ಜಮ್ಮುವಿನಲ್ಲಿ ಮೊದಲ ಸರ್ಕಾರ ರಚಿಸಲಿದೆಯೇ ಬಿಜೆಪಿ?: ಕುತೂಹಲ ಮೂಡಿಸಿದೆ ಪಿಡಿಪಿ-ಬಿಜೆಪಿ ನಾಯಕರ ಭೇಟಿ

news18
Updated:July 11, 2018, 6:34 PM IST
ಜಮ್ಮುವಿನಲ್ಲಿ ಮೊದಲ ಸರ್ಕಾರ ರಚಿಸಲಿದೆಯೇ ಬಿಜೆಪಿ?: ಕುತೂಹಲ ಮೂಡಿಸಿದೆ ಪಿಡಿಪಿ-ಬಿಜೆಪಿ ನಾಯಕರ ಭೇಟಿ
news18
Updated: July 11, 2018, 6:34 PM IST
ನ್ಯೂಸ್​ 18 ಕನ್ನಡ
ನವದೆಹಲಿ (ಜುಲೈ 11): ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಜೊತೆಗಿನ ಮೈತ್ರಿ ಮುರಿದುಬಿದ್ದ ಬೆನ್ನಲ್ಲೇ ಹೊಸ ಸರ್ಕಾರ ರಚನೆಯತ್ತ ಚಿತ್ತ ನೆಟ್ಟಿರುವ ಬಿಜೆಪಿ ಶ್ರೀನಗರದಲ್ಲಿ ಮೊದಲ ಕೇಸರಿ ಖಾತೆ ತೆರೆಯಲು ಸಿದ್ಧತೆ ನಡೆಸಿದೆ.

ನೂತನ ಸರ್ಕಾರ ರಚನೆಯ ಸಂಬಂಧ ಇಂದು ಕೆಲ ಗಮನಾರ್ಹ ಬೆಳವಣಿಗೆಗಳು ನಡೆದಿವೆ. ಪ್ರಧಾನ ಮಂತ್ರಿ ಕಚೇರಿಯ ಅಧಿಕೃತ ಮೂಲಗಳ ಪ್ರಕಾರ,  ಜಮ್ಮು ಕಾಶ್ಮೀರದ ಮಾಜಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ನಾಯಕ ನಿರ್ಮಲ್​ ಸಿಂಗ್​ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನವದೆಹಲಿಯ ಕಚೇರಿಯಲ್ಲಿ ಇಂದು ಸಂಜೆ ಖಾಸಗಿ ಮಾತುಕತೆ ನಡೆಸಿದ್ದಾರೆ. ಇನ್ನು ಒಂದು ತಿಂಗಳೊಳಗೆ ಜಮ್ಮುವಿನಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವ ಕುರಿತು ಈ ವೇಳೆ ಚರ್ಚಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು ಜಮ್ಮು ಕಾಶ್ಮೀರ ಉಸ್ತುವಾರಿ ಸಚಿವ ರಾಮ್​ ಮಾಧವ್​ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿರುವ ನಿರ್ಮಲ್​ ಸಿಂಗ್​ ಅವರ ಪ್ರಧಾನಿ ಭೇಟಿ ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿದೆ.

ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬರುತ್ತಿರುವುದರಿಂದ ಹಿಂದು ಮುಖ್ಯಮಂತ್ರಿಯನ್ನೇ ನೇಮಕ ಮಾಡಲಾಗುವುದು ಎಂಬ ಊಹಾಪೋಹಕ್ಕೆ ಇಂದಿನ ಭೇಟಿ ಪುಷ್ಟಿ ನೀಡಿದೆ. ಪಿಡಿಪಿ ಅತೃಪ್ತ ಶಾಸಕರೊಂದಿಗೆ ಸೇರಿ ಸರ್ಕಾರ ರಚಿಸಲು ಮುಂದಾಗಿರುವ ಬಿಜೆಪಿಯ ನಡೆ ಇನ್ನೇನು ಸದ್ಯದಲ್ಲೇ ತಿಳಿಯುವುದು ಪಕ್ಕಾ ಎನ್ನಲಾಗಿದೆ. ಆಗಸ್ಟ್​ನಲ್ಲಿ ಅಮರನಾಥ ಯಾತ್ರೆ ಪೂರ್ಣಗೊಳ್ಳುತ್ತಿದ್ದಂತೆ ಬಿಜೆಪಿ ತನ್ನ ನಿರ್ಧಾರವನ್ನು ಘೋಷಣೆ ಮಾಡಲಿದೆ ಎಂಬ ಮಾಹಿತಿಯೂ ಇದೆ.

ಗಣ್ಯರ ಮುಖಾಮುಖಿ:
ಜಮ್ಮು ಕಾಶ್ಮೀರದ ಸರ್ಕಾರ ರಚನೆ ಸದ್ಯದ ಕೇಂದ್ರ ಸರ್ಕಾರದ ಮುಖ್ಯ ಗುರಿಯಾಗಿದ್ದು, ಈ ಬಗ್ಗೆ ನವದೆಹಲಿಯಲ್ಲಿ ಚುರುಕಿನ ವಿದ್ಯಮಾನಗಳು ನಡೆಯುತ್ತಿವೆ. ಶ್ರೀನಗರ ಮತ್ತು ನವದೆಹಲಿಯ ನಾಯಕರು ಕೆಲ ವಾರಗಳಿಂದ ಪದೇಪದೆ ಭೇಟಿಯಾಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕೆ ಪೂರಕವಾಗಿ ಗೃಹ ಸಚಿವ ರಾಜನಾಥ ಸಿಂಗ್​ 2 ದಿನಗಳ ಕಾಲ ಶ್ರೀನಗರಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಳ್ಳಬಹುದು.

ಸಾಧ್ಯಾಸಾಧ್ಯತೆಗಳೇನು?:
Loading...

* ಸದ್ಯಕ್ಕೆ ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಸರ್ಕಾರ ರಚಿಸಲು ಉತ್ಸಾಹ ತೋರುತ್ತಿರುವ ಬಿಜೆಪಿ ನಾಯಕರು ಪಿಡಿಪಿಯ ಅತೃಪ್ತ ಶಾಸಕರನ್ನು ಸೇರಿಸಿಕೊಂಡು ಬಹುಮತ ಸಾಬೀತುಪಡಿಸಿ ತಮ್ಮದೇ ಪಕ್ಷದ ಮುಖ್ಯಮಂತ್ರಿಯನ್ನು ನೇಮಕ ಮಾಡಿ ಸರ್ಕಾರ ರಚಿಸುವ ಸಾಧ್ಯತೆಯೇ ಹೆಚ್ಚಾಗಿದೆ.

* ಪಿಡಿಪಿ ಅತೃಪ್ತ ಶಾಸಕರು ಬಿಜೆಪಿಗೆ ಬೆಂಬಲ ನೀಡಿದರೂ ತಮ್ಮ ಪಕ್ಷದವರನ್ನೇ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಬೇಕೆಂದು ಬಿಜೆಪಿಗೆ ಷರತ್ತು ವಿಧಿಸುವ ಸಾಧ್ಯತೆಯೂ ಇಲ್ಲದಿಲ್ಲ.

* ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ತನ್ನ ಪಕ್ಷದ ಅತೃಪ್ತ ಶಾಸಕರನ್ನು ಶಮನಗೊಳಿಸಿ ಬಿಜೆಪಿಯೊಂದಿಗೆ ಕೈಜೋಡಿಸದಂತೆ ಎಚ್ಚರ ವಹಿಸಬಹುದು.

* ಅಂತಿಮವಾಗಿ ಪಿಡಿಪಿ ಅಥವಾ ಬಿಜೆಪಿ ಪಕ್ಷದವರು ಬಹುಮತ ಸಾಬೀತುಪಡಿಸಲು ವಿಫಲರಾದರೆ ಜಮ್ಮು ಕಾಶ್ಮೀರದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆ ಇರುತ್ತದೆ.
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...