HOME » NEWS » National-international » MK STALIN GAINS POWER IN A CLOSE FIGHT AS E PALANISAMY BECOMES TALLER DESPITE PARTY DEFEAT SNVS

Tamil Nadu Elections - ಸ್ಪಷ್ಟ ಗೆಲುವು ಪಡೆದ ಸ್ಟಾಲಿನ್; ಸೋತರೂ ವರ್ಚಸ್ಸು ಹೆಚ್ಚಿಸಿಕೊಂಡ ಇಪಿಎಸ್

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ಎಐಎಡಿಎಂಕೆ ಪಕ್ಷಕ್ಕೆ ಮುಳುವಾಗಿದೆ. ಆದರೆ, ಪಕ್ಷ ಸೋತರೂ ಡಿಎಂಕೆ ಜೊತೆ ತುರುಸಿನ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿದೆ. ಇದರಿಂದ ಎಐಎಡಿಎಂಕೆ ನೇತೃತ್ವ ವಹಿಸಿದ್ದ ಇಪಿಎಸ್ ಅವರ ವರ್ಚಸ್ಸು ಇನ್ನಷ್ಟು ಹೆಚ್ಚಿದೆ.

news18-kannada
Updated:May 2, 2021, 2:37 PM IST
Tamil Nadu Elections - ಸ್ಪಷ್ಟ ಗೆಲುವು ಪಡೆದ ಸ್ಟಾಲಿನ್; ಸೋತರೂ ವರ್ಚಸ್ಸು ಹೆಚ್ಚಿಸಿಕೊಂಡ ಇಪಿಎಸ್
ಎಂ.ಕೆ. ಸ್ಟಾಲಿನ್.
  • Share this:
ಬೆಂಗಳೂರು: ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿಕೂಟ ತಮಿಳುನಾಡು ಚುನಾವಣೆಯಲ್ಲಿ ಜಯಭೇರಿ ಭಾರಿಸಿದೆ. ದ್ರಾವಿಡ ನಾಡಿನಲ್ಲಿ 10 ವರ್ಷಗಳ ಬಳಿಕ ಡಿಎಂಕೆ ಅಧಿಕಾರ ಹಿಡಿಯುತ್ತಿದೆ. ಎಂಕೆ ಸ್ಟಾಲಿನ್ ಕೊನೆಗೂ ಮುಖ್ಯಮಂತ್ರಿ ಪಟ್ಟ ಅಲಂಕರಿಸುವ ದಿನ ಸಮೀಪಿಸಿದೆ. ಇದೇನೇ ಇದ್ದರೂ ಸ್ಟಾಲಿನ್ ಅವರು ನಿರೀಕ್ಷಿಸಿದಷ್ಟು ಮಟ್ಟದಲ್ಲಿ ಸಿಕ್ಕ ಸ್ಪಷ್ಟ ಗೆಲುವಲ್ಲ ಇದು. ಸಂಖ್ಯೆಯಲ್ಲಿ ಡಿಎಂಕೆ ಮುಂದಿದ್ದರೂ ಹಲವು ಕ್ಷೇತ್ರಗಳಲ್ಲಿ ಎಐಎಡಿಎಂಕೆ ತುರುಸಿನ ಪೈಪೋಟಿ ನೀಡಿದ್ದು ಹೌದು. ಮುಖ್ಯಮಂತ್ರಿ ಇ ಪಳನಿಸ್ವಾಮಿ ನೇತೃತ್ವದಲ್ಲಿ ಎಐಎಡಿಎಂಕೆ ಮೈತ್ರಿಕೂಟ ವೀರೋಚಿತ ಸೋಲನುಭವಿಸಿದೆ. ತಮಿಳುನಾಡಿನ ರಾಜಕೀಯ ವಿಶ್ಲೇಷಕರ ಪ್ರಕಾರ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಎಐಎಡಿಎಂಕೆಗೆ ಹಿನ್ನಡೆಯಾಗಿದ್ದಿರಬಹುದು.

2017, ಫೆಬ್ರವರಿಯಲ್ಲಿ ಶಶಿಕಲಾ ಅವರು ಪರಪ್ಪನ ಅಗ್ರಹಾರ ಜೈಲು ಸೇರಿದಾಗ ಇ ಪಳನಿಸ್ವಾಮಿ ತಮಿಳುನಾಡು ಮುಖ್ಯಮಂತ್ರಿಯಾದರು. ಆಗ ಯಾರೂ ಕೂಡ ಅವರ ಬಗ್ಗೆ ಏನೂ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಕೆಲವೇ ವಾರಗಳಲ್ಲಿ ಅವರ ನೇತೃತ್ವದ ಸರ್ಕಾರ ಕುಸಿದುಬೀಳುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅದೆಷ್ಟೋ ತಡೆಗಳನ್ನ ಮೆಟ್ಟಿ ನಿಂತ ಪಳನಿ ಸ್ವಾಮಿ ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಿದ್ದಷ್ಟೇ ಅಲ್ಲ, ಪಕ್ಷದೊಳಗಿನ ಒಡಕುಗಳ ಮಧ್ಯೆಯೂ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಿದ್ದರು.

ಡಿಎಂಕೆ vs ಎಐಎಡಿಎಂಕೆ - ಪ್ರಶಾಂತ್ ಕಿಶೋರ್ vs ಸುನೀಲ್: 

2019ರ ಲೋಕಸಭಾ ಚುನಾವಣೆಗಳನ್ನ ಗಮನಿಸಿ ನೋಡಿ. ತಮಿಳುನಾಡಿನ 39 ಕ್ಷೇತ್ರಗಳಲ್ಲಿ ಎಐಎಡಿಎಂಕೆ ಗೆದ್ದದ್ದು ಕೇವಲ ಒಂದನ್ನು ಮಾತ್ರ. ಆಗಲೇ ಇಪಿಎಸ್ (ಪಳನಿಸ್ವಾಮಿ) ಮತ್ತು ಎಐಎಡಿಎಂಕೆಯ ಮರಣಶಾಹಿ ಬರೆದಾಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಧೂಳೀಪಟ ಆಗುತ್ತದೆಂದೇ ನಿರೀಕ್ಷಿಸಲಾಗಿತ್ತು. ವಿಧಾನಸಭಾ ಚುನಾವಣೆಗೆ ಮುನ್ನ ಇಪಿಎಸ್ ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಡಿಎಂಕೆಯ ಚುನಾವಣಾ ವ್ಯವಹಾರಗಳನ್ನ ನಿಭಾಯಿಸಿದ್ದ ಸುನೀಲ್ ಕನುಗೋಲು ಅವರನ್ನ ಎಐಎಡಿಎಂಕೆ ಪರ ಕೆಲಸ ಮಾಡಲು ಕರೆತಂದರು. ಅತ್ತ ಡಿಎಂಕೆಯ ಚುನಾವಣಾ ರಣತಂತ್ರ ರೂಪಿಸಿದವರು ಪ್ರಶಾಂತ್ ಕಿಶೋರ್. ಆದರೆ, ಸುನೀಲ್ ಕನುಗೋಲು ಅವರು ಪ್ರಶಾಂತ್ ಕಿಶೋರ್ ಅವರ ಒಂದು ಕಾಲದ ಮಿತ್ರರೂ ಹೌದು. ಆದರೆ, ತಮಿಳುನಾಡು ವಿಧಾನಸಭಾ ಚುನಾವಣೆ ಡಿಎಂಕೆ ವರ್ಸಸ್ ಎಐಎಡಿಎಂಕೆ ಫೈಟ್ ಹೇಗೋ ಹಾಗೇ ಪ್ರಶಾಂತ್ ಕಿಶೋರ್ ವರ್ಸಸ್ ಸುನೀಲ್ ಕನುಗೋಲು ನಡುವಿನ ತಂತ್ರಯುದ್ಧ ಎಂದೇ ಬಣ್ಣಿಸಲಾಗಿತ್ತು. ಚುನಾವಣಾ ಅಂಶಗಳನ್ನ ಸೂಕ್ಷ್ಮವಾಗಿ ಬಲ್ಲವರಾಗಿದ್ದ ಸುನೀಲ್ ಅವರು ಮೊದಲಿಂದಲೂ ಹೇಳುತ್ತಾ ಬಂದಿದ್ದ ಒಂದು ವಿಷಯ ಇಲ್ಲಿ ಉಲ್ಲೇಖನೀಯ. ಡಿಎಂಕೆ ಗೆದ್ದರೂ ಸುಲಭವಾಗಂತೂ ಸಾಧ್ಯವಿಲ್ಲ ಎಂದು ಅವರು ಹೇಳುತ್ತಿದ್ದುದು ಬಹುತೇಕ ನಿಜವಾಗಿದೆ.

ಎಐಎಡಿಎಂಕೆಗೆ ಮುಳುವಾಯಿತಾ ಬಿಜೆಪಿ? 

ಎಐಎಡಿಎಂಕೆ ಪಕ್ಷದ ಮೂಲಗಳು ಮತ್ತು ರಾಜಕೀಯ ವಿಶ್ಲೇಷಕರ ಅಭಿಪ್ರಾಯ ನಂಬುವುದಾದರೆ ಬಿಜೆಪಿ ಜೊತೆ ಎಐಎಡಿಎಂಕೆ ಬಲವಂತದ ಮೈತ್ರಿ ಮಾಡಿಕೊಂಡಿದ್ದು ಮುಳುವಾಗಿದೆ. “ತಮಿಳುನಾಡಿನಲ್ಲಿ ಬಹುತೇಕ ಮಂದಿಗೆ ಬಿಜೆಪಿ ಇಷ್ಟವಿಲ್ಲ. ಬಿಜೆಪಿ ಜೊತೆ ಬಲವಂತವಾಗಿ ಮೈತ್ರಿ ಮಾಡಿಕೊಳ್ಳುವ ಪರಿಸ್ಥಿತಿ ಬಂದಿತು. ಇದು ನಮಗೆ ಬಹಳ ಹಿನ್ನಡೆ ತಂದಿತು” ಎಂದು ಸೇಲಂ ಜಿಲ್ಲೆಯ ಎಐಎಡಿಎಂಕೆ ನಾಯಕರೊಬ್ಬರು ಹೇಳುತ್ತಾರೆ.

ಇಪಿಎಸ್ ವರ್ಚಸ್ಸು ವೃದ್ಧಿ: ಎಐಎಡಿಎಂಕೆ ಪಕ್ಷ ಸೋತರೂ ಪ್ರಬಲ ಪೈಪೋಟಿ ನೀಡಿರುವುದು ಇ ಪಳನಿ ಸ್ವಾಮಿ ಅವರ ವರ್ಚಸ್ಸನ್ನು ಇನ್ನಷ್ಟು ಹೆಚ್ಚಿಸಿದೆ. ಈಗ ಅವರು ವಿಧಾನಸಭೆ ಒಳಗೆ ಹಾಗು ಹೊರಗೆ ವಿಪಕ್ಷ ನಾಯಕರಾಗಿ ಡಿಎಂಕೆಯನ್ನ ಎದಿರುಗೊಳ್ಳಲಿರುವುದು ಬಹುತೇಕ ಸ್ಪಷ್ಟ. ಹಾಗೆಯೇ, ಎಐಎಡಿಎಂಕೆ ಬಹಳ ಕಡಿಮೆ ಅಂತರದಲ್ಲಿ ಸೋಲನುಭವಿಸಿರುವುದರಿಂದ ಪಕ್ಷದೊಳಗೆ ಅಸಮಾಧಾನ ಹೊಗೆ ಹೆಚ್ಚು ಕಾಣಿಸುವ ಸಾಧ್ಯತೆ ಇಲ್ಲ. ಬಹುತೇಕ ಎಐಎಡಿಎಂಕೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಚೆಲ್ಲಾಪಿಲ್ಲಿಯಾಗದೇ ಒಗ್ಗೂಡಿಯೇ ಇರಲಿದ್ಧಾರೆ. ಅತ್ತ, ತಮಿಳುನಾಡಿನಲ್ಲಿ ಬೇರು ಬಿಡುವ ಆಶೆಯಲ್ಲಿದ್ದ ಬಿಜೆಪಿ ಇನ್ನೂ ಕಾಯಬೇಕಾಗುತ್ತದೆ.

“ಒಂದು ವೇಳೆ ಎಐಎಡಿಎಂಕೆ ಬಹಳ ಹೀನಾಯವಾಗಿ ಸೋತಿದ್ದರೆ ಆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭ್ರಮನಿರಸನಗೊಂಡು ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿಗೆ ಹೋಗುವ ಸಾಧ್ಯತೆ ಇತ್ತು. ತಮಿಳುನಾಡಿನಲ್ಲಿ ಬಿಜೆಪಿ ಬೆಳೆಯಬೇಕೆಂದರೆ ಇಂಥ ರೀತಿಯ ಅಸ್ವಾಭಾವಿಕ ಬೆಳವಣಿಗೆಯೊಂದೇ ಮಾರ್ಗ. ಈಗ ಸದ್ಯಕ್ಕೆ ಇದು ಅಸಾಧ್ಯ. ಇದು ಎಐಎಡಿಎಂಕೆ ಹಾಗು ದ್ರಾವಿಡ ರಾಜಕಾರಣಕ್ಕೆ ಒಳ್ಳೆಯ ಬೆಳವಣಿಗೆ ಹೌದು” ಎಂದು ರಾಜಕೀಯ ತಂತ್ರಜ್ಞರೊಬ್ಬರು ಹೇಳುತ್ತಾರೆ.

ಡಿಎಂಕೆ ಮಿತ್ರಪಕ್ಷಗಳು ನಿರಾಳ: 

ಅರವತ್ತರ ಪ್ರಾಯದಲ್ಲಿರುವ ಎಂಕೆ ಸ್ಟಾಲಿನ್ ಅವರು ತಮ್ಮ ಪಕ್ಷವನ್ನ ಗೆಲುವಿನತ್ತ ಮುನ್ನಡೆಸಿದ್ದಾರೆ. ಸರ್ಕಾರ ರಚಿಸುವಷ್ಟು ಸಂಖ್ಯೆಯಲ್ಲಿ ಡಿಎಂಕೆ ಮೈತ್ರಿಕೂಟ ಗೆದ್ದಿದೆ. ಈ ಹಿನ್ನೆಲೆಯಲ್ಲಿ ಡಿಎಂಕೆಯ ಮಿತ್ರಪಕ್ಷಗಳಾದ ಕಾಂಗ್ರೆಸ್, ಎಡಪಕ್ಷಗಳು ಹಾಗೂ ಇತರ ದ್ರಾವಿಡ ಪಕ್ಷಗಳನ್ನ ಸ್ಟಾಲಿನ್ ಕಡೆಗಣಿಸಲು ಆಗುವುದಿಲ್ಲ. ಈ ಪಕ್ಷಗಳಿಗೆ ಸರ್ಕಾರದಲ್ಲಿ ಮಹತ್ವದ ಪಾತ್ರ ಇದ್ದೇ ಇರುತ್ತದೆ.

ಅಂತಿಮವಾಗಿ, ಎಂಕೆ ಸ್ಟಾಲಿನ್ ಗೆದ್ದಿರುವುದು ಹೌದಾದರೂ, ಇಪಿಎಸ್ ಸುಲಭವಾಗಂತೂ ಸೋಲೊಪ್ಪಿಲ್ಲ. ಸೋಲಿನಲ್ಲೂ ಎಡಪ್ಪಾಡಿ ಪಳನಿಸ್ವಾಮಿ ಅತ್ಯುಚ್ಚ ನಾಯಕರಾಗಿ ಹೊರಹೊಮ್ಮಿರುವುದು ಗಮನಿಸಬೇಕಾದ ಅಂಶ.

ವಿಶೇಷ ವರದಿ: ಡಿ ಪಿ ಸತೀಶ್, ನ್ಯೂಸ್18
Published by: Vijayasarthy SN
First published: May 2, 2021, 2:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories