ಇನ್ನಷ್ಟು ಬ್ಯಾಂಕುಗಳ ವಿಲೀನ? ಸುಳಿವು ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್

ಬ್ಯಾಂಕುಗಳು ಬೃಹತ್ ಗಾತ್ರವಾದಷ್ಟೂ ಹೆಚ್ಚು ಮಾರುಕಟ್ಟೆ ವ್ಯಾಪಿಸಲು ಸಾಧ್ಯವಾಗುತ್ತದೆ. ಇನ್ನಷ್ಟು ಉತ್ತಮ ತಂತ್ರಜ್ಞಾನ, ಸೇವೆ ಒದಗಿಸಬಹುದು. ಹೆಚ್ಚು ಸಾಲ ಕೊಡುವ ಸಾಮರ್ಥ್ಯ ಇರುತ್ತದೆ ಎಂಬುದು ಅನುರಾಗ್ ಠಾಕೂರ್ ಅನಿಸಿಕೆ.

ಸಚಿವ ಅನುರಾಗ್ ಠಾಕೂರ್

ಸಚಿವ ಅನುರಾಗ್ ಠಾಕೂರ್

  • News18
  • Last Updated :
  • Share this:
ನವದೆಹಲಿ(ಫೆ. 09): ದೇಶದ ಹಣಕಾಸು ಸಂಸ್ಥೆಗಳನ್ನು ಬಲಪಡಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಬ್ಯಾಂಕುಗಳ ವಿಲೀನ ಕಾರ್ಯಗಳಿಗೆ ಕೈಹಾಕಿದೆ. ಕಳೆದ ವರ್ಷ 10 ಬ್ಯಾಂಕುಗಳನ್ನು ವಿಲೀನಗೊಳಿಸಲಾಯಿತು. ಇದರೊಂದಿಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಸಂಖ್ಯೆ 27ರಿಂದ 12ಕ್ಕೆ ಇಳಿದಿತ್ತು. ಈಗ ಮುಂದಿನ ದಿನಗಳಲ್ಲಿ ಅಗತ್ಯಬಿದ್ದರೆ ಇನ್ನಷ್ಟು ಬ್ಯಾಂಕುಗಳ ವಿಲೀನ ಮಾಡುವ ಸಾಧ್ಯತೆ ಇದೆ. ಈ ವಿಚಾರವನ್ನು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ತಿಳಿಸಿದ್ದಾರೆ.

“ನಾವು ಬ್ಯಾಂಕುಗಳ ವಿಲೀನ ಮತ್ತು ಮರುಬಂಡವಾಳಪೂರಣ(Recapitalisation) ಕಾರ್ಯ ಯಶಸ್ವಿಯಾಗಿ ಮಾಡಿದ್ದೇವೆ. ದಿವಾಳಿ ಸಂಹಿತೆ (IBC – Insolvency and Bankruptcy Code) ಕೂಡ ಯಶಸ್ವಿಯಾಗಿದ್ದು, ಇದರಿಂದಾಗಿ ಬ್ಯಾಂಕುಗಳಿಗೆ 4 ಲಕ್ಷ ಕೋಟಿಗಿಂತ ಹೆಚ್ಚು ಹಣ ವಾಪಸ್ ಬರಲು ಸಾಧ್ಯವಾಗಿದೆ. ಅಗತ್ಯ ಬಿದ್ದರೆ ಇನ್ನಷ್ಟು ವಿಲೀನ ಕಾರ್ಯ ಮಾಡುತ್ತೇವೆ” ಎಂದು ಠಾಕೂರ್ ಹೇಳಿದರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಳೆದ ವರ್ಷ ಸರ್ಕಾರ ಘೋಷಿಸಿದ ವಿವಿಧ ಬ್ಯಾಂಕುಗಳ ವಿಲೀನ ಕಾರ್ಯದ ನಂತರ ಜಾಗತಿಕ ಶಕ್ತಿಯ ಆರು ಬ್ಯಾಂಕುಗಳ ಸೃಷ್ಟಿಗೆ ದಾರಿ ಮಾಡಿಕೊಟ್ಟಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅನುರಾಗ್ ಠಾಕೂರ್, ಜಾಗತಿಕ ಗಾತ್ರದ ಬ್ಯಾಂಕುಗಳ ಸೃಷ್ಟಿಯಿಂದ ಸರ್ಕಾರದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಮೆಟ್ರೋ ಇಳಿದು ಮನೆಗೆ ತೆರಳುತ್ತಿದ್ದ ಪೊಲೀಸ್ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

ಬ್ಯಾಂಕುಗಳು ಬೃಹತ್ ಗಾತ್ರವಾದಷ್ಟೂ ಹೆಚ್ಚು ಮಾರುಕಟ್ಟೆ ವ್ಯಾಪಿಸಲು ಸಾಧ್ಯವಾಗುತ್ತದೆ. ಇನ್ನಷ್ಟು ಉತ್ತಮ ತಂತ್ರಜ್ಞಾನ, ಸೇವೆ ಒದಗಿಸಬಹುದು. ಹೆಚ್ಚು ಸಾಲ ಕೊಡುವ ಸಾಮರ್ಥ್ಯ ಇರುತ್ತದೆ ಎಂಬುದು ಅವರ ಅನಿಸಿಕೆ.

2017ರಲ್ಲಿ ಕನ್ನಡಿಗರು ಸ್ಥಾಪಿಸಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸೇರಿದಂತೆ ಐದು ಬ್ಯಾಂಕುಗಳು ಸ್ಟೇಟ್ ಬ್ಯಾಂಕ್ ಇಂಡಿಯಾ ಜೊತೆ ವಿಲೀನಗೊಂಡಿದ್ದವು. ಕಳೆದ ವರ್ಷ ಕೂಡ ಕನ್ನಡಿಗರ ಸೃಷ್ಟಿಯಾದ ಕಾರ್ಪೊರೇಷನ್ ಬ್ಯಾಂಕ್ ಮತ್ತು ವಿಜಯ ಬ್ಯಾಂಕುಗಳು ಕೂಡ ಬೇರೆ ಬ್ಯಾಂಕುಗಳ ಪಾಲಾಗಿವೆ. ಕೆನರಾ ಬ್ಯಾಂಕ್ ಜೊತೆ ಸಿಂಡಿಕೇಟ್ ಬ್ಯಾಂಕು; ಇಂಡಿಯನ್ ಬ್ಯಾಂಕ್ ಜೊತೆ ಅಲಹಾಬಾದ್ ಬ್ಯಾಂಕ್; ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜತೆ ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್; ಬ್ಯಾಂಕ್ ಆಫ್ ಬರೋಡಾ ಜೊತೆ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕು; ಪಂಜಾಬ್ ನ್ಯಾಷನಲ್ ಬ್ಯಾಂಕ್ ಜೊತೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಬ್ಯಾಂಕುಗಳು ವಿಲೀನಗೊಂಡಿದ್ದವು.

ಇದನ್ನೂ ಓದಿ: ಹಾಡಹಗಲೇ ಮಾಲ್​ ಒಂದರಲ್ಲಿ 17 ಜನರನ್ನು ಗುಂಡು ಹಾರಿಸಿ ಕೊಂದ ಥಾಯ್ಲೆಂಡ್ ಸೈನಿಕ

ಇನ್ನು, ಈ ಬಾರಿಯ ಕೇಂದ್ರ ಮುಂಗಡಪತ್ರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಲ್​ಐಸಿ ಮತ್ತು ಐಡಿಬಿಐ ಬ್ಯಾಂಕುಗಳಲ್ಲಿನ ಸರ್ಕಾರದ ಕೆಲ ಪಾಲನ್ನು ಮಾರಾಟ ಮಾಡುವ ಪ್ರಸ್ತಾಪ ಮಾಡಿದ್ದರು. ಈ ಬಗ್ಗೆ ಮಾತನಾಡಿದ ರಾಜ್ಯ ಖಾತೆ ಸಚಿವ ಅನುರಾಗ್ ಠಾಕೂರ್, ಈ ನಿರ್ಧಾರದಿಂದ ಹೆಚ್ಚು ಪಾರದರ್ಶಕತೆ, ಸಾರ್ವಜನಿಕರ ಭಾಗಿತ್ವ ಹೆಚ್ಚಿಸುತ್ತದೆ. ಹಾಗೂ ಈಕ್ವಿಟಿ ಮಾರುಕಟ್ಟೆಯನ್ನು ಬಲಪಡಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರದ ವಿಮಾ ಸಂಸ್ಥೆಯಾದ ಎಲ್​ಐಸಿಯಲ್ಲಿ ಸರ್ಕಾರ ಶೇ. 100 ಪಾಲು ಹೊಂದಿದೆ. ಐಡಿಬಿಐನಲ್ಲಿ ಶೇ. 46.5ರಷ್ಟು ಪಾಲು ಹೊಂದಿದೆ. ಮುಂದಿನ ಹಣಕಾಸು ವರ್ಷದಲ್ಲಿ ಬಂಡವಾಳ ಹಿಂಪಡೆಯುವಿಕೆ ಯೋಜನೆಯಿಂದ 2.10 ಲಕ್ಷ ಕೋಟಿ ರೂ ಹಣ ಪಡೆಯುವ ಗುರಿ ಇಟ್ಟುಕೊಂಡಿರುವ ಸರ್ಕಾರವು ಈ ಎರಡು ಸಂಸ್ಥೆಗಳಲ್ಲಿನ ತನ್ನ ಕೆಲ ಪಾಲನ್ನು ಮಾರಾಟ ಮಾಡುವುದರಿಂದ 90,000 ಕೋಟಿ ರೂ ಹಣ ಗಳಿಸುವ ನಿರೀಕ್ಷೆಯಲ್ಲಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: