• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Monsoon Session 2020: ಇಂದಿನಿಂದ  ಸಂಸತ್ ಅಧಿವೇಶನ; ಹತ್ತು-ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಸಾಧ್ಯತೆ

Monsoon Session 2020: ಇಂದಿನಿಂದ  ಸಂಸತ್ ಅಧಿವೇಶನ; ಹತ್ತು-ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಸಾಧ್ಯತೆ

ಸಂಸತ್ತು

ಸಂಸತ್ತು

Monsoon Session in Parliament: ಈ ಬಾರಿ ಭಾರತ ಮತ್ತು ಚೀನಾ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆ, ಆರ್ಥಿಕ ಬಿಕ್ಕಟ್ಟು, ಜಿಡಿಪಿ ಕುಸಿತ, ಹೆಚ್ಚುತ್ತಿರುವ ಕೊರೋನಾ ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸುವಂತೆ ವಿರೋಧ ಪಕ್ಷಗಳು ಆಗ್ರಹಿಸುತ್ತಿವೆ. ಆಡಳಿತಾರೂಢ ಪಕ್ಷವು ಚರ್ಚೆಗೆ ಅವಕಾಶ ಮಾಡಿಕೊಡುತ್ತದೊ ಅಥವಾ ಪಲಾಯನ ಮಾಡುತ್ತದೋ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.

ಮುಂದೆ ಓದಿ ...
  • Share this:

ನವದೆಹಲಿ(ಸೆ.14): ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಶುರುವಾಗಲಿದ್ದು ಭಾರತ-ಚೀನಾ ಗಡಿ ಸಂಘರ್ಷ, ಆರ್ಥಿಕ ಬಿಕ್ಕಟ್ಟು, ಜಿಡಿಪಿ‌ ಕುಸಿತ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮತ್ತಿತರ ವಿಷಯಗಳ ಬಗ್ಗೆ ಚರ್ಚೆಯಾಗಬೇಕಿದೆ. ಆದರೆ ಅದಕ್ಕೆ ಸರ್ಕಾರ ಅವಕಾಶ ಮಾಡಿಕೊಡುತ್ತಾ ಎಂಬುದನ್ನು ಕಾದುನೋಡಬೇಕು. ಕೊರೋನಾ ಹಿನ್ನಲೆಯಲ್ಲಿ ಈ ಬಾರಿಯ ಸಂಸತ್ತಿನ ಅಧಿವೇಶನ ಭಿನ್ನವಾಗಿ ನಡೆಯುತ್ತಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಕಲಾಪಗಳನ್ನು ನಡೆಸಲು ನಿರ್ಧರಿಸಲಾಗಿದೆ. ಅದೇ ಕಾರಣಕ್ಕೆ ಶಿಫ್ಟ್ ನಲ್ಲಿ ಲೋಕಸಭಾ ಮತ್ತು ರಾಜ್ಯಸಭಾ ಕಲಾಪಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಇದೇ ಮೊದಲ ಬಾರಿಗೆ ಶನಿವಾರ ಮತ್ತು ಭಾನುವಾರವೂ ರಜೆ ನೀಡದೆ ನಿರಂತರವಾಗಿ ಅಧಿವೇಶನ ನಡೆಸಲಾಗುತ್ತಿದೆ. ಅಕ್ಟೋಬರ್ 1ರವರೆಗೆ ಒಟ್ಟು 18 ದಿನಗಳ ಕಾಲ ನಿರಂತರವಾಗಿ ಅಧಿವೇಶನ ನಡೆಯಲಿದೆ. ಆದರೆ ಈ ಅಧಿವೇಶನದಲ್ಲಿ ಮಹತ್ವದ ವಿಷಯಗಳು ಚರ್ಚೆಯಾಗಲಿವೆಯಾ ಎಂಬುದು ಈ ಕ್ಷಣದವರೆಗೂ ಅನುಮಾನಸ್ಪದವಾಗಿಯೇ ಇದೆ.‌


ಈ ಬಾರಿ ಭಾರತ ಮತ್ತು ಚೀನಾ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆ, ಆರ್ಥಿಕ ಬಿಕ್ಕಟ್ಟು, ಜಿಡಿಪಿ ಕುಸಿತ, ಹೆಚ್ಚುತ್ತಿರುವ ಕೊರೋನಾ ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸುವಂತೆ ವಿರೋಧ ಪಕ್ಷಗಳು ಆಗ್ರಹಿಸುತ್ತಿವೆ. ಆಡಳಿತಾರೂಢ ಪಕ್ಷವು ಚರ್ಚೆಗೆ ಅವಕಾಶ ಮಾಡಿಕೊಡುತ್ತದೊ ಅಥವಾ ಪಲಾಯನ ಮಾಡುತ್ತದೋ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.


ಕೊರೋನಾ ಹಿನ್ನಲೆಯಲ್ಲಿ ಜನರ ಜೀವನಶೈಲಿಯೇ ಬದಲಾಗಿದೆ. ಜೊತೆಗೆ ಸರ್ಕಾರದ ಯಂತ್ರದ ಶೈಲಿ ಕೂಡ. ಇದೇ ರೀತಿ ಈಗ ಇದೇ ಮೊದಲ ಬಾರಿಗೆ ದೇಶದ ಘನತೆವೆತ್ತ ಸಂಸತ್ ಅಧಿವೇಶನವೂ ಭಿನ್ನವಾಗಿ ನಡೆಯಲಿದೆ. ಈ ಬಾರಿಯ ಸಂಸತ್ತಿನ ಮಳೆಗಾಲದ ಅಧಿವೇಶನವನ್ನು ಶಿಫ್ಟ್ ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಅಂದರೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಲೋಕಸಭೆ ಮತ್ತು ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ರಾಜ್ಯಸಭೆ ಕಲಾಪ ಎನ್ನುವ ಮಾದರಿಯಲ್ಲಿ ನಡೆಸಲಾಗುತ್ತದೆ.


ಡ್ರಗ್ಸ್​ ಕೇಸ್​​: ಆರೋಪಿ ಆದಿತ್ಯಾ ಆಳ್ವಾಗಾಗಿ ಹೊರ ರಾಜ್ಯದಲ್ಲೂ ಸಿಸಿಬಿ ಪೊಲೀಸರ ಹುಡುಕಾಟ


ಕೊರೋನಾ ಕಾರಣಕ್ಕೆ ಈ ಬಾರಿಯ ಸಂಸತ್ತಿನ ಮುಂಗಾರು ಅಧಿವೇಶನವನ್ನು ಹೇಗೆ ನಡೆಸಬೇಕೆಂಬ ಗೊಂದಲ ಉಂಟಾಗಿತ್ತು. ಸಂಸತ್ ಸಚಿವಾಲಯದ ಅಧಿಕಾರಿಗಳು ವರ್ಚ್ಯುಯಲ್, ಸೆಮಿ ವರ್ಚ್ಯುಯಲ್, ಬೇರೆ ಬೇರೆ ಪ್ರದೇಶಗಳಲ್ಲಿ ಸಂಸದರನ್ನು ಕೂರಿಸಿ, ಕೆಲವರನ್ನು ಮಾತ್ರ ಸೇರಿಸಿಕೊಂಡು ಎಂಬ ಹಲವು ಮಾದರಿಗಳನ್ನು ನೀಡಿದ್ದರು. ಶಿಫ್ಟ್ ನಲ್ಲಿ ಅಥವಾ ದಿನ ಬಿಟ್ಟು ದಿನ ಅಧಿವೇಶನ ನಡೆಸುವ ಎರಡು ಆಯ್ಕೆಗಳನ್ನು ಮುಂದಿಡಲಾಗಿತ್ತು. ಅಂತಿಮವಾಗಿ ರಾಜ್ಯಸಭೆಯ ಸಭಾಪತಿ ಎಂ.‌ ವೆಂಕಯ್ಯನಾಯ್ಡು ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸಂಸತ್ ಸಚಿವಾಲಯದ ಅಧಿಕಾರಿಗಳ ಜೊತೆ ಹಲವು‌ ಸುತ್ತಿನ ಮಾತುಕತೆ ನಡೆಸಿ, ಹಲವು ಸಾಧ್ಯತೆಗಳನ್ನು ಪರಿಶೀಲಿಸಿ ದಿನ ಬಳಿಕ ಶಿಫ್ಟ್ ನಲ್ಲಿ ನಡೆಸಲು ನಿರ್ಧರಿಸಿದ್ದಾರೆ.


ಕಡೆಯದಾಗಿ ಸಂಸತ್ ಅಧಿವೇಶನ ನಡೆದಿದ್ದು ಮಾರ್ಚ್ 23ರಂದು. ಸಂಸತ್ತಿನ ನಿಯಮಾವಳಿಗಳ ಪ್ರಕಾರ 6 ತಿಂಗಳೊಳಗೆ ಮತ್ತೆ ಅಧಿವೇಶನ ನಡೆಸಲೇಬೇಕು. ಆದುದರಿಂದ ಕೊರಓನಾ ನಡುವೆಯೂ ಸೆಪ್ಟೆಂಬರ್ 22ರೊಳಗೆ ಅಧಿವೇಶನ ನಡೆಸಲೇಬೇಕಾದ ಒತ್ತಡ ನಿರ್ಮಾಣವಾಗಿತ್ತು. ಇದೇ ಹಿನ್ನಲೆಯಲ್ಲಿ ಸೆಪ್ಟೆಂಬರ್ 14ರಿಂದ ಅಧಿವೇಶನ ನಡೆಸಲು ನಿರ್ಣಯ ಮಾಡಲಾಗಿದೆ.


ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರಿಗೆ ಆಸನದ ವ್ಯವಸ್ಥೆಯೂ ಭಿನ್ನವಾಗಿರಲಿದೆ. 542 ಲೋಕಸಭಾ ಸದಸ್ಯರ ಪೈಕಿ ಕೆಲವರಿಗೆ ಲೋಕಸಭೆಯಲ್ಲಿ, ಕೆಲವರಿಗೆ ರಾಜ್ಯಸಭೆಯಲ್ಲಿ ಮತ್ತೆ ಕೆಲವರಿಗೆ ಸೆಂಟ್ರಲ್ ಹಾಲ್ ನಲ್ಲಿ ಆಸನದ ವ್ಯವಸ್ಥೆ ಮಾಡಲಾಗುತ್ತದೆ. ಅಗತ್ಯ ಬಿದ್ದರೆ ಲೋಕಸಭೆ ಮತ್ತು ರಾಜ್ಯಸಭೆ ಗ್ಯಾಲರಿಗಳಲ್ಲಿ ಕೂಡ ಆಸನದ ವ್ಯವಸ್ಥೆ ಮಾಡಲಾಗುತ್ತದೆ‌.


ಈ ಬಾರಿಯ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಶ್ನೋತ್ತರ ಮತ್ತು ಶೂನ್ಯವೇಳೆ ಇರುವುದಿಲ್ಲ. ಪ್ರೈವೇಟ್ ಮೆಂಬರ್ ಬಿಲ್ ಮಂಡಿಸುವುದಕ್ಕೂ ಅವಕಾಶ ಇರುವುದಿಲ್ಲ. ಸಂಸದರು ಆರೋಗ್ಯ ಸೇತು ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಿರುವುದು ಕಡ್ಡಾಯವಾಗಿದೆ. ಎಲ್ಲರನ್ನೂ ತಪಾಸಣೆ ಮಾಡಿದ ಬಳಿಕವೇ ಒಳಗಡೆಗೆ ಪ್ರವೇಶಾವಕಾಶ ಕಲ್ಪಿಸಲಾಗುತ್ತದೆ. ಅಧಿವೇಶನದ ಹಿನ್ನಲೆಯಲ್ಲಿ ಇಡೀ ಸಂಸತ್ ಭವನಕ್ಕೆ ಸ್ಯಾನಿಟೈಸ್ ಮಾಡಲಾಗುತ್ತದೆ. ಸಂಸದರ ಪಿಎಗಳಿಗೆ ಸಂಸತ್ ಭವನಕ್ಕೆ ಪ್ರವೇಶಾವಕಾಶ ಇರುವುದಿಲ್ಲ.

Published by:Latha CG
First published: