ರಾಹುಲ್ ಗಾಂಧಿಗೆ ಸುಭದ್ರ ವಿಮಾನ ಕೊಳ್ಳಲು ಮನೆ, ಮಠ ಮಾರಲು ಹೊರಟ ಮಧ್ಯಪ್ರದೇಶ ಕಾಂಗ್ರೆಸ್ ಕಾರ್ಯಕರ್ತರು!

news18
Updated:September 5, 2018, 8:38 AM IST
ರಾಹುಲ್ ಗಾಂಧಿಗೆ ಸುಭದ್ರ ವಿಮಾನ ಕೊಳ್ಳಲು ಮನೆ, ಮಠ ಮಾರಲು ಹೊರಟ ಮಧ್ಯಪ್ರದೇಶ ಕಾಂಗ್ರೆಸ್ ಕಾರ್ಯಕರ್ತರು!
news18
Updated: September 5, 2018, 8:38 AM IST
ನ್ಯೂಸ್ 18 ಕನ್ನಡ

ಇಂದೋರ್ (ಸೆ.5) : ಮಧ್ಯಪ್ರದೇಶದ ಹಲವು ಸ್ಥಳೀಯ ಪತ್ರಿಕೆಗಳಲ್ಲಿ ಮಂಗಳವಾರ ಪ್ರಕಟಗೊಂಡ ಜಾಹೀರಾತೊಂದು ಓದುಗರ ಕುತೂಹಲವನ್ನು ಕೆರಳಿಸಿತ್ತು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸುಭದ್ರವಾದ ಅತ್ಯಾಧುನಿಕ ವಿಮಾನವೊಂದನ್ನು ಖರೀದಿ ಮಾಡಲು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಮನೆ, ಮಠ ಮಾರುವುದಾಗಿ ಹೇಳಿಕೆ ನೀಡಿ ಕಾಂಗ್ರೆಸ್​ನ ಐವರು ನಾಯಕರು ನೀಡಿದ್ದ ಜಾಹೀರಾತು ಅದು.

ಅದೇ ಜಾಹೀರಾತಿನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರೋಟೊಕಾಲ್ ಪ್ರಕಾರ ರಾಜ್ಯಗಳಿಗೆ ಪ್ರಯಾಣಿಸಲು ಆರ್ಟ್​ ಏರ್​ಕ್ರಾಫ್ಟ್​ ಮತ್ತು ವಾಯುಸೇನೆಯ ಹೆಲಿಕಾಪ್ಟರ್​ಗಳನ್ನು ಬಳಸುತ್ತಾರೆ. ಅದೇ ರೀತಿಯಾಗಿ ಕೇಂದ್ರ ಸರ್ಕಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್​ ಗಾಂಧಿ ಅವರಿಗೆ ಅತ್ಯಾಧುನಿಕವಾದ ವಿಮಾನವನ್ನು ಒದಗಿಸಬೇಕು ಎಂದು ಹೇಳಲಾಗಿದೆ.

"ರಾಹುಲ್​ ಗಾಂಧಿ ಪ್ರಾಮಾಣಿಕ ನಾಯಕ ಮತ್ತು ಅವರ ರಕ್ಷಣೆ ನಮ್ಮೆಲ್ಲರ ಸಾಮೂಹಿಕ ಕರ್ತವ್ಯ, ಪಕ್ಷದ ಕಾರ್ಯಕರ್ತರೆಲ್ಲರೂ ಸೇರಿ ರಾಹುಲ್​ ಗಾಂಧಿ ಅವರಿಗೆ ವಿಮಾನ ಖರೀದಿಸಿಕೊಡಬೇಕು ಮತ್ತು ಅವರು ನೂರ್ಕಾಲ ಸುರಕ್ಷತೆಯಿಂದ ಇರುವಂತೆ ಪ್ರಾರ್ಥಿಸಬೇಕು," ಎಂದು ಜಾಹೀರಾತು ನೀಡಿದವರಲ್ಲಿ ಒಬ್ಬರು ಹೇಳಿದ್ದಾರೆ.

"ಗಾಂಧಿ ಕುಟುಂಬ ದೇಶಕ್ಕಾಗಿ ಮಾಡಿರುವ ತ್ಯಾಗ ಅನುಕರಣೀಯ," ಎಂದು ಜಾಹೀರಾತು ನೀಡಿದವರಲ್ಲಿ ಒಬ್ಬರಾದ ಅಶೋಕ್​ ಜೈಸ್ವಾಲ್​ ನ್ಯೂಸ್​ 18ನೊಂದಿಗೆ ದೂರವಾಣಿ ಮೂಲಕತಿಳಿಸಿದ್ದಾರೆ. ಮುಂದುವರೆದು, "ಆರೋಗ್ಯಪೂರ್ಣ ಪ್ರಜಾಪ್ರಭುತ್ವಕ್ಕೆ ಪ್ರಬಲ ವಿರೋಧ ಪಕ್ಷ ಇರಬೇಕು. ಅದರಂತೆ ಕಾಂಗ್ರೆಸ್ ಎನ್​ಡಿಎ ಸರ್ಕಾರಕ್ಕೆ ಪ್ರಬಲ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದೆ. ಆದರೆ, ಕೇಂದ್ರ ಸರ್ಕಾರ ವಿರೋಧ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸುರಕ್ಷತೆಯನ್ನು ಕಡೆಗಣಿಸುತ್ತಿದೆ," ಎಂದು ಆರೋಪಿಸಿದರು.

ಈ ಜಾಹೀರಾತು ಪ್ರಕಟಗೊಳ್ಳುವ ಮುನ್ನ ರಾಹುಲ್​ ಗಾಂಧಿ ಅವರು ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲು ಖಾಸಗಿ ವಿಮಾನದಲ್ಲಿ ಹುಬ್ಬಳ್ಳಿಗೆ ತೆರಳಿದ್ದರು. ಈ ವೇಳೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಒಂದು ವೇಳೆ ಪೈಲೆಟ್ ಇನ್ನು 20 ಸೆಕೆಂಡ್ ತಡ ಮಾಡಿದ್ದರೆ, ವಿಮಾನ ಹಾರಾಟದ ವೇಳೆಯೇ ಪತನಗೊಳ್ಳುತ್ತಿತ್ತು ಎಂದು ಕೇಂದ್ರ ವಿಮಾನಯಾನ ಸಚಿವಾಲಯ ಮಾಹಿತಿ ಬಹಿರಂಗ ಮಾಡಿತ್ತು.

"ರಾಹುಲ್ ಗಾಂಧಿ ಅವರು ಪ್ರಯಾಣಿಸುವ ವಿಮಾನ ಸುರಕ್ಷಿತವಾಗಿಲ್ಲ ಎಂಬುದು ಈ ಒಂದು ಘಟನೆಯಿಂದಲೇ ತಿಳಿದುಬರುತ್ತದೆ. ಹೀಗಾಗಿ ಅವರ ಸುರಕ್ಷತೆಗಾಗಿ ನಾವೆಲ್ಲರೂ ಸೇರಿ ಏನಾದರೂ ಮಾಡಬೇಕು. ಒಂದು ವೇಳೆ ಸರ್ಕಾರ ನಮ್ಮ ಮನವಿಯನ್ನು ಆಲಿಸದಿದ್ದರೇ, ಕಾಂಗ್ರೆಸ್​ ಕಾರ್ಯಕರ್ತರೆಲ್ಲ ಸೇರಿ ರಾಹುಲ್ ಗಾಂಧಿ ಅವರಿಗೆ ಅತ್ಯಾಧುನಿಕವಾದ ವಿಮಾನ ಖರೀದಿಸಿಕೊಡುತ್ತೇವೆ," ಎಂದು ಜೈಸ್ವಾಲ್ ತಿಳಿಸಿದರು.

ಅಷ್ಟೇ ಅಲ್ಲದೇ, ಕಾಂಗ್ರೆಸ್​ ಅಧ್ಯಕ್ಷ ರಾಹಿಲ್ ಗಾಂಧಿ ಅವರಿಗೆ ಅತ್ಯಾಧುನಿಕ ವಿಮಾನ ಒದಗಿಸುವಂತೆ ಪ್ರಧಾನಿ ಮೋದಿ ಅವರಿಗೆ ಪತ್ರವನ್ನೂ ಬರೆಯಲಾಗಿದೆ ಎಂದು ಅವರು ಹೇಳಿದರು.
First published:September 5, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ