ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ ಸುರಿದ ಹಣವೆಷ್ಟು ಗೊತ್ತೇ?

news18
Updated:July 23, 2018, 8:15 PM IST
ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ ಸುರಿದ ಹಣವೆಷ್ಟು ಗೊತ್ತೇ?
Srinagar: Prime Minister Narendra Modi looks on after inaugrating Kishanganga Power Station (330 MW) Bandipora, during a function at SKICC in Srinagar, on Saturday. (PTI Photo/S. Irfan) (PTI5_19_2018_000167B)
  • Share this:
-ನ್ಯೂಸ್ 18 ಕನ್ನಡ

ನವದೆಹಲಿ (ಜುಲೈ 23): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ವಿದೇಶ ಪ್ರವಾಸದ ಖರ್ಚು ವೆಚ್ಚಗಳ ಬಗ್ಗೆ ಪರ-ವಿರೋಧ ಕೇಳಿ ಬರುತ್ತಿದೆ.  ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷದಲ್ಲಿ ಪ್ರಧಾನಿ ಮೋದಿಯವರ ವಿದೇಶ ಪ್ರವಾಸಕ್ಕೆ ಖರ್ಚು ಮಾಡಿರುವ ಒಟ್ಟು ವೆಚ್ಚ ಬರೋಬ್ಬರಿ 1,484 ಕೋಟಿ ರೂ. ದೇಶದ ಚುಕ್ಕಾಣಿ ಹಿಡಿದ ದಿನದಿಂದ ಇಂದಿನವರೆಗೆ ಪ್ರಧಾನಿ ಮೋದಿ ಅವರು ಒಟ್ಟು 42 ಬಾರಿ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಆ ಪ್ರವಾಸಗಳಿಂದ ಒಟ್ಟೂ 84 ದೇಶಗಳಿಗೆ ಭೇಟಿ ನೀಡಿದ್ದಾರೆ. ಈ ಪ್ರವಾಸದ ವಿಮಾನಯಾನ ಖರ್ಚು, ಸೌಲಭ್ಯಗಳ ವೆಚ್ಚ ಈಗ ಸಾವಿರ ಕೋಟಿ ರೂಪಾಯಿಗಳನ್ನು ದಾಟಿದೆ.

ವಿದೇಶಾಂಗ ವ್ಯವಹಾರಗಳ ಸಚಿವ ವಿ.ಕೆ. ಸಿಂಗ್‌ ಪ್ರಧಾನಿಗಳ ಪ್ರವಾಸಗಳ ಖರ್ಚು ವೆಚ್ಚಗಳನ್ನು ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ಸರ್ಕಾರದ ಈ ಲೆಕ್ಕದ ಪ್ರಕಾರ ವಿಮಾನ ನಿರ್ವಹಣೆಗಾಗಿ 1,088.42 ಕೋಟಿ ರೂಗಳನ್ನು ಖರ್ಚಾಗಿದ್ದು, ಸರಕು ಸೇವೆಗಳಿಗಾಗಿ 387.26 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ. ಅಲ್ಲದೆ 9.12 ಕೋಟಿ.ರೂಗಳನ್ನು ನೇರ ವಿಮಾನ ಸಂಪರ್ಕಕ್ಕಾಗಿ ಖರ್ಚು ಮಾಡಲಾಗಿದೆ.

2014ರ ಮೇ 26ರಂದು ದೇಶದ ಪ್ರಧಾನಿಯಾದ ಬಳಿಕ ಒಟ್ಟು 42 ವಿದೇಶಿ ಪ್ರವಾಸಗಳ ಮೂಲಕ 84 ದೇಶಗಳಿಗೆ ಭೇಟಿ ನೀಡಿದ್ದಾರೆ. ಭಾರತದ ನೆರೆರಾಷ್ಟ್ರ ಭೂತಾನ್​ಗೆ ಹೋಗುವ ಮೂಲಕ ಪ್ರಧಾನಿ ವಿದೇಶಿ ಪ್ರವಾಸವನ್ನು ಪ್ರಾರಂಭಿಸಿದ್ದರು. ಅಧಿಕಾರವಧಿಯ ಮೊದಲ ವರ್ಷದಲ್ಲೇ ಒಟ್ಟು 13 ದೇಶಗಳಿಗೆ ನರೇಂದ್ರ ಮೋದಿಯವರು ಭೇಟಿ ಕೊಟ್ಟಿದ್ದರು.

2015-16ರಲ್ಲಿ 24 ದೇಶಗಳಿಗೆ ಮತ್ತು 2016-17ರ ನಡುವೆ 18 ದೇಶಗಳನ್ನು ಸುತ್ತಿದ್ದಾರೆ. 2017-18ರ ಅವಧಿಯಲ್ಲೂ 19 ದೇಶಗಳಿಗೆ ಪ್ರವಾಸ ಹೋಗಿರುವ ಪ್ರಧಾನಿ, 2018ರ ಅರ್ಧಾವಧಿಯಲ್ಲಿ 10 ದೇಶಗಳಿಗೆ ಭೇಟಿ ನೀಡಿದ್ದಾರೆ. ಕೊನೆಯ ಬಾರಿ ಚೀನಾ ಪ್ರವಾಸ ಕೈಗೊಂಡ ಪ್ರಧಾನ ಮಂತ್ರಿಗಳು ಸದ್ಯ ಆಫ್ರಿಕಾ ಖಂಡದ ದೇಶಗಳ ಪ್ರವಾಸದಲ್ಲಿದ್ದಾರೆ.

ಮೊದಲ ವರ್ಷದ ಅವಧಿಯ ಪ್ರವಾಸದ ಲೆಕ್ಕದಲ್ಲಿ ಸರಕು ಸರಂಜಾಮುಗಳನ್ನು ಸಾಗಿಸಿದ ಚಾರ್ಟರ್ಡ್‌ ವಿಮಾನಗಳು ಒಟ್ಟು ಖರ್ಚು 93.76 ಕೋಟಿ ರೂ. ಎಂದು ತಿಳಿಸಲಾಗಿದೆ. ಆದರೆ 2015-16 ರ ನಡುವಿನ ಪ್ರವಾಸದ ವೇಳೆ ಚಾರ್ಟರ್ಡ್‌ ವಿಮಾನಗಳ ಖರ್ಚಿನ ಮೊತ್ತವು 117 ಕೋಟಿ ರೂ.ಗೆ ಏರಿಕೆಯಾಗಿತ್ತು. ಹಾಗೆಯೇ 2017-18ರ ಸರಕು ಸೇವೆಯ ಖರ್ಚಿನ ಒಟ್ಟು ಮೊತ್ತ 99.32 ಕೋಟಿ ಎಂದು ತಿಳಿಸಲಾಗಿದೆ.

ಈ ಹಿಂದೆ ಯಾವ ಪ್ರಧಾನಿ ಕೂಡ ಇಷ್ಟೊಂದು ದೇಶಗಳಿಗೆ ಭೇಟಿ ನೀಡಿರಲಿಲ್ಲ ಎಂದು ತಿಳಿಸಿರುವ ವಿ.ಕೆ ಸಿಂಗ್, ಪ್ರಧಾನಿಯವರ ವಿದೇಶಿ ಪ್ರವಾಸದಿಂದ ಇತರೆ ರಾಷ್ಟ್ರಗಳೊಂದಿಗಿನ ಬಾಂಧವ್ಯ ವೃದ್ಧಿಸಿದೆ. ಅಲ್ಲದೆ ವಿದೇಶಿ ಹೂಡಿಕೆದಾರರನ್ನು ಸೆಳೆಯಲು ನೆರವಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವರು  ಅಭಿಪ್ರಾಯ ಪಟ್ಟಿದ್ದಾರೆ.ಪ್ರಧಾನಿಯವರ ಈ ವಿದೇಶಿ ಪ್ರವಾಸದ ಒಟ್ಟು ಲೆಕ್ಕದಲ್ಲಿ 2017-18ನೇ ಸಾಲಿನ ನೇರ ವಿಮಾನ ಸಂಪರ್ಕದ ವೆಚ್ಚವನ್ನು ಮತ್ತು ಚಾರ್ಟರ್ಡ್ ವಿಮಾನದ ಖರ್ಚುಗಳನ್ನು ಸೇರಿಸಲಾಗಿಲ್ಲ. ಈ ಸಾಲಿನ ಇವರೆಡು ಖರ್ಚುಗಳನ್ನು ಸೇರಿಸಿದರೆ ವಿದೇಶಿ ಪ್ರವಾಸದ ಒಟ್ಟು ಖರ್ಚು 1,500 ಕೋಟಿ ದಾಟಲಿದೆ. ಈಗಾಗಲೇ ಅತಿ ಹೆಚ್ಚು ವಿದೇಶ ಪ್ರವಾಸ ಕೈಗೊಂಡ ಭಾರತದ ಪ್ರಧಾನಿ ಎಂಬ ಹೆಸರು ನರೇಂದ್ರ ಮೋದಿ ಪಾಲಾಗಿದೆ.

ಇವೆಲ್ಲದರ ನಡುವೆ ಸುತ್ತಲ ದೇಶಗಳಾದ ಪಾಕಿಸ್ತಾನ, ನೇಪಾಳ, ಚೀನಾ ದೇಶಗಳ ನಡುವೆ ಭಾರತದ ಬಿಕ್ಕಟ್ಟು ಹೆಚ್ಚಿದಯೇ ಹೊರತು ಲಾಭವೇನೂ ಆಗಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ.
First published:July 23, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ