ನವದೆಹಲಿ: ಕೊರೊನಾ ಎರಡನೇ ಅಲೆ ಇನ್ನೂ ಸಂಪೂರ್ಣವಾಗಿ ಕೊನೆಯಾಗಿಲ್ಲ. ಯಾವುದೇ ಸಂದರ್ಭದಲ್ಲಿ ಮೂರನೇ ಅಲೆ ಬರಬಹುದೆಂದು ತಜ್ಞರು ಅಂದಾಜು ಮಾಡಿದ್ದಾರೆ. ಕೊರೊನಾ ಪರಿಸ್ಥಿತಿಯ ನಡುವೆಯೂ ನಿಯಮಾವಳಿಗಳ ಪ್ರಕಾರ ಆರು ತಿಂಗಳಿಗೊಮ್ಮೆ ಸಂಸತ್ತಿನ ಅಧಿವೇಶನ ನಡೆಸಲೇಬೇಕಾಗಿರುವ ಮತ್ತು ಕೆಲವು ಸುಗ್ರೀವಾಜ್ಞೆಗಳಿಗೆ ಸಂಸತ್ತಿನ ಅಂಗೀಕಾರ ಪಡೆಯಲೇಬೇಕಾದ ಅನಿವಾರ್ಯತೆಗೆ ಸಿಲುಕಿರುವ ಒಕ್ಕೂಟ ಸರ್ಕಾರವು ಇಂದಿನಿಂದ ಸಂಸತ್ತಿನ ಮಳೆಗಾಲದ ಅಧಿವೇಶನವನ್ನು ಕರೆದಿದೆ.
ಆಗಸ್ಟ್ 13ರವರೆಗೆ 20 ದಿನಗಳ ಕಾಲ ಸಂಸತ್ತಿನ ಮಳೆಗಾಲದ ಅಧಿವೇಶನ ನಡೆಯಲಿದೆ. ಕೊರೊನಾ ನಂತರದ ಹಿಂದಿನ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸಂಸದರಿಗೆ RT-PCR ಪರೀಕ್ಷೆ ಮಾಡಿಸಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿತ್ತು. ಈಗ ಕೊರೊನಾ ಲಸಿಕೆ ಪಡೆಯದವರು ಮಾತ್ರ RT-PCR ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ. ಲಸಿಕೆ ಪಡೆದಿರುವವರು ಅದರ ಪ್ರಮಾಣಪತ್ರವನ್ನು ಪ್ರಸ್ತುತಪಡಿಸಬೇಕಿದೆ. ಕೊರೊನಾ ನಂತರದ ಹಿಂದಿನ ಸಂಸತ್ ಅಧಿವೇಶನದಲ್ಲಿ ಸಂಸದರ ಆಪ್ತ ಸಹಾಯಕರು ಮತ್ತು ಪತ್ರಕರ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಈ ಬಾರಿ ಸಂಸದರ ಆಪ್ತ ಸಹಾಯಕರು ಮತ್ತು ಪತ್ರಕರ್ತರಿಗೆ ಪ್ರವೇಶ ನೀಡಲಾಗುತ್ತಿದೆ. ಆದರೆ ಈ ಬಾರಿಯ ಅಧಿವೇಶನಕ್ಕೂ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ತಿಳಿಸಿದ್ದಾರೆ.
ಕೊರೊನಾ ಹಿನ್ನಲೆಯಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಸಂಸದರಿಗೆ ಲೋಕಸಭಾ ಮತ್ತು ರಾಜ್ಯಸಭೆಗಳಲ್ಲಿ ಮಾತ್ರವಲ್ಲದೆ ಗ್ಯಾಲರಿ ಮತ್ತಿತರ ಕಡೆ ಆಸನದ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ ರಾಜ್ಯಸಭೆ ಮಧ್ಯಾಹ್ನ ಲೋಕಸಭಾ ಕಲಾಪಗಳನ್ನು ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಎಂದಿನಂತೆ ಲೋಕಸಭಾ ಮತ್ತು ರಾಜ್ಯಸಭಾ ಕಲಾಪಗಳು ಒಟ್ಟಿಗೆ ಬೆಳಿಗ್ಗೆ 11ಕ್ಕೆ ಆರಂಭವಾಗಲಿವೆ. ಎಂದಿನಂತೆ ಸಂಜೆ 6ರವರೆಗೆ ಅಧಿವೇಶನ ನಡೆಸಲಾಗುವುದು ಎಂದು ನಿರ್ಧರಿಸಲಾಗಿದೆ ಎಂದು ಸ್ಪೀಕರ್ ಓಂ ಬಿರ್ಲಾ ಅವರು ವಿವರಿಸಿದ್ದಾರೆ.
ಇದನ್ನೂ ಓದಿ: ನಮ್ಮದೇ ಕ್ಷೇತ್ರದಲ್ಲಿ ಶಕ್ತಿಹೀನರಾಗಿದ್ದೇವೆ: ಎಂಪಿ ಫಂಡ್ ಮತ್ತೆ ಪ್ರಾರಂಭಿಸಿ ಎಂದು ದನಿ ಎತ್ತಿದ ಸಂಸದರು
ಈ ಬಾರಿ ಮುಂಗಾರು ಅಧಿವೇಶನದಲ್ಲಿ ಒಕ್ಕೂಟ ಸರ್ಕಾರವು ಕೆಲವು ಸುಗ್ರೀವಾಜ್ಞೆಗಳು ಮತ್ತು 20ಕ್ಕೂ ಹೆಚ್ಚು ಮಸೂದೆಗಳನ್ನು ಸರ್ಕಾರ ಮಂಡಿಸುವ ಸಾಧ್ಯತೆ ಇದೆ. ಕೊರೋನಾ ಕಾರಣದಿಂದ ಸಂಸತ್ತಿನ ಮೂರು ಅಧಿವೇಶನಗಳನ್ನು ಮೊಟಕುಗೊಳಿಸಲಾಗಿತ್ತು. ಸಾಮಾನ್ಯವಾಗಿ ಜುಲೈನಲ್ಲಿ ಮುಂಗಾರಿನ ಅಧಿವೇಶನ ಶುರು ಆಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಪ್ರಾರಂಭವಾಗಿತ್ತು. ಕಳೆದ ವರ್ಷ ಚಳಿಗಾಲದ ಅಧಿವೇಶನವನ್ನು ರದ್ದುಗೊಳಿಸಲಾಗಿತ್ತು.
ಮುಂಗಾರು ಅಧಿವೇಶನ ಆರಂಭಕ್ಕೆ ಪ್ರತಿಪಕ್ಷಗಳು ಕೂಡ ಕಾಯುತ್ತಿದ್ದು, ಸದನದಲ್ಲಿ ಕೋವಿಡ್ 19 ನಿರ್ವಹಣೆಯಲ್ಲಿ ಸರ್ಕಾರದ ಲೋಪದೋಷಗಳನ್ನು ಕುರಿತು ಚರ್ಚಿಸಲು ತಯಾರಿ ನಡೆಸಿವೆ.
ಜೊತೆಗೆ ವಿವಾದಿತ ಕೃಷಿ ಕಾನೂನುನನ್ನು ರದ್ದುಗೊಳಿಸುವ ಕುರಿತು ಕೂಡ ಪಟ್ಟು ಹಿಡಿಯುವ ಸಾಧ್ಯತೆ ಇದೆ. ಸದನ ಸುಗಮವಾಗಿ ನಡೆಸುವ ದೃಷ್ಟಿಯಿಂದ ಒಕ್ಕೂಟ ಸರ್ಕಾರವು ಸರ್ವ ಪಕ್ಷಗಳ ಸಭೆ ನಡೆಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ