ನವದೆಹಲಿ: ಈ ತಿಂಗಳಾಂತ್ಯದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಎರಡು ದಿನದ ಪ್ರವಾಸದ ನಿಮಿತ್ತ ಭಾರತಕ್ಕೆ ಆಗಮಿಸುತ್ತಿದ್ದಾರೆ. ಈ ವೇಳೆ ಭಾರತದ ಮಾರುಕಟ್ಟೆಯನ್ನು ಅಮೆರಿಕಾಕ್ಕೆ ವಿಸ್ತರಿಸುವ ನಿಟ್ಟಿನಲ್ಲಿ ಅಮೆರಿಕಾಕ್ಕೆ ಕೋಳಿ ಮಾಂಸ ಮತ್ತು ಹಾಲು ಉತ್ಪನ್ನಗಳ ರಫ್ತು ಕುರಿತ ವ್ಯಾಪಾರ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಮುಂದಾಗಲಿದೆ ಎಂದು ಪರಿಚಿತ ಮೂಲಗಳು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದೆ.
ಭಾರತ ವಿಶ್ವದಲ್ಲೇ ಅತಿಹೆಚ್ಚು ಹಾಲು ಉತ್ಪಾದಿಸುವ ರಾಷ್ಟ್ರಗಳಲ್ಲೊಂದು. ದೇಶದ 80 ಲಕ್ಷ ಗ್ರಾಮೀಣ ಕುಟುಂಬಗಳು ಜೀವನೋಪಾಯಕ್ಕಾಗಿ ಸಾಂಪ್ರದಾಯಿಕ ಡೈರಿ ಉದ್ಯಮದಲ್ಲಿ ತೊಡಗಿಕೊಂಡಿವೆ. ಆದರೆ, ಅಮೆರಿಕ ಭಾರತದ ಡೈರಿ ವಸ್ತುಗಳ ಆಮದನ್ನು ನಿರ್ಬಂಧಿಸಿರುವುದು ಸಾಮಾನ್ಯವಾಗಿ ಈ ಉದ್ಯಮದ ಹಿನ್ನೆಡೆಗೆ ಕಾರಣವಾಗಿದೆ.
ಹೀಗಾಗಿ ವಿಶ್ವದ ಅತಿದೊಡ್ಡ ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಪುನರ್ ನಿರ್ಮಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಫೆ.24-25ರಂದು ಟ್ರಂಪ್ ಜೊತೆಗಿನ ಭೇಟಿ ವೇಳೆ ಈ ನಿರ್ಬಂಧವನ್ನು ತೆರವುಗೊಳಿಸುವಂತೆ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹೀಗಾಗಿ ಡೊನಾಲ್ಡ್ ಟ್ರಂಪ್ ಭಾರತದ ಭೇಟಿಯ ವೇಳೆ ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧ ಮತ್ತಷ್ಟು ವೃದ್ಧಿಯಾಗಲಿದೆ. ಸುಂಕ ಕಡಿತ ಮತ್ತು ಇತರೆ ರಿಯಾಯಿತಿಗಳು ಬದಲಾಗಿ ವ್ಯಾಪಾರ ಆದ್ಯತೆಗಳು ಪುನಃಸ್ಥಾಪಿತವಾಗುತ್ತದೆ ಎಂಬ ಭರವಸೆ ಮೂಡಿದೆ.
ಚೀನಾದ ನಂತರ ಅಮೆರಿಕ ಭಾರತದ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರರಾಗಿದ್ದು, ದ್ವಿಪಕ್ಷೀಯ ಸರಕು ಮತ್ತು ಸೇವೆಗಳ ವ್ಯಾಪಾರವು 2018 ರಲ್ಲಿ ದಾಖಲೆಯ 2 142.6 ಶತಕೋಟಿಗೆ ಏರಿತ್ತು. ಅಮೆರಿಕ 2019 ರಲ್ಲಿ 223.2 ಬಿಲಿಯನ್ ಸರಕುಗಳ ವ್ಯಾಪಾರ ಕೊರತೆಯನ್ನು ಭಾರತದೊಂದಿಗೆ ಹೊಂದಿದ್ದು ಸರಕುಗಳಲ್ಲಿ ಭಾರತದ 9 ನೇ ಅತಿದೊಡ್ಡ ವ್ಯಾಪಾರ ಪಾಲುದಾರ .
ಭಾರತ ಅಮೆರಿಕದಿಂದ ಯುಎಸ್ ಕೋಳಿ ಕಾಲುಗಳು, ಟರ್ಕಿ, ಬ್ಲೂಬೆರ್ರಿ, ಚೆರ್ರಿಗಳಂತಹ ಹಣ್ಣಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಮುಂದಾಗಿದೆ. ಅಲ್ಲದೆ, ಕೋಳಿ ಕಾಲುಗಳ ಮೇಲಿನ ಸುಂಕವನ್ನು ಶೇ.100 ರಿಂದ ಶೇ.25 ಕ್ಕೆ ಇಳಿಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗುತ್ತಿದೆ. ಆದರೆ, ಯುಎಸ್ ಸಮಾಲೋಚಕರು ಸುಂಕವನ್ನು ಶೇ.25 ರಿಂದ ಶೇ.10 ಕ್ಕೆ ಇಳಿಸುವಂತೆ ಒತ್ತಾಯಿಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಭಾರತ ಡೈರಿ ಮಾರುಕಟ್ಟೆಗೆ ಅಮೆರಿಕದ ಪ್ರವೇಶವನ್ನು ಅನುಮತಿಸಲು ಮೋದಿ ಸರ್ಕಾರವು ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ. ಆದರೆ ಶೇ.5 ರಷ್ಟು ಸುಂಕವನ್ನಷ್ಟೇ ವಿಧಿಸುವಂತೆ ಅಮೆರಿಕ ಬಳಿ ಮನವಿ ಮಾಡಿಕೊಂಡಿದೆ. ಅಲ್ಲದೆ, ಡೈರಿ ಉತ್ಪನ್ನಗಳ ರಫ್ತಿಗೆ ಸಾಕಷ್ಟು ಕಾನೂನಾತ್ಮಕ ಹಾಗೂ ಸುರಕ್ಷತೆಯ ಕುರಿತ ಅಡೆತಡೆಗಳು ಇರುವ ಕಾರಣ ಭಾರತಕ್ಕೆ ಹಿನ್ನಡೆಯಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಭಾರತವನ್ನು "ಸುಂಕದ ರಾಜ" ಎಂದು ಹಣೆಪಟ್ಟಿ ಕಟ್ಟಿರುವ ಟ್ರಂಪ್ಗೆ ನಿರ್ದಿಷ್ಟವಾಗಿ ಕಿರಿಕಿರಿಯುಂಟುಮಾಡುವ ತೆರಿಗೆಯಾದ ಹಾರ್ಲೆ-ಡೇವಿಡ್ಸನ್ ಮಾಡಿದ ದೊಡ್ಡ ಮೋಟರ್ ಸೈಕಲ್ಗಳ ಮೇಲಿನ ಶೇ.50 ರಷ್ಟು ಸುಂಕವನ್ನು ಕಡಿಮೆ ಮಾಡಲು ನವದೆಹಲಿ ಮುಂದಾಗಿದೆ ಎಂಬ ಮಾಹಿತಿಗಳು ಲಭ್ಯವಾಗುತ್ತಿದೆ.
ಫೆಬ್ರವರಿ 24 ರಂದು ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಲಿದ್ದು ಮೊದಲು ಅವರು ಗುಜರಾತ್ನ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಂದು ಇಳಿಯಲಿದ್ದಾರೆ. ಇಲ್ಲಿಂದ ಅವರನ್ನು ದೆಹಲಿಗೆ ಕರೆದುಕೊಂಡು ಹೋಗಲು ಯೋಜನೆ ರೂಪಿಸಲಾಗಿದೆ. 2015ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಅವರಿಗೆ ನೀಡಿದ್ದಕ್ಕಿಂತ ದೊಡ್ಡ ಮಟ್ಟದ ಸ್ವಾಗತವನ್ನು ಡೊನಾಲ್ಡ್ ಟ್ರಂಪ್ಗೆ ನೀಡುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದೆ.
ಇದನ್ನೂ ಓದಿ : ಪ್ರೇಮಿಗಳ ದಿನ ಆಚರಿಸಲು ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡಿದ ಶಾಹೀನ್ ಬಾಗ್ ಪ್ರತಿಭಟನಾಕಾರರು..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ