್​ಗಳನ್ನ ಹೆಚ್ಚು ಸಂಖ್ಯೆಯಲ್ಲಿ ಬಿಡುಗಡೆ ಮಾಡಬೇಕಾಯಿತು. ಅಂತಿಮವಾಗಿ ಜಾಗತಿಕ ಸಗಟು ಮಾರುಕಟ್ಟೆ ಬೆಲೆ ಆಧಾರದ ಮೇಲೆ ಪೆಟ್ರೋಲಿಯಂ ಉತ್ಪನ್ನಗಳ ರೀಟೇಲ್ ದರವನ್ನ ನಿಗದಿ ಮಾಡುವ ಒಂದು ಗಟ್ಟಿ ನಿರ್ಧಾರಕ್ಕೆ ಸರ್ಕಾರ ಬಂದಿತು. ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬೆಲೆ ನಿಗದಿ ಕ್ರಮಗಳು ಬ್ಯಾಂಕಿಂಗ್ ವಲಯಕ್ಕೆ ಕಷ್ಟ ಕೊಟ್ಟವು. ಇಂಥ ಬೆಲೆ ನಿಗದಿ ವ್ಯವಸ್ಥೆಯಿಂದ ದೂರವಾಗಲು ಹಿಂದಿನಿಂದಲೂ ಸರ್ಕಾರಗಳು ಪ್ರಯತ್ನಿಸುತ್ತಲೇ ಇವೆ.

  ಬೇರೆ ಕ್ಷೇತ್ರಗಳಲ್ಲಿ ಬೆಲೆ ನಿಗದಿ ವ್ಯವಸ್ಥೆ ಸರಿಯಾಗುತ್ತಿಲ್ಲವೆಂದ ಮೇಲೆ ಅದು ಕೃಷಿ ಕ್ಷೇತ್ರಕ್ಕೆ ಹೇಗೆ ಉಪಯುಕ್ತ ಆಗುತ್ತದೆ? ವಿಜ್ಞಾನಿ ಆಲ್ಬರ್ಟ್ ಐನ್​ಸ್ಟೀನ್ ಹೇಳಿದಂತೆ ಒಂದೇ ಕೆಲಸವನ್ನ ಮತ್ತೆ ಮತ್ತೆ ಮಾಡಿದರೆ ಬೇರೆ ಫಲಿತಾಂಶ ನಿರೀಕ್ಷಿಸಲು ಹೇಗೆ ಸಾಧ್ಯ?

  ಮಿನಿಮಮ್ ಸಪೋರ್ಟ್ ಪ್ರೈಸಸ್, ಅಂದರೆ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಎಂಬುದು ಹಸಿರು ಕ್ರಾಂತಿಯ ನಂತರ ಶುರುವಾದ ಒಂದು ಕ್ರಮ. ಹಸಿರು ಕ್ರಾಂತಿಯ ಫಲಶ್ರುತಿಯಾಗಿ ಭಾರತದಲ್ಲಿ ಆಹಾರ ಉತ್ಪಾದನೆ ಗಮನಾರ್ಹವಾಗಿ ಹೆಚ್ಚಾದಾಗ ಎಂಎಸ್​ಪಿ ವ್ಯವಸ್ಥೆ ತರಲಾಯಿತು. ಒಂದು ಬೆಳೆಗೆ ಸರ್ಕಾರವೇ ಇಂತಿಷ್ಟು ದರ ನಿಗದಿ ಮಾಡಿ ರೈತರಿಂದ ಬೆಳೆಗಳನ್ನ ಖರೀಸುವುದೇ ಎಂಎಸ್​ಪಿ ವ್ಯವಸ್ಥೆ. ರೈತರ ಬೆಳೆಗಳನ್ನ ಸರ್ಕಾರವೇ ಖರೀದಿ ಮಾಡುತ್ತಿದ್ದರಿಂದ ಈ ವ್ಯವಸ್ಥೆ ಸರಿ ಎಂಬಂತೆಯೇ ಇತ್ತು. ಆದರೆ, 50 ವರ್ಷಗಳ ನಂತರವೂ ಇದು ಸಂದರ್ಭೋಚಿತ ಆಗಿರಲು ಸಾಧ್ಯವೇ? ಬೇಳೆ ಕಾಳು, ಗೋದಿ ಇತ್ಯಾದಿ 23 ಬೆಳೆಗಳಿಗೆ ಕೇಂದ್ರ ಸರ್ಕಾರ ಎಂಎಸ್​ಪಿ ನಿಗದಿ ಮಾಡಿದೆ. ರೈತರು ಬೆಳೆದ ಎಲ್ಲವನ್ನೂ ಸರ್ಕಾರ ಕೊಳ್ಳಲು ಆಗುವುದಿಲ್ಲ. ಹೆಚ್ಚು ಜಮೀನು ಇರುವ ಅನುಕೂಲಸ್ಥ ರೈತರೇ ಸರ್ಕಾರಕ್ಕೆ ಮೊದಲು ಮಾರಾಟ ಮಾಡಿಬಿಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾದರೆ, ಸಣ್ಣ ರೈತರು ಪಾಡೇನು?

  ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಸರ್ಕಾರ ಇದೀಗ ರೈತರಿಗೆ ಹೆಚ್ಚು ಮಾರುಕಟ್ಟೆಯ ವ್ಯವಸ್ಥೆ ಕಲ್ಪಿಸಿದೆ. ರೈತರು ಒಟ್ಟುಗೂಡಿ ಖಾಸಗಿ ಖರೀದಿದಾರರನ್ನ ಗೊತ್ತುಮಾಡಿ ತಮ್ಮ ಬೆಳೆಗಳಿಗೆ ಉತ್ತಮ ಬೆಲೆ ಕಂಡುಕೊಳ್ಳುವ ವಿಫುಲ ಅವಕಾಶಗಳಿವೆ. ಇದೇ ಜೂನ್ ತಿಂಗಳಲ್ಲಿ ಜಾರಿಗೆ ಬಂದಿರುವ ಮೂರು ಕೃಷಿ ಕಾಯ್ದೆಗಳು ಕೆಲವೇ ತಿಂಗಳಲ್ಲಿ ತಮ್ಮ ಪರಿಣಾಮ ತೋರಿವೆ. ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ರೈತರು ಸಹ್ಯಾದ್ರಿ ಕೃಷಿ ಉತ್ಪಾದಕ ಸಂಘದ ಮೂಲಕ ನಗರ ನಿವಾಸಿಗಳಿಗೆ ತಮ್ಮ ಉತ್ಪನ್ನಗಳ ನೇರ ಮಾರಾಟ ಮಾಡುತ್ತಿದ್ದಾರೆ. ಇ-ಕಾಮರ್ಸ್, ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳನ್ನೂ ಅವರು ಬಳಕೆ ಮಾಡಿಕೊಂಡಿದ್ದಾರೆ. ಮಧ್ಯಪ್ರದೇಶದ ಸಣ್ಣ ರೈತನೊಬ್ಬ ಹೊಸ ಕೃಷಿ ಕಾಯ್ದೆಗಳ ನೆರವಿನಿಂದ ತನ್ನ ಭತ್ತ ಬೆಳೆಗೆ ಒಳ್ಳೆಯ ಬೆಲೆ ಪಡೆದಿದ್ದಾರೆ. ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರ ಮೊದಲಾದ ರಾಜ್ಯಗಳಲ್ಲಿ ಇಂಥ ಹಲವಾರು ನಿದರ್ಶನಗಳಿವೆ. ಆಂಧ್ರ ಮತ್ತು ತೆಲಂಗಾಣದ ಕೃಷಿಕರ ಸಂಘಟನೆಯೊಂದು ಕೇಂದ್ರ ಕೃಷಿ ಕಾಯ್ದೆಗಳ ಪರವಾಗಿ ನಿಂತು ಹೇಳಿಕೆ ನೀಡುತ್ತಿದೆ.

  ಹೊಸ ಕೃಷಿ ಕಾಯ್ದೆಗಳಿಂದ ಸರಬರಾಜು ಸರಪಳಿಯ (ಸಪ್ಲೈ ಚೈನ್) ಆಧುನೀಕರಣ ಆಗುತ್ತದೆ. ಕೃಷಿಕರಿಗೆ ಅತ್ಯಾಧುನಿಕ ಕೃಷಿ ತಂತ್ರಜ್ಞಾನ, ಸಲಕರಣೆ ಇತ್ಯಾದಿ ಪರಿಚಯವಾಗುತ್ತದೆ. ನಿಂಜಾಕಾರ್ಟ್(Ninjacart), ವೇಕೂಲ್(WayCool) ಮೊದಲಾದ ಸಂಸ್ಥೆಗಳು ಸಣ್ಣ ರೈತರಿಗೆ ಖಾಸಗಿ ಖರೀದಿದಾರ ಸಂಪರ್ಕ ಕಲ್ಪಿಸುವ ಕೆಲಸ ಮಾಡುತ್ತಿವೆ. ಬದಲಾವಣೆಗೆ ತೆರೆದುಕೊಳ್ಳುವ ರೈತರಿಗೆ ಒಳ್ಳೆಯ ಅವಕಾಶ ಕಲ್ಪಿಸುವ ವಾತಾವರಣ ನಿರ್ಮಾಣ ಸಾಧ್ಯವಾಗುತ್ತಿದೆ.

  ಕೃಷಿ ಉತ್ಪಾದನೆ ಉತ್ತಮಗೊಳ್ಳುತ್ತಿರುವ ಮಟ್ಟದಲ್ಲಿ ಸ್ಥಳೀಯ ಅನುಭೋಗ ಇಲಲ. ಆಹಾರ ಭದ್ರತೆ ಸಮಸ್ಯೆಗೆ ಸಂಪೂರ್ಣ ಪರಿಹಾರ ಕಂಡುಕೊಳ್ಳಲು ಆಗಿಲ್ಲ. ಆದರೆ, ದೇಶ ಆಹಾರ ಸ್ವಾವಲಂಬನೆ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ವಿಸ್ತೃತ ಮಾರುಕಟ್ಟೆಯ ಫಲಶ್ರುತಿಯಾಗಿ ರಫ್ತು ಸಾಧ್ಯತೆ ಇದೆ. 2020ರಷ್ಟರಲ್ಲಿ ಕೃಷಿ ಉತ್ಪನ್ನಗಳ ರಫ್ತಿನಿಂದ 60 ಬಿಲಿಯನ್ ಡಾಲರ್ ಹಣದ ಗುರಿ ಇಟ್ಟುಕೊಳ್ಳಲಾಗಿದೆ. ಕಳೆದ ಎರಡು ಹಣಕಾಸು ವರ್ಷಗಳಲ್ಲಿ ರಫ್ತು ಪ್ರಮಾಣ 40 ಬಿಲಿಯನ್ ಡಾಲರ್​ಗಿಂತಲೂ ಕಡಿಮೆ ಇದೆ. ಇಂಥ ಪರಿಸ್ಥಿತಿಯಲ್ಲಿ ಕೃಷಿ ಕಾಯ್ದೆಗಳು ಸಹಾಯಕ್ಕೆ ಬರುತ್ತವೆ. ಎಂಎಸ್​ಪಿ ಎಂಬ ಚೌಕಟ್ಟು ಬಿಟ್ಟು ಆಲೋಚಿಸುವವರಿಗೆ ಇದು ಸಹಾಯವಾಗುತ್ತದೆ. ಎಂಎಸ್​ಪಿ ಎಂಬ ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳುವವರು ಭವಿಷ್ಯದ ಸ್ಪರ್ಧೆಯಲ್ಲಿ ಹಿಂದುಳಿದುಬಿಡುವ ಸಾಧ್ಯತೆ ಹೆಚ್ಚು.

  ಭಾರತದ ಕೃಷಿ ಕ್ಷೇತ್ರಕ್ಕೆ ಬಂಡವಾಳ ಬೇಕಿದೆ. ಆಹಾರ ಸಂಸ್ಕರಣೆ, ವಿವಿಧ ಸೌಕರ್ಯ, ಪರಿಕರ, ಸಾರಿಗೆ, ಶೀತಾಗಾರ ಇತ್ಯಾದಿ ಸಮರ್ಪಕ ವ್ಯವಸ್ಥೆಗೆ ಹಣದ ಅಗತ್ಯವಿದೆ. ಮುಕ್ತ ಮಾರುಕಟ್ಟೆಯಲ್ಲಿ ರೈತರ ಬೆಳೆಗಳನ್ನ ಖರೀದಿ ಮಾಡಲು ಖಾಸಗಿ ಸಂಸ್ಥೆಗಳಿಗೆ ಅನುಮತಿ ಸಿಕ್ಕರೆ ಮಾತ್ರ ಇಂಥವೆಲ್ಲಾ ಸೌಲಭ್ಯಗಳಿಗೆ ಬಂಡವಾಳ ಹರಿದುಬರಲು ಸಾಧ್ಯ. ದೂರದೃಷ್ಟಿಯಿಂದ ನೋಡಿದಾಗ ಈ ಕೃಷಿ ಕಾಯ್ದೆಗಳು ಭಾರತೀಯ ರೈತರ ಜೀವನವನ್ನ ಬದಲಿಸುವ ಶಕ್ತಿ ಹೊಂದಿವೆ ಎಂದನಿಸುತ್ತದೆ.

  - ಆಶೀಶ್ ಚಂದೋರ್ಕರ್, ಸ್ನಾಹಿ ಫೌಂಡೇಶನ್, ಪುಣೆ
  Published by:Vijayasarthy SN
  First published: