Monkeypox In Dogs: ನಾಯಿಗೂ ತಗುಲಿದ ಮಂಕಿಪಾಕ್ಸ್! ಲಕ್ಷಣ ಹೇಗಿರುತ್ತೆ? ಇಲ್ಲಿದೆ ವಿವರ

ಮಂಕಿಪಾಕ್ಸ್ ಸೋಂಕಿಗೆ ಒಳಗಾದವರು ತಮ್ಮ ಸಾಕುಪ್ರಾಣಿಗಳೊಂದಿಗೆ ಮುದ್ದಿಸುವಿಕೆ, ಮುದ್ದಾಡುವುದು, ತಬ್ಬಿಕೊಳ್ಳುವುದು, ಚುಂಬಿಸುವುದು, ನೆಕ್ಕುವುದು, ಮಲಗುವ ಪ್ರದೇಶಗಳನ್ನು ಹಂಚಿಕೊಳ್ಳುವುದು ಮತ್ತು ಆಹಾರವನ್ನು ಹಂಚಿಕೊಳ್ಳುವುದನ್ನು ಮಾಡಬಾರದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಂಕಿಪಾಕ್ಸ್ ಭಯದ ಇಡೀ ಜಗತ್ತಿಗೇ ಕಾಡುತ್ತಿದೆ. ಕೊಂಚ ಕಡಿಮೆಯಾಯ್ತು ಅಂದುಕೊಳ್ಳುವಾಗಲೇ ಮತ್ತೆ ಹೊಸ ಪ್ರಕರಣಗಳು ದೃಢಪಟ್ಟು ಅತಂಕ ಹೆಚ್ಚಿಸುತ್ತಲೇ ಇದೆ. ಆದರೆ ಇದೀಗ ಇನ್ನೊಂದು ಆತಂಕದ ಸುದ್ದಿ ಹೊರಬಿದ್ದಿದೆ. ಮಂಕಿಪಾಕ್ಸ್ ವೈರಸ್ (Monkeypox Virus) ಮಾನವನಿಂದ ಸಾಕುಪ್ರಾಣಿಗಳಿಗೆ ಹರಡುವ ಮೊದಲ ಶಂಕಿತ ಪ್ರಕರಣದ ಸಾಕ್ಷ್ಯವನ್ನು ಪ್ರಮುಖ ವೈದ್ಯಕೀಯ ಜರ್ನಲ್​ ದಿ ಲ್ಯಾನ್ಸೆಟ್ ( The Lancet) ಪ್ರಕಟಿಸಿದೆ. ದಿ ಲ್ಯಾನ್ಸೆಟ್ ಪ್ರಕಾರ, ವೈರಸ್ ಸೋಂಕಿಗೆ ಒಳಗಾದ ಫ್ರಾನ್ಸ್‌ ಇಬ್ಬರು ವ್ಯಕ್ತಿಗಳ ಜೊತೆಗಿದ್ದ ನಾಯಿಗೂ ಮಂಕಿಪಾಕ್ಸ್ ಲಕ್ಷಣ (Monkeypox Symptoms In Dog) ಕಾಣಿಸಿಕೊಂಡಿದೆ. ನಾಯಿಗೆ 12 ದಿನಗಳ ನಂತರ ರೋಗಲಕ್ಷಣ ಕಾಣಿಸಿಕೊಂಡಿದೆ.

    ಈ ಹಿಂದೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದ 4 ವರ್ಷದ ಗಂಡು ಇಟಾಲಿಯನ್ ಗ್ರೇಹೌಂಡ್ ತಳಿಯ ನಾಯಿಗೆ ಮಂಕಿಪಾಕ್ಸ್ ಲಕ್ಷಣ ಕಾಣಿಸಿಕೊಂಡಿದೆ. ನಾಯಿಯ ಹೊಟ್ಟೆಯ ಮೇಲೆ ಗಾಯಗಳು ಕಾಣಿಸಿಕೊಂಡಿದ್ದು ಪರೀಕ್ಷಿಸಿದಾಗ ಪಾಸಿಟಿವ್ ಬಂದಿದೆ.

    ಮಂಕಿಪಾಕ್ಸ್ ಬಂದ ವ್ಯಕ್ತಿಗಳು-ನಾಯಿ ಒಂದೇ ಬೆಡ್​ನಲ್ಲಿ!
    ಡಿಎನ್‌ಎ ಪರೀಕ್ಷೆಯ ಮೂಲಕ ಸಂಶೋಧಕರು ಇಬ್ಬರು ಪುರುಷರಿಗೆ ಸೋಂಕು ತಗುಲಿರುವ ವೈರಸ್‌ಗಳು ಮತ್ತು ನಾಯಿಯಲ್ಲಿ ಪತ್ತೆಯಾದ ವೈರಸ್ ಎರಡೂ ಒಂದೇ ಎಂದು ನಿರ್ಧರಿಸಿದ್ದಾರೆ. ಮೊದಲು ಮಂಕಿಪಾಕ್ಸ್ ತಗುಲಿದ್ದ ಇಬ್ಬರು ವ್ಯಕ್ತಿಗಳ ಬೆಡ್ ಮೇಲೆ ನಾಯಿಯೂ ಸಹ ಮಲಗಿತ್ತು. ಇದೇ ಕಾರಣಕ್ಕೆ ನಾಯಿಗೂ ಮಂಕಿಪಾಕ್ಸ್ ತಗುಲಿರಬಹುದು ಎಂದು ಅಂದಾಜಿಸಲಾಗಿದೆ.

    ಪ್ರತ್ಯೇಕ ವಾಸದ ಎಚ್ಚರಿಕೆ
    ನಮ್ಮ ಸಂಶೋಧನೆಗಳು ಮಂಕಿಪಾಕ್ಸ್ ವೈರಸ್ ಪಾಸಿಟಿವ್ ಬಂದಿರುವ ವ್ಯಕ್ತಿಗಳಿಂದ ಸಾಕುಪ್ರಾಣಿಗಳನ್ನು ಪ್ರತ್ಯೇಕಿಸುವ ಅಗತ್ಯತೆಯ ಬಗ್ಗೆ ಚರ್ಚೆಯನ್ನು ಪ್ರೇರೇಪಿಸಬೇಕು ಎಂದು ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ ವರದಿ ಉಲ್ಲೇಖಿಸುತ್ತದೆ.

    ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (ಸಿಡಿಸಿ)  ಮಂಕಿಪಾಕ್ಸ್​ ತಗುಲದಂತೆ ಅನುಸರಿಸಬೇಕಾದ ಮಾರ್ಗದರ್ಶಿಯಲ್ಲಿ ಮಾನವನಿಂದ ಸಾಕುಪ್ರಾಣಿಗಳಿಗೆ ಹರಡುವ ಸಾಧ್ಯತೆಯ ವಿರುದ್ಧ ಎಚ್ಚರಿಸಿದೆ.

    ಇದನ್ನೂ ಓದಿ: Monkeypox Rename: ಮಂಕಿಪಾಕ್ಸ್​ಗೆ ಮರುನಾಮಕರಣ! ಭಯಾನಕ ರೋಗಕ್ಕೆ ನೀವೂ ಹೆಸರು ಸೂಚಿಸಬಹುದು!

    ಸೋಂಕಿತ ಪ್ರಾಣಿಗಳು ಮಂಕಿಪಾಕ್ಸ್ ವೈರಸ್ ಅನ್ನು ಜನರಿಗೆ ಹರಡಬಹುದು. ಸೋಂಕಿಗೆ ಒಳಗಾದ ಜನರು ನಿಕಟ ಸಂಪರ್ಕದ ಮೂಲಕ ಪ್ರಾಣಿಗಳಿಗೆ ಮಂಕಿಪಾಕ್ಸ್ ವೈರಸ್ ಹರಡುವ ಸಾಧ್ಯತೆಯಿದೆ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ ಈಮುನ್ನೇ ಎಚ್ಚರಿಕೆ ನೀಡಿತ್ತು.

    ಇದನ್ನೂ ಓದಿ: Monkey Pox Disease: ಮಂಕಿ ಪಾಕ್ಸ್ ಕಾಯಿಲೆಯ ಹೊಸ ರೋಗ ಲಕ್ಷಣಗಳು, ತಡೆಯುವ ಮಾರ್ಗೋಪಾಯ ಯಾವುದು?

    ಹೀಗೆಲ್ಲ ಮಾಡಬೇಡಿ
    ಮಂಕಿಪಾಕ್ಸ್ ಸೋಂಕಿಗೆ ಒಳಗಾದವರು ತಮ್ಮ ಸಾಕುಪ್ರಾಣಿಗಳೊಂದಿಗೆ ಮುದ್ದಿಸುವಿಕೆ, ಮುದ್ದಾಡುವುದು, ತಬ್ಬಿಕೊಳ್ಳುವುದು, ಚುಂಬಿಸುವುದು, ನೆಕ್ಕುವುದು, ಮಲಗುವ ಪ್ರದೇಶಗಳನ್ನು ಹಂಚಿಕೊಳ್ಳುವುದು ಮತ್ತು ಆಹಾರವನ್ನು ಹಂಚಿಕೊಳ್ಳುವುದು ಸೇರಿದಂತೆ ಆಪ್ತ ಚಟುವಟಿಕೆಗಳನ್ನು ತಪ್ಪಿಸಲು ಸಲಹೆ ನೀಡಲಾಗಿದೆ.

    ಸಾಕುಪ್ರಾಣಿಗಳಲ್ಲಿ ಈ ಲಕ್ಷಣ ಕಾಣಿಸಿಕೊಂಡರೆ ಎಚ್ಚರ!
    ಸಾಕುಪ್ರಾಣಿಗಳಲ್ಲಿ ಮಂಕಿಪಾಕ್ಸ್‌ನ ಸಂಪೂರ್ಣ ಲಕ್ಷಣಗಳ ಕುರಿತು ಇನ್ನೂ ಸಂಪೂರ್ಣ ಅಧ್ಯಯನ ನಡೆಯಬೇಕಿದೆ. ಆಲಸ್ಯ, ಹಸಿವಿನ ಕೊರತೆ, ಕೆಮ್ಮು, ಮೂಗಿನ ಸ್ರವಿಸುವಿಕೆ ಅಥವಾ ಹೊರಪದರ, ಉಬ್ಬುವುದು, ಜ್ವರ ಅಥವಾ ಮೊಡವೆ ಅಥವಾ ಗುಳ್ಳೆಗಳಂತಹ ಚರ್ಮದ ದದ್ದುಗಳು ಅನಾರೋಗ್ಯದ ಸಂಭಾವ್ಯ ಚಿಹ್ನೆಗಳು ಆಗಿರುವ ಸಾಧ್ಯತೆಯಿದೆ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ ಎಚ್ಚರಿಕೆ ನೀಡಿದೆ.

    ಮಂಕಿಪಾಕ್ಸ್​ಗೆ ಹೊಸ ಹೆಸರಿನ ಹುಡುಕಾಟ!
    "ಮಂಕಿಪಾಕ್ಸ್" ಎಂಬ ಪದವು ಕಪ್ಪುವರ್ಣೀಯರು, ಆಫ್ರಿಕನ್ನರು ಮತ್ತು LGBTQ ಜನರ ಬಗ್ಗೆ ಜನಾಂಗೀಯ ನಕಾರಾತ್ಮಕ ಅಭಿಪ್ರಾಯಗಳನ್ನು ಬಲಪಡಿಸುತ್ತದೆ. ಅಲ್ಲದೇ ಈ ಹೆಸರು ಮಂಗಗಳು ವೈರಸ್‌ನ ಪ್ರಾಥಮಿಕ ಮೂಲವಾಗಿದೆ ಎಂದು ತಪ್ಪಾಗಿ ಸೂಚಿಸುತ್ತದೆ. ಕೆಲವು ವಿಜ್ಞಾನಿಗಳ ಪ್ರಕಾರ ಇದು ಜನಾಂಗೀಯ ತಾರತಮ್ಯ ಸೂಚಿಸುತ್ತದೆ. ಹೀಗಾಗಿ ಮಂಕಿಪಾಕ್ಸ್ ಹೆಸರಿನ ಮರು ನಾಮಕರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮುಂದಾಗಿದೆ. ವೈರಾಲಜಿಸ್ಟ್‌ಗಳು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರು ಹೊಸ ಹೆಸರನ್ನು ನಿರ್ದೇಶಿಸಲು WHO ಆಗಸ್ಟ್ 8 ರಂದು ತುರ್ತು ಸಮ್ಮೇಳನವನ್ನು ಕರೆದಿದೆ.
    Published by:guruganesh bhat
    First published: