news18 Updated:December 28, 2020, 5:48 AM IST
ನರೇಂದ್ರ ಮೋದಿ
- News18
- Last Updated:
December 28, 2020, 5:48 AM IST
ನವದೆಹಲಿ(ಡಿ. 27): ಜನರು ವಿದೇಶೀ ವಸ್ತುಗಳ ಬದಲು ದೇಶೀಯ ವಸ್ತುಗಳನ್ನ ಬಳಸುತ್ತೇವೆಂದು ಜನರು ಹೊಸ ವರ್ಷಕ್ಕೆ ಹೊಸ ಸಂಕಲ್ಪ ತೊಟ್ಟು ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ಕಾರಣವಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ವರ್ಷದ ತಮ್ಮ ಕೊನೆಯ ‘ಮನ್ ಕೀ ಬಾತ್’ ರೇಡಿಯೋ ಶೋನಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಗಳು, ವಿಶ್ವದರ್ಜೆಯ ಉತ್ಪನ್ನಗಳನ್ನ ದೇಶದಲ್ಲಿ ತಯಾರಿಸಿ ಆತ್ಮನಿರ್ಭರ್ ಭಾರತ್ ಕನಸನ್ನು ಸಾಕಾರಗೊಳಿಸುವಂತೆ ಔದ್ಯಮಿಕ ಕ್ಷೇತ್ರದ ಮಂದಿಗೆ ಮನವಿ ಮಾಡಿದರು.
“ಗತಿಸಿಹೋಗುತ್ತಿರುವ ಈ ವರ್ಷದಲ್ಲಿ ಸಮಾಜದಲ್ಲಿ ಸ್ವಾವಲಂಬಿ ಭಾರತಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿಯೊಂದು ಮನೆಯಲ್ಲೂ ವೋಕಲ್ ಫಾರ್ ಲೋಕಲ್ ಕರೆಗೆ ಜನರು ಧ್ವನಿಗೂಡಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಮ್ಮ ಉತ್ಪನ್ನಗಳು ಜಾಗತಿಕ ಗುಣಮಟ್ಟವನ್ನು ಮುಟ್ಟುವಂತೆ ನೋಡಿಕೊಳ್ಳಬೇಕು… ಜನರು ತಾವು ಬಳಸುವ ವಸ್ತುಗಳನ್ನ ಪಟ್ಟಿ ಮಾಡಿ, ಅದರಲ್ಲಿ ವಿದೇಶಗಳಲ್ಲಿ ಉತ್ಪಾದಿಸಿದ ವಸ್ತುಗಳನ್ನ ಗುರುತಿಸಬೇಕು. ಅವುಗಳ ಬದಲು ದೇಶೀಯವಾಗಿ ತಯಾರಾದ ವಸ್ತುಗಳನ್ನ ಬಳಸಬೇಕು. ಜನರು ಇದನ್ನೆ ಹೊಸ ವರ್ಷದ ಸಂಕಲ್ಪವಾಗಿ ಮಾಡಿಕೊಳ್ಳಬೇಕು” ಎಂದು ಪ್ರಧಾನಿ ಕರೆ ನೀಡಿದರು.
ಇದನ್ನೂ ಓದಿ: ಬಿಜೆಪಿಗೆ ಮತ್ತೊಂದು ಶಾಕ್; ಕೃಷಿ ಕಾನೂನು ವಿರೋಧಿಸಿ ಎನ್ಡಿಎ ಮೈತ್ರಿ ಕೂಟ ತೊರೆದ ಆರ್ಎಲ್ಪಿ
“ಭಾರತದಲ್ಲಿ ಯಾರಾದ ಗೊಂಬೆ ಮೊದಲಾದ ವಸ್ತುಗಳಿಗೆ ಅಂಗಡಿಗಳು ಒತ್ತು ನೀಡುತ್ತಿವೆ. ಗ್ರಾಹಕರೂ ಕೂಡ ದೇಶೀಯ ವಸ್ತುಗಳಿಗೆ ಬೇಡಿಕೆ ಇಟ್ಟಿದ್ದಾರೆ. ಇದು ನಮ್ಮ ಮಾನಸಿಕತೆಯಲ್ಲಾಗಿರುವ ಬಹುದೊಡ್ಡ ಪರಿವರ್ತನೆಯಾಗಿದೆ. ಒಂದೇ ವರ್ಷದಲ್ಲಿ ನಮ್ಮ ದೇಶವಾಸಿಗಳ ಮನಸಿನಲ್ಲಿ ದೊಡ್ಡ ಬದಲಾವಣೆಯಾಗಿದೆ” ಎಂದು ಹೇಳಿದ ಅವರು ಕಾಶ್ಮೀರೀ ಕೇಸರಿ ವಸ್ತುವನ್ನು ಪ್ರಸ್ತಾಪಿಸಿ, ಅದನ್ನು ಜಾಗತಿಕ ಜನಪ್ರಿಯ ಬ್ರ್ಯಾಂಡ್ ಆಗಿ ಮಾಡಲು ಸರ್ಕಾರ ಪ್ರಯತ್ನಿಸುತ್ತಿರುವ ಸಂಗತಿಯನ್ನು ತಿಳಿಸಿದರು.
ತಮ್ಮ ಮನ್ ಕೀ ಬಾತ್ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಗುರು ಗೋಬಿಂದ್ ಸಿಂಗ್ ಅವರ ಮಕ್ಕಳು ಸೇರಿದಂತೆ ಪೂಜ್ಯ ಸಿಖ್ ವ್ಯಕ್ತಿತ್ವಗಳಿಗೆ ಗೌರವ ಸಮರ್ಪಿಸಿದರು. “ಧೀರರಾದ ಚಾರ್ ಸಾಹೀಬ್ಜಾದೆ, ಮಾತಾ ಗುಜ್ರಿ, ಶ್ರೀ ಗುರು ತೇಗ್ ಬಹದೂರ್ಜೀ, ಶ್ರೀ ಗುರು ಗೋಬಿಂದ್ ಜೀ ಇವರನ್ನ ಸ್ಮರಿಸಿ ಗೌರವ ಸಲ್ಲಿಸುತ್ತೇವೆ. ಇವರ ತ್ಯಾಗ, ಬಲಿದಾನಕ್ಕೆ ನಾವು ಚಿರಋಣಿಯಾಗಿದ್ದೇವೆ” ಎಂದು ಪ್ರಧಾನಿ ಹೇಳಿದರು. ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬೀ ರೈತರು ತೀವ್ರತರದ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮೋದಿ ಅವರು ಸಿಖ್ ಧರ್ಮೀಯರ ಪೂಜ್ಯ ವ್ಯಕ್ತಿತ್ವಗಳಿಗೆ ಗೌರವ ಸಮರ್ಪಿಸಿದ್ದು ವಿಶೇಷ.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದಿಂದ ಪಾಠ ಕಲಿಯಿರಿ; ತಮ್ಮ ದೆಹಲಿ ಟೀಕಾಕಾರರಿಗೆ ಕುಟುಕಿದ ಪ್ರಧಾನಿ
ಇದೇ ವೇಳೆ, ವನ್ಯಜೀವಿ ಸಂರಕ್ಷಣೆ ವಿಚಾರವನ್ನು ಪ್ರಸ್ತಾಪಿಸಿದ ಅವರು, 2014ರಿಂದ 2018ರವರೆಗೆ ಭಾರತದಲ್ಲಿ ಚಿರತೆಗಳ ಸಂಖ್ಯೆ ಶೇ. 60ರಷ್ಟು ಹೆಚ್ಚಾಗಿರುವುದು ಈ ವರ್ಷದ ಅತಿದೊಡ್ಡ ಸಾಧನೆ. ಕಳೆದ ಕೆಲ ವರ್ಷಗಳಿಂದ ಸಿಂಹ ಹಾಗೂ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅರಣ್ಯ ಪ್ರದೇಶಗಳ ವ್ಯಾಪ್ತಿಯೂ ಹೆಚ್ಚಿದೆ ಎಂದು ತಿಳಿಸಿದರು.ಕೊರೋನಾ ವೈರಸ್ನಿಂದ ಉದ್ಭವವಾದ ಸಂಕಷ್ಟದ ಪರಿಸ್ಥಿತಿಯಲ್ಲಿ ಆನ್ಲೈನ್ ಶಿಕ್ಷಣಕ್ಕೆ ಶಿಕ್ಷಕರು ಕ್ರಿಯಾಶೀಲತೆ ತೋರಿದ್ದಾರೆ. ಶಿಕ್ಷಣ ಇಲಾಖೆಯ ದೀಕ್ಷಾ ಪೋರ್ಟಲ್ನಲ್ಲಿ ಈ ಶಿಕ್ಷಣದ ಪಾಠಗಳನ್ನ ಅಪ್ಲೋಡ್ ಮಾಡುವಂತೆ ಕರೆ ನೀಡಿದ ಪ್ರಧಾನಿ, ಇದರಿಂದ ದೇಶದ ಮೂಲೆ ಮೂಲೆಯಲ್ಲಿರುವ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ತಿಂಗಳ ಹಿಂದೆ ಜಾರಿಯಾದ ಲವ್ ಜಿಹಾದ್ ಕಾನೂನು ಎಷ್ಟು ಯಶಸ್ವಿ?
ಚಪ್ಪಾಳೆ ತಟ್ಟಿ ರೈತರ ಪ್ರತಿಭಟನೆ:
ಮೊದಲೇ ನಿರ್ಧರಿಸಿದಂತೆ ಮೋದಿ ಅವರ ಮನ್ ಕೀ ಬಾತ್ ರೇಡಿಯೋ ಪ್ರಸಾರ ಕಾರ್ಯಕ್ರಮದ ವೇಳೆ ಪ್ರತಿಭಟನಾನಿರತ ರೈತರು ಚಪ್ಪಾಳೆ ತಟ್ಟಿ ತಮ್ಮ ಆಕ್ರೋಶ ಹೊರಹಾಕಿದರು. ಸಿಂಗು ಗಡಿಭಾಗ ಸೇರಿದಂತೆ ಮೂರು ಸ್ಥಳಗಳಲ್ಲಿ ರೈತರು ಈ ರೇಡಿಯೋ ಕಾರ್ಯಕ್ರಮ ಪ್ರಸಾರ ವೇಳೆ ಚಪ್ಪಾಳೆ ತಟ್ಟಿದರು. ಮನ್ ಕೀ ಬಾತ್ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಅವರ ಹುಸಿ ಮಾತು ಕೇಳಿ ಸಾಕಾಗಿದೆ. ಮೊದಲು ನಮ್ಮ ಮನದ ಮಾತುಗಳನ್ನ ಆಲಿಸಿ ಎಂಬ ಸಂದೇಶವನ್ನು ರೈತರು ರವಾನಿಸಿದ್ದಾರೆ.
Published by:
Vijayasarthy SN
First published:
December 27, 2020, 4:47 PM IST