ಜಮ್ಮು ಮತ್ತು ಕಾಶ್ಮೀರ: ಸಾಮಾಜಿಕ ಜಾಲತಾಣದಲ್ಲಿ (Social Media) ಕೆಲವೊಂದು ವಿಡೀಯೋಗಳು (Video) ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಇಲ್ಲೊಂದು ಪುಟ್ಟ ಬಾಲಕಿ (Girl) ತನ್ನ ಶಾಲೆಯ ದುಸ್ಥತಿಯನ್ನು ಪ್ರಧಾನಿ ನರೇಂದ್ರ ಮೋದಿ (Narendra) ಅವರ ಗಮನಕ್ಕೆ ತರಲ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜಮ್ಮು ಮತ್ತು ಕಾಶ್ಮೀರದ (Jammu and Kashmir) ಸೀರತ್ ನಾಜ್ ವಿಡಿಯೋ ಮಾಡಿದ್ದು, ತನ್ನ ಧೂಳು ತುಂಬಿದ ಶಾಲೆಯನ್ನು ತೋರಿಸಿದ್ದಾಳೆ. ಅಶುಚಿಯಾದ ನೆಲದ ಮೇಲೆ, ಸ್ನೇಹಿತರೊಂದಿಗೆ ಶಾಲೆಯಲ್ಲಿ ಕುಳಿತುಕೊಳ್ಳಬೇಕಿದೆ. ಹಾಗಾಗಿ ದೇಶದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿರುವ ಪ್ರಧಾನ ಮಂತ್ರಿಗೆ ತಮಗೆ ಒಳ್ಳೆಯ ಶಾಲೆ ನಿರ್ಮಿಸಿಕೊಡಿ ಎಂದು ಬಾಲಕಿ ಮನವಿ ಮಾಡಿಕೊಂಡಿದ್ದಾಳೆ.
ಈ ವಿಡಿಯೋವನ್ನು ಜಮ್ಮು ಮತ್ತು ಕಾಶ್ಮೀರದ ಮರ್ಮಿಕ್ ನ್ಯೂಸ್ ಎಂಬ ಹೆಸರಿನ ಫೇಸ್ಬುಕ್ ಪೇಜ್ನಲ್ಲಿ ಹಂಚಿಕೊಳ್ಳಲಾಗಿದ್ದು, ಎರಡು ಮಿಲಿಯನ್ ವೀಕ್ಷಣೆ ಬಂದಿದೆ. 1.16 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ಬಾಲಕಿಯ ಮುದ್ದಾದ ಮಾತುಗಳಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ಶಾಲೆಯ ದುಸ್ಥಿತಿ ತೋರಿಸಿದ ಬಾಲಕಿ
ಸುಮಾರು 5 ನಿಮಿಷಗಳ ವೀಡಿಯೊದಲ್ಲಿ, ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಲೋಹೈ-ಮಲ್ಹಾರ್ ಗ್ರಾಮದ ಹುಡುಗಿ ಮೊದಲು ತನ್ನ ಹೆಸರನ್ನು ಸೀರತ್ ನಾಜ್ ಎಂದು ಬಹಿರಂಗಪಡಿಸಿದ್ದಾಳೆ. ತಾನು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಎಂದು ಬಣ್ಣಿಸುತ್ತಾಳೆ. ಇದಾದ ನಂತರ ಇಡೀ ಶಾಲೆಯನ್ನು ತೋರಿಸುತ್ತಾಳೆ. ಮೋದಿ ಜೀ, ನಮ್ಮ ನೆಲ ಎಷ್ಟು ಕೊಳಕಾಗಿದೆ ನೋಡಿ. ನಾವು ಇಲ್ಲಿ ಕುಳಿತುಕೊಳ್ಳುತ್ತೇವೆ. ಕಳೆದ 5 ವರ್ಷಗಳಿಂದ ಇಲ್ಲಿರುವ ಕಟ್ಟಡ ಎಷ್ಟು ಕೊಳಕಾಗಿದೆ ನೋಡಿ ಎಂದಿರುವ ಬಾಲಕಿ, ನಂತರ ಮುರಿದಿರುವ ಶಾಲೆಯ ಶೌಚಾಲಯವನ್ನು ತೋರಿಸಿ ಶಾಲೆಯ ದುಸ್ಥಿತಿ ಬಗ್ಗೆ ಹೇಳಿಕೊಂಡಿದ್ದಾಳೆ.
ಉತ್ತಮ ಶಾಲೆ ಕಟ್ಟಿಸಿಕೊಡಲು ಬಾಲಕಿ ಮನವಿ
ಫೇಸ್‌ಬುಕ್‌ನಲ್ಲಿ ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಪುಟ್ಟ ಬಾಲಕಿ ಪ್ರಧಾನಿ ನರೇಂದ್ರ ಮೋದಿಯವರಿಗೆ " ಪ್ಲೀಸ್ ಮೋದಿ-ಜಿ, ಏಕ್ ಅಚ್ಚಿ ಸಿ ಸ್ಕೂಲ್ ಬನ್ವಾ ದೋ ನಾ (ಮೋದಿ -ಜಿ ದಯವಿಟ್ಟು ನಮಗಾಗಿ ಉತ್ತಮ ಶಾಲೆಯನ್ನು ನಿರ್ಮಿಸಿಕೊಡಿ)" ಎಂದು ಕ್ಯೂಟ್ ಆಗಿ ಬಾಲಕಿ ಬೇಡಿಕೊಂಡಿದ್ದಾಳೆ.
ಧೂಳು ತುಂಬಿದ ಜಾಗವನ್ನು ತೋರಿಸುತ್ತಾ, ನಾನು ನನ್ನ ಸ್ನೇಹಿತರೆಲ್ಲರೂ ಶಾಲೆಯಲ್ಲಿ ನೆಲದ ಮೇಲೆಯೇ ಕುಳಿತು ಪಾಠ ಕೇಳುತ್ತೇವೆ, ಇಡೀ ಶಾಲೆ ಸಂಪೂರ್ಣ ಧೂಳುಮಯವಾಗಿದೆ. ನಮ್ಮ ಶಾಲೆಯಲ್ಲಿ ಬೆಂಚುಗಳಿಲ್ಲ. ಹಾಗಾಗಿ ನಮ್ಮ ಸಮವಸ್ತ್ರವೆಲ್ಲಾ ಗಲೀಜಾಗುತ್ತಿದ್ದು, ನಮ್ಮ ಅಮ್ಮಂದಿರು ನಮಗೆ ಪ್ರತಿದಿನ ಬೈಯ್ಯುತ್ತಾರೆ ಎಂದು ತನ್ನ ನೋವನ್ನು ತೋಡಿಕೊಂಡಿದ್ದಾಳೆ.
ದೇಶವನ್ನು ಆಲಿಸುತ್ತೀರಿ, ನಮ್ಮ ಮಾತನ್ನು ಕೇಳಿ
ನೀವು ಇಡೀ ದೇಶದ ಮಾತನ್ನು ಕೇಳುತ್ತೀರಾ, ನನ್ನ ಮಾತನ್ನು ಸಹ ಕೇಳಿ. ಈ ಸ್ಥಳದಲ್ಲಿ ಒಳ್ಳೆಯ ಶಾಲೆಯನ್ನು ನಿರ್ಮಿಸಿಕೊಡಿ ಎಂದು ವಿನಂತಿಸಿದ್ದಾಳೆ. ಕೊಳಕಾಗಿರುವ ನಮ್ಮ ಶಾಲೆಯನ್ನು ಸುಂದರಗೊಳಿಸಿ. ಆಗ ನಮಗೆ ಚೆನ್ನಾಗಿ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ ಎಂದು ಬಾಲಕಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ