ತಮಿಳುನಾಡಿನ ವಿಧಾನಸಭೆಯ ಫಲಿತಾಂಶ ಪ್ರಕಟವಾಗಿದ್ದು, ಅಲ್ಲಿನ ಪ್ರಾದೇಶಿಕ ಪಕ್ಷ ದ್ರಾವಿಡ ಮುನ್ನೇತ್ರ ಕಳಗಂ ಹಲವು ದಶಕಗಳ ಬಳಿಕ ಮರಳಿ ಅಧಿಕಾರಕ್ಕೆ ಬಂದಿದೆ. ಪಕ್ಷದ ಮುಖ್ಯಸ್ಥರಾಗಿರುವ ಎಂ.ಕೆ. ಸ್ಟಾಲಿನ್ ಅವರು ಶುಕ್ರವಾರ ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರೊಂದಿಗೆ ಹಲವಾರು ಹಿರಿಯ ಅನುಭವಿ ರಾಜಕಾರಣಿಗಳು ತಮಿಳುನಾಡು ಸಂಪುಟಕ್ಕೆ ಪುನರಾಗಮನ ಮಾಡಲಿದ್ದಾರೆ. ಪಕ್ಷದ ಹಳೆಯ ನಾಯಕರಾದ ದೊರೈಮುರುಗನ್, ಕೆ.ಎನ್. ನೆಹರು, ಮತ್ತು ಎಂ.ಸುಬ್ರಮಣಿಯನ್ ಅವರಿಗೆ ಹೊಸ ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ನೀಡಲಾಗುವುದು. ಇತ್ತೀಚೆಗೆ ಮುಕ್ತಾಯವಾದ ವಿಧಾನಸಭಾ ಚುನಾವಣೆಯ ನಂತರ ದಕ್ಷಿಣ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಡಿಎಂಕೆ 34 ಮಂತ್ರಿಗಳ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಸ್ಟಾಲಿನ್ ಅವರು ಗೃಹ ಇಲಾಖೆಯನ್ನು ತಮ್ಮೊಂದಿಗೆ ಇಟ್ಟುಕೊಂಡಿದ್ದಾರೆ. ಕೋವಿಡ್ನಂತಹ ಭೀಕರ ಪರಿಸ್ಥಿತಿಯ ಸಂದರ್ಭದಲ್ಲಿ ನಿರ್ಣಾಯಕ ಆರೋಗ್ಯ ಖಾತೆಯನ್ನು ಚೆನ್ನೈನ ಮಾಜಿ ಮೇಯರ್ ಸುಬ್ರಮಣಿಯನ್ ಅವರಿಗೆ ನೀಡಲಾಗಿದೆ.
ಬುಧವಾರ ಸ್ಟಾಲಿನ್ ಅವರೊಂದಿಗೆ ಪಕ್ಷದ ಹಿರಿಯ ನಾಯಕರು ಹಾಗೂ ಪ್ರಧಾನ ಕಾರ್ಯದರ್ಶಿ ದೊರೈಮುರುಗನ್ ಅವರು ರಾಜಭವನದಲ್ಲಿ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರನ್ನು ಭೇಟಿಯಾದರು. ಈ ವೇಳೆ ತಮ್ಮ ಡಿಎಂಕೆ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಪತ್ರವನ್ನು ಹಾಗೂ ಸರ್ಕಾರ ರಚನೆಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದರು. ರಾಜ್ಯಪಾಲ ಪುರೋಹಿತ್ ಅವರು “ಸ್ಟಾಲಿನ್ ಅವರನ್ನು ತಮಿಳುನಾಡಿನ ಮುಖ್ಯಮಂತ್ರಿಯಾಗಿ ನೇಮಿಸಿ, ಸಚಿವಾಲಯವನ್ನು ರಚಿಸಲು ಮತ್ತು ಮೇ 7 ರಂದು ಬೆಳಿಗ್ಗೆ 9 ಗಂಟೆಗೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ನಡೆಸಲು ಆಹ್ವಾನಿಸಿದರು” ಎಂದು ಅಧಿಕೃತ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ