ಕೊಚ್ಚಿ (ಜು. 29): ಕೆಲವು ದಿನಗಳಿಂದ ಕೇರಳದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿತ್ತು. ಕೇರಳ ಮಾತ್ರವಲ್ಲದೆ ದಕ್ಷಿಣ ಭಾರತದಾದ್ಯಂತ ಈ ವರ್ಷ ಮಳೆ ಭಾರೀ ಕಡಿಮೆಯಾಗಿದೆ. ಆದರೆ, ಮಂಗಳವಾರದಿಂದ ಕೇರಳದಲ್ಲಿ ಮಳೆ ಹೆಚ್ಚಾಗಿದೆ. ಇನ್ನೂ ಕೆಲವು ದಿನ ಭಾರೀ ಮಳೆಯಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಬುಧವಾರ ಹವಾಮಾನ ಇಲಾಖೆ ಕೇರಳದ ಆರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕೇರಳದ ದಕ್ಷಿಣ ಜಿಲ್ಲೆಗಳಾದ ತಿರುವನಂತಪುರಂ, ಕೊಲ್ಲಂ, ಪತನಾಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕೇರಳದ ರಾಜಧಾನಿಯ ಸುತ್ತಮುತ್ತ ಕೆಲವು ದಿನಗಳಿಂದ ಮಳೆ ಹೆಚ್ಚಾಗಿದೆ. ಕೊಚ್ಚಿಯ ರಸ್ತೆಗಳೆಲ್ಲ ತುಂಬಿ, ಕೆರೆಯಂತಾಗಿದೆ. ಇದರಿಂದ ಜನಸಂಚಾರಕ್ಕೆ ತೊಂದರೆ ಉಂಟಾಗಿದೆ.
ಇದನ್ನೂ ಓದಿ: ಫಾರಿನ್ ಹುಡುಗನ ಜೊತೆ ಆಂಧ್ರದ ಹುಡುಗಿ ಮದುವೆ; ಮೊದಲ ರಾತ್ರಿಯೇ ವಧುವಿಗೆ ಗೊತ್ತಾಯ್ತು ಕಟು ಸತ್ಯ!
ಕೇರಳ ಹೊರತುಪಡಿಸಿದಂತೆ ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರ ಪ್ರದೇಶ, ತೆಲಂಗಾಣ, ಲಕ್ಷದ್ವೀಪ, ತಮಿಳುನಾಡು, ಕೊಂಕಣ ಮತ್ತು ಗೋವಾದಲ್ಲಿಯೂ ಮಳೆ ಹೆಚ್ಚಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಇಂದು ಮತ್ತು ನಾಳೆ ದೆಹಲಿಯಲ್ಲೂ ಮಳೆ ಹೆಚ್ಚಾಗಲಿದೆ. ಅಸ್ಸಾಂ, ಬಿಹಾರದಲ್ಲೂ ಮಳೆಯ ಅಬ್ಬರ ಮುಂದುವರೆದಿದೆ.
ಪ್ರತಿವರ್ಷ ಕೇರಳದಲ್ಲಿ ಪ್ರವಾಹ ಉಂಟಾಗುತ್ತದೆ. ಹೀಗಾಗಿ, ಈ ವರ್ಷ ಪ್ರವಾಹದ ಪರಿಸ್ಥಿತಿಯಿಂದ ಬಚಾವಾಗಲು ಕೇರಳ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಕೊಚ್ಚಿಯ ಬಹುತೇಕ ಎಲ್ಲ ರಸ್ತೆಗಳೂ ಮಳೆಯಿಂದ ಆವೃತವಾಗಿವೆ. ಇನ್ನೂ ಒಂದು ವಾರಗಳ ಕಾಲ ಇಡುಕ್ಕಿ, ವಯನಾಡು, ಕೋಳಿಕೋಡ್, ಮಲಪ್ಪುರಂನಲ್ಲಿ ಭಾರೀ ಮಳೆಯಾಗುವ ಅಪಾಯ ಇರುವುದರಿಂದ ಹೈಅಲರ್ಟ್ ಘೋಷಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ