ಫನಿ ಸೈಕ್ಲೋನ್​​ ಬಗ್ಗೆ ಮೋದಿ ಜತೆ ಚರ್ಚೆಗೆ ದೀದಿ ನಕಾರ; ನಾನೇನು ಸರ್ವೆಂಟ್​​​ ಅಲ್ಲ ಎಂದ ಮಮತಾ ಬ್ಯಾನರ್ಜಿ

Lok Sabha Elections 2019: ಮೋದಿ ಜೊತೆಗಿನ ಚರ್ಚೆಯನ್ನು ಸ್ವತಃ ಮಮತಾ ಬ್ಯಾನರ್ಜಿ ನಿರಾಕರಿಸಿದ್ದರೆ? ಅಥವಾ ಇದು ನಿಜಕ್ಕೂ ಸಂವಹನ ಕೊರತೆಯಿಂದ ಉಂಟಾದ ಅಚಾತುರ್ಯವೆ? ಎಂಬುದನ್ನು ಶೀಘ್ರವೇ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಾರ್ಯಾಲಯಗಳು ಸ್ಪಷ್ಟಪಡಿಸಬೇಕಿದೆ.   

MAshok Kumar | news18
Updated:May 6, 2019, 4:54 PM IST
ಫನಿ ಸೈಕ್ಲೋನ್​​ ಬಗ್ಗೆ ಮೋದಿ ಜತೆ ಚರ್ಚೆಗೆ ದೀದಿ ನಕಾರ; ನಾನೇನು ಸರ್ವೆಂಟ್​​​ ಅಲ್ಲ ಎಂದ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ, ನರೇಂದ್ರ ಮೋದಿ.
  • News18
  • Last Updated: May 6, 2019, 4:54 PM IST
  • Share this:
ಪಶ್ಚಿಮ ಬಂಗಾಳ (ಮೇ.6): ಫನಿ ಚಂಡಮಾರುತ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ನಡುವೆ ಮುಸುಕಿನ ಗುದ್ದಾಟ ಮುಂದುವರಿದೆ. ಇಲ್ಲಿನ ಸೈಕ್ಲೋನ್​​ ಬಗ್ಗೆ ಚರ್ಚಿಸಲು ನಾವು ಮುಂದಾಗಿದ್ದೆವು. ಆದರೆ, ಸಿಎಂ ಮಮತಾ ಬ್ಯಾನರ್ಜಿಯವರು ಇದಕ್ಕೆ ನಿರಾಕರಿಸಿದರು ಎಂದು ಪ್ರಧಾನಿ ಮೋದಿಯವರು ಆರೋಪ ಮಾಡಿದ್ದಾರೆ. ಈ ಬೆನ್ನಲ್ಲೀಗ ಇದಕ್ಕೆ ಪ್ರತಿಕ್ರಿಯಿಸಿರುವ ದೀದಿ, ನಾನೇನು ನಿಮ್ಮ ಸರ್ವೆಂಟ್​​ ಅಲ್ಲ ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ.

ಹಿಂದಿನಿಂದಲೂ ಪ್ರಧಾನಿ ಮೋದಿ ಮತ್ತು ಮಮತಾ ಬ್ಯಾನರ್ಜಿ ನಡುವೆ ಯಾವುದಾದರೂ ಒಂದು ವಿಚಾರಕ್ಕೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು. ಈ ಅಂತರ್ಯುದ್ಧ ಸದ್ಯ ಫನಿ ಚಂಡಮಾರುತದ ಹಾನಿ ವೀಕ್ಷಣೆಯಲ್ಲೂ ಮುಂದುವರೆದಿರುವುದು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಒರಿಸ್ಸಾವನ್ನು ಇನ್ನಿಲ್ಲದಂತೆ ಕಾಡಿದ್ದ ಫನಿ ಚಂಡಮಾರುತ ಮೇ.4 ರಂದು ಪಶ್ಚಿಮ ಬಂಗಾಳಕ್ಕೂ ಅಪ್ಪಳಿಸಿ 12 ಜನರ ಪ್ರಾಣಕ್ಕೆ ಎರವಾಗಿತ್ತು. ಅಲ್ಲದೆ ಅಪಾರ ಪ್ರಮಾಣದ ಆಸ್ತಿಪಾಸ್ತಿಗೂ ಹಾನಿಯುಂಟು ಮಾಡಿತ್ತು. ಹೀಗಾಗಿ ಸೋಮವಾರ ಒರಿಸ್ಸಾದಲ್ಲಿ ಫನಿಯಿಂದ ಹಾನಿಗೊಳಗಾಗಿರುವ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದ ಪ್ರಧಾನಿ ಮೋದಿ ಪಶ್ಚಿಮ ಬಂಗಾಳದಲ್ಲೂ ವೈಮಾನಿಕ ಸಮೀಕ್ಷೆ ನಡೆಸಿ ದುರಂತದಿಂದ ಉಂಟಾದ ಹಾನಿಯ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಜೊತೆಗೆ ಚರ್ಚೆ ನಡೆಸಲು ಇಚ್ಚಿಸಿದ್ದರು. ಆದರೆ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಇದಕ್ಕೆ ಅವಕಾಶ ನೀಡಿಲ್ಲ ಎಂಬುದು ಪ್ರಧಾನಿ ಕಾರ್ಯಾಲಯದ ಆರೋಪ.

ಇದನ್ನೂ ಓದಿ : ಧೈರ್ಯವಿದ್ದರೆ ಮೋದಿ ನನ್ನ ಜೊತೆ ಬಹಿರಂಗ ಚರ್ಚೆಗೆ ಬರಲಿ; ಪ್ರಧಾನಿಗೆ ಮಮತಾ ಬ್ಯಾನರ್ಜಿ ಸವಾಲು

ಸೋಮವಾರ ಪಶ್ಚಿಮ ಬಂಗಾಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸುವ ಬಗ್ಗೆ ಖಚಿತಪಡಿಸಿಕೊಳ್ಳಲು ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಮಮತಾ ಬ್ಯಾನರ್ಜಿಯನ್ನು ಫೋನ್​ ಮೂಲಕ ಸಂಪರ್ಕಿಸಲು ಎರಡು ಬಾರಿ ಪ್ರಯತ್ನಿಸಿದ್ದಾರೆ. ಆದರೆ ಮೊದಲ ಬಾರಿಗೆ ಮಮತಾ ಬ್ಯಾನರ್ಜಿ ರಾಜ್ಯ ಪ್ರವಾಸದಲ್ಲಿದ್ದಾರೆ ಎಂದು ಕಾರಣ ನೀಡಿದ್ದ ಅಧಿಕಾರಿಗಳು, ಎರಡನೇ ಬಾರಿ ಅವರು ಚುನಾವಣಾ ಪ್ರಚಾರದಲ್ಲಿದ್ದಾರೆ ಎಂದು ತಿಳಿಸಿ ಕರೆಯನ್ನು ಸ್ಥಗಿತಗೊಳಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯದ ಮೂಲಗಳು ತಿಳಿಸಿವೆ.

ಆದರೆ, ಈ ಆರೋಪವನ್ನು ಅಲ್ಲಗೆಳೆದಿರುವ ಪಶ್ಚಿಮ ಬಂಗಾಳ ಸರ್ಕಾರ ಪ್ರಧಾನಿ ಮೋದಿ ವೈಮಾನಿಕ ವೀಕ್ಷಣೆ ನಡೆಸುವ ಕುರಿತು ರಾಜ್ಯ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಕುರಿತು ನಮ್ಮ ಜೊತೆಗೆ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಸಂವಹನ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಬೆನ್ನಲ್ಲೀಗ ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರತಿಕ್ರಿಯೆ ನೀಡಿದ್ದು, ನಾನೇನು ಪ್ರಧಾನಿ ಸರ್ವೆಂಟ್​ ಅಲ್ಲ ಎಂದು ಖಡಕ್ಕಾಗಿಯೇ ಹೇಳಿದ್ದಾರೆ.

ಮೋದಿ ವೈಮಾನಿಕ ಸಮೀಕ್ಷೆ ನಿರಾಕರಣೆ ಹಿಂದಿದೆ ಒಣ ರಾಜಕೀಯ : ಕಳೆದ ಎರಡು ದಿನಗಳಿಂದ ಫನಿ ಚಂಡಮಾರುತ ಪಶ್ಚಿಮ ಬಂಗಾಳವನ್ನು ಇನ್ನಿಲ್ಲದಂತೆ ಕಾಡಿತ್ತು. ಪರಿಣಾಮ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಸುಮಾರು 45 ಸಾವಿರ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿತ್ತು. ಆದರೆ, ಪ್ರಧಾನಿ ಮೋದಿಯಾಗಲಿ ಅಥವಾ ಅವರ ಕಾರ್ಯಾಲಯದ ಅಧಿಕಾರಿಗಳಾಗಲಿ ಪಶ್ಚಿಮ ಬಂಗಾಳ ಸರ್ಕಾರವನ್ನು ಸಂಪರ್ಕಿಸಿ ಚಂಡಮಾರುತದಿಂದ ಉಂಟಾದ ಹಾನಿಯ ಮಾಹಿತಿ ಪಡೆಯಲು ಮುಂದಾಗದೆ, ರಾಜ್ಯಪಾಲ ಕೇಶರಿ ನಾಥ್ ತ್ರಿಪಾಠಿ ಅವರಿಂದ ಮಾಹಿತಿ ಪಡೆದಿತ್ತು ಎಂಬುದು ರಾಜ್ಯ ಸರ್ಕಾರದ ಆರೋಪ.

ಇದನ್ನೂ ಓದಿ : ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಅಬ್ಬರ; ಒಕ್ಕೂಟ ಭಾರತ ಸಮಾವೇಶದಲ್ಲಿ ಪ್ರಾದೇಶಿಕ ಪಕ್ಷಗಳ ಶಕ್ತಿ ಪ್ರದರ್ಶನ

ಪ್ರಧಾನಿ ಕಾರ್ಯಾಲಯದ ಈ ಚಟುವಟಿಕೆ ಸಾಮಾನ್ಯವಾಗಿ ಮಮತಾ ಬ್ಯಾನರ್ಜಿಯವರನ್ನು ಕೆರಳಿಸಿದೆ ಎನ್ನಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ, “ಪ್ರಧಾನಿ ನರೇಂದ್ರ ಮೋದಿ ಫನಿ ಚಂಡಮಾರುತದಿಂದ ಉಂಟಾದ ಹಾನಿಯ ಮಾಹಿತಿಯನ್ನು ರಾಜ್ಯಪಾಲರಿಂದ ಪಡೆದುಕೊಂಡಿದ್ದಾರೆ. ಇದು ಒಕ್ಕೂಟ ವ್ಯವಸ್ಥೆಗೆ ಮಾರಕವಾದ ಬೆಳವಣಿಗೆ. ಜನರಿಂದ ಆಯ್ಕೆಯಾದ ಸರ್ಕಾರ ಹಾಗೂ ಮುಖ್ಯಮಂತ್ರಿ ಮಮತಾ ಅವರಿಂದ ಮಾಹಿತಿ ಪಡೆಯುವುದನ್ನು ಅವರು ಹೇಗೆ ನಿರಾಕರಿಸಬಹುದು?” ಎಂದು ಪ್ರಶ್ನೆ ಮಾಡಿದ್ದಾರೆ.

ಅಲ್ಲದೆ ”ಪ್ರಧಾನಿ ಮೋದಿ ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಾಹಿತಿ ಪಡೆಯುವುದಕ್ಕೆ ನಮ್ಮ ಅಭ್ಯಂತರವೇನಿಲ್ಲ. ಆದರೆ, ಫನಿ ಚಂಡಮಾರುತ ಸೃಷ್ಟಿಸಿರುವ ಹಾನಿಯ ಕುರಿತು ರಾಜ್ಯ ಸರ್ಕಾರ ಮಾತ್ರ ನಿಖರ ಹಾಗೂ ಖಚಿತ ಮಾಹಿತಿ ನೀಡಲು ಸಾಧ್ಯ ಎಂಬುದು ಪ್ರಧಾನಿಗೂ ಗೊತ್ತು. ಆದರೂ, ಅವರು ರಾಜ್ಯಪಾಲರಿಂದ ಮಾಹಿತಿ ತರಿಸಿಕೊಂಡಿರುವುದು ದುರಾದೃಷ್ಟಕರ ಬೆಳವಣಿಗೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಕೊಲ್ಕತಾ ಹೈಡ್ರಾಮ; ಕೇಂದ್ರ ಸರ್ಕಾರದ ವಿರುದ್ಧ ಧರಣಿ ಕುಳಿತ ಸಿಎಂ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ನಡುವೆ ನಿಕಟ ಸ್ಪರ್ಧೆ ಇದೆ. ಇಂದು 5ನೇ ಹಂತದ ಮತದಾನ ನಡೆಯುತ್ತಿದ್ದು, ಪಶ್ಚಿಮ ಬಂಗಾಳದ 7 ಲೋಕಸಭಾ ಕ್ಷೇತ್ರಗಳಿಗೂ ಮತದಾನವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಜೊತೆಗೆ ಫನಿ ಚಂಡಮಾರುತ ಸೃಷ್ಟಿಸಿರುವ ಹಾನಿ ಕುರಿತ ಮಾತುಕತೆಗೆ ಮಮತಾ ಬ್ಯಾನರ್ಜಿ ನಿರಾಕರಿಸಿರುವುದು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

First published: May 6, 2019, 1:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading