ವಾಷಿಂಗ್ಟನ್: ಸಾವಿರಾರು ಮೂಕ ಪ್ರಾಣಿಗಳು ಬೆಂಕಿಯಲ್ಲಿ ಬೆಂದು ಹೋದಂತಹ ದಾರುಣ ಘಟನೆ ಅಮೆರಿಕದ (America) ಟೆಕ್ಸಾಸ್‌ನಲ್ಲಿ ನಡೆದಿದೆ. ಡೈರಿ ಫಾರ್ಮ್‌ನಲ್ಲಿ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯಲ್ಲಿ (Fire) ಒಂದಲ್ಲ ಎರಡಲ್ಲ.. ಬರೋಬ್ಬರಿ 18 ಸಾವಿರ ಹಸುಗಳು ( Cattle) ಅಸುನೀಗಿವೆ. ಹೌದು, ಅಮೆರಿಕದ ಟೆಕ್ಸಾಸ್‌ನಲ್ಲಿರುವ ಸೌತ್‌ಫೋರ್ಕ್ ಡೈರಿ ಫಾರ್ಮ್‌ನಲ್ಲಿ ( Dairy Farm) ಭೀಕರ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಅದರಲ್ಲಿ 18 ಸಾವಿರ ಹಸುಗಳು ಸಾವನ್ನಪ್ಪಿವೆ. ಘಟನೆಯಲ್ಲಿ ಓರ್ವ ಮಹಿಳಾ ಉದ್ಯೋಗಿ (Woman Worker) ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಬೆಂಕಿ ಆಕಸ್ಮಿಕಕ್ಕೆ ಇದುವರೆಗೂ ನಿಖರವಾದ ಕಾರಣ ತಿಳಿದುಬಂದಿಲ್ಲ. ಜಮೀನಿನ ಮಾಲೀಕತ್ವದ ಕುಟುಂಬವು ದುರ್ಘಟನೆಯ ಬಗ್ಗೆ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ ಎನ್ನಲಾಗಿದೆ.
ರಾಜ್ಯದ ಅತಿದೊಡ್ಡ ಹಾಲು ಉತ್ಪಾದನಾ ಕೌಂಟಿಯಲ್ಲಿ ಬೆಂಕಿ
ಅಮೆರಿಕದ ಟೆಕ್ಸಾಸ್‌ನಲ್ಲಿರುವ ಸೌತ್‌ಫೋರ್ಕ್ ಡೈರಿ ಫಾರ್ಮ್ ರಾಜ್ಯದ ಅತಿದೊಡ್ಡ ಹಾಲು ಉತ್ಪಾದನಾ ಕೌಂಟಿಗಳಲ್ಲಿ ಒಂದಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಹೆಚ್ಚು ಬಿಸಿಯಾದ ಉಪಕರಣಗಳಿಂದ ಬೆಂಕಿ ಹೊತ್ತಿಕೊಂಡಿದ್ದೇ ಭೀಕರ ಘಟನೆಗೆ ಕಾರಣ ಎನ್ನಲಾಗಿದೆ.
ಕ್ಯಾಸ್ಟ್ರೋ ಕೌಂಟಿ ಶೆರಿಫ್‌ನ ಕಛೇರಿಯು ಫಾರ್ಮ್‌ನಿಂದ ದಟ್ಟವಾದ ಹೊಗೆ ಬರುತ್ತಿರುವಂಥ ಚಿತ್ರಗಳನ್ನು, ಮೇಲೇಳುತ್ತಿರುವ ಜ್ವಾಲೆಗಳ ಫೋಟೋಗಳನ್ನು ಹಂಚಿಕೊಂಡಿದೆ. ಅಗ್ನಿಶಾಮಕ ದಳದವರು ಉರಿಯುತ್ತಿರುವ ಕಟ್ಟಡದೊಳಗೆ ಸಿಲುಕಿದ್ದ ಒಬ್ಬ ಉದ್ಯೋಗಿಯೊಬ್ಬರನ್ನು ರಕ್ಷಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ.
ಅಲ್ಲದೇ ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ಲುಬ್ಬಾಕ್‌ನಲ್ಲಿರುವ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಧ್ಯೆ ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಗಾಗಿ ಜಮೀನಿಗೆ ಹೋಗುವ ಎಲ್ಲಾ ರಸ್ತೆಗಳನ್ನು ಮುಚ್ಚಲಾಗಿದೆ.
2013 ರಿಂದ 60 ಲಕ್ಷಕ್ಕೂ ಹೆಚ್ಚು ಪ್ರಾಣಿಗಳ ಬೆಂಕಿಗೆ ಬಲಿ!
ಇಲ್ಲಿನ ಎನ್ಜಿಒ ಎನಿಮಲ್ ವೆಲ್ಫೇರ್ ಇನ್‌ಸ್ಟಿಟ್ಯೂಟ್‌ನ ಮಾಹಿತಿಯ ಪ್ರಕಾರ ಅಮೆರಿಕದಾದ್ಯಂತ ಕನಿಷ್ಠ ಎರಡು ದಶಕಗಳಲ್ಲಿ ಒಂದೇ ಬೆಂಕಿಯಲ್ಲಿ ನಡೆದಂತಹ ಜಾನುವಾರುಗಳ ದೊಡ್ಡ ಸಾಮೂಹಿಕ ಸಾವು ಇದಾಗಿದೆ.
2013 ರಿಂದ, 60 ಲಕ್ಷಕ್ಕೂ ಹೆಚ್ಚು ಪ್ರಾಣಿಗಳು ಕೊಟ್ಟಿಗೆಯ ಬೆಂಕಿಯಲ್ಲಿ ಸಾವನ್ನಪ್ಪಿವೆ. ಇದು ಸಾಮಾನ್ಯವಾಗಿ ವಿದ್ಯುತ್ ಅಸಮರ್ಪಕ ಕಾರ್ಯಗಳಿಂದ ಉಂಟಾಗುತ್ತದೆ ಎಂದು ಎನಿಮಲ್ ವೆಲ್ಫೇರ್ ಇನ್‌ಸ್ಟಿಟ್ಯೂಟ್ ಹೇಳುತ್ತದೆ. ಆದರೆ ಅವುಗಳಲ್ಲಿ ಜಾನುವಾರುಗಳ ಸಾವಿನ ಪ್ರಮಾಣ ಶೇ. 1 ಕ್ಕಿಂತ ಕಡಿಮೆ ಎಂದು ಹೇಳಿದೆ.
2016ರ ಹಿಮಪಾತವು 35 ಸಾವಿರ ಡೈರಿ ಹಸುಗಳನ್ನು ಸಮಾಧಿ ಮಾಡಿತ್ತು!
ಎನಿಮಲ್ ವೆಲ್ಫೇರ್ ಇನ್‌ಸ್ಟಿಟ್ಯೂಟ್ ಅಂಕಿಅಂಶಗಳ ಪ್ರಕಾರ, 2016 ರಲ್ಲಿ, ಟೆಕ್ಸಾಸ್‌ನಲ್ಲಿ ನಡೆದಂತಹ ಹಿಮಪಾತವು 35,000 ಕ್ಕೂ ಹೆಚ್ಚು ಡೈರಿ ಹಸುಗಳನ್ನು ಕೊಂದಿತ್ತು. ನಂತರ ಕ್ಯಾಲಿಫೋರ್ನಿಯಾದ ಸಂಭವಿಸಿದ ಕಾಡ್ಗಿಚ್ಚಿನಿಂದಾಗಿ ಅನೇಕ ಜಾನುವಾರು ರೈತರು ತಮ್ಮ ಜೀವನೋಪಾಯವನ್ನು ಕಳೆದುಕೊಂಡರು.
ಇನ್‌ಸ್ಟಿಟ್ಯೂಟ್‌ನ 2022 ರ ವರದಿಯು " ಬೆಂಕಿ ಆಕಸ್ಮಿಕಗಳಲ್ಲಿ 100,000 ರಿಂದ 400,000 ಕೋಳಿಗಳನ್ನು ಕೊಲ್ಲಲ್ಪಟ್ಟ ಹಲವು ನಿದರ್ಶನಗಳಿವೆ “ ಎಂಬುದಾಗಿ ಹೇಳಿದೆ.
ಎನಿಮಲ್ ವೆಲ್ಫೇರ್ ಇನ್ಸ್ಟಿಟ್ಯೂಟ್, ಪ್ರತಿ ವರ್ಷ ನೂರಾರು ಸಾವಿರ ಕೃಷಿ ಪ್ರಾಣಿಗಳನ್ನು ಕೊಲ್ಲುವ ಕೊಟ್ಟಿಗೆಯ ಬೆಂಕಿಯನ್ನು ತಡೆಗಟ್ಟಲು ಫೆಡರಲ್ ಕಾನೂನುಗಳನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿದೆ. ಅಮೆರಿಕದ ಕೆಲವು ರಾಜ್ಯಗಳು ಮಾತ್ರ ಅಂತಹ ಕಟ್ಟಡಗಳಿಗೆ ಅಗ್ನಿಶಾಮಕ ಸಂರಕ್ಷಣಾ ಕೋಡ್‌ಗಳನ್ನು ಅಳವಡಿಸಿಕೊಂಡಿವೆ. ಅಲ್ಲದೇ ಅಂತಹ ಬೆಂಕಿಯಿಂದ ಪ್ರಾಣಿಗಳನ್ನು ರಕ್ಷಿಸುವ ಯಾವುದೇ ಫೆಡರಲ್ ನಿಯಮಗಳಿಲ್ಲ ಎಂದು ಹೇಳಲಾಗಿದೆ.
ಸದ್ಯ ಸಾವಿರಾರು ಹಸುಗಳ ಸಾವಿಗೆ ಏನು ಕಾರಣ ಎಂದು ತನಿಖೆಯಿಂದ ತಿಳಿದು ಬರಬೇಕಿದೆ. ಒಟ್ಟಾರೆ ತಂತ್ರಜ್ಞಾನದಲ್ಲಿನ ಲೋಪದಿಂದಾಗಿ ಸಾವಿರಾರು ಜಾನುವಾರುಗಳ ಜೀವ ಹೋದದ್ದು ಮಾತ್ರ ದುರಂತ. ಆದರೆ ಇಂಥ ದುರಂತಗಳು ಆಗಾಗ್ಗೆ ಸಂಭವಿಸುತ್ತಲೇ ಇರುವುದು ಮಾತ್ರ ವಿಪರ್ಯಾಸ. ಇಂಥ ಅವಘಡಗಳು ನಡೆಯದಂತೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ