ಶಾಂತಿಪುರ: ಅವರಿಬ್ಬರೂ ಪಶ್ಚಿಮ ಬಂಗಾಳದವರು. ಈ ಬಾರಿ 12ನೇ ತರಗತಿಯ ಪರೀಕ್ಷೆ ಬರೆದಿದ್ದರು. ಇತ್ತೀಚೆಗಷ್ಟೇ ಪರೀಕ್ಷೆಯ ಫಲಿತಾಂಶವೂ ಬಂದಿತ್ತು. ಒಂದೇ ಮನೆಯವರು ಆಗಿದ್ದರಿಂದ ಫಲಿತಾಂಶಕ್ಕೂ ಮುನ್ನ ಇಬ್ಬರಲ್ಲೂ ಆತಂಕ ಮನೆ ಮಾಡಿತ್ತು. ರಿಸಲ್ಟ್ ಏನಾಗಬಹುದೋ ಏನೋ ಎಂಬ ಟೆನ್ಶನ್ ಇಬ್ಬರಲ್ಲೂ ಕಾಣುತ್ತಿತ್ತು. ಕೊನೆಗೂ ಫಲಿತಾಂಶವನ್ನು ಇಬ್ಬರೂ ಚೆಕ್ ಮಾಡಿದ್ರು. ಅದರಲ್ಲಿ ಒಬ್ಬರು ಮೂರನೇ ಬಾರಿ ಪ್ರಯತ್ನದ ನಂತರ 284 ಅಂಕಗಳನ್ನು ಪಡೆದು ಪಾಸ್ ಆದ್ರೆ, ಇನ್ನೊಬ್ಬರು 324 ಅಂಕಗಳನ್ನು ಪಡೆದು ಪಾಸ್ ಆದ್ರು. ಫಲಿತಾಂಶ ನೋಡಿದ ತಕ್ಷಣ ಇಬ್ಬರೂ ತಬ್ಬಿಕೊಂಡು ಸಂತಸ ಹೊರಹಾಕಿದ್ರು. ಅಂದಹಾಗೆ ಅವರಿಬ್ಬರೂ ಬೇರಾರು ಅಲ್ಲ, ತಾಯಿ ಮತ್ತು ಮಗ.
ಹೌದು.. ಪಶ್ಚಿಮ ಬಂಗಾಳದ ಶಾಂತಿಪುರದಲ್ಲಿ ತಾಯಿ ಮತ್ತು ಮಗ ಇಬ್ಬರೂ ಕೂಡ ಈ ಬಾರಿಯ 12ನೇ ತರಗತಿ ಪರೀಕ್ಷೆ ಬರೆದಿದ್ದರು. ಹೀಗಾಗಿ ಫಲಿತಾಂಶದ ದಿನ ಇಬ್ಬರಿಗೂ ಕೂಡ ಬೆಳಗ್ಗಿನಿಂದಲೇ ಟೆನ್ಶನ್ ಶುರುವಾಗಿತ್ತು. ಆದರೆ ಇಬ್ಬರೂ ಕೂಡ ಪಾಸ್ ಆಗಿದ್ದಾರೆ ಅನ್ನೋದನ್ನು ತಿಳಿದಾಗ ಮನೆಯಲ್ಲಿ ಖುಷಿ ಇಮ್ಮಡಿಯಾಗಿದೆ. ಅಂದ ಹಾಗೆ ಈ ಪರೀಕ್ಷೆಯಲ್ಲಿ ತಾಯಿ ತನ್ನ ಮಗನಿಗಿಂತ 40 ಅಂಕಗಳನ್ನು ಕಡಿಮೆ ಪಡೆದಿದ್ದಾರೆ. ಅದಾಗ್ಯೂ ತಾಯಿಯೊಬ್ಬರು ಈಗಲೂ ಪರೀಕ್ಷೆ ಬರೆಯಬೇಕೆಂಬ ಅದಮ್ಯ ಆಸೆಯನ್ನಿಟ್ಟುಕೊಂಡು ಅದರಲ್ಲಿ ಯಶಸ್ವಿಯಾಗಿದ್ದು, ನಿಜಕ್ಕೂ ಮಾದರಿ ನಡೆ.
ಇದನ್ನೂ ಓದಿ: Viral News: 17 ರೂಪಾಯಿ ಇದ್ದ ಖಾತೆಯಲ್ಲೀಗ ಕೋಟಿ ಕೋಟಿ ಮೊತ್ತ, ದಿನ ಬೆಳಗಾಗ್ತಿದಂತೆ ಕುಬೇರನಾದ ಕೂಲಿ ಕಾರ್ಮಿಕ!
ಬಡತನವಿದ್ದರೂ ಸಾಧಿಸುವ ಹಂಬಲ
ಅಂದ ಹಾಗೆ 38 ವರ್ಷ ವಯಸ್ಸಿನ ಲತಿಕಾ ಮಂಡಲ್ ಅವರು ಶಾಂತಿಪುರ ಪೊಲೀಸ್ ಠಾಣೆಯ ನರಸಿಂಗ್‌ಪುರ ಹೊಸ ಸರ್ದಾರ್‌ಪಾರಾ ನಿವಾಸಿ. ಶಾಂತಿಪುರದ ನರಸಿಂಗ್‌ಪುರದ ಅಸಿಮ್ ಮಂಡಲ್ ಎಂಬುವರನ್ನು 20 ವರ್ಷಗಳ ಹಿಂದೆ ಮದುವೆಯಾಗಿದ್ದರು. ಮದುವೆಗೂ ಮುನ್ನ ಕೌಟುಂಬಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಲತಿಕಾ ಆರನೇ ತರಗತಿಗಿಂತ ಹೆಚ್ಚು ಓದೋಕೆ ಸಾಧ್ಯವಾಗಿರಲಿಲ್ಲ. ಆದರೂ ಅವರಿಗೆ ತಾನು ಇನ್ನೂ ಹೆಚ್ಚು ಓದಬೇಕೆಂಬ ಕನಸು ಇತ್ತು. ಮದುವೆಯಾದ ಮೇಲೂ ಗಂಡನ ಮನೆಯಲ್ಲಿ ಹಣದ ಕೊರತೆ. ಇತ್ತ ಪತಿ ವೃತ್ತಿಯಲ್ಲಿ ದಿನಗೂಲಿ ನೌಕರ.
ಕುಟುಂಬ ನಿರ್ವಹಣೆ ಮತ್ತು ಮಕ್ಕಳನ್ನು ಬೆಳೆಸುವ ಜವಾಬ್ದಾರಿಯ ಮಧ್ಯೆಯೂ ಲತಿಕಾ ಆಗಾಗ ಪುಸ್ತಕಗಳನ್ನು ಓದುತ್ತಾ ತನ್ನ ಓದುವ ಹುಚ್ಚನ್ನು ಮುಂದುವರಿಸಿದ್ದರು. ಈ ಮಧ್ಯೆ ನೆರೆಹೊರೆಯವರು ನೀನು ಓದು ಎಂದು ಪ್ರೋತ್ಸಾಹ ನೀಡಿದ ಕಾರಣ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಹೀಗಾಗಿ ರವೀಂದ್ರ ಮುಕ್ತ ವಿದ್ಯಾಲಯಕ್ಕೆ ಪ್ರವೇಶ ಪಡೆದಿದ್ದರು.
ಇದನ್ನೂ ಓದಿ: Tipu Sultan Sword: ಕೋಟಿ ಕೋಟಿ ರೂಪಾಯಿಗೆ ಮಾರಾಟವಾಗಿ ದಾಖಲೆ ಸೃಷ್ಟಿಸಿದ ಟಿಪ್ಪು ಸುಲ್ತಾನ್ ಖಡ್ಗ!
ಹೆಚ್ಚು ಓದುವ ಬಯಕೆ
2021 ರಲ್ಲಿ ಲತಿಕಾ ಅವರನ್ನು ನರಸಿಂಗ್‌ಪುರ ಹೈಸ್ಕೂಲ್‌ಗೆ 11 ನೇ ತರಗತಿಯಲ್ಲಿ ಕಲಾ ವಿಭಾಗದಲ್ಲಿ ಅಡ್ಮಿಶನ್ ಮಾಡಲಾಗಿತ್ತು. ಅವರ ಪುತ್ರ ಸೌರವ್ ಪೂರ್ವ ಬರ್ಧಮಾನ್‌ನ ಕಲ್ನಾ ಮಹಾರಾಜ ಪ್ರೌಢಶಾಲೆಯ ವಿದ್ಯಾರ್ಥಿ. ಇಬ್ಬರೂ ಈ ವರ್ಷ ಕಲಾ ವಿಭಾಗದಿಂದ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಇಬ್ಬರೂ ಬೇರೆ ಬೇರೆ ಶಾಲೆಗಳಿದ್ದರೂ, ತಾಯಿ ಮತ್ತು ಮಗ ಇಬ್ಬರೂ ಈ ವರ್ಷ ಹೈಯರ್ ಸೆಕೆಂಡರಿ ಪರೀಕ್ಷೆ ಬರೆದು ಸಾಧಿಸಿ ತೋರಿಸಿದ್ದಾರೆ.
ಭವಿಷ್ಯದಲ್ಲಿ, ಲತಿಕಾ ಅವರು ಪದವಿ ಶಿಕ್ಷಣ ಪಡೆಯುವ ಕನಸು ಹೊಂದಿದ್ದಾರೆ. ಅವರ ಮಗ ಸೌರವ್ ಚೆನ್ನಾಗಿ ಓದಿ ಸರ್ಕಾರಿ ಉದ್ಯೋಗ ಪಡೆಯುವ ಹಂಬಲ ಹೊಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ