ನವದೆಹಲಿ (ಏ. 23): ಕೋವಿಡ್ ಎರಡನೇ ಅಲೆಯಿಂದಾಗಿ ಜನರು ತತ್ತರಿಸಿದ್ದಾರೆ. ಒಂದು ಕಡೆ ವೈದ್ಯಕೀಯ ತುರ್ತು ಪರಿಸ್ಥಿತಿ ಏರ್ಪಟ್ಟಿದ್ದರೆ, ಮತ್ತೊಂದು ಕಡೆ ಕರ್ಫ್ಯೂ, ಲಾಕ್ಡೌನ್ನಿಂದಾಗಿ ಬಡ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೋವಿಡ್ ಎರಡನೇ ಅಲೆಯಿಂದ ತೊಂದರೆಗೆ ಒಳಗಾಗಿರುವ ಬಡವರ ನೆರವಿಗೂ ಧಾವಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಇದೇ ಹಿನ್ನಲೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಬಡ ಜನರಿಗೆ ಉಚಿತವಾಗಿ ಆಹಾರ ಧಾನ್ಯ ನೀಡಲು ತೀರ್ಮಾನಿಸಿದೆ. ಮೇ ಮತ್ತು ಜೂನ್ ಎರಡು ತಿಂಗಳ ಆಹಾರ ಧಾನ್ಯಗಳನ್ನು ಬಡ ಕೂಲಿಕಾರ್ಮಿಕ ವರ್ಗದವರಿಗೆ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಎರಡನೇ ಅಲೆ ಕೋವಿಡ್ ಸೋಂಕನ್ನು ದೇಶ ಎದುರಿಸುತ್ತಿರುವಾಗ ಬಡವರಿಗೆ ಪೌಷ್ಠಿಕಾಂಶದ ಆಹಾರ ನೀಡುವುದು ಅತಿ ಮುಖ್ಯ. ಸರ್ಕಾರ ಬಡವರ ಕಲ್ಯಾಣಕ್ಕೆ ಬದ್ದವಾಗಿದೆ., ಇದೇ ಹಿನ್ನಲೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಐದು ಕೆಜಿ ಅಕ್ಕಿ ಮತ್ತು ಆಹಾರ ಧಾನ್ಯವನ್ನು ದೇಶದ ಬಡ ಜನರಿಗೆ ನೀಡಲಾಗುವುದು. ದೇಶದ 80 ಕೋಟಿ ಫಲಾನುಭವಿಗಳಿಗೆ ಈ ಯೋಜನೆ ತಲುಪಲಿದೆ. ಇದಕ್ಕಾಗಿ ಸರ್ಕಾ 26 ಸಾವಿರ ಕೋಟಿ ರೂ ವ್ಯಯಿಸಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಕಳೆದ ವರ್ಷ ಕೂಡ ರಾಜ್ಯದಲ್ಲಿ ಲಾಕ್ಡೌನ್ನಿಂದಾಗಿ ದೇಶದ ಬಡವರು, ಮಹಿಳೆಯರು, ರೈತ ಮತ್ತು ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದರು. ಉದ್ಯೋಗವಿಲ್ಲದೇ ವಲಸಿಗರು ಸಾಕಷ್ಟು ತೊಂದರೆಗೆ ಸಿಲುಕಿದ್ದರು, ಈ ವೇಳೆ ಕೂಡ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸಲಾಗಿತ್ತು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ