Russia ಕ್ಷಿಪಣಿ ದಾಳಿ: ತಾಯಿ, 3 ತಿಂಗಳ ಮಗುವಿನ ಸಾವು ಎಂಥವರನ್ನೂ ಕಾಡದೆ ಇರದು

ರಷ್ಯಾದ ಕ್ಷಿಪಣಿಯೊಂದು ಒಡೆಸಾದ ವಸತಿ ಬ್ಲಾಕ್ ನ ಮೇಲೆ ಬಂದು ಅಪ್ಪಳಿಸಿದಾಗ ಉಕ್ರೇನಿನ ಯುವ ತಾಯಿಯೊಬ್ಬಳು ತನ್ನ ಮೂರು ತಿಂಗಳ ಮಗುವಿನೊಂದಿಗೆ ಸಾವನ್ನಪ್ಪಿದ್ದಾಳೆ.

ದಾಳಿಗೊಳಗಾದ ಉಕ್ರೇನ್​​​

ದಾಳಿಗೊಳಗಾದ ಉಕ್ರೇನ್​​​

 • Share this:
  ಯುದ್ದವು (War) ಎಷ್ಟೊಂದು ಭಯಾನಕವಾಗಿರುತ್ತದೆ ಎಂದು ನಾವು ಈ ಉಕ್ರೇನ್ (Ukraine) ಮತ್ತು ರಷ್ಯಾದ (Russia) ನಡುವೆ ನಡೆಯುತ್ತಿರುವ ಯುದ್ಧವನ್ನು ನೋಡಿ ಅಂದಾಜಿಸಬಹುದು. ಎಷ್ಟೊಂದು ಅಮಾಯಕ ಜನರು ತಮ್ಮ ಪ್ರಾಣವನ್ನು ಕಳೆದು ಕೊಂಡಿದ್ದಾರೆ, ಎಷ್ಟೋ ಜನರು ತಮ್ಮ ಮನೆ ಮತ್ತು ಮನೆಯವರನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಎಷ್ಟೋ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡು ಅನಾಥವಾಗಿದ್ದಾರೆ. ನಾವು ಇತ್ತೀಚೆಗೆ ಒಬ್ಬ ಪುಟ್ಟ ಹುಡುಗಿಯೊಬ್ಬಳು ತನ್ನ ತಾಯಿಯನ್ನು ಯುದ್ದದಲ್ಲಿ ಕಳೆದು ಕೊಂಡು ತಾಯಿಗಾಗಿ ಆ ಮಗು ಬರೆದ ಒಂದು ಮನಕಲುಕುವ ಪತ್ರ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಕಣ್ಣಿನಲ್ಲಿ ಕಣ್ಣೀರನ್ನು ತರಿಸಿದ್ದನ್ನು ನೆನಪಿಸಿಕೊಳ್ಳಬಹುದು. ಈಗ ಮತ್ತೆ ಅಂತಹದೇ ಇನ್ನೊಂದು ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಅದರಲ್ಲಿ ತಾಯಿ ಮತ್ತು ಆಕೆಯ ಮೂರು ತಿಂಗಳ ಹಸುಗೂಸು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

  3 ತಿಂಗಳ ಮಗುವಿನೊಂದಿಗೆ ತಾಯಿ ಸಾವು 

  ರಷ್ಯಾದ ಕ್ಷಿಪಣಿಯೊಂದು ಒಡೆಸಾದ ವಸತಿ ಬ್ಲಾಕ್ ನ ಮೇಲೆ ಬಂದು ಅಪ್ಪಳಿಸಿದಾಗ ಉಕ್ರೇನಿನ ಯುವ ತಾಯಿಯೊಬ್ಬಳು ತನ್ನ ಮೂರು ತಿಂಗಳ ಮಗುವಿನೊಂದಿಗೆ ಸಾವನ್ನಪ್ಪಿದ್ದಾಳೆ. 27 ವರ್ಷದ ವ್ಯಾಲೆರಿ ಗ್ಲೋಡಾನ್ ಮತ್ತು ಅವರ ಮಗಳು ಕಿರಾ ಒಡೆಸಾದ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಮೃತಪಟ್ಟ ಐದು ಮಂದಿಯಲ್ಲಿ ಸೇರಿದ್ದಾರೆ, ಈ ಘಟನೆ ಯುದ್ಧಪೀಡಿತ ದೇಶದಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.

  ಇದನ್ನೂ ಓದಿ: Explained: ಜಗತ್ತಿನ ಯಾವುದೇ ಮೂಲೆಗೂ ಅಪ್ಪಳಿಸಬಲ್ಲದು ರಷ್ಯಾದ ಹೊಸ ಪರಮಾಣು ಕ್ಷಿಪಣಿ ‘ಸರ್ಮತ್’!

  ಕಿರಾ ಜನಿಸಿದ ನಾಲ್ಕು ವಾರಗಳ ನಂತರ, ವ್ಯಾಲೆರಿ ಗ್ಲೋಡಾನ್ ತನ್ನ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ "ಹೊಸ ಮಟ್ಟದ ಸಂತೋಷ" ದ ಬಗ್ಗೆ ಪೋಸ್ಟ್ ಮಾಡಿದ್ದರು. "ಇದು ನನ್ನ ಜೀವನದ ಅತ್ಯುತ್ತಮ 40 ವಾರಗಳು" ಎಂದು ಅವರು ಫೆಬ್ರವರಿ 6 ರಂದು ತಮ್ಮ ಗರ್ಭಧಾರಣೆಯ ಫೋಟೋದೊಂದಿಗೆ ಶೀರ್ಷಿಕೆಯಲ್ಲಿ ಬರೆದಿದ್ದರು.

  ತಾಯಿ ಖುಷಿ 3 ತಿಂಗಳಿಗೇ ಕೊನೆ ಆಯ್ತು

  "ನಮ್ಮ ಮಗುವಿಗೆ ಈಗಾಗಲೇ ಒಂದು ತಿಂಗಳು ತುಂಬಿದೆ. ಇದು ಸಂಪೂರ್ಣವಾಗಿ ಹೊಸ ರೀತಿಯ ಸಂತೋಷದ ಕ್ಷಣ ನಮಗೆ" ಎಂದು ತಾಯಿ ವ್ಯಾಲೆರಿ ಗ್ಲೋಡಾನ್ ಅವರು ಬರೆದು ಕೊಂಡಿದ್ದರು. ಸುದ್ದಿ ಮಾಧ್ಯಮದ ವರದಿಯ ಪ್ರಕಾರ ಗ್ಲೋಡಾನ್ ಮತ್ತು ಆಕೆಯ ಮಗುವು ಶನಿವಾರ ಒಡೆಸಾದಲ್ಲಿನ ಅವರ ಅಪಾರ್ಟ್ಮೆಂಟ್ ನಲ್ಲಿ ಸಾವನ್ನಪ್ಪಿದರು ಎಂದು ಹೇಳಲಾಗುತ್ತಿದೆ. ರಷ್ಯಾ ಮೂಲದ ವ್ಯಾಲೆರಿ ಗ್ಲೋಡಾನ್ ಅವರ ತಾಯಿ ಕೂಡ ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

  ಇದನ್ನೂ ಓದಿ: Explosion: ನೈಜೀರಿಯಾದ ತೈಲ ಸಂಸ್ಕರಣಾಗಾರದಲ್ಲಿ ಸ್ಫೋಟ, ಸುಟ್ಟು ಕರಕಲಾದ 100 ಜನ

  ಗ್ಲೋಡನ್ ಅವರ ಪತಿ ನಂತರ ತನ್ನ ಮಗುವಿನೊಂದಿಗೆ ಯುವ ತಾಯಿಯ ಹೃದಯ ವಿದ್ರಾವಕ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿ ಕೊಂಡರು. ಸುದ್ದಿ ಸಂಸ್ಥೆಯ ಪ್ರಕಾರ, ಉಕ್ರೇನ್ ವಾಯುಪಡೆಯು ತನ್ನ ರಕ್ಷಣಾ ವ್ಯವಸ್ಥೆಗಳು ಕ್ಯಾಸ್ಪಿಯನ್ ಸಮುದ್ರದಿಂದ ಉಡಾಯಿಸಲಾದ ಎರಡು ರಷ್ಯಾದ ಟಿಯು -95 ಕ್ಷಿಪಣಿಗಳನ್ನು ತಡೆದಿವೆ ಎಂದು ಹೇಳಿದೆ. ಆದರೆ ನಾಗರಿಕ ಮೂಲಸೌಕರ್ಯ ಸೇರಿದಂತೆ ಇತರ ನಾಲ್ಕು ಕ್ಷಿಪಣಿಗಳು ನಗರದ ಮೇಲೆ ಬಂದು ಅಪ್ಪಳಿಸಿದವು ಎಂದು ಅವರು ಹೇಳಿದ್ದಾರೆ.

  ಉಕ್ರೇನ್ ಅಧ್ಯಕ್ಷರ ಆಕ್ರೋಶ 

  "ದುರದೃಷ್ಟವಶಾತ್, ಆ ನಾಲ್ಕು ಕ್ಷಿಪಣಿಗಳಲ್ಲಿ ಎರಡು ಕ್ಷಿಪಣಿಗಳು ಮಿಲಿಟರಿ ಸೌಲಭ್ಯದ ಮೇಲೆ ದಾಳಿ ನಡೆಸಿದವು ಮತ್ತು ಎರಡು ವಸತಿ ಕಟ್ಟಡಗಳಿಗೆ ಬಂದು ಅಪ್ಪಳಿಸಿದವು" ಎಂದು ವಾಯುಪಡೆಯ ದಕ್ಷಿಣ ಭಾಗದ ಕಮಾಂಡ್ ಅವರು ಫೇಸ್‌ಬುಕ್ ನಲ್ಲಿ ತಿಳಿಸಿದ್ದಾರೆ. ಒಂದು ವೀಡಿಯೋ ಭಾಷಣದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ನವಜಾತ ಶಿಶುವಿನ ಹತ್ಯೆಗಾಗಿ ರಷ್ಯಾವನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ.

  "ಮೃತಪಟ್ಟವರಲ್ಲಿ 3 ತಿಂಗಳ ಹೆಣ್ಣು ಮಗುವೂ ಸೇರಿದೆ, ಅವಳು ಹೇಗೆ ರಷ್ಯಾಕ್ಕೆ ಬೆದರಿಕೆ ಹಾಕಿದಳು? ಮಕ್ಕಳನ್ನು ಕೊಲ್ಲುವುದು ರಷ್ಯಾ ಒಕ್ಕೂಟದ ಹೊಸ ರಾಷ್ಟ್ರೀಯ ಕಲ್ಪನೆ ಎಂದು ತೋರುತ್ತದೆ" ಎಂದು ಅವರು ಹೇಳಿದರು. "ಈ ಮಗು ಒಂದು ತಿಂಗಳ ಮಗುವಾಗಿದ್ದಾಗ ಯುದ್ಧ ಪ್ರಾರಂಭವಾಯಿತು. ಇಲ್ಲಿ ಏನಾಗುತ್ತಿದೆ ಎಂದು ನೀವು ಊಹಿಸಬಲ್ಲಿರಾ" ಎಂದು ಝೆಲೆನ್ಸ್ಕಿ ಅವರು ಕೇಳಿದರು.
  Published by:Kavya V
  First published: