ಕೋವಿಡ್ ಎರಡನೇ ಅಲೆ ಸೋಂಕು ಕಡಿಮೆಯಾಗಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಮುಂಗಾರು ಅಧಿವೇಶನ ನಡೆಸಲು ಸಜ್ಜಾಗಿದೆ. . ಈಗಾಗಲೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಂಸದೀಯ ಸಮಿತಿ ಅಧಿವೇಶನ ನಡೆಸಲು ಶಿಫಾರಸ್ಸು ಮಾಡಿದ್ದು, ಇದೇ ಜುಲೈ 19ರಿಂದ ಆಗಸ್ಟ್ 13ರವರೆಗೆ 20 ದಿನಗಳ ಕಾಲ ಮುಂಗಾರು ಅಧಿವೇಶನ ನಡೆಯಲಿದೆ. ಈ ಕುರಿತು ಈಗಾಗಲೇ ಸಂಸದೀಯ ವ್ಯವಹಾರ ಕ್ಯಾಬಿನೆಟ್ ಸಮಿತಿ ಸಭೆ ನಡೆಸಿದೆ. ಈ ಕುರಿತು ತಿಳಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಇದೇ 19 ರಂದು ಅಧಿವೇಶನ ಆರಂಭವಾಗಲಿದ್ದು, ಬೆಳಗ್ಗೆ11 ರಿಂದ ಸಂಜೆ 6ರವರೆಗೆ ಲೋಕಸಭೆ ಮತ್ತು ರಾಜ್ಯಸಭೆ ಸದನಗಳು ನಡೆಯಲಿದೆ ಎಂದು ತಿಳಿಸಿದರು
ಈ ಬಾರಿ ಮುಂಗಾರು ಅಧಿವೇಶನದಲ್ಲಿ ಕೆಲವು ಸುಗ್ರೀವಾಜ್ಞೆಗಳು ಸೇರಿದಂತೆ ಅನೇಕ ಮಸೂದೆಗಳನ್ನು ಸರ್ಕಾರ ಮಂಡಿಸುವ ಸಾಧ್ಯತೆ ಇದೆ. 20 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಇನ್ನು ಮುಂಗಾರು ಅಧಿವೇಶನ ಆರಂಭಕ್ಕೆ ಪ್ರತಿಪಕ್ಷಗಳು ಕೂಡ ಕಾಯುತ್ತಿದ್ದು, ಸದನದಲ್ಲಿ ಕೋವಿಡ್ 19 ನಿರ್ವಹಣೆಯಲ್ಲಿ ಸರ್ಕಾರದ ಲೋಪದೋಷಗಳನ್ನು ಕುರಿತು ಚರ್ಚಿಸಲು ತಯಾರಿ ನಡೆಸಿದೆ. ಜೊತೆಗೆ ವಿವಾದಿತ ಕೃಷಿ ಕಾನೂನುನನ್ನು ರದ್ದುಗೊಳಿಸುವ ಕುರಿತು ಕೂಡ ಪಟ್ಟು ಹಿಡಿಯುವ ಸಾಧ್ಯತೆ ಇದೆ.
ಕಳೆದ ಬಜೆಟ್ ಅಧಿವೇಶನದಲ್ಲಿದ್ದ ಪ್ರೋಟೋಕಾಲ್ಗಳನ್ನು ಈ ಬಾರಿ ಅಧಿವೇಶನದಲ್ಲಿ ಕೂಡ ಮುಂದುವರೆಸುವ ಸಾಧ್ಯತೆ ಇದೆ. ಈ ಬಾರಿ ಅಧಿವೇಶನಕ್ಕೂ ಕೂಡ ಸಾರ್ವಜನಿಕರ ಪ್ರವೇಶಕ್ಕೆ ಪ್ರವೇಶಿ ನಿರ್ಬಂಧಿಸಲಾಗಿದೆ.
ಇನ್ನು ಅನೇಕ ಸಂಸದರು ಈಗಾಗಲೇ ಎರಡು ಡೋಸ್ ಲಸಿಕೆ ಪಡೆದಿದ್ದು, ಸಚಿವಾಲಯದ ಸಿಬ್ಬಂದಿಗಳು ಕೂಡ ಬಹುತೇಕರು ಲಸಿಕೆ ಪಡೆದಿದ್ದಾರೆ. ಈ ಹಿನ್ನಲೆ ಸಂಸತ್ತಿನಲ್ಲಿ ಕೋವಿಡ್ ಸೋಂಕು ಹರಡುವ ಭೀತಿ ಈ ಬಾರಿ ಇಲ್ಲ. ಈ ಬಾರಿ ಸಂಸತ್ತಿಗೆ ಆಗಮಿಸುವವರಿಗೆ ಲಸಿಕೆ ಪ್ರಮಾಣ ಪತ್ರದೊಂದಿಗೆ ಹಾಜರಾಗುವಂತೆ ತಿಳಿಸಲಾಗಿದೆ. ಲಸಿಕೆ ಪಡೆಯದ ಸದಸ್ಯರು ಆರ್ಟಿಪಿಸಿಆರ್ ಪರೀಕ್ಷೆ ನೆಗಟಿವ್ ವರದಿಯೊಂದಿಗೆ ಸದನಕ್ಕೆ ಹಾಜರಾಗುವುದು ಅವಶ್ಯವಾಗಿದೆ.
ಇದನ್ನು ಓದಿ: ಕೇರಳ, ಕರ್ನಾಟಕದಲ್ಲಿ ಬಿರುಸಿನ ಮಳೆ, ವರುಣನ ಆಗಮನದ ನಿರೀಕ್ಷೆಯಲ್ಲಿ ದೆಹಲಿ
ಲೋಕಸಭಾ ಮತ್ತು ರಾಜ್ಯಸಭಾ ಸದನದ ಬಹುತೇಕ ಸದಸ್ಯರು ಮೊದಲ ಡೋಸ್ ಪಡೆದಿದ್ದಾರೆ. ಇನ್ನು ಕೆಲವು ಸದಸ್ಯರು ಎರಡನೇ ಡೋಸ್ ಪಡೆಯಬೇಕಿದೆ. ಈ ನಡುವೆ 30 ಸದಸ್ಯರು ಲಸಿಕೆ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಅವರ ಸಂಪರ್ಕ ನಡೆಸಲಾಗುತ್ತಿದೆ
ಏಕಕಾಲದಲ್ಲಿ ಮೇಲ್ಮನೆ ಮತ್ತು ಕೆಳ ಮನೆ ಎರಡು ಕಾರ್ಯ ನಿರ್ವಹಿಸಲಿದೆ.
ಇದೇ ವೇಳೆ ಸದನದಲ್ಲಿ ಸಂಸದ, ಸಚಿವಾಲಯದ ಸಿಬ್ಬಂದಿಗಳು ಮತ್ತು ಅವರ ಕುಟುಂಬಗಳಿಗೆ ವ್ಯಾಕ್ಸಿನೇಷನ್ ನೀಡುವ ಕಾರ್ಯ ನಡೆಸಲಾಗುವುದು ಎಂದಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ