ಶಾಸ್ತ್ರೀಯ ಭಾಷೆಗಳ ಪೈಕಿ ಸಂಸ್ಕೃತಕ್ಕೆ ಬೆಣ್ಣೆ, ಕನ್ನಡಕ್ಕೆ ಸುಣ್ಣ: ರಾಜ್ಯಸಭೆಯಲ್ಲಿ ಜಿ.ಸಿ. ಚಂದ್ರಶೇಖರ್ ತರಾಟೆ

ಕೇವಲ 28,000 ಜನ ಮಾತಾಡುವ ಸಂಸ್ಕೃತ ಭಾಷೆ ಒಂದಕ್ಕೆ  643.84 ಕೋಟಿ ರೂಪಾಯಿ ಕೊಟ್ಟಿದೆ. 32 ಕೋಟಿ ಜನರ ಮಾತಾಡುವ ಉಳಿದ 5 ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಒಡಿಯಾ ಭಾಷೆಗಳಿಗೆ ಕೇವಲ 29 ಕೋಟಿ ಕೊಟ್ಟಿದೆ.

 ಜಿಸಿ ಚಂದ್ರಶೇಖರ್​

ಜಿಸಿ ಚಂದ್ರಶೇಖರ್​

  • Share this:
ನವದೆಹಲಿ, ಡಿ. 10: ಕನ್ನಡಿಗರ ಸ್ವಾಭಿಮಾನದ ನಾಡಗೀತೆಯಲ್ಲಿ ನಮಗಿರುವ ದೇಶಪ್ರೇಮದ ಬಗ್ಗೆ 'ಜಯ ಭಾರತ ಜನನಿಯ ತನು ಜಾತೆ ಜಯ ಹೇ ಕರ್ನಾಟಕ ಮಾತೆ' ಎಂಬ ಉಲ್ಲೇಖವಿದೆ. ಅಂದರೆ ಕರ್ನಾಟಕ ಭಾರತ ಮಾತೆಯ ಪುತ್ರಿ ಎಂದು. ಇಂತಹ ಅಗಾಧ ಭಾವನೆ ಇಟ್ಟುಕೊಂಡಿರುವ ಈ ಒಕ್ಕೂಟ ವ್ಯವಸ್ಥೆಯಲ್ಲಿ (Fedral system) ಶಾಸ್ತ್ರೀಯ ಮಾನ್ಯತೆ ಪಡೆದ ಭಾಷೆಗಳಿಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಶುಕ್ರವಾರ ರಾಜ್ಯಸಭೆಯಲ್ಲಿ (Rajyasabha) ಕರ್ನಾಟಕದ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ (G.C. Chandrasekhar) ಆಕ್ರೋಶ ವ್ಯಕ್ತಪಡಿಸಿದರು.

ದೇಶದ 6 ಭಾಷೆಗೆ ಗೌರವ

ಕೇಂದ್ರ ಸರ್ಕಾರ (Union Government) ದೇಶದ 6 ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ (Classical Languages) ಗೌರವ ನೀಡಿದ್ದು, 2ನೇ ಶತಮಾನದಲ್ಲಿ ಪ್ರಚಲಿತವಾಗಿದ್ದ ಗ್ರೀಕ್ ನಾಟಕದಿಂದ ಹಿಡಿದು 3 ಮತ್ತು 4ನೇ ಶತಮಾನದ ತಾಳಗುಂದ ಶಾಸನ, ಹಲ್ಮಿಡಿ ಶಾಸನ ಹೀಗೆ ನಮ್ಮ ಶ್ರೀಮಂತವಾದ ಸುಮಾರು 2000 ವರ್ಷಕ್ಕೂ ಹೆಚ್ಚಿನ ಪರಂಪರೆಯನ್ನು ಹೊಂದಿರುವ ಪ್ರಸ್ತುತ 7. 5 ಕೋಟಿ ಜನಸಂಖ್ಯೆಯಲ್ಲಿ 5 ಕೋಟಿ ಜನರಿಗೆ ಕನ್ನಡ (Kannada) ಬಿಟ್ಟು ಬೇರೆ ಭಾಷೆಯೇ ಗೊತ್ತಿಲ್ಲದ ಕನ್ನಡ ಭಾಷೆಗೆ ಈ ಗೌರವ ಸಿಕ್ಕಿರುವುದು ಕನ್ನಡಿಗರೆಲ್ಲರಿಗೂ ಗರ್ವದ ವಿಷಯವೇ ಆಗಿದೆ.

ತಾರತಮ್ಯ ಏಕೆ ಎಂಬ ಪ್ರಶ್ನೆ

ಶಾಸ್ತ್ರೀಯ ಸ್ಥಾನಮಾನ ಸಿಕ್ಕ ಎಲ್ಲಾ ಭಾಷೆಗಳಿಗೆ ಸಮಾನ ಆದ್ಯತೆ ಕೊಡುವುದನ್ನು ಬಿಟ್ಟು ಕಳೆದ 3 ವರ್ಷಗಳಲ್ಲಿ ಕೇವಲ 28,000 ಜನರು ಮಾತಾಡುವ ಸಂಸ್ಕೃತ (Sanskrit) ಭಾಷೆ ಒಂದಕ್ಕೆ  643.84 ಕೋಟಿ ರೂಪಾಯಿ ಕೊಟ್ಟಿದೆ. ಇದಕ್ಕೆ ನನ್ನ ಅಭ್ಯಂತರವಿಲ್ಲದಿದ್ದರೂ 32 ಕೋಟಿ ಜನರು ಮಾತಾಡುವ ಉಳಿದ  5 ಭಾಷೆಗಳಾದ ಕನ್ನಡ (Kannada), ತಮಿಳು (Tamil), ತೆಲುಗು (Telugu), ಮಲಯಾಳಂ (Malayalam) ಮತ್ತು ಒಡಿಯಾ (Oriya) ಭಾಷೆಗಳಿಗೆ ಕೇವಲ 29 ಕೋಟಿ ಕೊಟ್ಟಿರುವುದು ಸರಿಯಲ್ಲ. ಅದಲ್ಲದೆ 2014ರಿಂದ 2022ರವರೆಗೆ ತೆಗೆದುಕೊಂಡರೆ ಕನ್ನಡಕ್ಕೆ ಸಿಕ್ಕಿರುವುದು ಕೇವಲ 8.39 ಕೋಟಿ‌ ರೂಪಾಯಿ. ತೆಲುಗಿಗೆ 8.36 ಕೋಟಿ ರೂಪಾಯಿ. ತಮಿಳಿಗೆ  50.88 ಕೋಟಿ ರೂಪಾಯಿ ಕೊಟ್ಟರೆ ಸಂಸ್ಕೃತಕ್ಕೆ ಮಾತ್ರ 1,208 ಕೋಟಿ ರೂಪಾಯಿ ಕೊಟ್ಟಿದೆ. ಇದು ತಾರತಮ್ಯ ಧೋರಣೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ವಿವಿಧತೆಯಲ್ಲಿ ಏಕತೆಯೇ ಈ ದೇಶದ ಲಾವಣ್ಯತೆ. ನಾವು ಎಲ್ಲಾ ಮಾತೃಭಾಷೆಗಳನ್ನು ಗೌರವಿಸುತ್ತೇವೆ. ಅದೇ ಸಮಯದಲ್ಲಿ ಪ್ರತಿಯೊಬ್ಬರಿಗೂ ಅವರ ಮಾತೃಭಾಷೆ ಬಹಳ ಮುಖ್ಯವಾಗುತ್ತದೆ, ಒಂದು ಭಾಷೆ ಸತ್ತಾಗ ಅದರ ಜೊತೆಗೆ ಸಂಸ್ಕೃತಿ, ಸಂಪೂರ್ಣ ನಾಗರಿಕತೆ ಮತ್ತು ಜನರನ್ನು ಕಳೆದುಕೊಳ್ಳುವುದರ ಜೊತೆಗೆ ದೃಷ್ಟಿಕೋನಗಳು, ಆಲೋಚನೆಗಳು, ಅಭಿಪ್ರಾಯಗಳನ್ನು ಕಳೆದುಕೊಳ್ಳುತ್ತೇವೆ.

ಇದನ್ನು ಓದಿ: Omicron ಸೋಂಕಿಗೆ ತುತ್ತಾದ 3 ವರ್ಷದ ಕಂದಮ್ಮ; ದೇಶದಲ್ಲಿ 32ಕ್ಕೇರಿದ ಪ್ರಕರಣ ಸಂಖ್ಯೆ

ಮುಖ್ಯವಾಗಿ, ನಾವು ಮಾನವನ ಅನನ್ಯ ಮಾರ್ಗವನ್ನು ಕಳೆದುಕೊಳ್ಳುತ್ತೇವೆ. ಆದ್ದರಿಂದ ಶಾಸ್ತ್ರೀಯ ಕನ್ನಡ ಭಾಷೆಗೆ ಸಾಕಷ್ಟು ಹಣ ಬಿಡುಗಡೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ರಾಜ್ಯಸಭಾ ಸ್ಪೀಕರ್ ರವರ ಮೂಲಕ ಜಿ.ಸಿ. ಚಂದ್ರಶೇಖರ್ ಅವರು ರಾಜ್ಯಸಭಾ ಕಲಾಪದ ಶೂನ್ಯವೇಳೆಯಲ್ಲಿ ಮನವಿ ಮಾಡಿಕೊಂಡರು.
Published by:Seema R
First published: