MAshok KumarMAshok Kumar
|
news18 Updated:August 10, 2019, 12:39 PM IST
ರಾಹುಲ್ ಗಾಂಧಿ
- News18
- Last Updated:
August 10, 2019, 12:39 PM IST
ನವ ದೆಹಲಿ (ಆಗಸ್ಟ್.10) ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ರಣಭೀಕರ ಮಳೆಗೆ ಕರ್ನಾಟಕ ತಮಿಳುನಾಡು ಹಾಗೂ ಕೇರಳ ರಾಜ್ಯದ ಗಡಿಭಾಗದ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ. ಜನಜೀವನ ಅಸ್ತವ್ಯಸ್ತವಾಗಿದೆ. ಅದರಲ್ಲೂ ವಿಪರೀತ ಭೂ ಕುಸಿತ ಉಂಟಾಗಿರುವ ತಮಿಳುನಾಡು ಕೇರಳ ಗಡಿಭಾಗದ ವಯನಾಡು ಜಿಲ್ಲೆಯ ಭೂ ನಕ್ಷೆಯೇ ಬದಲಾಗಿದ್ದು, ಪರಿಹಾರ ಕಾರ್ಯ ವೀಕ್ಷಣೆಗೆ ಕ್ಷೇತ್ರದ ಸಂಸದ ಹಾಗೂ ಮಾಜಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ಆಗಮಿಸಲಿದ್ದಾರೆ ಎಂದು ಟಿಪಿಐ ವರದಿ ಮಾಡಿದೆ.
ವಯನಾಡ್ನಲ್ಲಿ ರಾಕ್ಷಸ ಮಳೆ ಮುಂದುವರೆದಿದ್ದು ಪ್ರವಾಹ ಹಾಗೂ ಭೂ ಕುಸಿತದಿಂದಾಗಿ ಜನ ತತ್ತರಿಸುತ್ತಿದ್ದಾರೆ. ಮಳೆಯಿಂದಾಗಿ ಈವರೆಗೆ 6 ಜನ ಮೃತಪಟ್ಟಿದ್ದು 14 ಜನ ಕಾಣೆಯಾಗಿದ್ದಾರೆ. ಸಾವಿರಾರು ಜನ ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇಲ್ಲಿನ ಮೆಪ್ಪಡಿ ಹಾಗೂ ಪುದುಮಾಲಾ ಎಂಬ ಗ್ರಾಮಗಳು ಸಂಪೂರ್ಣ ಜಲಾವೃತವಾಗಿದ್ದು, ಸ್ಥಳೀಯ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಸುರಕ್ಷಿತ ಸ್ಥಳಕ್ಕೆ ಜನರನ್ನು ಸ್ಥಳಾಂತರಿಸಿರುವ ರಾಜ್ಯ ಸರ್ಕಾರ ಗಂಜಿ ಕೇಂದ್ರ ಹಾಗೂ ವೈದ್ಯಕೀಯ ಕ್ಯಾಂಪ್ಗಳನ್ನು ವಯನಾಡ್ಗೆ ಕಳುಹಿಸಿಕೊಟ್ಟಿದೆ. ಮಳೆಗಿಂತ ಭೂ ಕುಸಿತ ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು ರಕ್ಷಣಾ ಕಾರ್ಯಾಚರಣೆ ಸವಾಲಾಗಿ ಪರಿಣಮಿಸಿದೆ. ಭೂ ಕುಸಿತದಿಂದಾಗಿ ಇಡೀ ಜಿಲ್ಲೆಯ ನಕ್ಷೆಯೇ ಬದಲಾಗಿದ್ದು, ಇಲ್ಲಿನ ಜನರ ಜೀವನ ಮತ್ತೆ ಹಳಿಗೆ ಮರಳಲು ದಶಕಗಳೇ ಆಗುತ್ತದೆ ಎಂದು ಹೇಳಲಾಗುತ್ತಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇರಳದ ವಯನಾಡ್ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ರಾಹುಲ್ ಗಾಂಧಿ ಕಳೆದ ತಿಂಗಳು ಕ್ಷೇತ್ರಕ್ಕೆ ತೆರಳಿ ಅಲ್ಲಿನ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದ್ದರು. ಆದರೆ, ಇದೀಗ ವಯನಾಡ್ ಕ್ಷೇತ್ರದ ಜನ ವಿಪರೀತ ಪ್ರವಾಹಕ್ಕೆ ಸಿಲುಕಿದ್ದು ಸಂಸದ ರಾಹುಲ್ ಗಾಂಧಿ ಕ್ಷೇತ್ರ ಕಡೆ ಆಗಮಿಸಿಲ್ಲ ಎಂಬ ಟೀಕೆಗಳು ಎಲ್ಲೆಡೆ ವ್ಯಾಪಕವಾಗಿ ಕೇಳಿಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಅವರು ಭಾನುವಾರ ವಯನಾಡ್ಗೆ ತೆರಳ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಮೇಲುಸ್ತುವಾರಿ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ : Karnataka Rains LIVE: ಉತ್ತರ ಕರ್ನಾಟಕ, ಮಲೆನಾಡು, ಕರಾವಳಿಯಲ್ಲಿ ಪ್ರವಾಹ; ಸಿಎಂ ಯಡಿಯೂರಪ್ಪ ತುರ್ತು ಸುದ್ದಿಗೋಷ್ಠಿ
First published:
August 10, 2019, 12:39 PM IST